Advertisement

ಪ್ರಕೃತಿ ಆರಾಧನೆಯೇ ದೇವರ ಆರಾಧನೆ: ಗಣೇಶ್‌ ಹೆಗ್ಡೆ

01:15 PM Jul 31, 2019 | Team Udayavani |

ಪುಣೆ, ಜು. 30: ನಾವು ತುಳುನಾಡಿನ ಜನರು ದೈವ ದೇವರುಗಳನ್ನು ಆರಾಧಿಸಿಕೊಂಡು ಬಂದವರಾಗಿದ್ದು, ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದೇವೆ. ಮುಖ್ಯವಾಗಿ ಪ್ರಕೃತಿ ಆರಾಧನೆಯಲ್ಲಿ ದೈವತ್ವವನ್ನು ಕಾಣುವವರು ನಾವಾಗಿದ್ದೇವೆ ಎಂದು ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಉಪಾಧ್ಯಕ್ಷ ಹೋಟೆಲ್ ಉದ್ಯಮಿ ಗಣೇಶ್‌ ಹೆಗ್ಡೆ ಅಭಿಪ್ರಾಯಪಟ್ಟರು.

Advertisement

ಅವರು ಜು. 28ರಂದು ಹೊಟೇಲ್ ಪೂನಾ ಗೇಟ್ ನಿಗ್ಡಿ ಇಲ್ಲಿ ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ಮಹಿಳಾ ವಿಭಾಗ ಆಯೋಜಿಸಿದ ‘ಆಟಿಡೊಂಜಿ ಐತಾರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಾವು ಬಂಟರು ನಮ್ಮ ಆಚಾರ, ವಿಚಾರ, ಸಭ್ಯತೆಯ ನಡವಳಿಕೆಯೊಂದಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನದೊಂದಿಗೆ ಗುರುತಿಸಿಕೊಂಡಿದ್ದೇವೆ. ಉದ್ಯಮ ಕ್ಷೇತ್ರದೊಂದಿಗೆ ಸಾಮಾಜಿಕ, ವೈಯಕ್ತಿಕ ಜೀವನದ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ. ನಮ್ಮ ಮಕ್ಕಳೊಂದಿಗೆ ಅನ್ಯೋನ್ಯವಾಗಿದ್ದುಕೊಂಡು ನಮ್ಮ ಸಂಸ್ಕೃತಿಯನ್ನು ಅವರಿಗೆ ತಿಳಿಹೇಳಬೇಕಾಗಿದೆ. ಮಕ್ಕಳಿಗೆ ಯೋಗ್ಯ ಸಂಸ್ಕಾರ ನೀಡುವ ಮೂಲಕ ಸಮಾಜದಲ್ಲಿ ಅಂತರ್ಜಾತೀಯ ವಿವಾಹವಾಗುತ್ತಿರುವ ಪಿಡುಗನ್ನು ನಿವಾರಿಸಲು ನಾವು ಪ್ರಯತ್ನಿಸಬೇಕಾಗಿದೆ ಎಂದರು.

ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅವರು ಮಾತನಾಡಿ ಆಟಿಡೊಂಜಿ ಐತಾರ ಎನ್ನುವ ಅರ್ಥಪೂರ್ಣವಾದ ಕಾರ್ಯಕ್ರಮದ ಮೂಲಕ ಗತಕಾಲದ ನೆನಪುಗಳನ್ನು ಮರುಕಳಿಸುವಂತಹ ಕಾರ್ಯವನ್ನು ಮಾಡುತ್ತಿರುವ ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಬೇಕಾಗಿದೆ. ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ನಮ್ಮ ಸಂಪ್ರದಾಯಗಳ ಬಗೆಗಿನ ಕಾಳಜಿಯೂ ಇಂದಿನ ಅಗತ್ಯವಾಗಿದೆ ಎಂದರು.

ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಅಧ್ಯಕ್ಷರಾದ ಆನಂದ್‌ ಶೆಟ್ಟಿ ಮಿಯ್ನಾರ್‌ ಮಾತನಾಡಿ, ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘವು ಸಮಾಜ ಬಾಂಧವರೆಲ್ಲರನ್ನೂ ಒಟ್ಟು ಸೇರಿಸಿಕೊಂಡು ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ನಮ್ಮ ತುಳುನಾಡಿನ ಆಚಾರ ವಿಚಾರಗಳನ್ನೂ ಯುವ ಪೀಳಿಗೆಗೆ ಪರಿಚಯಿಸುವಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಈ ಸಂದರ್ಭ ವೇದಿಕೆಯಲ್ಲಿ ಉಪಾಧ್ಯಕ್ಷರಾದ ರಾಕೇಶ್‌ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಅರುಣ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ. ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ಮರಣಿಕೆ, ಪುಷ್ಪಗುಚ್ಛಗಳನ್ನು ನೀಡಿ ಸತ್ಕರಿಸಲಾಯಿತು. ಸಂಘದ ಗೌರವ ಕೋಶಾಧಿಕಾರಿ ಪೆಲತ್ತೂರು ಸುಧಾಕರ ಶೆಟ್ಟಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟು ರಂಜಿಸಿದರು. ಮಹಿಳಾ ವಿಭಾಗದ ಸದಸ್ಯೆಯರು ತುಳುನಾಡಿನ ಸಾಂಪ್ರದಾಯಿಕ ವೈವಿಧ್ಯಮಯ ಖಾದ್ಯಗಳನ್ನು ಭೋಜನಕ್ಕಾಗಿ ಸಿದ್ಧಪಡಿಸಿದ್ದರು. ಮಹಿಳಾ ವಿಭಾಗದ ಸದಸ್ಯರನ್ನು ಸತ್ಕರಿಸಲಾಯಿತು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ವಿಜೇತರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.

Advertisement

ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರು, ಪುಣೆ ಬಂಟರ ಸಂಘದ ಪದಾಧಿಕಾರಿಗಳು, ಬಂಟ್ಸ್‌ ಅಸೋಸಿಯೇಶನ್‌ ಪದಾಧಿಕಾರಿಗಳು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಆಟಿ ತಿಂಗಳಲ್ಲಿ ತಯಾರಿಸಲಾಗುವ ಬಗೆ ಬಗೆಯ ವ್ಯಂಜನಗಳು ಸೇರಿದ್ದ ಜನರ ಪ್ರೀತಿ ಭೋಜನದ ಸವಿಯನ್ನು ಇಮ್ಮಡಿಗೊಳಿಸಿತು. ಪೆಲತ್ತೂರು ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಮ್ಮ ಸಂಘದ ಮಹಿಳಾ ವಿಭಾಗವು ಇಂತಹ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ನಮ್ಮ ತುಳುನಾಡಿನ ವಿಶಿಷ್ಟ ಆಹಾರ ಪದ್ಧತಿಯನ್ನು ನಮ್ಮ ಮಕ್ಕಳಿಗೂ ಪರಿಚಯಿಸುವಂತಹ ಕಾರ್ಯವನ್ನು ಮಾಡಿರುವುದು ಅಭಿನಂದನೀಯವಾಗಿದೆ. ಇಂತಹ ಆಚರಣೆಗಳ ಮೂಲಕ ನಮ್ಮ ಸಾಮಾಜಿಕ ಒಗ್ಗಟ್ಟು ಬಲಗೊಳ್ಳುವುದಲ್ಲದೆ ಸಂಪ್ರದಾಯಗಳ ಉಳಿವೂ ಸಾಧ್ಯವಾಗುತ್ತದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಸಂಘದ ಸದಸ್ಯರಿಗೆ ವಂದನೆಗಳು. ಕಾರ್ಯಕ್ರಮವನ್ನು ಆಯೋಜಿಸಲು ಸ್ಥಳಾವಕಾಶ ಕಲ್ಪಿಸಿದ ಪೂನಾಗೇಟ್ ಮಾಲಕರಾದ ಎರ್ಮಾಳ್‌ ಬಾಲಚಂದ್ರ ಶೆಟ್ಟಿಯವರ ಸಹಕಾರವನ್ನು ಮರೆಯುವಂತಿಲ್ಲ. ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರ, ದಾನಿಗಳ ಸಹಕಾರ, ಪ್ರೋತ್ಸಾಹ ಸದಾಯಿರಲಿ. – ವಿಜಯ್‌ ಎಸ್‌. ಶೆಟ್ಟಿ ಬೋರ್ಕಟ್ಟೆ, ಅಧ್ಯಕ್ಷರು, ಪಿಂಪ್ರಿ-ಚಿಂಚ್ವಾಡ್‌ ಬಂಟ್ಸ್‌ ಸಂಘ
Advertisement

Udayavani is now on Telegram. Click here to join our channel and stay updated with the latest news.

Next