ಬೆಂಗಳೂರು: ರಸ್ತೆಯ ಉದ್ದ ಆರು ಕಿ.ಮೀ. ಮಾತ್ರ. ಆದರೆ, ಗುಂಡಿ ಗಳು ಸಾವಿರಾರು. ವಾಹನಗಳು ಸಂಚರಿಸಿದರೆ ಧೂಳೇ ಧೂಳು… ಅಭಿವೃದ್ಧಿ ಕಾಮಗಾರಿಗಾಗಿ ಚೆನ್ನಾಗಿದ್ದ ರಸ್ತೆಯನ್ನೇ ಹದಗೆಡಿಸಿದ್ದು, ಒಮ್ಮೆ ವಾಹನ ದಟ್ಟಣೆ ಉಂಟಾದರೆ ಸಾವಿರಾರು ವಾಹನಗಳು ಸಾಲಾಗಿ ನಿಲ್ಲುತ್ತವೆ. ಮಳೆ ಬಂದರೆ ರಸ್ತೆಯಲ್ಲಾ ಕೆಸರುಗದ್ದೆಯಾಗಿ ಸಂಚಾರ ದುಸ್ತರವಾಗಲಿದೆ.
ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ದೊಡ್ಡಕಲ್ಲಸಂದ್ರ ಮೂಲಕ ದಿ ವಿಲೇಜ್ ಶಾಲೆಯ ಕ್ರಾಸ್‌ವರೆಗೂ ರಸ್ತೆ ಹದಗೆಟ್ಟಿದೆ. ಗೇಲ್ ಮತ್ತು ಬಿಎಂಆರ್‌ಸಿಎಲ್ ಕಾಮಗಾರಿಯಿಂದ ಈ ರಸ್ತೆಗೆ ದುರ್ಗತಿ ಬಂದಿದೆ. ಕನಕಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಿದ್ದು, ಬನಶಂಕರಿಯಿಂದ ಕನಕಪುರಕ್ಕೆ ಹೋಗುವ ವಾಹನಗಳು ಈ ಮುಖ್ಯ ರಸ್ತೆಯಲ್ಲಿಯೇ ಚಲಿಸುತ್ತವೆ. ಈ ಭಾಗದಲ್ಲಿ ಕಾರ್ಖಾನೆಗಳು ಇರುವುದರಿಂದ ಲಾರಿ, ಟೆಂಪೋ ಹೆಚ್ಚಾಗಿ ಚಲಿಸುತ್ತವೆ. ಬಿಎಂಟಿಸಿ ಬಸ್‌ಗಳ ಓಡಾಟವೂ ಹೆಚ್ಚಿದೆ. ಇದರಿಂದಾಗಿ ಸಣ್ಣ ಗುಂಡಿಗಳು ಕೂಡ ಕೆಲವೇ ದಿನಗಳಲ್ಲಿ ಬೃಹತ್ ಕಂದಕಗಳಾಗಿ ಪರಿವರ್ತನೆಯಾಗಿವೆ.
ಇದರ ನಡುವೆ ಮೆಟ್ರೋ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಭಾಗದ ರಸ್ತೆಯನ್ನು ಬಿಬಿಎಂಪಿ 2016ರಲ್ಲಿಯೇ ನಮ್ಮ ಮೆಟ್ರೋಗೆ ಹಸ್ತಾಂತರ ಮಾಡಿ ರಸ್ತೆ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದೆ. ಕಾಮಗಾರಿ ಸಂಪೂರ್ಣವಾಗಿ ಮುಗಿಸಿದ ಬಳಿಕವೇ ರಸ್ತೆ ರಿಪೇರಿ ಮಾಡುವ ಬಿಎಂಆರ್‌ಸಿಎಲ್ ಧೋರಣೆಯಿಂದ ಗುಂಡಿ ಬಿದ್ದ ರಸ್ತೆಗಳಲ್ಲಿ ಚಾಲಕರು ಸಂಚರಿಸಲು ಹರ ಸಾಹಸ ಮಾಡಬೇಕಾಗಿದೆ. ನಿತ್ಯ ವಾಹನ ಸವಾರರು ಪರದಾಡುತ್ತಿದ್ದರೂ ರಸ್ತೆ ನಿರ್ವಹಣೆ ಮಾಡಲು ಅಧಿಕಾರಿಗಳು ಗಮನಹರಿಸಿಲ್ಲ. ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ಗುಂಡಿಗಳ ದರ್ಶನ ಆರಂಭವಾಗಲಿದ್ದು, ಪಕ್ಕದ ಚರಂಡಿಯ ಚಪ್ಪಡಿಗಳು ಬಿದ್ದುಹೋಗಿವೆ. ಮಳೆ ನೀರು ನಿಂತಾಗ ಚಲಿಸುವುದು ಕಷ್ಟಸಾಧ್ಯ. ಇಲ್ಲಿಂದ ಮುಂದಕ್ಕೆ ರಸ್ತೆಯ ಎರಡೂ ಭಾಗದಲ್ಲಿ ರಸ್ತೆಯ ಡಾಂಬರು ಕಿತ್ತುಹೋಗಿದೆ. ರಸ್ತೆಯಲ್ಲಿ ಕಲ್ಲುಗಳು ಮೇಲೆದ್ದಿದ್ದು, ಸುತ್ತಲ ಪ್ರದೇಶ ದೂಳಿನಿಂದ ಕೂಡಿದೆ.
ಕನಕಪುರ ರಸ್ತೆಯಲ್ಲಿ ಪ್ರತಿ ಗಂಟೆಗೆ ಸಾವಿರಾರು ವಾಹನಗಳು ಓಡಾಟ ನಡೆಸಲಿದ್ದು, ಮೆಟ್ರೋ ಮತ್ತು ಗೇಲ್ ಸಂಸ್ಥೆ ಕಾಮಗಾರಿಯಿಂದಾಗಿ ರಸ್ತೆ ಹದಗೆಟ್ಟಿದೆ. ಈ ಬಗ್ಗೆ ರಸ್ತೆ ಪರಿಶೀಲನೆ ನಡೆಸಲಾಗಿದೆ. ಶೀಘ್ರ ಡಾಂಬರೀಕರಣ ಮಾಡಲು ಸೂಚಿಸಿದ್ದೇನೆ. ಗುಂಡಿಗಳನ್ನು ಮುಚ್ಚಲು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
–ರಂದೀಪ್, ವಿಶೇಷ ಆಯುಕ್ತ
ಸಾರಕ್ಕಿಯಿಂದ ದೊಡ್ಡಕಲ್ಲುಸಂದ್ರ, ಆನಂದ ಅಡಿಗರ ಭವನ ಮೂಲಕ ಸಾಗುವ ಕನಕಪುರ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು, ವಿಶೇಷ ಆಯುಕ್ತರು ಮತ್ತು ಮೆಟ್ರೋ ಅಧಿಕಾರಿಗಳು ರಸ್ತೆ ಪರಿಶೀಲಿಸಿದ್ದಾರೆ. ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸಲು ತಿಳಿಸಲಾಗಿದೆ
–ಶೋಭಾಗೌಡ, ಪಾಲಿಕೆ ಸದಸ್ಯೆ
–ಮಂಜುನಾಥ ಗಂಗಾವತಿ