ಚನ್ನರಾಯಪಟ್ಟಣ: ತಾಲೂಕಿನ ಪಡಿತರದಾರರಿಗೆ ಕಲ್ಲು-ಮಣ್ಣು ಬೆರೆತ, ಕೋಳಿಗೆ ಹಾಕುವಂತಹ ಕಳಪೆ ಗುಣಮಟ್ಟದ ರಾಗಿ ವಿತರಿಸಲಾಗುತ್ತಿದೆ. ಇದರ ವಿರುದ್ಧ ಆಹಾರ ಇಲಾಖೆ, ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಸಾಮಾಜಿಕ ಜಾಣತಾಣದಲ್ಲಿ ಫೋಟೋ ಸಮೇತ ದೂರು ನೀಡಲಾಗಿದೆ.
ಆಹಾರ ಸಚಿವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲಿಯೇ ಬಡವರಿಗೆ ಕಳಪೆ ಗುಣಮಟ್ಟದ ರಾಗಿ ವಿತರಣೆ ಮಾಡುತ್ತಿರುವುದನ್ನು ನೋಡಿದರೆ, ಇತರೆ ಕಡೆಯಲ್ಲಿ ಇನ್ನೆಂತಹರಾಗಿ ವಿತರಣೆ ಆಗುತ್ತಿದೆ ಎಂಬುದನ್ನುಊಹಿಸಲು ಸಾಧ್ಯವಿಲ್ಲ.
3ನೇ ದರ್ಜೆ ರಾಗಿ ವಿತರಣೆ:ಮಾರುಕಟ್ಟೆಯಲ್ಲಿ ಪ್ರಥಮ ದರ್ಜೆ ರಾಗಿ ಕ್ವಿಂಟಲ್‌ಗೆ 1700 ರಿಂದ 2050 ರೂ.ಗೆ ಸಿಗುತ್ತದೆ, ಆದರೆ, ಸರ್ಕಾರ 2900 ರಿಂದ 3100 ರೂ. ನೀಡಿ ಗಂಡಸಿ ಹಾಗೂ ಇತರೆ ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತಿದೆ. ಕನಿಷ್ಠ ಈ ರಾಗಿಯನ್ನಾದ್ರೂ ಪಡಿತರರಿಗೆ ನೀಡಿದ್ದರೆ ಅನುಕೂಲವಾಗುತ್ತಿತ್ತು. ಆದರೆ, ಖರೀದಿ ಮಾಡುವುದೇ ಒಂದು ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಣೆ ಮಾಡುತ್ತಿರುವುದೇ ಇನ್ನೊಂದು. ಸಾಮಾನ್ಯ ಮಾರುಕಟ್ಟೆಯಲ್ಲಿ 1100 ರಿಂದ 1450 ರೂ.ಗೆ ಮಾರಾಟವಾಗುವ ಮೂರನೇ ದರ್ಜೆಯ ರಾಗಿಯನ್ನು ವಿತರಿಸಲಾಗುತ್ತಿದೆ.
ನಫೆಡ್‌ನಲ್ಲಿ ಭಾರೀ ದೋಖಾ: ರೈತರಿಂದ ಕೊಬ್ಬರಿ, ರಾಗಿ, ಜೋಳ, ಇತರೆ ಆಹಾರ ಧಾನ್ಯವನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಾಗ ಮೂರು ದರ್ಜೆ ಆಗಿ ವಿಂಗಡಿಸಿ, ಅದರಲ್ಲಿ ಗುಣಮಟ್ಟ ಇರುವುದನ್ನು ಖರೀದಿಸಲಾಗುತ್ತದೆ. ಆದರೆ, ನ್ಯಾಯ ಬೆಲೆ ಅಂಗಡಿಗೆ ವಿತರಣೆ ಮಾಡುವಾಗ ಕಳಪೆ ಗುಣಮಟ್ಟದನ್ನು ವಿತರಿಸಲಾಗುತ್ತದೆ. ಇದರ ಹಿಂದಿನ ಮರ್ಮವೇನು ಎಂದು ಸಾಮಾಜಿಕ ಕಾರ್ಯಕರ್ತ ಬಿ.ಎನ್.ದೊರೆಸ್ವಾಮಿ ಪ್ರಶ್ನಿಸಿದ್ದಾರೆ. ತಾಲೂಕಿನಲ್ಲಿ 102 ನ್ಯಾಯ ಬೆಲೆ ಅಂಗಡಿಗಳಿವೆ. ಅದರಲ್ಲಿ81,635 ಸಾವಿರಕುಟುಂಬಕ್ಕೆ ಪ್ರತಿ ತಿಂಗಳು ಸರ್ಕಾರ ಪಡಿತರ ಆಹಾರ ವಿತರಣೆ ಮಾಡುತ್ತಿದೆ.
ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೆ ಪರದಾಡುತ್ತಿರುವ ಬಹುತೇಕ ಪಡಿತರ ಚೀಟಿದಾರರು, ಸರ್ಕಾರ ನೀಡುವ ಪಡಿತರ ಆಹಾರ ಧಾನ್ಯವನ್ನೇ ಅವಲಂಬಿಸಿದ್ದಾರೆ. ಸದ್ಯದ ಪರಿಸ್ಥಿತಿಗೆ ರೋಗ ನಿರೋಧಕ ಶಕ್ತಿ ಹೊಂದಿರುವ ರಾಗಿ ಹೆಚ್ಚು ಅವಶ್ಯಕವಾಗಿದೆ. ಇಂತಹ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ರಾಗಿ ವಿತರಣೆ ಮಾಡಿದ್ರೆಹೇಗೆ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ಎಷ್ಟು ಪಡಿತರಿಗೆ ರಾಗಿ ವಿತರಣೆ: ತಾಲೂಕಿನಲ್ಲಿ 5943 ಎಪಿಎಲ್ ಪಡಿತರ ಚೀಟಿದಾರರಿದ್ದು, ಇವರಿಗೆ ರಾಗಿ ನೀಡುವುದಿಲ್ಲ. ಇನ್ನು 71,806 ಮಂದಿ ಬಿಪಿಎಲ್ ಚೀಟಿ ಹೊಂದಿರುವ ಕುಟುಂಬಗಳಿದ್ದು,2,38,797 ಮಂದಿಗೆ ತಲಾ 2 ಕೇಜಿಯಂತೆ 4,77,594 ಕೇಜಿ ರಾಗಿ ವಿತರಣೆ ಮಾಡಲಾಗುತ್ತಿದೆ. ಇನ್ನು3,886 ಅಂತ್ಯೋದಯ ಪಡಿತರ ಚೀಟಿ ಇದ್ದು, 16,422 ಮಂದಿಗೆ ತಲಾ 20 ಕೇಜಿಯಂತೆ 3,28,440 ಕೇಜಿ ರಾಗಿ ವಿತರಣೆಯಾಗುತ್ತಿದೆ. ಒಟ್ಟಾರೆಯಾಗಿ ನಫೆಡ್ ಪ್ರತಿ ತಿಂಗಳು 8062 ಕ್ವಿಂಟಲ್ ರಾಗಿ ಖರೀದಿಸಿ ತಾಲೂಕಿಗೆ ನೀಡಲಾಗುತ್ತಿದೆ.
ಕೋಳಿಗೆ ಹಾಕುವ ಕಲ್ಲು ಮಣ್ಣು ಮಿಶ್ರಿತ ರಾಗಿಯನ್ನುಬಡವರಿಗೆ ವಿತರಣೆ ಮಾಡಲಾಗುತ್ತಿದೆ.ಈ ಬಗ್ಗೆ ಆಹಾರ ಸಚಿವರು, ಮುಖ್ಯಮಂತ್ರಿ ಹಾಗೂಕೃಷಿ ಸಚಿವರಿಗೆಟ್ವೀಟ್ ಮೂಲಕ ದೂರು ನೀಡಲಾಗಿದೆ. ಇಂತಹ ಕಳಪೆ ರಾಗಿ ನೀಡುವ ಬದಲಿಗೆ, ಗೋಧಿ ಇಲ್ಲವೆ, ಅಕ್ಕಿಯನ್ನು ಹೆಚ್ಚು ನೀಡುವುದು ಉತ್ತಮ.
– ಬಿ.ಎನ್.ದೊರೆಸ್ವಾಮಿ, ಸಾಮಾಜಿಕ ಕಾರ್ಯಕರ್ತ, ಗದ್ದೇಬಿಂಡೇನಹಳ್ಳಿ
ನಫೆಡ್ ಮೂಲಕ ರಾಗಿ ಖರೀದಿಸಿ, ನ್ಯಾಯಬೆಲೆ ಅಂಗಡಿಗೆ ಪೂರೈಕೆ ಮಾಡಿದ್ದೇವೆ.ಹಲವುಮಾಲಿಕರು ರಾಗಿ ಗುಣಮಟ್ಟ ಸರಿಇಲ್ಲಎಂದುದೂರವಾಣಿಮೂಲಕಮಾಹಿತಿನೀಡಿದ್ದಾರೆ.ಪಡಿತರ ಆಹಾರಪಡೆಯುತ್ತಿರುವ ಕೆಲವರು,ನೇರವಾಗಿ ಕಚೇರಿಗೆಅಗಮಿಸಿಪ್ರಶ್ನಿಸುತ್ತಿದ್ದಾರೆ.ಈ ಬಗ್ಗೆ ಮೇಲಧಿಕಾರಿ ಗಮನಕ್ಕೆ ತರಲಾಗುವುದು.
– ಎಚ್.ಎಸ್.ಶಂಕರ್, ಆಹಾರ ಮತ್ತು ನಾಗರಿಕ ಸೇವಾ ಇಲಾಖೆ ಅಧಿಕಾರಿ.
– ಶಾಮಸುಂದರ್ ಕೆ.ಅಣ್ಣೇನಹಳಿ