Advertisement
ಹರಿದ ಚಿಂದಿಯಾಗಿರುವ ತೊಟ್ಟ ಬಟ್ಟೆಯಲ್ಲೇ ದಿನ ದೂಡುವಂತಾಗಿದೆ. ಲೌಕ್‌ಡೌನ್ ಕಾರ್ಮಿಕರು ಹಾಗೂ ನಿರ್ಗತಿಕರ ಮೇಲೆ ನೇರ ಪರಿಣಾಮ ಬೀರಿದ್ದು, ಅಂದು ದುಡಿದ ಹಣದಲ್ಲೇ ಜೀವನ ಸಾಗಿಸುತ್ತಿದ್ದವರ ಬದುಕು ಸಂಪೂರ್ಣ ಬೀದಿಗೆ ಬಂದಿತ್ತು. ಒಪ್ಪೊತ್ತಿನ ಊಟಕ್ಕೂ ಪರಿತಪಿಸಬೇಕಾಗಿತ್ತು. ಇದೀಗ ಜಿಲ್ಲಾಡಳಿತ ಏಳು ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಆರಂಭಿಸಿ ವರೆಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಿದೆ. ಉಪಹಾರ, ಎರಡೊತ್ತು ಆಹಾರ ಕಲ್ಪಿಸಲಾಗುತ್ತಿದೆ.
Related Articles
Advertisement
ಒಂದು ಕೇಂದ್ರದಲ್ಲಿ ಸುಮಾರು 50 ಜನರು ಇರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರಬೇಕಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯ ತಂಡ ರಚಿಸಿ ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಪ್ರತಿಯೊಂದು ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವ ಕಡೆಗೆ ಗಮನ ಹರಿಸಬೇಕಾಗಿದೆ.
ಅಗತ್ಯ ಸೌಲಭ್ಯ: ಆಶ್ರಯ ಕೇಂದ್ರಗಳಲ್ಲಿ ಪ್ರಮುಖವಾಗಿ ಅಂತರ ಕಾಯ್ದುಕೊಳ್ಳುವುದಕ್ಕೆ ಪ್ರಮುಖ ಒತ್ತು ನೀಡಲಾಗಿದೆ. ಕಾಲ ಕಾಲಕ್ಕೆ ಉಪಹಾರ, ಊಟವನ್ನು ಪ್ಯಾಕೆಟ್ ಮೂಲಕ ವಿತರಿಸಲಾಗುತ್ತಿದೆ. ಒಂದೇ ಕಡೆಯಿದ್ದು ಬೇಜಾರು ಕಳೆಯುವುದಕ್ಕಾಗಿ ಕೇಂದ್ರಗಳ ಅವರಣದಲ್ಲಿಯೇ ವಾಕಿಂಗ್, ಓದುವ ಹವ್ಯಾಸ ಇರುವವರಿಗೆ ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದೆ. ಕೇಂದ್ರಗಳಲ್ಲಿರುವವರು ಹೊರ ಹೋಗಬಾರದು ಎನ್ನುವ ಕಾರಣಕ್ಕೆ ಭದ್ರತೆ ಗಮನಹರಿಸಲಾಗಿದೆ. ಹಾಸ್ಟೆಲ್ ಗಳೇ ಆಶ್ರಯ ಕೇಂದ್ರಗಳಾಗಿರುವುದರಿಂದ ಸುಲಭವಾಗಿ ತಪ್ಪಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.
ಇನ್ನೊಂದೆಡೆ ಜಿಲ್ಲೆಯಲ್ಲಿ 3,919 ವಲಸೆ ಕಾರ್ಮಿಕರು ವಿವಿಧೆಡೆ ಕೆಲಸ ಮಾಡುತ್ತಿರುವುದಾಗಿ ಕಾರ್ಮಿಕ ಇಲಾಖೆಯ ಅಂಕಿ-ಸಂಖ್ಯೆ ಹೇಳುತ್ತವೆ. ಆಹಾರ ಮತ್ತು ಆಶ್ರಯ ಇಲ್ಲದೆ ಕಾರ್ಮಿಕರು ಪರಿತಪಿಸಬಾರದು ಎನ್ನುವ ಕಾರಣಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸಮಸ್ಯೆಯಲ್ಲಿರುವ ಕಾರ್ಮಿಕರು ಆಶ್ರಯ ಕೇಂದ್ರಗಳಿಗೆ ಬಂದು ಆಶ್ರಯ ಪಡೆಯಬಹುದಾಗಿದೆ. ಸಾಧ್ಯವಾಗದಿದ್ದಲ್ಲಿ ಅವರಿದ್ದಲ್ಲಿಗೇ ಆಹಾರದ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಿದೆ. ಇದಕ್ಕಾಗಿ ಸಹಾಯವಾಣಿ 155214ಗೆ ಕರೆ ಮಾಡಬಹುದಾಗಿದೆ.
ಎಷ್ಟೇ ಜನ ಕಾರ್ಮಿಕರು ಬಂದರೂ ವಸತಿ ನೀಡುವಷ್ಟು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ 19 ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಪೈಕಿ ಏಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1,200ಕ್ಕೂ ಹೆಚ್ಚು ಜನರಿಗೆ ಆಶ್ರಯ ಕಲ್ಪಿಸಬಹುದಾಗಿದೆ. ಆಹಾರ, ಆರೋಗ್ಯ, ಆಶ್ರಯಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಕೆಲಸ ಮಾಡುತ್ತಿದೆ. –ಆರ್.ಎನ್.ಪುರಷೋತ್ತಮ, ನೋಡಲ್ ಅಧಿಕಾರಿ, ಆಶ್ರಯ ಮತ್ತು ಆಹಾರ
ಅನ್ನಕ್ಕಾಗಿ ಪರದಾಡುವ, ನಮ್ಮ ಊರಿಗೂ ಹೋಗ ದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದರ್ಭದಲ್ಲಿ ಮೂರೊತ್ತು ಊಟ, ಇರಲಿಕ್ಕೆ ಆಶ್ರಯ ಕೊಟ್ಟು ಇಡೀ ಕುಟುಂಬಕ್ಕೆ ಅನ್ನ ಹಾಕುತ್ತಿದ್ದಾರೆ. ಊರು ಸೇರಿದರೆ ಸಾಕು ಎನ್ನುವ ಕಾರಣಕ್ಕೆ ತೊಟ್ಟ ಬಟ್ಟೆಯಲ್ಲಿ ಬಂದಿದ್ದೇವೆ. ನನ್ನಂತೆಯೇ ಬಹಳಷ್ಟು ಜನ ಜೀವ ಉಳಿಸಿಕೊಂಡರೆ ಸಾಕು ಎನ್ನುವ ಭಯದಿಂದ ಬಂದಿದ್ದಾರೆ. – ಅಣ್ಣಪ್ಪ ಬಿಜಾಪುರ, ಕಾರ್ಮಿಕ
–ಹೇಮರಡ್ಡಿ ಸೈದಾಪುರ