ಗಜೇಂದ್ರಗಡ: ಈ ಬಾರಿ ಸಾಕಷ್ಟು ಮಳೆಯೂ ಆಗಿದೆ, ತೊಗರಿ ಬೆಳೆಸಮೃದ್ಧವಾಗಿ ಬೆಳೆದೂ ನಿಂತಿದೆ ಆದರೆ ಬೆಳಗೆ ಕಾಯಿಕೊರಕ ಹುಳುಗಳ ಕಾಟ ಶುರುವಾಗಿದ್ದು, ಹುಳುಗಳು ನಿಯಂತ್ರಣಕ್ಕೆ ರೈತರು ಹರಸಾಹಸ ಪಡುತ್ತಿದ್ದಾರೆ.
ಪ್ರಸಕ್ತ ಮುಂಗಾರು-ಹಿಂಗಾರು ಮಳೆಗಳು ಉತ್ತಮವಾಗಿ ಸುರಿದ ಪರಿಣಾಮ ಈ ಭಾಗದಲ್ಲಿ ಅವ ಧಿಗೂ ಮುನ್ನವೇ ತೊಗರಿ ಬೆಳೆ ಭರ್ಜರಿಯಾಗಿ ಬೆಳೆದು ನಿಂತಿವೆ. ಹೊಲದ ತುಂಬಾ ಹರಡಿಕೊಂಡಿದೆ. ಇದೀಗ ಕಾಯಿ ಕಟ್ಟುವ ಹಂತಕ್ಕೂ ಬಂದಿದೆ ಆದರೆ ಕಾಯಿ ಕೊರಕ ಹುಳುವಿನ ಕಾಟ ರೈತರ ನಿದ್ದೆಗಡಿಸಿದೆ.
ಇಳುವರಿ ಕುಂಠಿತವಾಗುವ ಭಯ ಆವರಿಸಿದೆ. ಸಾಂಪ್ರದಾಯಿಕ ಬೆಳೆ ಪದ್ಧತಿಯಲ್ಲಿ ಏಕದಳ ಧಾನ್ಯಗಳ ನಡುವೆ ಅಕ್ಕಡಿ ಬೆಳೆ ತೊಗರಿ ಬೆಳೆದರೆ ದ್ವಿದಳ ಧಾನ್ಯವಾಗಿ ಮಣ್ಣಿನ ಪೋಷಕಾಂಶ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಹೀಗಾಗಿ ಬಹುತೇಕ ರೈತರು ಮನೆಗೆ ಅಗತ್ಯ ಬೇಳೆ ಕಾಳು ಹಾಗೂ ಉರುವಲಿಗೆ ತೊಗರಿ ಉತ್ಕೃಷ್ಟ ಬೆಳೆಯಾಗಿದೆ. ಈಚೆಗೆ ತೊಗರಿ ಬೆಳೆಯುವ ರೈತರ ಸಂಖ್ಯೆ ಕ್ಷೀಣಿಸಿತ್ತು. ಆದರೆ ಈ ಬಾರಿ ತೊಗರಿ ಬೆಳೆಗೆ ಬಂದ ಬೇಡಿಕೆ, ಬೆಲೆ ಏರಿಕೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಈ ಬಾರಿ 600 ಹೆಕ್ಟೆರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆದಿದ್ದಾರೆ.
ಹೆಚ್ಚಿದ ಬೇಡಿಕೆ: ಕೆಂಪು ಜವುಳು ಪ್ರದೇಶದಲ್ಲಿ ಬೆಳೆದ ತೊಗರಿಗೆ ಇದೀಗ ಬೇಡಿಕೆ ಬಂದೊದಗಿದೆ. ಮಳೆರಾಯನ ಕೃಪೆಯಿಂದ ಬೆಳೆಯೂ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಹುಳುಗಳ ನಿಯಂತ್ರಿಸಲು ಅನ್ನದಾತರು ಕ್ರಿಮಿನಾಶಕ ಸಿಂಪರಣೆಗೆ ಮುಂದಾಗಿದ್ದಾರೆ. ಹಿಂಗಾರು ಬೆಳೆಗಳ ಆರೋಗ್ಯ, ಕೀಟಗಳ ನಿಯಂತ್ರಣ ಹವಾಮಾನದಿಂದಲೇ ಸಾಧ್ಯ ಎಂಬುದು ತಲೆ ತಲಾಂತರದಿಂದ ನಂಬಿ ಅನುಸರಿಸಿಕೊಂಡು ಬಂದಿರುವ ಸಂಪ್ರದಾಯ. ಹಾಗಂತ ಬರೀ ಹವಾಮಾನವಷ್ಟೇ ಅಲ್ಲ, ಅದಕ್ಕೆ ಸಮರ್ಪಕ ಮಳೆಯೂ ಸಹಕಾರಿ. ಆದರೆ ಪ್ರಸ್ತುತ ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಅವಧಿಗೆ ಮೊದಲೇ ತೊಗರಿ ಫಸಲು ಬರುವ ಜತೆಗೆ ಭರ್ಜರಿ ಇಳುವರಿ ಬರಬಹುದೆನ್ನುವ ಲೆಕ್ಕಾಚಾರ ರೈತರದ್ದಾಗಿದೆ.
-ಡಿ.ಜಿ. ಮೋಮಿನ್