Advertisement

ಮುಸುಕಿನ ಜೋಳಕ್ಕೆ ರೋಗಬಾಧೆ: ರೈತರಿಗೆ ಸಂಕಷ್ಟ

12:25 PM Dec 04, 2019 | Suhan S |

ಬೇಲೂರು: ತಾಲೂಕಿನಲ್ಲಿ ಸತತವಾಗಿ ಮಳೆಯಾಗಿದ್ದ ರಿಂದ ಮುಸುಕಿನ ಜೋಳ ಬೆಳೆಗೆ ರೋಗ ತಗುಲಿದ್ದು, ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಬೇಲೂರು ತಾಲೂಕು ತಾಲೂಕು ಮಲೆನಾಡು, ಅರೆ ಮಲೆನಾಡು, ಬಯಲು ಸಿಮೇಪ್ರದೇಶವನ್ನು ಒಳಗೊಂಡಿದ್ದು, ತಾಲೂಕಾದ್ಯಂತ ರೈತರು ಮುಸುಕಿನ ಜೋಳ ಬೆಳೆದು ಲಾಭಗಳಿಸುತ್ತಿದ್ದರು.

Advertisement

ಇಳುವರಿ ಕುಸಿತ: ಸತತ ಮಳೆಯಿಂದಾಗಿ ಮುಸುಕಿನ ಜೋಳ ಬೆಳೆ ರೋಗ ಪೀಡಿತವಾಗಿದ್ದರಿಂದ ಇಳುವರಿಕಡಿಮೆಯಾಗಿ ರೈತರಿಗೆ ಅಪಾರ ನಷ್ಟವಾಗಿದೆ. ಕಟಾವಿಗೆ ಬಂದ ಅಲ್ಪ ಸ್ವಲ್ಪ ಬೆಳೆಗೆ ಸರ್ಕಾರ ಬೆಂಬಲಬೆಲೆ ನಿಗದಿ ಮಾಡದೇ ಇರುವುದರಿಂದ ದಲ್ಲಾಳಿ ಗಳು ಕೇಳಿದ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ.

ರೈತರಿಗೆ ನಷ್ಟ: ನವೆಂಬರ್‌ ತಿಂಗಳ ಆರಂಭದಲ್ಲಿ ಕ್ವಿಂಟಲ್‌ ಮುಸುಕಿನ ಜೋಳಕ್ಕೆ 2ಸಾವಿರ ರೂ. ಬೆಲೆಯಿತ್ತು. ಪ್ರಸ್ತುತ 1,600 ರೂ.ಗೆ ಮುಸುಕಿನ ಜೋಳವನ್ನು ದಲ್ಲಾಳಿಗಳು ಕೊಳ್ಳುತ್ತಿರುವುದರಿಂದ ರೈತರು ಕ್ವಿಂಟಲ್‌ಗೆ 400 ರೂ. ಕಡಿಮೆ ದರದಲ್ಲಿ ಮುಸುಕಿನ ಜೋಳವನ್ನು ಮಾರಾಟ ಮಾಡುವಂತಾಗಿದೆ. ಈ ಬಗ್ಗೆ ರೈತ ಬಂಟೇನಹಳ್ಳಿ ಕುಮಾರಸ್ವಾಮಿ ಮಾತನಾಡಿ, ಪ್ರತಿವರ್ಷ ಮುಸುಕಿನ ಜೋಳವನ್ನು ಬೆಳೆಯುತ್ತಿದ್ದೇವೆ. ಈ ಬಾರಿ ಬಿದ್ದ ಭಾರೀ ಮಳೆಯಿಂದ ಬೆಳೆ ರೋಗಕ್ಕೆ ತುತ್ತಾಗಿ ನಷ್ಟ ಅನುಭವಿಸುವಂತಾಗಿದೆ. ಬೆಳೆಯನ್ನು ಕಟಾವು ಮಾಡಿದ್ದರೂ ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಬೆಳೆ ಬೆಳೆಯಲು ಖರ್ಚು ಹೆಚ್ಚಾಗುತ್ತಿದೆ. ಮುಸುಕಿನ ಜೋಳವನ್ನು ಯಂತ್ರ ಮೂಲಕ ಬಿಡಿಸಲು ಕ್ವಿಂಟಲ್‌ಗೆ 80 ರೂ. ಕೊಡಬೇಕಾಗಿದೆ. ಮುಸುಕಿನ ಜೋಳವನ್ನು ಕ್ವಿಂಟಲ್‌ಗೆ 1,600ರೂ.ಗೆ ಮಾರಾಟ ಮಾಡುವಂತಾಗಿದೆ. ಸರ್ಕಾರವೇ ರೈತರಿಂದ ನೇರವಾಗಿ ಖರೀದಿ ಮಾಡಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಬೆಳೆಗೆ ಶಿಲೀಂದ್ರ ರೋಗ: ತಾಲೂಕು ರೈತರ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ತಾಲೂಕಿನ ರೈತರು ಈ ಹಿಂದೆ ಆಲೂಗಡ್ಡೆ ಬೆಳೆಯುತ್ತಿದ್ದರು. ಆಲೂಗಡ್ಡೆಗೆ ರೋಗಬಾಧೆ ಉಂಟಾಗಿದ್ದರಿದ ಬಹುತೇಕ ರೈತರು ಮುಸುಕಿನ ಜೋಳ ಬೆಳೆಯುತ್ತಿದ್ದಾರೆ. ಈ ಬಾರಿ ಸತತವಾಗಿ ಸುರಿದ ಮಳೆಯಿಂದ ಇಳುವರಿ ಕಡಿಮೆಯಾಗಿದ್ದು, ಬೆಳೆಗೆ ಶಿಲೀಂದ್ರ ರೋಗ ಹರಡಿರುವುದರಿಂದ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ಕಂಗಾಲಾಗಿದ್ದು, ದಲ್ಲಾಳಿಗಳ ಕಾಟ ಹೆಚ್ಚಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾಗುತ್ತಿದೆ. ಬೆಳೆ ಬೆಳೆಯಲು ರೈತ ಕಷ್ಟ ಪಡುತ್ತಾನೆ. ಆದರೆ ಯಾವುದೇ ಕಷ್ಟ ಪಡದ ದಲ್ಲಾಳಿಗಳು ರೈತರಿಗಿಂತ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ರೈತರು ಎಚ್ಚೆತ್ತುಕೊಳ್ಳದಿದ್ದರೆ ದಲ್ಲಾಳಿ ಗಳ ಕಾಟ ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂದರು.

ಎಪಿಎಂಸಿ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಸರ್ಕಾರ ಮುಸುಕಿನ ಜೋಳವನ್ನು ಖರೀದಿ ಮಾಡುವಂತೆ ಎಪಿಎಂಸಿಗೆ ಸೂಚನೆ ನೀಡಿಲ್ಲ. ಈಗಾಗಲೇ ರಾಗಿಯನ್ನು ಕ್ವಿಂಟಲ್‌ಗೆ 3,150 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ರಾಗಿ ಖರೀದಿ ಕೇಂದ್ರವನ್ನು ಆರಂಭಿಸಲಾಗುತ್ತದೆ. ರೈತರ ಹಿತದೃಷ್ಟಿಯಿಂದ ಮುಸುಕಿನ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಸರ್ಕಾರ ಮುಂದಾಗ ಬೇಕೆಂದರು.

Advertisement

 

-ಡಿ.ಬಿ.ಮೋಹನ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next