ರಾಮನಗರ: ಹಿಪ್ಪು ನೇರಳೆ ಸೊಪ್ಪಿಗೆ ಫೈಟೋಟಾರ್ಸನೋಮಸ್ ಲಾ ಕೀಟ ಬಾಧಿಸಿ, ರೇಷ್ಮೆ ಕೃಷಿಕರನ್ನು ನಷ್ಟಕ್ಕೆ ದೂಡಿರುವ ಬೆನ್ನಲ್ಲೆ ವೀಳ್ಯದೆಲೆಗೆ ಬಿಳಿ ಹುಳುಗಳು (ಬಿಳಿ ನೊಣ) ಬಾಧಿಸುತ್ತಿವೆ. ಮಾಗಡಿ ತಾಲೂಕು ಕುದೂರು ಹೋಬಳಿಯಲ್ಲಿ ಬೆಳೆಗಾರರನ್ನು ನಷ್ಟಕ್ಕೆ ದೂಡಿರುವ ಈ ಕೀಟಬಾಧೆಯ ಬಗ್ಗೆ ಜಿಲ್ಲೆಯಲ್ಲಿ ಇತರೆಡೆ ವೀಳ್ಯದೆಲೆ ಬೆಳೆಗಾರರನ್ನು ಕೆಂಗಡಿಸುತ್ತಿದೆ.
ಗಾಳಿ, ಮಳೆಗಾಲದಲ್ಲಿ ಕೀಟಬಾಧೆ ಅಧಿಕ: ಬಿಳಿ ಹುಳುಗಳ ಕಾಟದಿಂದಾಗಿ ವೀಳ್ಯದೆಲೆ ಒಣಗಿ ಉದುರಿ ಹೋಗುತ್ತಿರುವುದರಿಂದ ಬೆಳೆಗಾರರು ಚಿಂತಿಸುತ್ತಿದ್ದಾರೆ. ವಿಶೇಷವಾಗಿ ಮಾಗಡಿ ತಾಲೂಕು ರಂಗಯ್ಯನ ಪಾಳ್ಯದಲ್ಲಿ ಕಾಣಿಸಿಕೊಂಡಿರುವ ಈ ಕೀಟಬಾಧೆ ಜಿಲ್ಲೆಯ ಬೇರೆಡೆಗೂ ಹರಡುವ ಭೀತಿಯನ್ನು ಬೆಳೆಗಾರರು ವ್ಯಕ್ತಪಡಿಸಿದ್ದಾರೆ. ಗಾಳಿ, ಮಳೆಗಾಲದಲ್ಲಿ ಈ ಕೀಟ ಬಾಧಿಸುವುದು ಅಧಿಕ. ರಾಮನಗರ ಜಿಲ್ಲೆಯಲ್ಲಿ ವೀಳ್ಯದೆಲೆ ವಾಣಿಜ್ಯ ಬೆಳೆ. ಮಾಗಡಿ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ಹೆಚ್ಚಾಗಿ ವೀಳ್ಯದಲೆ ತೋಟಗಳಿವೆ. ಇಲ್ಲಿ ಬೆಳೆಯುವ ವೀಳ್ಯದೆಲೆಗೆ ಅನ್ಯ ರಾಜ್ಯಗಳಲ್ಲೂ ಬೇಡಿಕೆ ಇದೆ. ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾಗಡಿ ತಾಲೂಕಿನ ಕಾಗಿಮಡು ಮತ್ತು ರಂಗಯ್ಯನಪಾಳ್ಯದಲಿನ ತೋಟಗಳಲ್ಲಿ ಬಿಳಿಹುಳುವಿನ ಕಾಟ ಈ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ಆ ಭಾಗದ ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಳ್ಯದೆಲೆ ಅತಿ ಸೂಕ್ಷ್ಮ ಬೆಳೆ: ವಿಳ್ಯದೆಲೆ ಬೆಳೆ ಅತಿ ಸೂಕ್ಷ್ಮ ಬೆಳೆ. ಹೆಚ್ಚು ಬಿಸಿಲು, ಹೆಚ್ಚು ಮಳೆಯಾದರೂ ಸಮಸ್ಯೆ ಎದುರಾಗುತ್ತದೆ. ಇದೀಗ ಬಿಳಿಹುಳುಗಳು ದಾಂಗುಡಿ ಇಟ್ಟಿವೆ. ಈ ಹುಳುಗಳು ಎಲೆಯೊಳಗೆ ಗೂಡು ಕಟ್ಟಿ, ರಸವನ್ನು ಹೀರಲಾರಂಭಿಸುತ್ತವೆ. ಹೀಗಾಗಿ ಈ ಕೀಟಗಳಿಗೆ ಸಕ್ಕಿಂಗ್ ಪೆಸ್ಟ್ ಅಂತಲೂ ಕರೆಯುತ್ತಾರೆ. ಹಂತ ಹಂತವಾಗಿ ಕಾಂಡ ನಾಶವಾಗುತ್ತದೆ. ಇದರಿಂದಾಗಿ ಬಳ್ಳಿಗಳು ಒಣಗಿ, ವೀಳ್ಯದೆಲೆ ಉದುರುತ್ತದೆ.
ಅಧಿಕಾರಿಗಳು ವಿಜ್ಞಾನಿಗಳ ಮೊರೆ: ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ, ವಿರೂಪಾಕ್ಷಿಪುರ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಿಳಿಹುಳು ಲಗ್ಗೆ ಇಡುವ ಆತಂಕವನ್ನು ಬೆಳೆಗಾರರು ವ್ಯಕ್ತಪಡಿಸಿದ್ದಾರೆ. ಮಾಗಡಿ ತಾಲೂಕು ಕುದೂರು ಹೋಬಳಿ ರಂಗಯ್ಯನಪಾಳ್ಯದ ತೋಟಗಳಿಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಲಿಬಗ್ ಎಂಬ ಕೀಟದ ಬಾಧೆಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಜೈವಿಕ ವಿಧಾನ ಅನುಸರಿಸುವ ಉದ್ದೇಶ: ಬಿಳಿಹುಳ ಬಾಧೆಗೆ ಪ್ಯಾಕೇಜ್ ರೀತಿಯಲ್ಲಿ ಜೈವಿಕ ವಿಧಾನವನ್ನು ಅನುಸರಿಸಿ ಪರಿಹಾರ ಕೊಡುವ ಉದ್ದೇಶವನ್ನು ಜಿಲ್ಲಾ ತೋಟಗಾರಿಕೆ ಅಧಿಕಾರಿ ಗುಣವಂತ ಪತ್ರಿಕೆಗೆ ತಿಳಿಸಿದ್ದಾರೆ. ಚನ್ನಪಟ್ಟಣದಲ್ಲಿ ಬಿಳಿಹುಳು ಬಾಧಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ತಾವು ಮುಂಜಾಗೃತ ಕ್ರಮವಾಗಿ ಚನ್ನಪಟ್ಟಣದ ತೋಟಗಳಲ್ಲೂ ಪರಿಶೀಲನೆ ನಡೆಸಿದ್ದೇವೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಬೆಳೆಗಾರರಿಗೆ ಸೂಕ್ತ ಜಾಗೃತಿ ಮೂಡಿಸುವುದಾಗಿಯೂ ಹೇಳಿದ್ದಾರೆ.
● ಬಿ.ವಿ.ಸೂರ್ಯ ಪ್ರಕಾಶ್