ಮೈಸೂರು: ರಾಯಚೂರಿನ ವಿದ್ಯಾರ್ಥಿನಿ ಹತ್ಯೆ ಹಾಗೂ ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಯನ್ನು ಖಂಡಿಸಿ ವಿಶ್ವಮಾನವ ಮೈಸೂರು ವಿವಿ ನೌಕರರ ವೇದಿಕೆ ಮೌನ ಪ್ರತಿಭಟನೆ ನಡೆಸಿತು.
ನಗರದ ನ್ಯಾಯಾಲಯ ಮುಂಭಾಗದಲ್ಲಿರುವ ಗಾಂಧಿ ಪುತ್ಥಳಿ ಎದುರು ಜಮಾವಣೆಗೊಂಡ ವಿಶ್ವಮಾನವ ಮೈಸೂರು ವಿವಿ ನೌಕರರು ವಿದ್ಯಾರ್ಥಿನಿ ಹತ್ಯೆ ಹಾಗೂ ಭಯೋತ್ಪಾದಕರ ದಾಳಿಯನ್ನು ಖಂಡಿಸಿದರು.
ಮೈಸೂರು ವಿಶ್ವವಿದ್ಯಾಲಯ ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಇತ್ತೀಚೆಗೆ ನಡೆದ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿ ಖಂಡನೀಯ ಹಾಗೂ ಮನುಷ್ಯ ಸಮಾಜ ತಲೆ ತಗ್ಗಿಸುವಂತದ್ದು.
ಪ್ರತಿ ವ್ಯಕ್ತಿಗೂ ತನ್ನದೇ ಆದ ಘನತೆ, ಮೌಲ್ಯಗಳಿರುತ್ತವೆ. ಅದನ್ನು ಮತ್ತೂಬ್ಬರು ನಾಶ ಮಾಡಬಾರದು. ಇತ್ತೀಚೆಗೆ ಎಲ್ಲೆಡೆ ಹಿಂಸೆ, ಹತ್ಯೆ, ದುಷ್ಕೃತ್ಯಗಳು ನಡೆಯುತ್ತಿವೆ. ಕೂಡಲೇ ಸರಕಾರ ಮತ್ತು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಭಾರತದ ನೆಲೆದಲ್ಲಿ ಮಹಿಳೆಯನ್ನು ಪೂಜ್ಯ ಭಾವನೆಯಿಂದ ನೋಡಲಾಗುತ್ತದೆ. ಆದರೆ ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹತ್ಯೆ ನೋಡಿದರೆ ಇಂದು ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಎದುರಾಗಿದೆ ಎಂದರು.
ಈ ಸಂದರ್ಭ ಮಹಾರಾಜ ಕಾಲೇಜು ಪ್ರಾಂಶುಪಾಲೆ ಪ್ರೊ.ಸಿ.ಪಿ. ಸುನಿತಾ, ಮೈಸೂರು ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಡಾ. ಆಂಜನೇಯ ಸೇರಿದಂತೆ ವಿಶ್ವಮಾನವ ಮೈಸೂರು ವಿವಿ ನೌಕರರು ಭಾಗವಹಿಸಿದ್ದರು.