Advertisement

ಸ್ವಂತಿಕೆಗೆ ವಿಶ್ವಾದ್ಯಂತ ಅವಕಾಶ: ಅಶ್ವತಿ

07:15 PM Mar 21, 2018 | Team Udayavani |

ದಾವಣಗೆರೆ: ಸ್ವಂತಿಕೆ ಇರುವವರಿಗೆ ವಿಶ್ವಾದ್ಯಂತ ಅವಕಾಶಗಳಿವೆ. ನಕಲು ಮಾಡುವವರಿಗಲ್ಲ. ಪದವೀಧರರಾದಾಕ್ಷಣ ಸ್ವಂತಿಕೆ ಬರದು. ಅದಕ್ಕೆ ಸಾಧನೆಯ ವ್ಯಸನವೂ ಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ಅಶ್ವತಿ ಹೇಳಿದರು.

Advertisement

ಮಂಗಳವಾರ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ, ಬಾಪೂಜಿ ಮೇನೇಜ್‌ಮೆಂಟ್‌ ಕಾಲೇಜ್‌, ಬಾಪೂಜಿ ಅಕಾಡೆಮಿ ಆಫ್‌ ಮೇನೇಜ್‌ಮೆಂಟ್‌ ಅಂಡ್‌ ರೀಸರ್ಚ್ನಲ್ಲಿ ಏರ್ಪಡಿಸಿದ್ದ ಅಂತರ ಕಾಲೇಜ್‌ ಯುವಜನೋತ್ಸವ ಆಕ್ಟಾಗಾನ್‌-2018 ಉದ್ಘಾಟಿಸಿ ಅವರು ಮಾತನಾಡಿದರು. ಬದಲಾವಣೆ ಬಯಸುವವರು ಮೊದಲು ತಾವು ಬದಲಾಗಬೇಕು. ಬದಲಾವಣೆ ಸಮಾಜಕ್ಕೆ ಒಳ್ಳೆಯದನ್ನ
ಉಂಟು ಮಾಡುವಂತಿರಬೇಕು. ಇದಕ್ಕಾಗಿ ತಲೆಯಿಂದ ಯೋಚಿಸಿದರೆ ಸಾಲದು. ಹೃದಯದ ಅಂತರ್‌ಧ್ವನಿಯೂ ಹೇಳಬೇಕು. ಜತೆಗೆ ಮನಸ್ಸು ಮತ್ತು ಅಭಿರುಚಿಯೂ ಇದಕ್ಕೆ ಸ್ಪಂದಿಸಬೇಕು. ಇಂತಹ ಅಭಿರುಚಿ ಬೆಳೆಯಲು ಈ ರೀತಿಯ ಯುವಜನೋತ್ಸವ ಪೂರಕ ಎಂದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಕಾಲ್‌ ಇನ್‌ ಇಟ್‌ ಸಂಸ್ಥೆ ಮುಖ್ಯಾಧಿಕಾರಿ ರಘುರಾಜ್‌ ಬಂಡಿ, ಕಡಿಮೆ ಸಮಯದಲ್ಲಿ ಹೆಚ್ಚಿನದನ್ನ ಸಾಧಿಸಬೇಕಾದ್ದು ಇಂದಿನ ಅವಶ್ಯಕ. ಅಮೇರಿಕಾದಂತಹ ರಾಷ್ಟ್ರದಲ್ಲಿ ಪದವಿ, ವಿದ್ಯಾರ್ಹತೆಗಿಂತ ಸಾಮರ್ಥ್ಯ ಗುರುತಿಸಿ, ಉದ್ಯೋಗ ನೀಡಲಾಗುವುದು. ಸಾಮರ್ಥ್ಯ ಬೆಳಕಿಗೆ ಬರಲು ಸ್ಪರ್ಧೆಗಳು ಸಹಕಾರಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಹಿರಿಯ ನಿರ್ದೇಶಕ ಡಾ| ಆರ್‌.ಎಲ್‌. ನಂದೀಶ್ವರ್‌, ಉನ್ನತ ಶಿಕ್ಷಣ, ಅತ್ಯುನ್ನತ ಹುದ್ದೆ ಬಯಸುವವರು ಸ್ಪರ್ಧಾತ್ಮಕ
ಮನೋಭಾವದೊಂದಿಗೆ ಸವಾಲು ಎದುರಿಸುವಲ್ಲೂ ಸಿದ್ದರಾಗಿರಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ತೀವ್ರಗತಿಯ ಬದಲಾವಣೆಗಳಿಗೆ ಒಳಗಾಗುತ್ತಿರುವ ಜಗತ್ತಲ್ಲಿ ಕ್ಷಣ ಕ್ಷಣಕ್ಕೂ ಹೊಸದನ್ನ ತಿಳಿದುಕೊಂಡು, ಅದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು. 

ಪ್ರಾಚಾರ್ಯ ನವೀನ್‌, ಇತರರು ವೇದಿಕೆಯಲ್ಲಿದ್ದರು. 35ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಈ ಯುವಜನೋತ್ಸವದಲ್ಲಿ ಭಾಗವಹಿಸಿದ್ದಾರೆ. ನಿಖೀತಾ ಉಡುಪಡಿ, ಕೆಲ್ವಿನ್‌ ನಿರೂಪಿಸಿದರು. ಕಾಲೇಜಿನ ನಿರ್ದೇಶಕ ಡಾ| ಎಚ್‌.ವಿ. ತ್ರಿಭುವಾನಂದ ಸ್ವಾಮಿ
ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next