ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ವಿದ್ಯಾನಗರಿ ಧಾರವಾಡಕ್ಕೆ ಬೆಂಗಳೂರು ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಮತ್ತೂಂದು ರೈಲು ವಿಶ್ವ ಮಾನವ ಎಕ್ಸ್‌ಪ್ರೆಸ್‌ಗೆ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದರು.
ಮಂಗಳವಾರ ಸಂಜೆ 4.30ಕ್ಕೆ ನವದೆಹಲಿಯಿಂದ ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಿದ ಸಚಿವ ಸುರೇಶ್ ಪ್ರಭು ನೂತನ ರೈಲಿಗೆ ವಿಶ್ವಮಾನವ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಿದರು. ರೈಲು ಸಂಖ್ಯೆ 17326 ಮೈಸೂರಿನಿಂದ ಹುಬ್ಬಳ್ಳಿಗೆ, ರೈಲು ಸಂಖ್ಯೆ 17325 ಹುಬ್ಬಳ್ಳಿಯಿಂದ ಮೈಸೂರಿಗೆ ಪ್ರತಿನಿತ್ಯ ಸಂಚರಿಸಲಿವೆ.
ಮೈಸೂರು ರೈಲು ನಿಲ್ದಾಣದಿಂದ ಬೆಳಗ್ಗೆ 6.15ಕ್ಕೆ ಹೊರಡುವ ಈ ರೈಲು ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ಬೆಂಗಳೂರು, ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಚಿಕ್ಕಜಾಜೂರು,
-ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ, ಯಲವಿಗಿ ಮೂಲಕ ರಾತ್ರಿ 7.05ಕ್ಕೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು ರಾತ್ರಿ 8.40ಕ್ಕೆ ಮೈಸೂರು ತಲುಪಲಿದೆ. ಈ ರೈಲು ಸೇವೆಯಿಂದ ಸಿದ್ದಗಂಗಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಗಾಡಿಯ ಮೇಲಿನ ಒತ್ತಡವು ತಗ್ಗಲಿದೆ.
ಮೈಸೂರಿಗರಿಗೆ ಮೈಸೂರು-ಧಾರವಾಡ ನಡುವೆ ಮತ್ತೂಂದು ರೈಲು ಸೇವೆ ಹಗಲಿನಲ್ಲಿ ದೊರೆತಿದ್ದಲ್ಲದೆ, ಉದ್ಯೋಗ ನಿಮಿತ್ತ ಮೈಸೂರು-ಬೆಂಗಳೂರು ನಡುವೆ ನಿತ್ಯ ಸಂಚರಿಸುವವರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಿನಿಂದ ಸಂಜೆ 6.15ಕ್ಕೆ ಮೈಸೂರಿಗೆ ಹೊರಡುತ್ತಿದ್ದ ಚಾಮುಂಡಿ ಎಕ್ಸ್‌ಪ್ರೆಸ್ ಮೇಲಿನ ಒತ್ತಡ ಕಡಿಮೆಯಾಗಲಿದೆ.
ಬುಧವಾರದಿಂದ ಈ ನೂತನ ರೈಲುಗಳ ಸೇವೆ ನಿಯಮಿತವಾಗಿ ದೊರೆಯಲಿದೆ. 16 ಬೋಗಿಗಳನ್ನು ಒಳಗೊಂಡಿರುವ ಈ ನೂತನ ರೈಲು ಒಂದು ಸೆಕೆಂಡ್ ಕ್ಲಾಸ್ ಎಸಿ ಚೇರ್ ಕಾರ್, 13 ಎರಡನೇ ದರ್ಜೆಯ ಸಾಮಾನ್ಯ ಬೋಗಿಗಳು ಮತ್ತು ಅಂಗವಿಲಕರ ಸ್ನೇಹಿ ಬೋಗಿ ಒಳಗೊಂಡಂತೆ ಎರಡು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಅನ್ನು ಈ ರೈಲು ಒಳಗೊಂಡಿದೆ.
ಹಸಿರು ನಿಶಾನೆ: ಮೈಸೂರು ರೈಲು ನಿಲ್ದಾಣದಲ್ಲಿ ಸಂಸದ ಪ್ರತಾಪ್ ಸಿಂಹ್ ನೂತನ ರೈಲಿಗೆ ಹಸಿರು ನಿಶಾನೆ ತೋರಿದರು. ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕ ಅತುಲ್ ಗುಪ್ತಾ, ಹಿರಿಯ ವಾಣಿಜ್ಯ ವ್ಯವಸ್ಥಾಪಕ ಎಸ್.ಜಿಯತೀಶ್ ಇತರರು ಇದ್ದರು.