Advertisement

ವಿಶ್ವದ ಶ್ರೀಮಂತ ಕುಳಗಳು ವಲಸೆ ಹೋಗುತ್ತಿರುವುದು ಯಾಕೆ?

09:41 AM May 06, 2019 | Team Udayavani |

ಜೋಹಾನ್ಸ್‌ಬರ್ಗ್‌: ಪ್ರಪಂಚದ ಶ್ರೀಮಂತರ ವಲಸೆ ಪ್ರಕ್ರಿಯೆ ಜೋರಾಗಿದೆ. ಕಳೆದ ವರ್ಷ ಒಂದು ಲಕ್ಷಕ್ಕೂ ಅಧಿಕ ಕೋಟ್ಯಾಧಿಪತಿಗಳು ಪ್ರಪಂಚದ ನಾನಾ ಭಾಗಗಳಿಗೆ ವಲಸೆ ಹೋಗಿದ್ದಾರೆ ಎಂಬ ಮಾಹಿತಿ ನ್ಯೂ ವರ್ಲ್ಡ್ ವೆಲ್ತ್‌ ಎಂಬ ಸಂಸ್ಥೆಯ ಸಮೀಕ್ಷಾ ವರದಿಯಿಂದ ಬಹಿರಂಗವಾಗಿದೆ. ಈ ವಲಸೆ ಪ್ರಮಾಣ 2017ಕ್ಕಿಂತ 14% ಹೆಚ್ಚಾಗಿದ್ದರೆ 2013ಕ್ಕಿಂತ ಈ ಪ್ರಮಾಣ ದ್ವಿಗುಣಗೊಂಡಿದೆ ಎನ್ನುವುದೇ ಅಚ್ಚರಿಯ ವಿಷಯವಾಗಿದೆ.

Advertisement

ಆಸ್ಟ್ರೇಲಿಯಾ, ಕೆನಡಾ ಮತ್ತು ಅಮೆರಿಕಾ ದೇಶಗಳು ಶ್ರೀಮಂತ ಕುಳಗಳ ನೆಚ್ಚಿನ ವಾಸಸ್ಥಾನಗಳಾಗಿವೆ ಎಂಬ ವಿಚಾರವೂ ಈ ಸಮೀಕ್ಷೆಯಿಂದ ಬಯಲಾಗಿದೆ. ಇನ್ನು ಚೀನಾ ಮತ್ತು ರಷ್ಯಾ ದೇಶಗಳ ಕೋಟ್ಯಾಧಿಪತಿಗಳೇ ಹೆಚ್ಚು ಹೆಚ್ಚು ವಲಸೆ ಹೋಗುತ್ತಿರುವುದು ಈ ಎರಡು ದೇಶಗಳಿಗೆ ತಲೆನೋವಿನ ವಿಚಾರವಾಗಿದೆ. ಇನ್ನು ಬ್ರಿಟನ್‌ ದೇಶವೊಂದರಿಂದಲೇ ಸುಮಾರು 3000 ಕೋಟ್ಯಾಧಿಪತಿಗಳು ಬ್ರೆಕ್ಸಿಟ್‌ ಹಾಗೂ ತೆರಿಗೆ ಪದ್ಧತಿ ಕಾರಣಗಳಿಗಾಗಿ 2017ರಲ್ಲಿ ದೇಶ ತೊರೆದಿದ್ದಾರೆ.

ಈ ರೀತಿಯಾಗಿ ಕೋಟ್ಯಾಧಿಪತಿಗಳು ತಮ್ಮ ತಾಯ್ನಾಡನ್ನು ತೊರೆಯಲು ತಮ್ಮ ತಮ್ಮ ದೇಶಗಳಲ್ಲಿನ ಪ್ರಸಕ್ತ ಪರಿಸ್ಥಿತಿಗಳೂ ಕಾರಣವಾಗಿವೆ ಎಂಬ ಅಂಶ ಈ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಅವುಗಳಲ್ಲಿ ಅಪರಾಧ ಪ್ರಕರಣ, ವ್ಯವಹಾರ ಅವಕಾಶಗಳು ಕಡಿಮೆಯಾಗಿರುವುದು, ಧಾರ್ಮಿಕ ಪ್ರಕ್ಷುಬ್ಧತೆಯಂತಹ ವಿಚಾರಗಳು ಪ್ರಮುಖವಾಗಿವೆ. ಯಾವುದೇ ಒಂದು ದೇಶದಲ್ಲಿ ಧಾರ್ಮಿಕ ಪ್ರಕ್ಷುಬ್ಧತೆ, ರಾಜಕೀಯ ಅಸ್ಥಿರತೆ ಅಥವಾ ಅಪರಾಧ ಪ್ರಕರಣಗಳು ಹೆಚ್ಚಾದಾಗ ಮೊದಲು ದೇಶ ತೊರೆಯುವವರು ಅಲ್ಲಿರುವ ಕೋಟ್ಯಾಧಿಪತಿಗಳು ಎಂಬ ಮಾತು ಈ ಬಾರಿಯ ಸಮೀಕ್ಷೆಯಲ್ಲೂ ನಿಜವಾಗಿದೆ.

ಶ್ರೀಮಂತ ವಲಸಿಗರ ಫೆವರಿಟ್‌ ರಾಷ್ಟ್ರ ಆಸ್ಟ್ರೇಲಿಯಾ
ನಾನಾ ದೇಶಗಳ ಶ್ರೀಮಂತ ಕುಳಗಳಿಗೆ ಸುರಕ್ಷಿತ ಮತ್ತು ಫೆವರಿಟ್‌ ವಲಸಿಗ ತಾಣವಾಗಿರುವುದು ಆಸ್ಟ್ರೇಲಿಯಾ. ಯಾಕೆಂದರೆ ಈ ದೇಶದಲ್ಲಿ ಸಿಗುವ ಸುರಕ್ಷತೆ ಒಂದು ಕಾರಣವಾದರೆ ಇನ್ನೊಂದು ಕಡೆ ಆಸ್ಟ್ರೇಲಿಯಾವು ಚೀನಾ, ಜಪಾನ್‌ ಮತ್ತು ದಕ್ಷಿಣ ಕೊರಿಯಾಗಳೊಂದಿಗೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿದೆ.

ಮತ್ತೆ ಇಲ್ಲಿನ ಆರ್ಥಿತ ಸ್ಥಿರತೆಯೂ ಆಸ್ಟ್ರೇಲಿಯಾವನ್ನು ವಲಸಿಗ ಶ್ರೀಮಂತರ ನೆಚ್ಚಿನ ತಾಣವಾಗಿಸಿದೆ. ವಿಶ್ವವನ್ನೇ ಕಾಡಿದ ಆರ್ಥಿಕ ಹಿಂಜರಿತದ ನಡುವೆಯೂ ಕಳೆದ 27 ವರ್ಷಗಳಿಂದ ಈ ದ್ವೀಪ ರಾಷ್ಟ್ರ ಸದೃಢ ಆರ್ಥಿಕ ಸ್ಥಿತಿಯನ್ನು ಕಾಯ್ದುಕೊಂಡಿದೆ.

Advertisement

ಇನ್ನು ಭಾರತ ಮತ್ತು ಚೀನಾದಲ್ಲೂ ಬಿಗಿ ಆರ್ಥಿಕ ಮತ್ತು ತೆರಿಗೆ ನೀತಿಗಳು ಇಲ್ಲಿನ ಶ್ರೀಮಂತರು ದೇಶ ಬಿಡುವಂತೆ ಮಾಡಿದೆ. ಆದರೆ ಈ ಎರಡು ದೇಶಗಳಲ್ಲಿ ಪ್ರತೀ ವರ್ಷ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಭಾರತ ಮತ್ತು ಚೀನಾಗಳಿಗೆ ಈ ಸಮೀಕ್ಷೆಯಲ್ಲಿ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ.

ಆದರೂ ಏಷ್ಯಾ ಭಾಗದ ಕೆಲವು ಕೋಟ್ಯಾಧಿಪತಿಗಳು ಉನ್ನತ ಜೀವನ ಮಟ್ಟ ಮತ್ತು ಮಕ್ಕಳ ವಿದ್ಯಾಭ್ಯಾಸ ಉದ್ದೇಶಗಳಿಗಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬ ಅಂಶ ಈ ಸಮೀಕ್ಷೆಯಿಂದ ಬಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next