ಜಗತ್ತಿನಲ್ಲಿ ಸಾವಿರಾರು ಪ್ರೇಕ್ಷಣೀಯ, ಪ್ರವಾಸಿ ತಾಣಗಳಿವೆ. ಹಲವರಿಗೆ ಟ್ರಕ್ಕಿಂಗ್, ಪ್ರವಾಸ, ವಿದೇಶ ಪ್ರಯಾಣ, ಸ್ಮಾರಕ ಭೇಟಿ ಇಷ್ಟದ ವಿಷಯಗಳಾಗಿರುತ್ತದೆ. ಅದೇ ರೀತಿ ಜಗತ್ತಿನಲ್ಲಿ ವಿಸ್ಮಯಗಳಿಗೆ ಕೊರತೆ ಇಲ್ಲ. ಅದಕ್ಕೆ ಸೇರ್ಪಡೆ ಜಗತ್ತಿನ ಐದು ನಿಷೇಧಿತ ಸ್ಥಳ ಮತ್ತು ಅದರ ವಿಶೇಷತೆಯ ಕುರಿತ ಕಿರು ವಿಶ್ಲೇಷಣೆ ಇಲ್ಲಿದೆ..
ಫ್ರಾನ್ಸ್ ನ ಲಾಸ್ಕಾಕ್ಸ್ ಗುಹೆ!
ಫ್ರಾನ್ಸ್ ನಲ್ಲಿರುವ ಲಾಸ್ಕಾಕ್ಸ್ ಗುಹೆಗಳು ಪ್ರಪಂಚದಲ್ಲೇ ಅತ್ಯಂತ ಪುರಾತನ, ಇತಿಹಾಸೂರ್ವ ವರ್ಣಚಿತ್ರಗಳ ವಿಸ್ಮಯ ತಾಣವಾಗಿದೆ. 1940ರಲ್ಲಿ ಗ್ರಾಮಾಂತರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಿಕ್ಕ ಹುಡುಗರ ಗುಂಪು ಈ ಪುರಾತನ ಲಾಸ್ಕಾಕ್ಸ್ ಗುಹೆ ಕಂಡುಹಿಡಿದ್ದರಂತೆ! ತದನಂತರ ಇದು ಈ ಇತಿಹಾಸಪೂರ್ವ ಗುಹೆ ವರ್ಣಚಿತ್ರಗಳ ನಿಧಿಯನ್ನು ಹೊಂದಿರುವುದು ಬಯಲಾಗಿತ್ತು.
ಈ ಗುಹೆಯಲ್ಲಿರುವ ಕಲಾಕೃತಿಗಳು 17,000 ವರ್ಷಗಳಿಗಿಂತಲೂ ಪುರಾತನವಾಗಿದ್ದು, ಇಲ್ಲಿರುವ ಪ್ರಾಣಿ ಮತ್ತು ಚಿಹ್ನೆಗಳ ಪ್ರಾತಿನಿಧ್ಯ, ಅಮೂಲ್ಯವಾದ ಸಾಂಸ್ಕೃತಿಕ ಪಳಯುಳಿಕೆಯಾಗಿದ್ದು, ಇದು ಮಾನವನ ಆರಂಭಿಕ ಅಸ್ತಿತ್ವದ ಮೇಲೆ ಬೆಳಕು ಚೆಲ್ಲಲು ನೆರವಾಗುತ್ತಿದೆ.
ಪ್ರವಾಸಿಗರ ಉಸಿರಾಟ, ಕಾರ್ಬನ್ ಡೈಆಕ್ಸೈಡ್ ಮತ್ತು ತೇವಾಂಶದಿಂದ ವರ್ಣಚಿತ್ರಗಳಿಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕಾಗಿ 1963ರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕೇವಲ ಕೆಲವೇ ಕೆಲವು ವಿಜ್ಞಾನಿಗಳಿಗೆ ಮಾತ್ರ ಒಳ ಹೋಗಲು ಅನುಮತಿ ನೀಡಲಾಗುತ್ತಿದೆ!
ವ್ಯಾಟಿಕನ್ ಸೀಕ್ರೇಟ್ ದಾಖಲೆ ಪತ್ರಗಳು!
ಭಾರತ ದೇಶದ ಬಿಹಾರದಲ್ಲಿದ್ದ ಪ್ರಾಚೀನ ಕಾಲದ ಪ್ರಸಿದ್ಧ ಉನ್ನತ ವ್ಯಾಸಂಗ ಕೇಂದ್ರ ನಳಂದ ಬಗ್ಗೆ ಯಾರಿಗೆ ಗೊತ್ತಿಲ್ಲ. ಈ ಅಪೂರ್ವ ಜ್ಞಾನಸಂಪತ್ತಿನ ನಳಂದವನ್ನು 1193ರಲ್ಲಿ ಬಖ್ತಿಯಾರ್ ಖಿಲ್ಜಿ ನೇತೃತ್ವದ ಟರ್ಕಿಯ ಮುಸ್ಲಿಮ್ ದಾಳಿಕೋರರು ಆಕ್ರಮಣ ಮಾಡಿ ದೋಚಿದ್ದರು. ನಂತರ ಮೊಘಲರು ಬೆಂಕಿಹಚ್ಚಿ ಸರ್ವನಾಶಗೈದಿರುವುದು ಇತಿಹಾಸ. ಅದೇ ರೀತಿ ವ್ಯಾಟಿಕನ್ ನಗರದಲ್ಲಿರುವ ವ್ಯಾಟಿಕನ್ ರಹಸ್ಯ ಆರ್ಕೈವ್ಸ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ವ್ಯಾಟಿಕನ್ ಸೀಕ್ರೆಟ್ ಆರ್ಕೈವ್ಸ್ ನಲ್ಲಿ ಶತಮಾನಗಳಷ್ಟು ಹಳೆಯ ದಾಖಲೆಪತ್ರಗಳ ಭಂಡಾರವಿದೆ. ಇಲ್ಲಿ 53 ಮೈಲುಗಳಷ್ಟು ಉದ್ದದ ಕಪಾಟು, ಮೂವತ್ತೈದು ಸಾವಿರ ಸಂಪುಟಗಳ ಕ್ಯಾಟಲಾಗ್, ಹನ್ನೆರಡು ಶತಮಾನಗಳ ಮೌಲ್ಯದ ದಾಖಲೆಗಳು ಈ ಭದ್ರಕೋಟೆಯಲ್ಲಿದೆ. ಪೋಪ್ ಪರಂಪರೆ ಸೇರಿದಂತೆ ಮೈಕೆಲ್ ಏಂಜೆಲೋವರೆಗಿನ ಪತ್ರಗಳ ಅಪೂರ್ವ ಐತಿಹಾಸಿಕ ದಾಖಲೆಗಳ ಸಂಪತ್ತು ಇಲ್ಲಿದೆ. ವ್ಯಾಟಿಕನ್ ಸೀಕ್ರೆಟ್ ಆರ್ಕೈವ್ಸ್ ಗೆ ಸಾರ್ವಜನಿಕ ಪ್ರವೇಶ ನಿಷೇಧ, ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆಯ ನಂತರ ಕೆಲವೇ ಕೆಲವು ಸಂಶೋಧಕರನ್ನು ಆಯ್ಕೆ ಮಾಡಿ ಒಳ ಹೋಗಲು ಅನುಮತಿ ನೀಡಲಾಗುತ್ತದೆಯಂತೆ!
ನಾರ್ವೆಯ ಸ್ವಾಲ್ಬಾರ್ಡ್ ಜಾಗತಿಕ ಬೀಜ ಸಂಗ್ರಹ ಕೋಠಿ!
ಯುದ್ಧ ಭೀತಿ, ಸುನಾಮಿ, ಭೂಕಂಪ ಮತ್ತಿತರ ದುರಂತಗಳು ಸಂಭವಿಸುವ ಸಾಧ್ಯತೆಯಿದ್ದರೆ ತೈಲ, ಕಲ್ಲಿದ್ದಲು, ಆಹಾರ ಧಾನ್ಯ ಸಂಗ್ರಹಿಸುವುದು ಸಾಮಾನ್ಯ. ಆದರೆ ನಾರ್ವೆಯಲ್ಲಿ ಮುಂದಿನ ಪೀಳಿಗೆಗೆ ಕೃಷಿಯಲ್ಲಿ ಜೀವವೈವಿಧ್ಯತೆ ಉಳಿಸಿಕೊಡಲು ಅಸಂಖ್ಯ ಪ್ರಮಾಣದ ಬಿತ್ತನೆ ಬೀಜಗಳ ಬೃಹತ್ ಕೋಠಿ(ಉಗ್ರಾಣ) ನಿರ್ಮಿಸಲಾಗಿದೆ!
ಯಾವುದೇ ಭೂಕಂಪಕ್ಕೂ ಜಗ್ಗದ ರೀತಿಯಲಿ ವಿಶಿಷ್ಟವಾಗಿ ಭೂಗತವಾಗಿ ಈ ಕೋಠಿಯನ್ನು ನಿರ್ಮಿಸಲಾಗಿದೆ. ಇದು ವಿಶ್ವದ ಅತೀ ದೊಡ್ಡ ಬೀಜ ಸಂಗ್ರಹ ಉಗ್ರಾಣವಾಗಿದೆ. ನಾರ್ವೆಯ ಸ್ವಾಲ್ ಬರ್ಡ್ ನಡುಗಡ್ಡೆ ಪರ್ವತದಡಿ ಭೂಗತವಾಗಿ ಈ ಕೋಠಿ ನಿರ್ಮಿಸಲಾಗಿದೆ. ಇದು ಉತ್ತರ ಧ್ರುವದಿಂದ ಸಾವಿರ ಕಿ.ಮೀ. ದೂರದಲ್ಲಿದೆ.
ಘನೀಕರಿಸುವ ಕ್ರಮದಲ್ಲಿ ಬೀಜಗಳನ್ನು ರಕ್ಷಿಸಿ ಇಡಲಾಗಿದೆಯಂತೆ. ಈ ಬೃಹತ್ ನಿಗೂಢ ಉಗ್ರಾಣಕ್ಕೆ ಸಾರ್ವಜನಿಕರ ಪ್ರವೇಶ ನಿಷಿದ್ಧ. ಕೇವಲ ಸಂಶೋಧಕರು ಮತ್ತು ಅಧಿಕಾರಿಗಳಿಗೆ ಮಾತ್ರ ಭೇಟಿ ನೀಡಲು ಅವಕಾಶವಿದೆಯಂತೆ!
ಅಮೆರಿಕದ ನಿಹೌ ದ್ವೀಪ (Niihau Island)!
ನಿಹೌ…ಇದೊಂದು ನಿಷೇಧಿತ ದ್ವೀಪ ಎಂದೇ ಹೆಸರಾಗಿದೆ. ನಿಹೌ ಎಂದು ಕರೆಯಲ್ಪಡುವ ಈ ದ್ವೀಪ ಖಾಸಗಿ ಒಡೆತನದ ಹವಾಯಿಯನ್ ದ್ವೀಪವಾಗಿದೆ. 1860ರಿಂದಲೂ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಆಧುನಿಕ ತಂತ್ರಜ್ಞಾನ, ಆವಿಷ್ಕಾರಗಳ ಹಂಗಿಲ್ಲದೇ, ಮುಕ್ತವಾಗಿ ಚಿಕ್ಕ ಸಮುದಾಯವೊಂದು ಸಾಂಪ್ರದಾಯಿಕ ಜೀವನ ಕ್ರಮದೊಂದಿಗೆ ಇಲ್ಲಿ ಬದುಕುತ್ತಿದ್ದಾರೆ. ಅಂದಾಜು 170 ನಿವಾಸಿಗಳನ್ನು ಹೊಂದಿರುವ ಈ ಖಾಸಗಿ ಒಡೆತನದ ದ್ವೀಪದ ಮಾಲೀಕ ರಾಬಿನ್ ಸನ್.. ಈ ದ್ವೀಪದಲ್ಲಿ ರಾಬಿನ್ ಸನ್ ಕುಟುಂಬ ಮತ್ತು ಇಲ್ಲಿನ ನಿವಾಸಿಗಳಿಗೆ ಮಾತ್ರ ಇಲ್ಲಿ ವಾಸವಾಗಿರಲು ಅವಕಾಶವಿದೆ.
ಪ್ಲೂಟೊ ಗೇಟ್ ವಿಸ್ಮಯ!
ಟರ್ಕಿಯ ಪ್ಲ್ಯೂಟೊ ಗೇಟ್ ಎಂಬ ಸ್ಥಳದಲ್ಲಿ ವಿಚಿತ್ರವಾದ ಆವಿ ಹೊರ ಹೊಮ್ಮುತ್ತಿರುತ್ತದೆ. ಇಂಡೋ-ರೋಮನ್ ಜನರು ಈ ಪ್ಲೂಟೊ ಗೇಟ್ ಎಂಬ ಸ್ಥಳವನ್ನು ಭೂಗತಜಗತ್ತಿನ ದೇವರುಗಳಿಗೆ ತಮ್ಮ ಹರಕೆ ಸಂದಾಯ ಮಾಡಲು ಬಳಸುತ್ತಿದ್ದರು.
ಇದು ಎರಡು ಜಗತ್ತುಗಳ ನಡುವಿನ ಅಪಾಯಕಾರಿ ಹೆಬ್ಬಾಗಿಲು ಎಂದೇ ಬಿಂಬಿಸಲಾಗುತ್ತಿದೆ. ನರಕ ಸದೃಶವಾದ ಈ ಪ್ಲ್ಯೂಟೊ ಗೇಟ್ ಹೀರಾಪೋಲಿಸ್ ನ ಯಾವುದೋ ಭಾಗದಲ್ಲಿ ಇತ್ತೆಂದು ತಿಳಿದು ಬಂದಿತ್ತು. 190ಬಿಸಿಇ (BCE -ಕ್ರಿಸ್ತ ಪೂರ್ವ)ದಲ್ಲಿ ಪರ್ಗಾಮನ್ ರಾಜ ಯುಮೆನ್ಸ್ II ಪ್ಲೂಟೊ ಗೇಟ್ ಅನ್ನು ಪತ್ತೆ ಹಚ್ಚಿದ್ದನಂತೆ.