ಮುಂಬಯಿ: ಪುರಾತನ ಕಾಲದಿಂದಲೇ ಋಷಿ ಮುನಿಗಳು ಈ ಯೋಗವನ್ನು ಆಳವಾಗಿ ತಮ್ಮಲ್ಲಿ ಅಳವಡಿಸಿಕೊಂಡು ತಮ್ಮ ಜ್ಞಾನ, ತಪಃಶಕ್ತಿಯಿಂದ ಒಳ್ಳೆಯ ಕಾರ್ಯಗಳನ್ನು ಮಾಡಿ ಅಜರಾಮರರಾಗಿದ್ದಾರೆ. ಇಂದು ವಿಶ್ವಮಾನ್ಯತೆಯನ್ನು ಗಳಿಸಿರುವ ಯೋಗದ ಮೂಲ ನಮ್ಮ ಹೆಮ್ಮೆಯ ಭಾರತ ದೇಶದ್ದಾಗಿದೆ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರು ಅಭಿಪ್ರಾಯಿಸಿದರು.
ಗೋರೆಗಾಂವ್ ಕರ್ನಾಟಕ ಸಂಘದ ಸಭಾಗೃಹದಲ್ಲಿ ಸಂಘದ ಮಹಿಳಾ ವಿಭಾಗದ ವತಿಯಿಂದ ನಡೆದ ವಿಶ್ವಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರು ಶಾರೀರಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಬೇಕು ಎಂಬ ಸದುದ್ಧೇಶದಿಂದ ದಿ| ಚಂದ್ರಾವತಿ ಕಾರಂತ ಅವರು ಈ ಸಂಘದಲ್ಲಿ ಯೋಗ ತರಬೇತಿಯನ್ನು ಪ್ರಾರಂಭಿಸಿದ್ದರು. ಅಂದಿನಿಂದ ಇಂದಿನವರೆಗೆ ಸಾವಿರಕ್ಕೂ ಹೆಚ್ಚು ಮಹಿಳೆಯರು ಇದರ ಲಾಭವನ್ನು ಪಡೆದಿದ್ದಾರೆ. ಇದು ಮುಂದೆಯೂ ಕೂಡಾ ನಮ್ಮ ಸಂಘದಲ್ಲಿ ಮಹಿಳೆಯರಿಗೆ ಈ ಅವಕಾಶ ಯಾವಾಗಲೂ ಸಿಗುತ್ತಿರಲಿ ಎಂದು ಹೇಳಿದರು.
ಸಂಘದ ಮಾಜಿ ಪಾರುಪತ್ಯಗಾರ ಯು. ಎಸ್. ಕಾರಂತ್ ಇವರು ಶ್ರೀಮತಿ ಚಂದ್ರಾವತಿ ಕಾರಂತ ಸ್ಮರಣಾರ್ಥ ಸ್ಥಾಪಿಸಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಯೋಗಸಾಧಕಿ ವಿಶಾಲಾಕ್ಷೀ ಉಳುವಾರ ಅವರು ಆಗಮಿಸಿ ಉಪನ್ಯಾಸ ನೀಡಿದರು. ಸೀಮಾ ಕುಲಕರ್ಣಿ ಮತ್ತು ಶುಭದಾ ಪೊದ್ದಾರ್ ಅವರು ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರಿತಾ ಸುರೇಶ್ ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ದೇವಲ್ಕುಂದ ಭಾಸ್ಕರ್ ಶೆಟ್ಟಿ ಮತ್ತು ಯು. ಎಸ್. ಕಾರಂತ್ ಅವರು ಚಂದ್ರಾವತಿ ಎಸ್. ಕಾರಂತ ಅವರು ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು.
ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಷಾ ಎಸ್. ಶೆಟ್ಟಿ ಹಾಗೂ ಚಂದ್ರಾವತಿ ಬಿ. ಶೆಟ್ಟಿ ಇವರು ಕ್ರಮವಾಗಿ ಶ್ರೀಮತಿ ಕಾರಂತ ಮತ್ತು ಯು. ಎಸ್. ಕಾರಂತ್ ಅವರನ್ನು ಪರಿಚಯಿಸಿದರು. ಯು. ಎಸ್. ಕಾರಂತ ಅವರು ಮಾತನಾಡಿ, ಯೋಗದ ಕುರಿತು ದಿ| ಚಂದ್ರಾವತಿ ಕಾರಂತರಿಗೆ ಇದ್ದ ಆಸಕ್ತಿ ಮತ್ತು ಯೋಗವನ್ನು ಕಲಿಸಿಕೊಡುವ ಅವರ ಹವ್ಯಾಸ ಇವೆಲ್ಲವುಗಳ ಬಗ್ಗೆ ವಿವರಿಸಿದರು.
ಸಂಘದ ವರ್ಷದ ಉತ್ತಮ ಯೋಗ ಸಾಧಕಿ ಶಿಕ್ಷಕಿ ಪ್ರಶಸ್ತಿಯನ್ನು ಪಡೆಯಲಿರುವ ವಿಶಾಲಾಕ್ಷೀ ಉಳುವಾರ್ ಅವರನ್ನು ಸಂಘದ ಸುಗುಣಾ ಎಸ್. ಬಂಗೇರ ಅವರು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ವಿಶಾಲಾಕ್ಷೀ ಅವರನ್ನು ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ವಿಶಾಲಾಕ್ಷೀ ಉಳುವಾರ್ ಅವರು, ಯೋಗದಿಂದ ಶರೀರದ ರಕ್ತದೊತ್ತಡ ಸ್ಥಿಮಿತದಲ್ಲಿದ್ದು, ಶ್ವಾಸ ನಿರಾಯಾಸವಾಗಿ ನಡೆದು, ಶರೀರದ ಎಲ್ಲ ಆವಯವಗಳೂ ತನ್ನ ನಿಯಂತ್ರಣದಲ್ಲಿದ್ದು, ನಮ್ಮನ್ನು ಆರೋಗ್ಯವಂತರಾಗಿ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದರು.
ಸಂಚಾಲಕಿ ಇಂದಿರಾ ಮೊಲಿ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕಿ ಉಷಾ ಪಿ. ಸುವರ್ಣ ವಂದಿಸಿದರು.