Advertisement

ನವ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾಲು ಅತೀ ಮುಖ್ಯ

08:41 PM Mar 31, 2019 | Vishnu Das |

ಮುಂಬಯಿ: ಕರ್ನಾಟಕ ಸಂಘ ಪನ್ವೇಲ್‌ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯು ಮಾ. 23ರಂದು ಸಂಜೆ ನ್ಯೂ ಪನ್ವೇಲ್‌ ಸೆಕ್ಟರ್‌-2 ರಲ್ಲಿರುವ ಕರ್ನಾಟಕ ಸಂಘದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ನಡೆಯಿತು.

Advertisement

ಉಮಾ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿ, ಸಂಘದ ಪದಾಧಿಕಾರಿಗಳು, ಸದಸ್ಯರ ಪ್ರೋತ್ಸಾಹ ಸದಾ ನಮ್ಮೊಂದಿಗೆ ಇರುವುದರಿಂದ ನಾವು ಸಕ್ರಿಯವಾಗಿ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗಿದೆ ಎಂದು ನುಡಿದು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅನಂತರ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕಲಾವಿದೆ ಸಹನಾ ಭಾರದ್ವಾಜ್‌ ಅವರು ಮಾತನಾಡಿ, ಮಹಿಳೆಯರು ಮನೆ, ಮಕ್ಕಳು ಪರಿವಾರವನ್ನು ಲಾಲನೆ ಪಾಲನೆ ಮಾಡುವುದರೊಂದಿಗೆ ದಿನನಿತ್ಯದ ಅವಸರದ ಬದುಕಿನಲ್ಲಿ ತಮ್ಮ ಆರೋಗ್ಯದ ಕಾಳಜಿ ಮರೆತಿದ್ದಾರೆ. ಹಾಗೆ ಮಾಡದೇ ತಮ್ಮ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಿದೆ ಎಂದರು.

ವಿಶೇಷ ಅತಿಥಿಯಾಗಿ ಆಗಮಿಸಿದ ಯಕ್ಷಗಾನ ನಿರ್ದೇಶಕಿ ಗೀತಾ ಎಲ್‌. ಭಟ್‌ ಅವರು ಮಾತನಾಡಿ, ಮಹಿಳೆ ಪ್ರಕೃತಿ ಸ್ವರೂಪಿಣಿ. ಸಂಸಾರ ಎಂಬ ಬಂಡಿಯನ್ನು ಎಳೆಯುವುದಕ್ಕೆ ಮಹಿಳೆಯರ ಪಾತ್ರ ಅಪಾರವಾಗಿದೆ. ಹಾಗಾದಲ್ಲಿ ಜೀವನದ ರಥ ಪ್ರಗತಿಯತ್ತ ಸಾಗುತ್ತದೆ. ಹೆಣ್ಣೆಂಬುದು ಮನುಕುಲದ ಪುಣ್ಯ ಬನದಲ್ಲಿ ಅರಳಿದ ಸುಂದರವಾದ ಸೃಷ್ಟಿ. ಹೆಣ್ಣಾದವಳಿಗೆ ಸಂಸ್ಕೃತಿಯನ್ನು ಮುಂದುವರಿಸುವಂತಹ ಮಹತ್ತರವಾದ ಜವಾಬ್ದಾರಿ ಇರುವುದರಿಂದ ಮಹಿಳೆಯರು ತಮ್ಮ ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕೃತಿ, ಸಂಸ್ಕಾರ ಹೇಳಿಕೊಂಡಬೇಕು ಎಂದರು.

ಇನ್ನೋರ್ವ ಅತಿಥಿ ಮಿಸ್‌ ಇಂಡಿಯಾ ಅರ್ಥ್ ವಿಜೇತೆ ಕಿರಣ್‌ ರಜಪೂತ್‌ ಅವರು ಮಾತನಾಡಿ, ಮಹಿಳೆಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ಹೆಣ್ಣು ಎಂಬುದು ಹೃದಯ ಸಂಪತ್ತಿನ ವರ್ಣನೆಯೂ ಹೌದು ಎಂದು ನುಡಿದರು.

Advertisement

ಸಂಘದ ಕಟ್ಟಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ ಅವರು ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ. ಮನೆ, ಸಂಸಾರ ಕಾಯುವ ಚೌಕಿದಾರರೆ ನಮ್ಮ ಮಹಿಳೆಯರು. ಸಮರ್ಥವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ದಿಟ್ಟತನ ಮೆರೆದ ನಾರಿ ಶಕ್ತಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಘಟನೆಯ ಅನಂತರ ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ವಹಿಸಿದ ಪಾತ್ರ ಗಮನೀಯ. ದೇಶದ ಭವಿಷ್ಯದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು, ನಮಗೆ ಯಾವಾಗಲೂ ದೇಶ ಮೊದಲು. ನವ ಭಾರತದ ನಿರ್ಮಾಣದಲ್ಲಿ ಮಹಿಳೆಯರ ಪಾಲು ಅತೀ ಮುಖ್ಯವಾಗಿದೆ ಎಂದರು.

ಪನ್ವೇಲ್‌ ಮಹಾನಗರ ಪಾಲಿಕೆಯ ಮೇಯರ್‌ ಕವಿತಾ ಚೌತ್‌ಮಲ್‌ ಮಾತನಾಡಿ,
ವಿಶ್ವಾದ್ಯಂತ ಅನೇಕ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಹಿಳೆಯರ ದಿನವನ್ನು ಆಚರಿಸಲಾಗುತ್ತಿದೆ. ಕೆಲಸದ ಅವಧಿ 8 ಗಂಟೆಗೆ ಸೀಮಿತವಾಗಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ದುಡಿಯುವ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ ಫಲವಾಗಿ ಮಾ. 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿಯೂ ಕೂಡಾ ಇದನ್ನು ಆಚರಿಸಲಾಗುತ್ತಿದೆ. ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಭಾಯಿ ಫುಲೆ ಮಹಾರಾಷ್ಟ್ರದಲ್ಲಿ ಮಹಿಳಾ ಸಮಾನತೆಯ ರೂವಾರಿಯಾಗಿದ್ದಾರೆ ಎಂದರು.

ಮಹಿಳಾ ವಿಭಾಗದ ವತಿಯಿಂದ ಅತಿಥಿಗಳನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ವಿಭಾಗದವರಿಂದ ಸಂಘದ ಗೌರವ ಕಾರ್ಯದರ್ಶಿ ಸತೀಶ್‌ ಶೆಟ್ಟಿ ಕುತ್ಯಾರು ರಚಿಸಿ, ನಿರ್ದೇಶಿಸಿರುವ ಋಣಾನುಬಂಧ ನಾಟಕ ಪ್ರದರ್ಶನಗೊಂಡಿತು. ಕಲಾವಿದರಾಗಿ ತ್ರಿವೇಣಿ, ಶ್ವೇತಾ ಶೆಟ್ಟಿ, ಶಬುನಾ ಶೆಟ್ಟಿ, ಗೀತಾ ಶೆಟ್ಟಿ, ರಂಜಿತಾ ಶೆಟ್ಟಿ, ಪ್ರಸನ್ನಾ ಶೆಟ್ಟಿ ಅವರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್‌ ಶೆಟ್ಟಿ ಕುತ್ಯಾರು, ಜತೆ ಕಾರ್ಯದರ್ಶಿ ಸುಧಾ ರಾವ್‌, ಕಾರ್ಯಾಧ್ಯಕ್ಷ ಭಾಸ್ಕರ್‌ ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಗೌಡ, ಕೋಶಾಧಿಕಾರಿ ಸುರೇಶ್‌ ರಾವ್‌, ಯುವ ವಿಭಾಗದ ಅಧ್ಯಕ್ಷ ಗುರುಪ್ರಸಾದ್‌ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಕಲಾಧರ ಶೆಟ್ಟಿ, ಕಾರ್ಯದರ್ಶಿ ಸ್ವಾತಿ ಶೆಟ್ಟಿ, ಕೋಶಾಧಿಕಾರಿ ರೇಷ್ಮಾ ಕಿಣಿ, ಪನ್ವೇಲ್‌ ಮಹಾನಗರ ಪಾಲಿಕೆಯ ಮಹಾಪೌರೆ ಕವಿತಾ ಕಿಶೋರ್‌ ಚೌತ್‌ಮಲ್‌ ಉಪಸ್ಥಿತರಿದ್ದರು. ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next