Advertisement

ನಿರಂತರ ಜಲಸಂರಕ್ಷಣೆ ಚಿಂತನೆಗೆ ಜಿ.ಪಂ. ಸಿಇಒ ಕರೆ

12:40 AM Mar 23, 2019 | |

ಉಡುಪಿ: ಜಲ ಸಂರಕ್ಷಣೆಯ ಕಾರ್ಯ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿರದೆ ನಿರಂತರವಾಗಿ ನಡೆಯಬೇಕು ಎಂದು ಜಿ.ಪಂ. ಸಿಇಒ ಸಿಂಧೂ ಬಿ ರೂಪೇಶ್‌ ಹೇಳಿದ್ದಾರೆ.

Advertisement

ಅವರು ಶುಕ್ರವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಸುಮಾರು 15 ನದಿಗಳಿದ್ದರೂ ಸಹ ಬೇಸಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ವಿತರಿಸಲು ಕೋಟ್ಯಂತರ  ಹಣ ವ್ಯಯಿಸುವುದು ವಿಷಾದನೀಯ. 

ಜಿಲ್ಲೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಅತೀ ಹೆಚ್ಚು ಮಳೆ ಬೀಳುತ್ತಿದ್ದು, ಪ್ರತಿ ವರ್ಷ ನೆರೆ ಎದುರಿಸುವ ಪರಿಸ್ಥಿತಿ ಇದೆ. ಆದರೂ ಸಹ ಬೇಸಗೆಯಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್‌ ನೀರು ಅವಲಂಬಿಸುವಂತಾಗಿದೆ. ಮಳೆ ನೀರನ್ನು ಸರಿಯಾದ ಪ್ರಮಾಣದಲ್ಲಿ ಇಂಗಿಸಿ, ಮಳೆ ನೀರು ಕೊಯ್ಲು ವಿಧಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ಜಲ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಸಿಂಧೂ ರೂಪೇಶ್‌ ಹೇಳಿದರು.

ಜಿಲ್ಲೆಯಲ್ಲಿ  ಜಲ ಸಂರಕ್ಷಣೆ ಕೈಗೊಳ್ಳುವ ಉದ್ದೇಶದಿಂದ ಶಾಲೆಗಳು, ಹಾಸ್ಟೆಲ್‌ ಮತ್ತು ಸರಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರತಿ ವರ್ಷ ಜಲ ಸಂರಕ್ಷಣೆಗಾಗಿ ಎಲ್ಲ ಇಲಾಖೆಗಳು ತಮ್ಮ ಅನುದಾನದಲ್ಲಿ ಸ್ವಲ್ಪ ಪ್ರಮಾಣವನ್ನು ಮೀಸಲಿಡುವಂತೆ ತಿಳಿಸಿದರು. 

Advertisement

ಉಡುಪಿಯಲ್ಲಿ ಕಳೆದ 20-30 ವರ್ಷದಲ್ಲಿ ಬೇಸಗೆಯಲ್ಲಿ  ಕುಡಿಯುವ ನೀರು ಸಮಸ್ಯೆ ಇರುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತಿರುವ ಬಗ್ಗೆ ಯೋಚಿಸಬೇಕಿದೆ, ನೀರಿನ ಅಸಮರ್ಪಕ ಬಳಕೆ, ಅಪವ್ಯಯ ತಪ್ಪಿಸುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ, ಅಂತರ್ಜಲ ವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು. ವಿಶ್ವದ ಒಟ್ಟು ನೀರಿನ ಪ್ರಮಾಣದಲ್ಲಿ ಶೇ.0.5 ಮಾತ್ರ ಬಳಕೆಗೆ ಯೋಗ್ಯವಾಗಿದೆ. ಇದು ಸಕಲ ಜೀವರಾಶಿಗೆ ಆಧಾರವಾಗಿದೆ. ಮುಂದಿನ ಪೀಳಿಗೆಗೆ ಇದನ್ನು ಉಳಿಸಬೇಕು ಎಂದು ಸಿಇಒ ಹೇಳಿದರು.

ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿಯನ್ನು ಸಿಇಒ ಬೋಧಿಸಿದರು. ಇದಕ್ಕೂ ಮುಂಚೆ  ಕಚೇರಿ ಮುಂಭಾಗದಲ್ಲಿ ಗಿಡ ನೆಟ್ಟು ನೀರುಣಿಸುವ ಮೂಲಕ ಸಿಂಧೂ ಬಿ ರೂಪೇಶ್‌ ಜಲ ಸಂರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಉಪ ಕಾರ್ಯದರ್ಶಿ ನಾಗೇಶ್‌ ರಾಯ್ಕರ್‌ , ಸಾಮಾಜಿಕ ಅರಣ್ಯ ಇಲಾಖೆಯ ಡಿಎಫ್ಒ ಭಾಸ್ಕರ್‌, ಆರ್‌ಎಫ್ಒ ರವೀಂದ್ರ ಆಚಾರ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next