ಹಾಂಕಾಂಗ್: ನಗರದ ಹೊರವಲಯದಲ್ಲಿ ನಡೆಯುತ್ತಿದ್ದ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಸುಮಾರು 70 ವರ್ಷಗಳ ಹಿಂದಿನ, ಬರೋಬ್ಬರಿ 453 ಕೆ.ಜಿ. ತೂಕದ ಬಾಂಬ್ ಶೆಲ್‌ವೊಂದನ್ನು ಹೊರತಗೆಯಲಾಗಿದೆ. ಆಕಾರದಲ್ಲಿ, ನಮ್ಮ ಮನೆಗಳಲ್ಲಿರುವ ಎಲ್‌ಪಿಜಿ ಅನಿಲ ಸಿಲಿಂಡರ್‌ಗಿಂತ ಕೊಂಚ ದೊಡ್ಡ ಗಾತ್ರದ ಈ ಬಾಂಬ್ ಅನ್ನು 1939ರಿಂದ 1945ರ ಅವಧಿಯಲ್ಲಿ ಅಮೆರಿಕ ತಂದು ಇಲ್ಲಿ ಕೆಡವಿದ್ದೆಂದು ಹೇಳಲಾಗಿದೆ. ಇದು “ಎಎನ್-ಎಂ 65′ ಬಾಂಬ್ ಎಂದು ಗುರುತಿಸಲಾಗಿದೆ.
2ನೇ ಮಹಾಯುದ್ಧದ ವೇಳೆ, ಹಾಂಕಾಂಗ್, ಜಪಾನ್ ಹಿಡಿತದಲ್ಲಿತ್ತು. ಜಪಾನ್ ಶತ್ರು ರಾಷ್ಟ್ರ ವಾಗಿದ್ದ ಅಮೆರಿಕ, ಹಾಂಕಾಂಗ್ ಮೇಲೆ ಬಾಂಬ್ ಗಳ ಮೂಲಕ ದಾಳಿ ನಡೆಸಿತ್ತು. ಆ ನೂರಾರು ಬಾಂಬ್‌ಗಳಲ್ಲಿ ಸ್ಫೋಟಗೊಳ್ಳದೇ ಉಳಿದ ಬಾಂಬ್ ಇದಾಗಿದೆ. ಕಳೆದ ವಾರವಷ್ಟೇ ಹಾಂಕಾಂಗ್‌ನಲ್ಲೇ ಇಂಥದ್ದೇ ಮತ್ತೂಂದು ಬಾಂಬ್ ಪತ್ತೆಯಾಗಿತ್ತು. ಶುಕ್ರವಾರ, ಬಾಂಬ್ ಶೆಲ್ ಪತ್ತೆಯಾದ ಸುದ್ದಿ ತಿಳಿಯುತ್ತಲೇ, ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ಪಡೆ, ಸುತ್ತಲಿದ್ದ ಸುಮಾರು 4 ಸಾವಿರ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಹೊರತಗೆದಿದೆ.
ಸಿಡಿದಿರಲಿಲ್ಲವೇಕೆ?: ಸಾಮಾನ್ಯವಾಗಿ, ಈ ಮಾದರಿಯ ಬಾಂಬ್ ಶೆಲ್‌ಗಳು ಎರಡು ತುದಿಗಳನ್ನು ಹೊಂದಿರುತ್ತವೆ. ಒಂದು ತುದಿ ಚೂಪಾಗಿದ್ದರೆ, ಮತ್ತೂಂದು ತುದಿಯಲ್ಲಿ ಪ್ರೊಪೆಲ್ಲರ್ (ಪುಟಾಣಿ ಫ್ಯಾನ್ ಮಾದರಿ) ಜೋಡಿಸಿರಲಾಗುತ್ತದೆ. ಯುದ್ಧ ವಿಮಾನಗಳಿಂದ ಇವನ್ನು ಭೂಮಿಯ ಮೇಲೆಸೆದಾಗ, ಮೊನಚಾದ ಭಾಗ ಭೂಮಿಯ ಕಡೆಗೆ ಮುಖ ಮಾಡಿರುವಂತೆ ಬೀಳುತ್ತವೆ. ಈ ಮೊನಚು ಭಾಗವು ಭೂಮಿಗೆ ತಾಗಿದ ಅರೆಗಳಿಗೆಯಲ್ಲೇ ಅದರೊಳಗಿರುವ ಫ್ಯೂಸ್‌ನಿಂದ ಸ್ಫೋಟಕ್ಕೆ ಬೇಕಾಗುವ ಕಿಡಿಗಳು ಉತ್ಪತ್ತಿಯಾಗಿ ಅವು ಸ್ಫೋಟಕ ಸಾಮಗ್ರಿಗೆ ತಗುಲಿ ಭಯಾನಕ ಸ್ಫೋಟ ಉಂಟಾಗುತ್ತದೆ. ಇದೆಲ್ಲಾ ಕ್ಷಣಾರ್ಧದಲ್ಲಿ ನಡೆ ಯುವ ಪ್ರಕ್ರಿಯೆ. ಆದರೆ, ಈ ಬಾಂಬ್ ವಿಚಾರದಲ್ಲಿ ಕಿಡಿ ಹಾಕುವ ಫ್ಯೂಸ್ ಕೈಕೊಟ್ಟಿದ್ದರಿಂದ ಸ್ಫೋಟಿಸಿಲ್ಲ ಎಂದು ಹೇಳಲಾಗಿದೆ.
ಮೃತ್ಯು ದೇವತೆಯ ಪ್ರತಿರೂಪ: ನೂರಾರು ಅಡಿಗಳ ಕೆಳಗೆ ಹುದುಗಿ ಹೋಗಿದ್ದ ಆ ಬಾಂಬ್ ಶೆಲ್ ಅನ್ನು ಎತ್ತುವುದು ಬಾಂಬ್ ನಿಷ್ಕ್ರಿಯ ದಳಕ್ಕೆ ಸವಾಲಾಗಿತ್ತು. ಇದಕ್ಕೆ ಕಾರಣ ಎರಡು. ಮೊದಲನೆಯದಾಗಿ, ದಶಕಗಳ ಕಾಲ ಹುದುಗಿ ಹೋಗುವ ಬಾಂಬ್ ಶೆಲ್‌ಗಳು ಕಾಲ ಕಳೆದಂತೆ ಕೊಂಚ ಉಬ್ಬಿಕೊಂಡು ಬಿಡುತ್ತವೆ. ಅವುಗಳಲ್ಲಿನ ಸ್ಫೋಟಕಗಳ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಹೀಗಾಗುತ್ತದೆ. ಇಂಥ ಉಬ್ಬಿಕೊಂಡ ಬಾಂಬುಗಳು ಬಲು ಅಪಾಯಕಾರಿ. “ಎಎನ್-ಎಂ 65′ ಕೂಡಾ ಉಬ್ಬಿಕೊಂಡಿತ್ತಲ್ಲದೆ, ಇದು ಹುದುಗಿದ್ದ ಜಾಗದಲ್ಲಿ ಕಟ್ಟಡ ನಿರ್ಮಾಣ ಆಗುತ್ತಿದ್ದರಿಂದ ಒಂದು ಸಣ್ಣ ಕಲ್ಲು ತಾಗಿದ್ದರೂ, ಸುತ್ತಮುತ್ತ 1 ಮೈಲು ಪ್ರದೇಶ ನಾಶವಾಗುವಂಥ ಮಹಾ ಸ್ಫೋಟವೇ ಸಂಭವಿಸುತ್ತಿತ್ತು. ಎರಡನೆಯದಾಗಿ, ಕಾಂಕ್ರೀಟ್ ಕಾಡಾಗಿರುವ ಹಾಂಕಾಂಗ್‌ನಲ್ಲಿ ಹೀಗೆ, ಒಂದು ಬಾಂಬ್ ಅನ್ನು ಮೇಲೆತ್ತುವುದಿದೆಯಲ್ಲಾ ಅದು ಮೃತ್ಯುವನ್ನು ಬರಸೆಳೆದು ಅಪ್ಪಿಕೊಂಡಂತೆಯೇ ಸರಿ. ಹೀಗಿದ್ದರೂ, ಸುಮಾರು 24 ಗಂಟೆಗಳ ಕಾಲ ನಿರಂತರವಾಗಿ ನಡೆಸಲಾದ ಕಾರ್ಯಾಚರಣೆಯಲ್ಲಿ, ಬಾಂಬ್ ನಿಷ್ಕ್ರಿಯ ದಳ, ಫ್ಯೂಸ್ ಇರುವ ಭಾಗಕ್ಕೆ ಯಾವುದೇ ಭೌತಿಕ ಪೆಟ್ಟು ಬೀಳದಂತೆ ಹುಷಾರಾಗಿ ಕಾರ್ಯಾಚರಣೆ ನಡೆಸಿತು.