ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಿಂದ 22 ಕಿ.ಮೀ ಸಾಗಿದರೆ ಸಿಗುವ ಪ್ರದೇಶವೇ ಈಶ್ವರಮಂಗಲದ ಹನುಮಗಿರಿ ಕ್ಷೇತ್ರ. ದಕ್ಷಿಣಕ್ಕೆ ನರಸಿಂಹ, ಉತ್ತರಕ್ಕೆ ವರಾಹ, ಊರ್ಧ್ವಮುಖಕ್ಕೆ ಹಯಗ್ರೀವ, ಪಶ್ಚಿಮಕ್ಕೆ ಗರುಡನನ್ನು ಹೊಂದಿರುವ ಕಾರ್ಕಳದ ಕೃಷ್ಣಶಿಲೆಯಿಂದ ರೂಪಗೊಂಡ 11 ಅಡಿ ಎತ್ತರದ ಆಂಜನೇಯ ಏಕಶಿಲಾ ವಿಗ್ರಹವು ಶನಿದೋಷ ನಿವಾರಣೆಗಾಗಿಯೇ ಪ್ರಸಿದ್ಧಿಯನ್ನು ಪಡೆದಿದೆ.
ಈಶ್ವರಮಂಗಲ ಪೇಟೆಯಿಂದ ಪ್ರವೇಶ ದ್ವಾರವನ್ನು ದಾಟಿ ಮುಂದೆ ಸಾಗಿದರೆ ದೇವಸ್ಥಾನದ ಪ್ರವೇಶದ್ವಾರವು ಮುಂದಾಗುವುದು. ಹಾಗೆಯೇ ಹೆಜ್ಜೆ ಮುಂದಿಟ್ಟಾಗ ಅಚ್ಚುಕಟ್ಟಾಗಿ ನಿರ್ಮಿಸಲ್ಪಟ್ಟ ಪಾರ್ಕ್. ಸ್ವಲ್ಪ ತಲೆಯೆತ್ತಿ ನೋಡಿದರೆ 11 ಅಡಿ ಎತ್ತರದ ಪಂಚಮುಖಿ ಆಂಜನೇಯನನ್ನು ಕಣ್ತುಂಬಿಕೊಳ್ಳಲು ಸಾಧ್ಯ. ಹುಸುರಿನಿಂದ ಕಂಗೋಳಿಸುವ ಹುಲ್ಲುಗಳ ನಡುವೆ ಮೆಟ್ಟಿಲುಗಳ ಮೂಲಕ ಆಂಜನೇಯವನ್ನು ಕಣ್ತುಂಬಿಸಿಕೊಡಬಹುದು.
ಭಕ್ತರ ವಿಶ್ರಾಂತಿಯ ಸಲುವಾಗಿ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವ ಸಲುವಾಗಿ ಅಲ್ಲಯೇ ನರಸಿಂಹ ಮಂಟಪವಿದೆ. ದ್ವಾರದಿಂದ ಎಡಭಾಗದಲ್ಲಿನ ಗೋಡೆಗಳಲ್ಲಿ ಶಿಲೆಗಳಲ್ಲಿ ಸುಂದರವಾಗಿ ಕೆತ್ತಲಾದ ಸಂಪೂರ್ಣ ರಾಮಾಯಣವನ್ನು ಮೂಲಕ ಕಾಣಬಹುದು.
ಅಲ್ಲಿಂದ ಗರುಡ ಮಂಟಪವನ್ನು ದಾಟಿ ಮುಂದೆ ಹೋದಾಗ ’ಹನುಮಾನ್ ಮಾನಸೋದ್ಯಾನ’ ಹಾಗೂ ’ಸಂಜೀವಿನಿ’ ದಿವ್ಯೌಷಧ ಸಸ್ಯಗಳ ವನವನ್ನು ಕಾಣಬಹುದು.
ಅಲ್ಲಲ್ಲಿ ಅಂಜನೇಯನ ಜನನದಿಂದ ರಾಮಾವತಾರ ಸಮಾಪ್ತಿಯ ತನಕದ ಕತೆಗಳನ್ನು ಹಲವು ಶಿಲೆಗಳಲ್ಲಿ ಕೆತ್ತಲಾಗಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಕೋದಂಡರಾಮ ಮತ್ತು ರಾಮಭಜನೆಯಲ್ಲಿ ತಲ್ಲೀನನಾದ ಆಂಜನೇಯನ ವಿಗ್ರಹಗಳು ನಮ್ಮನ್ನು ಆಕರ್ಷಿಸುತ್ತದೆ.
ಇಲ್ಲಿಂದ ಸ್ವಲ್ಪ ದೂರದಲ್ಲಿ ಇತ್ತೀಚಿನ ದಿನಗಳಲ್ಲಿ ಗೃಹಮಂತ್ರಿ ಅಮಿತ್ ಶಾ ಅವರಿಂದ ಉದ್ಘಾಟನೆಗೊಂಡ, 3 ಕೋಟಿ ವೆಚ್ಚದಲ್ಲಿ ಎರಡು ಎಕರೆ ಜಾಗದಲ್ಲಿ ದೇಶ ಭಕ್ತಿಯ ಯೋಜನೆಯಾಗಿ ಅಭಿವೃದ್ಧಿಗೊಳಿಸಲಾದ ʼಅಮರಗಿರಿʼಯು ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆದಂತಾಗುತ್ತದೆ. ಇಲ್ಲಿ ಭಾರತ ಮಾತೆ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಶಿಲ್ಪಗಳು, ಸೈನಿಕರು, ರೈತರು ಹಾಗು ದೇಶದ ಉದ್ಧಾರಕ್ಕಾಗಿ ದುಡಿದವರ ಪ್ರತಿಮೆಗಳಿವೆ.
ಹನುಮಗಿರಿಯ ದ್ವಾರದ ಬಳಿಯೇ ಗೋಶಾಲೆಯನ್ನು ನಿರ್ಮಿಸಲಾಗಿದ್ದು ಹಲವಾರು ಗೋವುಗಳು ಇಲ್ಲಿವೆ. ಸುಂದರವಾದ ಪ್ರಕೃತಿಯ ನಡುವೆ ತಲೆ ಎತ್ತಿ ನಿಂತ ಹನುಮಗಿರಿಯು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಹನುಮಗಿರಿ ಕ್ಷೇತ್ರದ ಎಡಭಾಗದಲ್ಲಿ ವಿದ್ಯಾಲಯವಿದ್ದು ವಿದ್ಯಾರ್ಥಿಗಳು ಆಗಾಗ ಇಲ್ಲಿ ಬಂದು ಪ್ರಾರ್ಥನೆಯನ್ನು ನಡೆಸುತ್ತಾರೆ. ಮಧ್ಯಾಹ್ನದ ಅನ್ನಪ್ರಸಾದದ ವ್ಯವಸ್ಥೆಯಿದ್ದು ಹಲವಾರು ಭಕ್ತಾದಿಗಳೂ ಸೇರಿ ವಿದ್ಯಾರ್ಥಿಗಳು ಇಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಎಲ್ಲರೂ ಒಮ್ಮೆಯಾದರೂ ಈ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ರಮಣೀಯತೆಯನ್ನು ಕಣ್ತುಂಬಿಸಿಕೊಳ್ಳಲೇ ಬೇಕು.
ಪೂರ್ಣಶ್ರೀ.ಕೆ