ಆತ್ಮಹತ್ಯೆಯ ಬಗ್ಗೆ ಆಲೋಚನೆ ಮಾಡುವವರಿಗೆ ಅಥವಾ ಪ್ರಯತ್ನ ಮಾಡಿದವರಿಗೆ ಸಹಾಯ ಮಾಡಬೇಕೆಂದರೆ ಅದಕ್ಕೆ ಅಡ್ಡವಾಗಿ ಹಲವಾರು ತಪ್ಪು ನಂಬಿಕೆಗಳು ಎಲ್ಲ ಸಮಾಜಗಳಲ್ಲಿ ಗಟ್ಟಿಯಾಗಿ ಬೇರೂರಿವೆ. ಅಪಾಯದ ಅಂಚಿನಲ್ಲಿರುವ ಇವರಿಗೆ ಸಹಾಯಹಸ್ತ ಚಾಚಲು ಈ ತಪ್ಪು ನಂಬಿಕೆಗಳನ್ನು ನಿವಾರಿಸಿ, ಸರಿಯಾದ ಮಾಹಿತಿಯನ್ನು ಎಲ್ಲರಿಗೂ ನೀಡುವುದು ತುಂಬಾ ಮುಖ್ಯವಾದ ಕ್ರಮವೆಂದು ಹೇಳಬಹುದು.
ಇದು ಆತ್ಮಹತ್ಯೆಯನ್ನು ತಡೆಗಟ್ಟುವಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಈ ತಪ್ಪು ನಂಬಿಕೆಗಳನ್ನು ಅಳಿಸುವುದರಿಂದ ಪೋಷಕರು, ಸ್ನೇಹಿತರು, ಸಹಪಾಠಿಗಳು, ಶಿಕ್ಷಕರು ಅಪಾಯದ ಅಂಚಿನಲ್ಲಿರುವವರನ್ನು ಗುರುತಿಸಿ ಅಗತ್ಯ ಸಹಾಯ ನೀಡಲು ಸಹಾಯವಾಗುವುದು. ಈ ತಪ್ಪು ನಂಬಿಕೆಗಳು ಜಗತ್ತಿನಾದ್ಯಂತ ಕಂಡುಬರುತ್ತವೆ. ಕೆಲವು ಪ್ರಚಲಿತವಾಗಿರುವ ತಪ್ಪು ನಂಬಿಕೆಗಳು ಮತ್ತು ಅವುಗಳ ಸರಿಯಾದ ವಿವರಣೆಗಳನ್ನು ಈ ಕೆಳಗೆ ನಮೂದಿಸಲಾಗಿದೆ.
- ತಪ್ಪು: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳುವವರು ಬರೀ ಹೇಳುತ್ತಾರೆಯೇ ವಿನಾ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಅವರಿಗೆ ಕೇವಲ ಅಟೆನ್ಶನ್ ಬೇಕಾಗಿರುತ್ತದೆ.
ಸರಿ: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳುವವರು ಖಂಡಿತವಾಗಿಯೂ ಅದರ ಬಗ್ಗೆ ಗಂಭೀರವಾಗಿರುತ್ತಾರೆ ಮತ್ತು ಆತ್ಮಹತ್ಯೆ ಮಾಡಿಕೊಂಡ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆತ್ಮಹತ್ಯೆಯ ಬಗ್ಗೆ ತಿಳಿಸಿರುತ್ತಾರೆ. ನೆನಪಿಡಿ: ಯಾವುದೇ ರೀತಿಯ ಆತ್ಮಹತ್ಯೆಯ ಹೇಳಿಕೆಗಳನ್ನು/ನಡವಳಿ ಕೆಗಳನ್ನು ಕ್ಷುಲ್ಲಕವೆಂದು ತಳ್ಳಿಹಾಕುವ ಹಾಗಿಲ್ಲ.
- ತಪ್ಪು: ಆತ್ಮಹತ್ಯೆಯ ಬಗ್ಗೆ ಮಾತಾಡುವುದರಿಂದ ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನ್ನಿಸುತ್ತದೆಯೇ ಎಂದು ಕೇಳುವುದರಿಂದ ವ್ಯಕ್ತಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೋತ್ಸಾಹಿಸಿದ ಹಾಗಾಗುತ್ತದೆ.
ಸರಿ: ಆತ್ಮಹತ್ಯೆಯ ಬಗ್ಗೆ ಮಾತಾಡುವುದರಿಂದ ಸಂವಾದಕ್ಕೆ ಒಂದು ಅವಕಾಶ ಮಾಡಿಕೊಟ್ಟ ಹಾಗಾಗುತ್ತದೆ. ಹಂಚಿಕೊಂಡಾಗ ಗೊಂದಲ, ಭಯ, ತವಕ ಕಡಿಮೆಯಾಗುತ್ತದೆ. ವ್ಯಕ್ತಿಯನ್ನು ಬದುಕಲು ಪ್ರೋತ್ಸಾಹಿಸಲು ಇರುವ ಮೊದಲ ಹಂತವೆಂದರೆ ವ್ಯಕ್ತಿಯ ಜತೆ ಆತನ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಚರ್ಚಿಸುವುದು. ಮಾತುಕತೆ ಆರಂಭಿಸಲು ಸರಳವಾಗಿ ಕೇಳಬಹುದಾದ ಪ್ರಶ್ನೆಯೆಂದರೆ, ವ್ಯಕ್ತಿಯು ಬದುಕುವುದು ಬೇಡವೆಂದು ಆಲೋಚಿಸುತ್ತಿದ್ದಾನೆಯೇ? ಆದರೆ ನೆನಪಿರಲಿ, ಈ ವಿಷಯದ ಬಗ್ಗೆ ಮಾತಾಡುವಾಗ ಸಂವೇದನಾಶೀಲರಾಗಿರುವುದು ಅತ್ಯವಶ್ಯಕವಾಗಿದೆ.
- ತಪ್ಪು: ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳುವ ತರುಣರು/ ಯೌವ್ವನಾವಸ್ಥೆಯಲ್ಲಿರುವವರು ಎಂದೂ ಆತ್ಮಹತ್ಯೆಗೆ ಪ್ರಯತ್ನ ಮಾಡುವುದಿಲ್ಲ ಮತ್ತು ಮಾಡಿಕೊಂಡರೂ ಪೂರ್ಣ ಪ್ರಮಾಣದಲ್ಲಿ ಪ್ರಯತ್ನ ಮಾಡುವುದಿಲ್ಲ.
ಸರಿ: ಆತ್ಮಹತ್ಯೆಯ ಬಗ್ಗೆ ಮಾತಾಡುವ ವ್ಯಕ್ತಿಯ ಮಾತುಗಳು ಸಹಾಯ ಕೇಳುತ್ತಿರುವ ಮಾತುಗಳಾಗಿವೆಯೆಂದು ಅರ್ಥ ಮಾಡಿಕೊಳ್ಳಬೇಕು ಮತ್ತು ಇದು ಆತ್ಮಹತ್ಯೆಯ ಕಡೆಗೆ ಮುಂದುವರಿದ ಹಂತವಾಗಿರಬಹುದು. ಆತ್ಮಹತ್ಯೆಯ ಬಗ್ಗೆ ಮಾತಾಡುವ ತರುಣರು/ ಯೌವ್ವನಾವಸ್ಥೆಯಲ್ಲಿರುವವರ ಜತೆ ಹೇಗೆ ಮುಂದುವರಿಯಬಹುದೆಂದರೆ: – ನಿರಾತಂಕವಾಗಿ ಮನಸ್ಸು ಬಿಚ್ಚಿ ಮಾತಾಡಲು ಪ್ರೋತ್ಸಾಹಿಸಬೇಕು ಮತ್ತು ಸೂಕ್ತ ಮನೋವೈದ್ಯರನ್ನು ಅಥವಾ ಆಪ್ತ ಸಮಾಲೋಚಕರನ್ನು ಕಾಣಲು ಸಹಾಯ ಮಾಡಬೇಕು ಅಥವಾ ಕರೆದುಕೊಂಡು ಹೋಗಬೇಕು.
ಆತ್ಮಹತ್ಯೆಯ ಬಗ್ಗೆ ಬರೀ ಆಲೋಚನೆಯಷ್ಟೇ ಇದೆಯಾ ಅಥವಾ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಮಾಡಿ ಆಗಿದೆಯಾ ಎಂದು ಕೇಳಿ ತಿಳಿದುಕೊಳ್ಳಬೇಕು.
ಯಾವ ರೀತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಯೋಜನೆ/ಪ್ಲ್ರಾನ್ ಏನಾದರೂ ಮಾಡಿ ಆಗಿದೆಯಾ ಎಂದು ಕೇಳಿ ತಿಳಿದುಕೊಳ್ಳಬೇಕು.
ಯೋಜನೆ/ಪ್ಲ್ರಾನ್ ಬಗ್ಗೆ ಪೂರ್ತಿ ಮಾಹಿತಿ ಪಡೆದು ಅದು ಎಷ್ಟರ ಮಟ್ಟಕ್ಕೆ ಪರಿಪೂರ್ಣವಾಗಿದೆಯೆಂದು ಮತ್ತು ಪ್ರಾಣಾಂತಿಕವೆಂದು ವಿಶ್ಲೇಷಿಸಬೇಕು. ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ: ಯಾವುದೇ ಪ್ಲ್ರಾನನ್ನು ಅಲ್ಲಗಳೆಯುವ ಹಾಗಿಲ್ಲ ಮತ್ತು ಎಲ್ಲ ವಿಧಾನಗಳನ್ನು ಪ್ರಾಣಾಂತಿಕವೆಂದೇ ಪರಿಗಣಿಸಬೇಕು.
ತರುಣರನ್ನು/ ಯೌವ್ವನಾವಸ್ಥೆಯಲ್ಲಿರುವವ ರನ್ನು ಒಂದು ರಕ್ಷಣಾತ್ಮಕ ಯೋಜನೆ/ಪ್ಲ್ರಾನ್ ಕೂಡ ಮಾಡಿಕೊಳ್ಳಲು ತಿಳಿಸಬೇಕು ಮತ್ತು ಸಹಾಯ ಮಾಡಬೇಕು. ಉದಾ: ಇತರರ ಜತೆಗೆ ಫಲವತ್ತಾಗಿ ಸಮಯ ಕಳೆಯುವುದು, ಆಪ್ತರ ಜತೆಗೆ ಬೆರೆಯುವುದು, ಹಿರಿಯರ ಜತೆಗೆ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸುವುದು, ಭವಿಷ್ಯದ ಬಗ್ಗೆ ಲಭ್ಯವಿರುವ ಅವಕಾಶಗಳ ಬಗ್ಗೆ ಚರ್ಚಿಸುವುದು, ಇತ್ಯಾದಿ.
- ತಪ್ಪು: ಆತ್ಮಹತ್ಯೆ ನಡವಳಿಕೆ ಇರುವ ವ್ಯಕ್ತಿಯು ಗೌಪ್ಯವಾಗಿಡಲು ಹೇಳಿದ ಪತ್ರವನ್ನು ತೆರೆಯಬಾರದು ಹಾಗೂ ಓದಬಾರದು.
ಸರಿ: ಯಾವಾಗ ವ್ಯಕ್ತಿಯೊಬ್ಬ ಆತ್ಮಹತ್ಯೆಯ ಬಗ್ಗೆ ಹೇಳಿದಾಗ ಅಥವಾ ಪ್ರಯತ್ನ ಮಾಡಿದಾಗ ಅದನ್ನು ಗೌಪ್ಯವಾಗಿಡುವ ಆವಶ್ಯಕತೆಯಿಲ್ಲ. ಯಾಕೆಂದರೆ ಗೌಪ್ಯವಾಗಿಡಲು ಮಾಡಿದ ಪ್ರಮಾಣಕ್ಕಿಂತ ವ್ಯಕ್ತಿಯ ಜೀವ ಅತ್ಯಮೂಲ್ಯವಾದದ್ದು. ಮೊದಲಿಗೆ ಆತ್ಮಹತ್ಯೆ ಮಾಡಲು ಆಲೋಚಿಸಿದ್ದ ವ್ಯಕ್ತಿ ಗೌಪ್ಯತೆ ಕಾಯ್ದುಕೊಳ್ಳದಿರುವ ಬಗ್ಗೆ ಮುನಿಸಿಕೊಳ್ಳಬಹುದು. ಆದರೆ ಇವೆಲ್ಲವುಗಳಿಂದ ಹೊರಬಂದಾಗ ಅದೇ ವ್ಯಕ್ತಿ ಪ್ರಮಾಣ ಮುರಿದು ಜೀವ ಉಳಿಸಿದ್ದಕ್ಕಾಗಿ ಚಿರಋಣಿಯಾಗಿರಬಹುದು. ನೆನಪಿಡಿ: ಸೀಲ್ ಮಾಡಿ ತೆಗೆಯಲೇಬಾರದೆಂದು ಯಾರಾದರೂ ಲಕೋಟೆ ನೀಡಿದರೆ, ಏನೋ ಗಂಭೀರ ಅನಾಹುತವಾಗಲಿದೆ ಎಂದು ಶಂಕಿಸಬೇಕು.
- ತಪ್ಪು: ಆತ್ಮಹತ್ಯೆಯ ಪ್ರಯತ್ನಗಳು ಮತ್ತು ಆತ್ಮಹತ್ಯೆಯಿಂದ ಸಾವುಗಳು ಯಾವುದೇ ಮುನ್ಸೂಚನೆಯಿಲ್ಲದೆ ಆಗುತ್ತವೆ.
ಸರಿ: ಆತ್ಮಹತ್ಯೆ ಮಾಡಿಕೊಂಡವರ ಕುಟುಂಬದವರು/ಆಪ್ತರು/ಸ್ನೇಹಿತರು ಸಾಮಾನ್ಯವಾಗಿ ಹೇಳುವುದೇನೆಂದರೆ: “ಆತ/ಅವಳು ಆತ್ಮಹತ್ಯೆಯ ಇರಾದೆಯನ್ನು ನಮ್ಮಿಂದ ಮುಚ್ಚಿಟ್ಟ/ಮುಚ್ಚಿಟ್ಟಳು’ ಎಂದು. ಆದರೆ ಹೆಚ್ಚಾಗಿ ಆಗಿರುವುದೇನೆಂದರೆ, ಅವರ ಇರಾದೆಯನ್ನು ಗುರುತಿಸಲು ಸಾಧ್ಯವಾಗದಿರುವುದು. ಸಾಮಾನ್ಯವಾಗಿ ಕಂಡುಬರುವ ಮುನ್ಸೂಚನೆಗಳೆಂದರೆ:
ಇತ್ತೀಚಿನ ದಿನಗಳಲ್ಲಿ ಆಪ್ತರ/ಸ್ನೇಹಿತರ ಆತ್ಮಹತ್ಯೆ ಅಥವಾ ಸಾವು
ಮುಂಚೆ ಆತ್ಮಹತ್ಯೆಯ ಪ್ರಯತ್ನ ಮಾಡಿರುವುದು
ಸಾವಿನ ವಿಷಯಗಳಲ್ಲಿ ತಲ್ಲೀನನಾಗಿರುವುದು ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ವ್ಯಕ್ತಪಡಿಸಿರುವುದು
ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವುದು. ಉದಾ: ಖನ್ನತೆ, ಮದ್ಯ ಮತ್ತಿತರ ಮಾದಕ ವಸ್ತುಗಳ ಅವಲಂಬನೆ, ಇತ್ಯಾದಿ
ತನ್ನ ಅತ್ಯಂತ ಅಚ್ಚುಮೆಚ್ಚಿನ ವಸ್ತುವನ್ನು ಇತರರಿಗೆ ನೀಡುವುದು, ಅಕಾಲಿಕವಾಗಿ ವಿಲ್ ಮಾಡುವುದು ಅಥವಾ ಕೊನೆಯ ಹಂತದ ಎಲ್ಲ ವ್ಯವಸ್ಥೆಗಳಲ್ಲಿ ತೊಡಗಿರುವುದು
ನಿದ್ರೆಯಲ್ಲಿ ಗಮನಾರ್ಹವಾದ ಬದಲಾವಣೆಗಳು: ಅತಿಯಾದ ನಿದ್ರೆ ಅಥವಾ ತುಂಬಾ ಕಡಿಮೆ ನಿದ್ರೆ.
ಕಡಿಮೆ ಅವಧಿಯಲ್ಲಿ, ತೀವ್ರಗತಿಯಲ್ಲಿ ಆಹಾರ ಸೇವನೆಯಲ್ಲಿ ಬದಲಾವಣೆ/ ತೂಕ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು
ಸ್ನೇಹಿತರ/ಕುಟುಂಬದವರ ಜತೆಗೆ ಬೆರೆಯುವುದನ್ನು ನಿಲ್ಲಿಸುವುದು ಅಥವಾ ನಡವಳಿಕೆಯಲ್ಲಿ ಗಮನಾರ್ಹವಾದ ಬದಲಾವಣೆಗಳು ಕಂಡುಬರುವುದು.
ತನ್ನ ನಿಯಮಿತವಾದ ಗುಂಪಿನ ಚಟುವಟಿಕೆಗಳಿಂದ ಕಾರಣವಿರದೆ ಹೊರಬರುವುದು. ವಿನಾಕಾರಣ ವ್ಯಕ್ತಿತ್ವದಲ್ಲಿ/ನಡವಳಿಕೆಯಲ್ಲಿ ಬದಲಾವಣೆಗಳು: ಯಾವಾಗಲೂ ಅಥವಾ ಹೆಚ್ಚಾಗಿ ಚಡಪಡಿಸುತ್ತಿರುವುದು, ಗಾಬರಿಯಾಗಿರುವುದು, ದುಡುಕುವುದು, ತಾಳ್ಮೆ ಕಡಿಮೆಯಾಗುವುದು, ಮುಂಗೋಪಿಯಾಗುವುದು, ತನ್ನ ತೋರಿಕೆಯಲ್ಲಿ/ಶೃಂಗಾರದಲ್ಲಿ/ಆರೋಗ್ಯದ ವಿಷಯದಲ್ಲಿ ನಿರಾಸಕ್ತನಾಗುವುದು ಅಥವಾ ಭಾವಶೂನ್ಯನಾಗುವುದು.
ಪದೇಪದೆ ರೇಗುವುದು ಅಥವಾ ಕಾರಣವಿಲ್ಲದೆ ಅಳುವುದು
ತಾನು ನಿಷ್ಪ್ರಯೋಜಕ ಅಥವಾ ಸೋತ ವ್ಯಕ್ತಿಯೆಂದು ವ್ಯಕ್ತಪಡಿಸುತ್ತಿರುವುದು
ಭವಿಷ್ಯದಲ್ಲಿ ನಿರಾಸಕ್ತನಾಗಿರುವುದು
ಸ್ವಲ್ಪ ಸಮಯದಿಂದ ಜೀವನದಲ್ಲಿ ನಿರಾಸಕ್ತನಾಗಿದ್ದು ಒಮ್ಮಿಂದೊಮ್ಮೆ ಉತ್ಸಾಹಿಯಾಗಿ ತೋರಿಸಿಕೊಳ್ಳುವುದು ಆತ್ಮಹತ್ಯೆಗೆ ನಿರ್ಧಾರ ಮಾಡಿ ಆಗಿದೆ ಎನ್ನುವುದನ್ನು ತಿಳಿಸುತ್ತದೆ.
- ತಪ್ಪು: ಒಮ್ಮೆ ಆತ್ಮಹತ್ಯೆಯ ಪ್ರಯತ್ನ ಮಾಡಿ ವ್ಯಕ್ತಿ ಬದುಕುಳಿದರೆ ಆತ ಮುಂದೆಂದೂ ಆತ್ಮಹತ್ಯೆಯ ಪ್ರಯತ್ನ ಮಾಡುವುದಿಲ್ಲ.
ಸರಿ: ಆತ್ಮಹತ್ಯೆಯ ಒಂದು ಪ್ರಯತ್ನ ಭವಿಷ್ಯದಲ್ಲಿ ಮತ್ತೆ ಆ ತರಹ ಮಾಡಿಕೊಳ್ಳಬಹುದೆನ್ನುವುದರ ಸೂಚಕವಾಗಿದೆ. ಅನಂತರದ ಪ್ರತೀ ಪ್ರಯತ್ನದ ಜತೆ ಆತ್ಮಹತ್ಯೆಯ ತೀವ್ರತೆಯ/ಘಾತಕದ ಪ್ರಮಾಣ ಹೆಚ್ಚಾಗುತ್ತ ಹೋಗುತ್ತದೆ.
- ತಪ್ಪು: ಒಮ್ಮೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಇರಾದೆ ಮಾಡಿದರೆ, ಆತನನ್ನು ಏನೂ ಮಾಡಿದರೂ ತಡೆಯಲಾಗುವುದಿಲ್ಲ.
ಸರಿ: ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಇವರಿಗೆ ಯಶಸ್ವಿಯಾಗಿ ಸಹಾಯ ಮಾಡಬಹುದು. ಆತ್ಮಹತ್ಯೆಯ ವಿಷಮ ಸ್ಥಿತಿ/ಬಿಕ್ಕಟ್ಟು ಹೆಚ್ಚು- ಕಡಿಮೆ ಅಲ್ಪಕಾಲದ್ದಾಗಿರಬಹುದು. ಪ್ರಾಯೋಗಿಕವಾದ ತುರ್ತು ಸಹಾಯಗಳಾದ ವ್ಯಕ್ತಿಯ ಜತೆಗಿರುವುದು, ಅವರನ್ನು ಮಾತಾಡಲು ಪ್ರೋತ್ಸಾಹಿಸುವುದು, ಭಿವಿಷ್ಯದ ಬಗ್ಗೆ ಲಭ್ಯ ಅವಕಾಶಗಳ/ಸಹಾಯಗಳ ಬಗ್ಗೆ ಚರ್ಚಿಸುವುದರಿಂದ ಆತ್ಮಹತ್ಯೆಯ ಇರಾದೆಯನ್ನು ಪ್ರಯತ್ನವನ್ನು ತಳ್ಳಿಹಾಕಬಹುದು. ಈ ಕ್ರಮಗಳು ಬಿಕ್ಕಟ್ಟಿನ ಸ್ಥಿತಿಯಲ್ಲಿ ಅತ್ಯಮೂಲ್ಯವಾಗಿವೆ. ಆದರೆ ಅವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿರುತ್ತದೆ.
- ತಪ್ಪು: ಕೇವಲ ಕೆಲವು ತರಹದ ವ್ಯಕ್ತಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಸರಿ: ಎಲ್ಲರಲ್ಲೂ ಆತ್ಮಹತ್ಯೆಯ ಸಾಧ್ಯತೆ ಇರುತ್ತದೆ. ಲಭ್ಯ ಸಂಶೋಧನೆಗಳ/ಮಾಹಿತಿಗಳ ಪ್ರಕಾರ ಇದು ಯಾರಲ್ಲೂ ಕಂಡುಬರಬಹುದು. ಆದರೆ ಕೆಲವು ಸನ್ನಿವೇಶಗಳು/ಕಾಯಿಲೆಗಳು/ ವ್ಯಕ್ತಿತ್ವ ದೋಷಗಳು ಇರುವವರಲ್ಲಿ ಇದರ ಸಾಧ್ಯತೆ ಹೆಚ್ಚಾಗಿರುತ್ತದೆ.
- ತಪ್ಪು: ಆತ್ಮಹತ್ಯೆ ಒಂದು ನೋವಿರದಂತಹ ಅನುಭವ.
ಸರಿ: ಆತ್ಮಹತ್ಯೆಯ ಹೆಚ್ಚಿನ ವಿಧಾನಗಳು ಅತ್ಯಂತ ನೋವುಂಟುಮಾಡುತ್ತವೆ. ಕಾಲ್ಪನಿಕ ಚಿತ್ರಣಗಳು/ ವಿವರಣೆಗಳು ಆತ್ಮಹತ್ಯೆಯ ನಿಜವಾದ ನೋವನ್ನು ಬಿಂಬಿಸುವುದಿಲ್ಲ.
- ತಪ್ಪು: ಖನ್ನತೆ ಮತ್ತು ಸ್ವಂತ ಹಾನಿ ಮಾಡಿಕೊಳ್ಳುವಂತಹ ನಡವಳಿಕೆಗಳು ಯುವಜನತೆಯಲ್ಲಿ ವಿರಳವಾಗಿವೆ.
ಸರಿ: ಈ ಎರಡೂ ನಡವಳಿಕೆಗಳು ತರುಣರಲ್ಲಿ/ಯುವಜನತೆಯಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಖನ್ನತೆಯು ವಯಸ್ಕರಲ್ಲಿ ಕಂಡುಬರುವ ರೀತಿಯಲ್ಲಿ ಕಂಡುಬರದೆ ಮಕ್ಕಳಲ್ಲಿ/ಯುವಜನತೆಯಲ್ಲಿ ವಿಭಿನ್ನ ರೀತಿಯ ಲಕ್ಷಣಗಳ ಮೂಲಕ ಕಂಡುಬರುತ್ತದೆ.
- ತಪ್ಪು: ಆತ್ಮಹತ್ಯೆಯ ಆಲೋಚನೆಯಿರುವ ಎಲ್ಲ ಯುವಜನತೆ ಖನ್ನತೆಯಿಂದ ಬಳಲುತ್ತಿರುತ್ತಾರೆ.
ಸರಿ: ಖನ್ನತೆ ಕಾಯಿಲೆ ಸಾಮಾನ್ಯವಾಗಿ ಕಂಡುಬಂದರೂ ಹಲವರಲ್ಲಿ ಕಾಯಿಲೆ ಇರದಿದ್ದರೂ ಆತ್ಮಹತ್ಯೆಯ ಬಗ್ಗೆ ಆಲೋಚಿಸಿದ್ದಾರೆ, ಪ್ರಯತ್ನಿಸಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 12. ತಪ್ಪು: ಆತ್ಮಹತ್ಯೆಯ ಬಿಕ್ಕಟ್ಟಿನ/ಖನ್ನತೆಯ ಅನಂತರ ಗಮನಾರ್ಹ ಮತ್ತು ಮಾನಸಿಕ ಸ್ಥಿತಿಯಲ್ಲಿ ಕ್ಷಿಪ್ರಗತಿಯಲ್ಲಿ ಸುಧಾರಣೆ ಕಂಡುಬರುವುದು ಸೂಚಿಸುವುದೇನೆಂದರೆ, ಆತ್ಮಹತ್ಯೆಯ ಅಪಾಯ ಮುಗಿಯಿತು.
ಸರಿ: ನಿಜವೇನೆಂದರೆ, ವಾಸ್ತವ ಇದಕ್ಕೆ ತದ್ವಿರುದ್ಧವಾಗಿರುತ್ತದೆ. ಆತ್ಮಹತ್ಯೆಯ ಪ್ರಯತ್ನದ ಮೊದಲ ಮೂರು ತಿಂಗಳುಗಳಲ್ಲಿ ಪುನಃ ಪ್ರಯತ್ನ ಮಾಡಿ ಸಾಯುವ ಸಾಧ್ಯತೆಗಳು ಅತೀ ಹೆಚ್ಚಾಗಿವೆ. ತೋರುವ ಸುಧಾರಣೆಯ ಅರ್ಥವೆಂದರೆ, ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡು ಸಾಯುವ ದೃಢ ನಿರ್ಧಾರ ಮಾಡಿಯಾಗಿದೆ ಹಾಗೂ ಈ ನಿರ್ಧಾರದಿಂದ ವ್ಯಕ್ತಿಗೆ ಸಮಾಧಾನವೆನಿಸಿದೆ.
13.ತಪ್ಪು: ಯುವಜನತೆ ಒಮ್ಮೆ ಆತ್ಮಹತ್ಯೆಯ ಬಗ್ಗೆ ಆಲೋಚಿಸಿದರೆ ಅವರು ಜೀವನವಿಡೀ ಆತ್ಮಹತ್ಯೆಯ ಬಗ್ಗೆಯೇ ಆಲೋಚಿಸುತ್ತಾರೆ.
ಸರಿ: ಹೆಚ್ಚಿನ ಯುವಜನತೆ ಆತ್ಮಹತ್ಯೆಯ ಆಲೋಚನೆಯನ್ನು ಆ ಬಿಕ್ಕಟ್ಟಿನ ಸಮಯದಲ್ಲಿ ಆ ವಯಸ್ಸಿನಲ್ಲಿ ಇದೊಂದೇ ಉಳಿದಿರುವ ದಾರಿಯೆಂದು ಹೊಂದಿರುತ್ತಾರೆ. ಸೂಕ್ತ ಬೆಂಬಲ, ಸಹಾಯ, ಮಾರ್ಗದರ್ಶನ, ಆಪ್ತಸಮಾಲೋಚನೆ, ಚಿಕಿತ್ಸೆಯಿಂದಾಗಿ ಅವರು ಅರ್ಥಪೂರ್ಣ ಮತ್ತು ಸಂತಸದ ಜೀವನವನ್ನು ಯಾವುದೇ ಆತ್ಮಹತ್ಯೆಯ ಚಿಂತೆಯಿಲ್ಲದೆ ಕಳೆಯಬಹುದು.
- ತಪ್ಪು: ಆತ್ಮಹತ್ಯೆಯ ಬಗ್ಗೆ ಆಲೋಚನೆ ಮಾಡುವ ಯುವಜನತೆ ತಮಗೆ ತಾವು ಸಹಾಯ ಮಾಡಿಕೊಳ್ಳಲಾಗುವುದಿಲ್ಲ.
ಸರಿ: ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವಾಗ ಯುವಜನತೆಗೆ ತಮ್ಮ ಜೀವನದ ನೈಜ ಪರಿಸ್ಥಿತಿಯ ಬಗ್ಗೆ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸ್ಪಷ್ಟ ಅನುಭವವಿರುವುದಿಲ್ಲ. ಆದರೆ ಅವರ ಜತೆಗಿರುವ ಆತ್ಮೀಯರಿಂದ ಸೂಕ್ತ ಬೆಂಬಲ ಮತ್ತು ರಚನಾತ್ಮಕ ಸಹಾಯ ದೊರೆತಾಗ ತಮ್ಮ ಜೀವನದ ಬಗ್ಗೆ ಸ್ಪಷ್ಟ ಚಿತ್ರಣ ದೊರೆತು ಸ್ವಂತ ಗುರಿಯನ್ನು ನಿರ್ಧರಿಸಿಕೊಂಡು ತಮ್ಮ ಜೀವನವನ್ನು ತಾವೇ ನಿರ್ವಹಿಸಬಲ್ಲರು.
- ತಪ್ಪು: ಆತ್ಮಹತ್ಯೆಗೆ ಅತ್ಯಂತ ಪರಿಣಾಮಕಾರಿಯಾದ ಚಿಕಿತ್ಸೆ ಕೇವಲ ತುಂಬಾ ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನುಭವವಿರುವ ಮನೋಚಿಕಿತ್ಸಕರಿಂದ ಮಾತ್ರ ಸಾಧ್ಯ.
ಸರಿ: ಬಿಕ್ಕಟಿನಲ್ಲಿರುವ ತರುಣರ ಮತ್ತು ಯುವಕರ ಜತೆ ಸಂವಾದಿಸುವ ಎಲ್ಲ ಜನರು ಭಾವನಾತ್ಮಕವಾಗಿ ಬೆಂಬಲ ನೀಡುವುದರ ಮತ್ತು ಪ್ರೋತ್ಸಾಹಿಸುವುದರ ಮೂಲಕ ಬಿಕ್ಕಟಿನ ಸನ್ನಿವೇಶದಲ್ಲಿ ಸಹಾಯ ಮಾಡಬಹುದು. ಆಪ್ತಸಮಾಲೋಚನೆ ಮತ್ತಿತರ ಚಿಕಿತ್ಸಾ ವಿಧಾನಗಳು ಕೂಡ ವ್ಯಕ್ತಿಯ ಕುಟುಂಬದವರು, ಆಪ್ತರು ಹಾಗೂ ಸ್ನೇಹಿತರು ನೀಡುವ ಬೆಂಬಲ ಮತ್ತು ಸಹಕಾರದ ಮೇಲೆ ನಿರ್ಭರವಾಗಿರುತ್ತದೆ. ಹಾಗಾಗಿ ಇದೊಂದು ತಂಡದ ಪ್ರಯತ್ನ ಎಂದು ಹೇಳಬಹುದು.
- ತಪ್ಪು: ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವ ಹೆಚ್ಚಿನ ಯುವಜನತೆ ತಮ್ಮ ಸಮಸ್ಯೆಗಳಿಗೆ ಎಂದೂ ಸಹಾಯ ಪಡೆಯುವುದಿಲ್ಲ.
ಸರಿ: ಸಂಶೋಧನೆಗಳಿಂದ ತಿಳಿದುಬಂದಿರುವುದೆಂದರೆ: ಹೆಚ್ಚಿನವರು ತಮ್ಮ ಆತ್ಮಹತ್ಯೆಯ ಆಲೋಚನೆಗಳ ಮತ್ತು ಯೋಜನೆಗಳ ಬಗ್ಗೆ ತಮ್ಮ ಸಹಪಾಠಿಗಳ ಹತ್ತಿರ ಹೇಳಿರುತ್ತಾರೆ. ಹೆಚ್ಚಿನ ವಯಸ್ಕರು ಈ ರೀತಿಯ ಆಲೋಚನೆಗಳಿದ್ದಾಗ ಸಾವಿನ ಮುಂಚಿನ ಮೂರು ತಿಂಗಳಿನಲ್ಲಿ ವೈದ್ಯರ ಹತ್ತಿರ ಇದರ ಬಗ್ಗೆ ಹೇಳಿರುತ್ತಾರೆ. ತರುಣರು ಮತ್ತು ಯುವಜನತೆ ಶಬ್ದಗಳ ಮೂಲಕ ಹೇಳಿ ಸಹಾಯ ಪಡೆಯುವುದಕ್ಕಿಂತ ತಮ್ಮ ಹಾವ-ಭಾವ ಹಾಗೂ ನಡವಳಿಕೆಗಳಿಂದ ಇತರರಲ್ಲಿ ಸಹಾಯ ಕೋರಿರುತ್ತಾರೆ.
- ತಪ್ಪು: ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಿರುವ ಯುವಜನತೆ ಇದರಲ್ಲಿ ಹಸ್ತಕ್ಷೇಪ ಮಾಡುವವರ ಮೇಲೆ ಯಾವಾಗಲೂ ಸಿಟ್ಟಿನಲ್ಲಿರುತ್ತಾರೆ ಮತ್ತು ಆ ವ್ಯಕ್ತಿಯ ಮೇಲೆ ಅನಂತರ ಮುನಿಸುಕೊಂಡಿರುತ್ತಾರೆ.
ಸರಿ: ಮೊದಲಿಗೆ ಸಹಾಯ ಮಾಡಲು ಅಥವಾ ಆತ್ಮಹತ್ಯೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಹೋದಾಗ ಯುವಜನತೆ ಅದನ್ನು ನಿರಾಕರಿಸುವುದು ಅಥವಾ ಏನೂ ಚರ್ಚಿಸದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಈ ನಿರಾಕರಣೆ ಮತ್ತು ಚರ್ಚಿಸದಿರುವುದು ತನ್ನ ಬಗ್ಗೆ ಇತರರರಿಗೆ ಎಷ್ಟು ಕಾಳಜಿ ಇದೆ ಮತ್ತು ತನ್ನನ್ನು ಎಷ್ಟರ ಮಟ್ಟಿಗೆ ಸಹಾಯ ಮಾಡಲು ಮನಸ್ಸಿದೆ ಎನ್ನುವುದನ್ನು ಅರ್ಥೈಸಿಕೊಳ್ಳುವ ತಡೆಗೋಡೆಗಳಾಗಿವೆ. ಆತ್ಮಹತ್ಯೆಯ ಬಗ್ಗೆ ಆಲೋಚಿಸುವ ಹೆಚ್ಚಿನ ಯುವಜನತೆಗೆ ತನ್ನ ಬಗ್ಗೆ ನಿಜವಾಗಿಯೂ ಇತರರಿಗೆ ಕಾಳಜಿ ಇದೆಯೆಂದು ತಿಳಿದು ಮನಸ್ಸಿಗೆ ಸಮಾಧಾನವಾಗಿ ಅವರ ಜತೆ ವಿಷಯ ಹಂಚಿಕೊಳ್ಳುತ್ತಾರೆ. ಇವೆಲ್ಲವುಗಳಿಂದ ಹೊರಬಂದಾಗ ಕೇಳಿದರೆ ಅವರು ಹಸ್ತಕ್ಷೇಪ ಮಾಡಿದ ವ್ಯಕ್ತಿಗೆ ತಾನು ಚಿರಋಣಿ ಎಂದು ಹೇಳುತ್ತಾರೆ.
-ಡಾ| ರವೀಂದ್ರ ಮುನೋಳಿ, ಸಹ ಪ್ರಾಧ್ಯಾಪಕರು, ಮನೋರೋಗ ಚಿಕಿತ್ಸಾ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಾಹೆ, ಮಣಿಪಾಲ
–
ಮುಂದಿನ ವಾರಕ್ಕೆ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮನೋರೋಗ ಚಿಕಿತ್ಸಾ ವಿಭಾಗ, ಕೆಎಂಸಿ, ಮಂಗಳೂರು)