ಹೊಸದಿಲ್ಲಿ: ತಮ್ಮ ಹಾಗೂ ಅಭಿಮಾನಿಗಳ ನಡುವಿನ ಕೊಂಡಿಯಾಗಿರುವ ಕ್ರೀಡಾ ಪತ್ರಕರ್ತರಿಗೆ “ವಿಶ್ವ ಕ್ರೀಡಾ ಪತ್ರಕರ್ತರ ದಿನ’ವಾದ ಗುರುವಾರ (ಜು. 2) ದೇಶದ ಕ್ರೀಡಾಪಟುಗಳನೇಕರು ಶುಭ ಹಾರೈಸಿದ್ದಾರೆ.
ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಸುರೇಶ್ ರೈನಾ, ವಿಶ್ವದ ಮಾಜಿ ನಂ.1 ಶೂಟರ್ ಅಂಜಲಿ ಭಾಗವತ್, ಏಶ್ಯಾಡ್ ಬಂಗಾರ ಪದಕ ವಿಜೇತೆ ಹಿಮಾ ದಾಸ್, ಹಾಕಿಸ್ಟಾರ್ ಎಸ್.ವಿ. ಸುನೀಲ್ ಮೊದಲಾದವರೆಲ್ಲ ಕ್ರೀಡಾ ಪತ್ರಕರ್ತರ ಕರ್ತವ್ಯ, ತಮ್ಮೊಂದಿಗಿನ ಬಾಂಧವ್ಯವನ್ನು ಸ್ಮರಿಸಿ ಗುಣಗಾನ ಮಾಡಿದ್ದಾರೆ.
ಕ್ರೀಡಾ ಪಯಣದಲ್ಲಿ ಮಹತ್ವದ ಪಾತ್ರ “ನನ್ನ ಕ್ರೀಡಾ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿದ ಪತ್ರಕರ್ತರಿಗೆಲ್ಲ ಧನ್ಯ ವಾದಗಳು. ನಮ್ಮ ಕ್ರೀಡಾ ಬದುಕಿನ ದೊಡ್ಡ ಭಾಗ ಅವರಿಗೆ ಅರ್ಪಣೆ’ ಎಂಬುದಾಗಿ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
“ನಮ್ಮೆಲ್ಲ ಕ್ರೀಡಾ ಪತ್ರಕರ್ತ ಮಿತ್ರರಿಗೆ ಶುಭಾಶಯಗಳು. ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞತೆಗಳು. ನಿಮ್ಮ ಶ್ರಮ ಮತ್ತು ಬದ್ಧತೆಗೆ ನಮ್ಮದೊಂದು ಸಲ್ಯೂಟ್’ ಎಂದಿದ್ದಾರೆ ಅಂಜಲಿ ಭಾಗವತ್.
“ಕ್ರೀಡಾ ಪತ್ರಕರ್ತರರು ಎಲ್ಲ ಕ್ರೀಡಾಪಟುಗಳ ಧ್ವನಿಯಾಗಿದ್ದಾರೆ. ಕ್ರೀಡೆಯನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ ನನ್ನೆಲ್ಲ ಮಿತ್ರರಿಗೆ ಆಲ್ ದಿ ಬೆಸ್ಟ್’ ಎಂಬುದು ಸುರೇಶ್ ರೈನಾ ಹಾರೈಕೆ.
“ನೀವೆಲ್ಲ ನಮ್ಮ ಕ್ರೀಡಾ ಬದುಕಿನ ಅವಿಭಾಜ್ಯ ಅಂಗಗಳು. ಕ್ರೀಡೆಯನ್ನು ಆಯ್ದು ಇದರ ಬೆಳವಣಿಗೆಗೆ ಮುಂದಾಗಿರುವ ನಿಮಗೆಲ್ಲ ಥ್ಯಾಂಕ್ಸ್’ ಎಂದು ಎಸ್.ವಿ. ಸುನೀಲ್ ಹಾರೈಸಿದ್ದಾರೆ.