Advertisement

ಇಂದು ವಿಶ್ವ ಗುಲಾಬಿ ದಿನ; ಕ್ಯಾನ್ಸರ್‌ ರೋಗಿಗಳಿಗೆ ಪ್ರೀತಿ, ಕಾಳಜಿಯ ಔಷಧ ನೀಡೋಣ

12:08 AM Sep 22, 2022 | Team Udayavani |

ಕ್ಯಾನ್ಸರ್‌ ಎಂದಾಕ್ಷಣ ಎಲ್ಲರೂ ಒಮ್ಮೆ ಭಯಬೀಳುತ್ತಾರೆ. ಅದಕ್ಕೆ ಕಾರಣ ಕ್ಯಾನ್ಸರ್‌ ರೋಗಿಗಳು ಎದುರಿಸುವ ಕಷ್ಟ, ನೋವುಗಳು. ವೈದ್ಯಕೀಯ ಲೋಕ ಎಷ್ಟೇ ಮುಂದುವರಿದರೂ ಕೂಡ ಕ್ಯಾನ್ಸರ್‌ಗೆ ಭಯಬೀಳುವವರ ಸಂಖ್ಯೆ ಕಡಿಮೆಯಾಗಿಲ್ಲ. ಜತೆಗೆ ರೋಗಿಗಳ ಕುರಿತ ನಿರ್ಲಕ್ಷ್ಯವೂ ಕೂಡ. ಕ್ಯಾನ್ಸರ್‌ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜತೆಗೆ ಮಾನಸಿಕ ಧೈರ್ಯದ ಅಗತ್ಯ ಹೆಚ್ಚಿರುತ್ತದೆ. ಆದರೆ ಇಂದು ಕ್ಯಾನ್ಸರ್‌ ಪೀಡಿತರಿಗೆ ಪ್ರೀತಿ, ಕಾಳಜಿಯ ಕೊರತೆಯೇ ದೊಡ್ಡದಾಗಿರುವುದು ವಿಪರ್ಯಾಸ.

Advertisement

ಕ್ಯಾನ್ಸರ್‌ ರೋಗಿಗಳಿಗೆ ಧೈರ್ಯ, ಪ್ರೀತಿ, ಕಾಳಜಿ ತೋರಿದರೆ ಬದುಕುವ ಉತ್ಸಾಹ ತೋರುತ್ತಾರೆ. ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲಿ ನಾವು ಜತೆಗಿದ್ದೇವೆ ಎಂದು ಧೈರ್ಯ ತುಂಬಿದರೆ ರೋಗಿಗಳ ಮನೋಸ್ಥೈರ್ಯ ವೃದ್ಧಿ ಯಾಗಿ ಅವರು ಹೆಚ್ಚು ವರ್ಷ ಬದುಕುತ್ತಾರೆ. ಅದಕ್ಕೆ ಉದಾಹರಣೆ ಕೆನ ಡಾದ ಮೆಲಿಂಡಾ ರೋಸ್‌. ಈಕೆಯ ನೆನಪಿ ಗಾಗಿಯೇ ವಿಶ್ವ ಗುಲಾಬಿ ದಿನವನ್ನು ಸೆ. 22ರಂದು ಆಚರಿಸಲಾಗುತ್ತದೆ.

ಗುಲಾಬಿಯೇ ಏಕೆ?
ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ ಎಷ್ಟು ಅಗತ್ಯವೋ ಅಷ್ಟೇ ಕಾಳಜಿ, ಪ್ರೀತಿಯ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಸೆ. 22ರಂದು ವಿಶ್ವ ಗುಲಾಬಿ ದಿನವನ್ನು ವಿಶ್ವಾದ್ಯಂತ ಆಚರಿಸುತ್ತ ಬರಲಾಗಿದೆ. ಕ್ಯಾನ್ಸರ್‌ ಪೀಡಿತರಿಗೆ ಗುಲಾಬಿ ಹೂ ಮತ್ತು ಉಡುಗೊರೆಗಳನ್ನು ನೀಡುವುದರ ಮೂಲಕ ಅವರಲ್ಲಿನ ಅಭದ್ರತೆಯ ಭಾವನೆಯನ್ನು ದೂರಮಾಡಿ ಅವರ ಮೊಗದಲ್ಲಿ ಒಂದಿಷ್ಟು ನಗು ಅರಳುವಂತೆ ಮಾಡ ಲಾಗುತ್ತದೆ. ತನ್ಮೂಲಕ ತಮ್ಮ ಜೀವನದ ಬಗೆಗೆ ಸದಾ ಚಿಂತಾಕ್ರಾಂತರಾಗಿ ವೈರಾಗ್ಯದಿಂದ ಬಳ ಲುತ್ತಿರುವ ಕ್ಯಾನ್ಸರ್‌ರೋಗಿಗಳಲ್ಲಿ ಬದುಕಿನ ಬಗೆಗೆ ಆಶಾ ಕಿರಣ ಮೂಡಿ ಸುವ ಪ್ರಯತ್ನ ಮಾಡಲಾಗುತ್ತದೆ.

ಹೇಗೆ ಆರಂಭವಾಯಿತು?
ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೆನಡಾದ 12 ವರ್ಷದ ಬಾಲಕಿ ಮೆಲಿಂಡಾ ರೋಸ್‌ ಕಾಯಿಲೆಯ ಕೊನೆಯ ಹಂತವನ್ನು ತಲುಪಿದ್ದಳು. ವೈದ್ಯರು ಇನ್ನು ಕೆಲವೇ ದಿನಗಳಷ್ಟೇ ಆಕೆ ಬದುಕಬಹುದು ಎಂದಿದ್ದರು. ಆದರೆ ಆಕೆ 6 ತಿಂಗಳು ಬದುಕುವ ಮೂಲಕ ವೈದ್ಯರ ಮಾತನ್ನು ಸುಳ್ಳು ಮಾಡಿದ್ದಳು. ಮೆಲಿಂಡಾ ತನ್ನ ಬದುಕಿನ ಕೊನೆಯ ದಿನಗಳನ್ನು ಕವನ, ಕಥೆ, ಪತ್ರಗಳನ್ನು ಬರೆಯುವ ಮೂಲಕ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಸ್ಫೂರ್ತಿ ತುಂಬಿದಳು. ಆಕೆ ಇನ್ನು ಬದುಕುವುದು ಕೆಲವೇ ದಿನ ಎಂದು ತಿಳಿದರೂ ಅದನ್ನು ಸಂತೋಷವಾಗಿ ಕಳೆಯಲು ಬಯಸಿದ್ದು ಮಾತ್ರವಲ್ಲದೆ ಹಾಗೆ ಬದುಕಿ ತೋರಿಸಿದಳು ಕೂಡ. ಆಕೆಯ ನೆನಪಿಗಾಗಿ ಪ್ರತೀ ವರ್ಷ ವಿಶ್ವ ಗುಲಾಬಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.

ಅಗತ್ಯ ಔಷಧಗಳ ಪಟ್ಟಿಗೆ ಕ್ಯಾನ್ಸರ್‌ ನಿಯಂತ್ರಣ ಔಷಧಗಳು
ಕೇಂದ್ರ ಸರಕಾರ ಇತ್ತೀಚೆಗೆ ಕ್ಯಾನ್ಸರ್‌ ನಿಯಂತ್ರಣ ಮತ್ತು ಚಿಕಿತ್ಸೆಗೆ ಬಳಸುವ ಔಷಧಗಳನ್ನು ಅಗತ್ಯ ಔಷಧಗಳ
ಪಟ್ಟಿಗೆ ಸೇರ್ಪಡೆಗೊಳಿಸಿದೆ. ಇದರಿಂದ ಇನ್ನು ಮುಂದೆ ಈ ದುಬಾರಿ ಔಷಧ ಗಳ ಬೆಲೆ ಕಡಿಮೆಯಾಗಲಿದ್ದು ಕ್ಯಾನ್ಸರ್‌ ಪೀಡಿತರಿಗೆ ವರದಾನವಾಗ ಲಿದೆ. ಎಲ್ಲರಿಗೂ ಅಗ್ಗದ ಬೆಲೆಯಲ್ಲಿ ಔಷಧ ಒದಗಿಸುವ ಸರಕಾರದ ಮಹತ್ವಾ ಕಾಂಕ್ಷೆಯ ಯೋಜನೆಯಡಿ ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ದುಬಾರಿ ಬೆಲೆ ತರಲು ಸಾಧ್ಯವಾಗದೆ ರೋಗಿಗಳು ಔಷಧ ಪಡೆಯುವುದನ್ನೇ ನಿಲ್ಲಿಸಿ ಸಾವಿಗೆ ಶರಣಾಗುತ್ತಿದ್ದ ಪ್ರಕರಣಗಳೂ ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.

Advertisement

ಆಚರಣೆ ಹೇಗೆ?
ನಮ್ಮ ಪರಿಸರದಲ್ಲಿರುವ ಕ್ಯಾನ್ಸರ್‌ ಪೀಡಿತರಿಗಾಗಿ ನಮ್ಮ ಒಂದು ದಿನವನ್ನು ಮೀಸಲಿಡಬಹುದು. ಅವರಿಗೆ ಗುಲಾಬಿ ಅಥವಾ ಉಡುಗೊರೆಗಳನ್ನು ನೀಡುವುದರ ಮೂಲಕ ಅವರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಬೇಕು.
01 ಕ್ಯಾನ್ಸರ್‌ ಕುರಿತು ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳ ಆಯೋಜನೆ.
02ಕ್ಯಾನ್ಸರ್‌ ಪೀಡಿತರಿಗಾಗಿ ಒಂದು ದಿನ ಮನೋ ರಂಜನ ಕಾರ್ಯಕ್ರಮ ಅಥವಾ ಸ್ಪರ್ಧೆ ಏರ್ಪ ಡಿಸುವ ಮೂಲಕ ಅವರು ಮಾನಸಿಕವಾಗಿ ಚೇತರಿಸಿಕೊಳ್ಳುವಂತೆ ಮಾಡಬೇಕು.

2020ರಲ್ಲಿ ಅತ್ಯಧಿಕ ಕ್ಯಾನ್ಸರ್‌ ರೋಗಿಗಳನ್ನು ಹೊಂದಿದ್ದ ದೇಶ
-ಆಸ್ಟ್ರೇಲಿಯಾ
-ನ್ಯೂಜಿಲ್ಯಾಂಡ್‌
-ಐರ್ಲೆಂಡ್‌
-ಅಮೆರಿಕ
-ಡೆನ್ಮಾರ್ಕ್‌
-ನೆದರ್‌ಲ್ಯಾಂಡ್‌
-ಬೆಲ್ಜಿಯಂ
-ಕೆನಡಾ
-ಫ್ರಾನ್ಸ್‌
-ಹಂಗೇರಿ

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next