ಶಹಾಬಾದ: ಭಾವೈಕ್ಯತೆಯಿಂದ ಕೂಡಿ ಬೆರೆತಾಗ ಮಾತ್ರ ವಿಶ್ವಧರ್ಮ ನಮ್ಮದಾಗು ತ್ತದೆ ಎಂದು ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ ಹೇಳಿದರು.
ಸೇಂಟ್ ಥಾಮಸ್ ಚರ್ಚ್‌ನಲ್ಲಿ ಕ್ರಿಸ್ ಮಸ್ ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ವಿವಿಧ ಧರ್ಮಿಯರ ಸೌಹಾರ್ದ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಆಯಾ ಧರ್ಮದವರ ಆಚಾರ, ವಿಚಾರ, ಸಂಸ್ಕಾರಗಳು ಬೇರೆ ಬೇರೆಯಾಗಿರ ಬಹುದು. ಆದರೆ ಅವೆಲ್ಲವುಗಳ ಗುರಿ ಒಂದೇ. ಅದುವೇ ಮಾನವೀಯತೆ ಎಂದರು. ಸೇಂಟ್ ಥಾಮಸ್ ಚರ್ಚ್ ಫಾದರ್ ಸ್ಟ್ಯಾನಿ ಗೋವಿಯಸ್ ಮಾತನಾಡಿ, ಸಂತರು, ಮಹಾತ್ಮರು, ಸೂಫಿಗಳು, ಯೇಸು, ಮಹ್ಮದ್ ಪೈಗಂಬರ್ ತಮಗಾಗಿ ಜನಿಸದೇ ಜನಕಲ್ಯಾಣಕ್ಕಾಗಿ ಜೀವಿಸಿ, ಆದರ್ಶ ಬಿಟ್ಟು ಹೋದವರು ಎಂದು ಹೇಳಿದರು.
ಶಾಂತ ನಗರದ ಮಕ್ಕಾಮಜೀದ್ ಅಧ್ಯಕ್ಷ ರೌಫ್ ಸೇಠ ಮಾತನಾಡಿ, ನೊಂದವರ ಬದುಕಿನ ಆಶಾಕಿರಣವಾಗಿ ಬದುಕುವುದೇ ಧರ್ಮ ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕೋಬಾಳ, ಜಗದಂಬಾ ಮಂದಿರದ ಅಧ್ಯಕ್ಷ ದತ್ತಾ ಜಿಂಗಾಡೆ ಮಾತನಾಡಿದರು. ಮೆಥೋಡಿಸ್ಟ್ ಚರ್ಚ್ ಕಾರ್ಯದರ್ಶಿ ಇಮ್ಯಾನುವೆಲ್ ಜಾನಪಾಲ್, ಜೋ ಆನಂದ ಹಾಗೂ ಇತರ ಮುಖಂಡರು ಇದ್ದರು.