Advertisement

Mangaluru University ಯಕ್ಷಗಾನಕ್ಕೆ ವಿಶ್ವ ಮನ್ನಣೆ: ವಿ.ವಿ.ಕುಲಪತಿ ಪ್ರೊ| ಪಿ.ಎಲ್‌. ಧರ್ಮ

11:16 PM Jul 09, 2024 | Team Udayavani |

ಉಳ್ಳಾಲ: ಯಕ್ಷಗಾನ ಕರ್ನಾಟಕದ ಕಲೆ ಆಗಿದ್ದರೂ ವಿಶ್ವದಲ್ಲೇ ಮನ್ನಣೆಗೆ ಪಾತ್ರವಾಗಿದೆ. ಹಿರಿಯ ಕಲಾವಿದರ ಆದರ್ಶವನ್ನಿಟ್ಟುಕೊಂಡು ಹೊಸ ತಲೆಮಾರು ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿರುವುದು ಯಕ್ಷಗಾನದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಎಂದು ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಲ್‌. ಧರ್ಮ ಹೇಳಿದರು.

Advertisement

ಮಂಗಳೂರು ವಿ.ವಿ.ಯ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯು ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಲಿಗ್ರಾಮ ಮೇಳದ ಸಂಚಾಲಕ ಶ್ರೀಧರ ಹಂದೆ ಹಾಗೂ ತೆಂಕು ಮತ್ತು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷ ಕಲಾವಿದ ಎಂ.ಕೆ. ರಮೇಶ್‌ ಆಚಾರ್ಯ ಅವರಿಗೆ ಯಕ್ಷಮಂಗಳ ಪ್ರಶಸ್ತಿ, 25ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ನಿವೃತ್ತ ಉಪನ್ಯಾಸಕ, ಯಕ್ಷಗಾನ ತಾಳಮದ್ದಳೆಯ ಶ್ರೇಷ್ಠ ಕಲಾವಿದ ರಾಧಾಕೃಷ್ಣ ಕಲ್ಚಾರ್‌ ಅವರ ‘ಪೀಠಿಕಾ ಪ್ರಕರಣ’ ಕೃತಿಗೆ ಯಕ್ಷಮಂಗಳ ಕೃತಿ ಪ್ರಶಸ್ತಿ,10 ಸಾವಿರ ರೂ. ನಗದು, ಪ್ರಶಸ್ತಿ, ಸ್ಮರಣಿಕೆಗಳ ಜತೆಗೆ ಸಮ್ಮಾನ ಮಾಡಲಾಯಿತು.

ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್‌ ಮಾತನಾಡಿ ವಿ.ವಿ.ಯ ಯಕ್ಷಗಾನ ಅಧ್ಯಯನ ಕೇಂದ್ರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ವಿಜ್ಞಾನ, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೂ ಯಕ್ಷಗಾನ ಪ್ರವೇಶಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಜಾನಪದ ವಿದ್ವಾಂಸ ಡಾ| ಕೆ. ಚಿನ್ನಪ್ಪ ಗೌಡ ಅಭಿನಂದನ ಭಾಷಣ ಮಾಡಿ ವಿ.ವಿ.ಯ ಸಾಂಸ್ಕೃತಿಕ ನೀತಿಯಲ್ಲಿ ಸ್ಥಳೀಯ ಕಲೆ, ಸಂಸ್ಕೃತಿಗೆ ಆದ್ಯತೆ ಸಿಗಬೇಕು ಮತ್ತು ಯಕ್ಷಗಾನಕ್ಕೆ ಪ್ರೋತ್ಸಾಹ ದೊರಕಬೇಕು ಎಂದರು.

Advertisement

ಕುಲಸಚಿವ ರಾಜು ಕೆ. ಮೊಗವೀರ ಮತ್ತು ಪ್ರಶಸ್ತಿ ಪುರಸ್ಕೃತರಾದ ಶ್ರೀಧರಹಂದೆ, ಎಂ.ಕೆ. ರಮೇಶ್‌ ಆಚಾರ್ಯ, ರಾಧಾಕೃಷ್ಣ ಕಲ್ಚಾರ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಂಗ್ಲಾ ದೇಶದ ವಿದ್ಯಾರ್ಥಿಯೂ ಸೇರಿದಂತೆ ವಿವಿಯ ವಿವಿಧ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಯಕ್ಷಮಂಗಳದ ಸುಮಾರು 60ವಿದ್ಯಾರ್ಥಿಗಳಿಂದ ದೀವಿತ್‌ ಎಸ್‌. ಕೋಟ್ಯಾನ್‌ ನಿರ್ದೇಶನದಲ್ಲಿ 10 ನಿಮಿಷಗಳ ಕಾಲ “ಶ್ರೀರಾಮ ದರ್ಶನ’ ಪ್ರದರ್ಶನಗೊಂಡಿತು.

ಮಂಗಳೂರಿನಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಪಾತ್ರ ನಿರ್ವಹಿಸಿ ಪ್ರಶಸ್ತಿ ವಿಜೇತರಾದ ಅನ್ವಿತಾ, ರಕ್ಷಾ , ಶರಣ್ಯ ಅವರನ್ನು ಸಮ್ಮಾನಿಸಲಾಯಿತು. ಯಕ್ಷಗುರು ದೀವಿತ್‌ ಎಸ್‌. ಕೋಟ್ಯಾನ್‌, ಸುದರ್ಶನ ವಿಜಯ ನಿರ್ದೇಶಕ ಅಶ್ವಥ್‌ ಮಂಜನಾಡಿ, ಕಲಾವಿದರಾದ ಪವನ್‌ ಆಚಾರ್ಯ, ಯತೀಶ್‌ ಕುಂಬ್ಳೆ, ವಿನುತಾ ಡಿ. ಗಟ್ಟಿ, ಅನ್ವಿತಾ ಅವರನ್ನು ಗೌರವಿಸಲಾಯಿತು.
ಕೇಂದ್ರದ ನಿರ್ದೇಶಕ ಡಾ| ಧನಂಜಯ ಕುಂಬ್ಳೆ ಸ್ವಾಗತಿಸಿದರು. ಸಂಶೋಧನಾಧಿಕಾರಿ ಡಾ| ಸತೀಶ್‌ ಕೊಣಾಜೆ ವಂದಿಸಿದರು. ಶ್ರೀದೇವಿ ಪುತ್ತೂರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next