ಅ.9ರಂದು ವಿಶ್ವ ಅಂಚೆ ದಿನವಾದರೆ ಅ.10ರಂದು ಭಾರತದಲ್ಲಿ ರಾಷ್ಟ್ರೀಯ ಅಂಚೆ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಅಂಚೆ ಇಲಾಖೆ ಬದಲಾವಣೆಗೆ ತನ್ನನ್ನು ತಾನು ಒಡ್ಡಿಕೊಂಡು ಎದುರಾದ ಎಲ್ಲ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಮುನ್ನಡೆ ಯುತ್ತಿದೆ. ಅಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಹಲವಾರು ರೀತಿಯ ಸೇವೆಗಳನ್ನು ನೀಡುವ ಜತೆಯಲ್ಲಿ ಸರಕಾರದ ವಿವಿಧ ಸವಲತ್ತುಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಅಂಚೆ ಇಲಾಖೆ ಯಶಸ್ವಿಯಾಗಿ ಮಾಡುತ್ತಿದೆ.
ಅಂದು-ಇಂದು-ಎಂದೆಂದಿಗೂ ಪ್ರಸ್ತುತವೆನಿಸುವ ಅಂಚೆಯ ಪರಿ ಕಲ್ಪನೆಯು ಪ್ರಾಚೀನ ಕಾಲದ ಪುರಾಣಗಳಲ್ಲೂ ಸಿಗುತ್ತದೆ. ಹಕ್ಕಿ-ಪಕ್ಷಿಗಳು, ಕಾಳಿದಾಸನ ಕಲ್ಪನೆಯ ಮೇಘದೂತ, ರಾಜದೂತರು, ಕಾಲಾಳುಗಳು ಊರಿಂದೂರಿಗೆ ಸಂಚರಿಸುತ್ತಿದ್ದ ಬಳೆಗಾರರು, ಅಲೆಮಾರಿಗಳು ಸಂದೇಶಗಳ ರವಾನೆಗೆ ಸಹಕರಿಸಿ, ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಿದ ಉಲ್ಲೇಖವು ಕಾವ್ಯ-ಕಥೆಗಳಲ್ಲಿ ಬರುತ್ತದೆ. ವಾರ-ತಿಂಗಳುಗಟ್ಟಲೆ ಸಂದೇಶಕ್ಕೆ ಕಾತರದಿಂದ, ಆದರೆ ಅಷ್ಟೇ ಸಹನೆಯಿಂದ ಕಾಯುತ್ತಿದ್ದ ಅಂದಿನ ಜನರನ್ನು ನಾವಿಂದು ಊಹಿಸಲು ಸಾಧ್ಯವೇ?
ಜನರಿಗೆ ಅನುಕೂಲವಾಗುವ ಜಾಗಗಳಲ್ಲಿ ಅಂಚೆ ಡಬ್ಬಗಳನ್ನಿಟ್ಟು ಕಾಗದ-ಪತ್ರಗಳನ್ನು ಸಂಗ್ರಹಿಸಿ ಅಂಚೆ ಚೀಲಗಳಲ್ಲಿ ಸೂಕ್ತ ಮಾರ್ಗಗಳ ಮೂಲಕ ರವಾನಿಸಿ ಅಂಚೆಯಣ್ಣನ ಮೂಲಕ ಮನೆ-ಮನೆಗೆ ತಲುಪಿಸುವ ಒಂದು ಶಿಸ್ತುಬದ್ಧ ವ್ಯವಸ್ಥೆ ರೂಪುಗೊಂಡು ಇಲಾಖೆಯು ಸ್ಥಾಪನೆಯಾಯಿತು. ನಮ್ಮ ಅಂಚೆಯಣ್ಣ ಕೇವಲ ಪತ್ರಗಳನ್ನು ತಲುಪಿಸುವ ಒಬ್ಬ ಸರಕಾರಿ ನೌಕರನಾಗಿರದೇ ಒಂದು ಊರಿನ, ಗ್ರಾಮದ, ಮನೆಯ, ಒಬ್ಬ ವ್ಯಕ್ತಿಯ ಆತ್ಮೀಯ ಬಂಧು , ಸದಸ್ಯ-ಸ್ನೇಹಿತನಾಗಿ ಬಿಟ್ಟ. ಶಾಂತಿಯ ಹರಿಕಾರನಾಗಿಯೂ ಕೆಲಸ ಮಾಡಿದ ಉದಾಹರಣೆಗಳಿವೆ. ಒಂದು ಹಳ್ಳಿಯ ಪ್ರಮುಖ-ಗಣ್ಯ ವ್ಯಕ್ತಿಗೆ ಮಾತ್ರ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ಲಭಿಸುತ್ತಿತ್ತು. ಅವರ ಮಾತಿಗೆ-ಸಲಹೆಗೆ ಸಮಾಜದಲ್ಲಿ ಮನ್ನಣೆಯಿತ್ತು. “ರೈಲ್-ಮೈಲ್-ಜೈಲ್’ ಯಾವತ್ತೂ ಬಂದ್ ಆಗುವುದಿಲ್ಲ ಎಂಬ ನಾಣ್ಣುಡಿಯು ಚಾಲ್ತಿಗೆ ಬಂತು. ಪತ್ರಗಳು ದೂರದ ನಮ್ಮೂರಿನ ಮಣ್ಣಿನ ವಾಸನೆಯನ್ನೂ ತರುತ್ತವೆ ಎಂಬ ಆದರಕ್ಕೂ ಪಾತ್ರವಾಗಿದ್ದವು. ಗರಿಷ್ಠ ಅಂಕ ಪಡೆದವರು ಅಂಚೆ ಇಲಾಖೆಗೆ ನಿಯುಕ್ತಿಯಾಗುತ್ತಿದ್ದರು.
ಇಂದಿಗೂ ಸೊಸೈಟಿ-ಸಂಘ-ಸಂಸ್ಥೆಗಳ ಕಾರ್ಯ ಕಲಾಪಗಳ ಮಾಹಿತಿ ಪತ್ರ, ಸಾಲದ ರಿಜಿಸ್ಟ್ರಿಗಳು, ಎಲ್‌ಐಸಿ, ಇತರ ಬ್ಯಾಂಕ್‌ಗಳ ಪ್ರೀಮಿಯಂ ನೋಟಿಸ್‌ಗಳು, ಮದುವೆ ಹಾಗೂ ವಿಶೇಷ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು, ದಿನಪತ್ರಿಕೆಗಳು, ಕಂಪೆನಿ ಜಾಹೀರಾತುಗಳು ಅಲ್ಲದೇ ಇತರ ಮುಖ್ಯ ದಾಖಲಾತಿಗಳು ಅಂಚೆಯಣ್ಣನ ಮೂಲಕವೇ ಮನೆ-ಮನೆಗೆ ತಲುಪುತ್ತಿವೆ. ಅಂಚೆ ಇಲಾಖೆಯ ತ್ವರಿತ ಅಂಚೆ ಸೇವೆ ಮತ್ತು ಪಾರ್ಸೆಲ್ ಸೇವೆಗಳು ಬಹಳ ಜನಪ್ರಿಯವಾಗುತ್ತಿವೆ. ಸಮಾಜದಿಂದ ದೂರವಾಗಿ ಯಾವುದೇ ನೆಟ್‌ವರ್ಕ್ ಇಲ್ಲದ ಗಡಿ ಪ್ರದೇಶಗಳಲ್ಲಿ ಅಹರ್ನಿಶಿ ದೇಶ ರಕ್ಷಣ ಕಾರ್ಯದಲ್ಲಿ ನಿರತರಾಗಿರುವ ಯೋಧರಿಗೆ ವೈಯಕ್ತಿಕ ಪತ್ರ ವ್ಯವಹಾರದ ಅನುಕೂಲತೆಯನ್ನು ಇಂದಿಗೂ ಒದಗಿಸುತ್ತಿರುವ ಭಾರತಿಯ ಸೇನಾ ಅಂಚೆ ವಿಭಾಗವು ನಮ್ಮ ಹೆಮ್ಮೆಯಾಗಿದೆ.
ಗ್ರಾಹಕ ಸೇವೆಯನ್ನು ಗಣಕೀಕೃತಗೊಳಿಸಿರುವುದಲ್ಲದೇ ಆಕರ್ಷಕ ಬಡ್ಡಿ ದರಗಳ, ಸರಕಾರದಿಂದ ಸುರಕ್ಷಿತವಾದ ಹಲವಾರು ಉಳಿತಾಯ ಖಾತೆಗಳನ್ನು ಎಲ್ಲ ವಯೋ ಮಾನದ ಗ್ರಾಹಕರಿಗೆ ಒದಗಿಸುತ್ತಿದೆ. ಆಧಾರ್ ತಿದ್ದುಪಡಿ ಸೇವೆ, ವಿದ್ಯುತ್ ಬಿಲ್ ಪಾವತಿ, ಕಾಮನ್ ಸರ್ವಿಸ್ ಸೆಂಟರ್‌ನ ಮೂಲಕ ಹಲವಾರು ಸೇವೆಗಳು, ಆನ್‌ಲೈನ್ ಮೂಲಕ ಅಂಚೆ ಖಾತೆಗಳಿಗೆ ಹಣ ಪಾವತಿ ಐಪಿಪಿಬಿ, ಬೇರೆ ಬ್ಯಾಂಕ್ ಖಾತೆಗಳಿಂದ ಮೊಬೈಲ್ ಬ್ಯಾಂಕ್‌ನಿಂದಲೇ ಹಣ ಸೇವೆ ನೀಡಲಾಗುತ್ತಿದೆ. ಅಂಚೆಚೀಟಿ ಮತ್ತು ಅಂಚೆ ವಿಶೇಷ ಲಕೋಟೆಗಳಿಗೆ ಇಂದಿಗೂ ಬಹಳ ಬೆಲೆ-ಪ್ರಾಮುಖ್ಯ ಇದೆ. ದೇಶದ ಸಂಸ್ಕೃತಿಯ ವಿವಿಧ ಆಯಾಮಗಳ ಪರಿಚಯ-ಪ್ರಚಾರ ಮತ್ತು ನೆನಪಿಗಾಗಿ ವರ್ಣರಂಜಿತ ಅಂಚೆಚೀಟಿಗಳನ್ನು ಅಂಚೆ ಇಲಾಖೆಯು ಕಾಲ-ಕಾಲಕ್ಕೆ ಬಿಡುಗಡೆಗೊಳಿಸುತ್ತಿದೆ.
ಸರಕಾರಿ ಯೋಜನೆಗಳು
ಅಂಚೆ ಇಲಾಖೆಯು ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ಡಿ-ಕ್ಯೂಬ್ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಅಂಚೆ ಇಲಾಖೆಯು ಅಟಲ್ ಬಿಹಾರಿ ವಾಜಪೇಯಿ ಪಿಂಚಣಿ ಯೋಜನೆ, ಅಂಚೆ ಉಳಿತಾಯ ಖಾತೆ ಹೊಂದಿರುವವರಿಗೆ ಅಪಘಾತ ವಿಮೆ ಯೋಜನೆ ಯನ್ನು ನೀಡುತ್ತಿದೆ. ಪಾಸ್‌ಪೋರ್ಟ್ ಸೇವೆಯನ್ನು ಕೂಡ ಅಂಚೆ ಕಚೇರಿಯ ಮೂಲಕ ಪಡೆಯ ಬಹುದು. 160 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಅಂಚೆ ಇಲಾಖೆಯು ಅಂದಿಗೂ ಇಂದಿಗೂ ಜನಸ್ನೇಹಿಯಾಗಿ ಮುಂದುವರಿದಿದೆ.
-ನವೀನ್ ಚಂದರ್
ಅಂಚೆ ಅಧೀಕ್ಷಕ,
ಉಡುಪಿ ಪ್ರಧಾನ ಅಂಚೆ ಕಚೇರಿ.