Advertisement

ಜಾಗತಿಕ ನ್ಯುಮೋನಿಯಾ ದಿನ: ನವೆಂಬರ್‌ 12

06:00 AM Nov 12, 2017 | |

ಪರಿಚಯ
ಜಾಗತಿಕವಾಗಿ, ಐದು ವರ್ಷದೊಳಗಣ ಮಕ್ಕಳ ಪಾಲಿನ ನಂಬರ್‌ ವನ್‌ ಪ್ರಾಣಾಂತಿಕ ಕಾಯಿಲೆ ನ್ಯುಮೋನಿಯಾ ಆಗಿದೆ. 2015ರಲ್ಲಿ ಈ ಕಾಯಿಲೆಯು 9,20,000 ಮಕ್ಕಳನ್ನು ಬಲಿಪಡೆದಿದೆ; ಇದು ಆ ವರ್ಷ ಸಂಭವಿಸಿದ ಐದು ವರ್ಷದೊಳಗಣ ಮಕ್ಕಳ ಒಟ್ಟಾರೆ ಸಾವುಗಳ ಶೇ.16ರಷ್ಟು. ಪ್ರತೀ  ದಿನ ಜಾಗತಿಕವಾಗಿ 2,500 ಮಕ್ಕಳು ನ್ಯುಮೋನಿಯಾಕ್ಕೆ ತುತ್ತಾಗಿ ಮರಣಿಸುತ್ತಾರೆ. 2015ರಲ್ಲಿ ಝೀಕಾ, ಎಬೋಲಾ, ಮಲೇರಿಯಾ, ಕ್ಷಯ ಮತ್ತು ಏಡ್ಸ್‌/ಎಚ್‌ಐವಿಗಳು  ಒಟ್ಟಾಗಿ ಬಲಿ ಪಡೆದ ಮಕ್ಕಳ ಸಂಖ್ಯೆಗಿಂತಲೂ ನ್ಯುಮೋನಿಯಾ ಒಂದರಿಂದಲೇ ಸಾವಿಗೀಡಾದ ಮಕ್ಕಳ ಸಂಖ್ಯೆ ಅಧಿಕ. ಕಳೆದ 30 ವರ್ಷಗಳ ಅವಧಿಯಲ್ಲಿ, ಲಭ್ಯವಿರುವ ಸರಳ ಜೀವನಿರೋಧಕ ಚಿಕಿತ್ಸೆ ಮತ್ತು ಆಮ್ಲಜನಕ ಚಿಕಿತ್ಸೆ ಹಾಗೂ ಇತ್ತೀಚೆಗಿನ ವರ್ಷಗಳಲ್ಲಿ ಲಭ್ಯವಾಗಿರುವ 

Advertisement

ಲಸಿಕೆಗಳಿಂದಾಗಿ ನ್ಯುಮೋನಿಯಾಕ್ಕೆ ತುತ್ತಾಗಿ ಬಳಲುವ ಕೋಟ್ಯಂತರ ಮಕ್ಕಳನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿದೆ. 

ನ್ಯುಮೋನಿಯಾ ಅಂದರೇನು?
ನ್ಯುಮೋನಿಯಾ ಶ್ವಾಸಕೋಶಗಳ ಒಂದು ಉರಿಯೂತವಾಗಿದ್ದು, ಇದು ಆಮ್ಲಜನಕ ಸೇವಿಸುವ ಪ್ರಮಾಣಕ್ಕೆ ತಡೆಯೊಡ್ಡುತ್ತದೆ ಹಾಗೂ ಉಸಿರಾಟವನ್ನು ಕಷ್ಟಕರ ಮತ್ತು ನೋವುದಾಯಕವನ್ನಾಗಿಸುತ್ತದೆ. ಸೋಂಕುಕಾರಕಗಳಿಂದ ಸಾಮಾನ್ಯವಾಗಿ ಇದು ಉಂಟಾಗುತ್ತದೆ ಹಾಗೂ ಕೆಮ್ಮು ಮತ್ತು ಸೀನುಗಳಿಂದ ಪ್ರಸಾರವಾಗುತ್ತದೆ.

ಯಾವುದರಿಂದ ನ್ಯುಮೋನಿಯಾ ಉಂಟಾಗುತ್ತದೆ? 
ವೈರಸ್‌ಗಳು, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಹಿತ ಹಲವಾರು ಸೋಂಕು ಕಾರಕಗಳಿಂದ ನ್ಯುಮೋನಿಯಾ ಉಂಟಾಗುತ್ತದೆ.  ಇವುಗಳಲ್ಲಿ ಅತಿ ಸಾಮಾನ್ಯವಾದುದು ಮಕ್ಕಳಲ್ಲಿ ನ್ಯುಮೋನಿಯಾವನ್ನು ಉಂಟು ಮಾಡುವ ಸ್ಟ್ರೆಪ್ಟೊಕಾಕಸ್‌ ನ್ಯುಮೋನಿಯಾ ಎಂಬ ಬ್ಯಾಕ್ಟೀರಿಯ.

ಹರಡುವ ವಿಧಾನ
ಕೆಮ್ಮು ಅಥವಾ ಸೀನುವಿಕೆಯಿಂದ ಹೊರಬೀಳುವ ಹನಿಗಳಿಂದ ಗಾಳಿಯ ಮೂಲಕ ನ್ಯುಮೋನಿಯ ಪ್ರಸಾರವಾಗುತ್ತದೆ. 

Advertisement

ಮಕ್ಕಳಲ್ಲಿ ಚಿಹ್ನೆಗಳು
ನ್ಯುಮೋನಿಯಾಕ್ಕೆ ತುತ್ತಾಗಿರುವ ಮಕ್ಕಳು ಜ್ವರ, ಕೆಮ್ಮು ಅಥವಾ ಉಸಿರಾಡಲು ಬವಣೆ, ವೇಗವಾದ ಉಸಿರಾಟ ಅಥವಾ ಶ್ವಾಸ ತೆಗೆದುಕೊಳ್ಳುವ ಸಂದರ್ಭದಲ್ಲಿ ಎದೆಗೂಡು ತಗ್ಗುವ ಅಥವಾ ಸಂಕುಚನಗೊಳ್ಳುವಂತಹ ಲಕ್ಷಣಗಳನ್ನು ಹೊಂದಿರುತ್ತಾರೆ. ಕೆಲವರಲ್ಲಿ  ಉಬ್ಬಸದಂತಹ  ಲಕ್ಷಣಗಳು ಕಾಣಬಹುದು.  ನ್ಯುಮೋನಿಯಾದಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಕ್ಕಳು ಆಹಾರ ಸೇವಿಸಲು ಅಥವಾ ಕುಡಿಯಲು ಅಸಮರ್ಥರಾಗಬಹುದು, ಪ್ರಜ್ಞೆ ಕಳೆದುಕೊಳ್ಳಬಹುದು, ದೇಹದ ಉಷ್ಣತೆ ಕುಸಿಯಬಹುದು ಮತ್ತು ಸೆಳವಿಗೆ ಒಳಗಾಗಬಹುದು.

ನ್ಯುಮೋನಿಯಾ ಪತ್ತೆ 
ಮಾಡುವುದು ಹೇಗೆ?

ಎದೆಯ ಎಕ್ಸ್‌ರೇ, ರಕ್ತ ಪರೀಕ್ಷೆ ಮತ್ತು ಕಫ‌ ಪರೀಕ್ಷೆಗಳಿಂದ ನ್ಯುಮೋನಿಯಾ ಪತ್ತೆ ಮಾಡಬಹುದು.

ಮಕ್ಕಳಲ್ಲಿ ನ್ಯುಮೋನಿಯಾ ನಿರ್ವಹಣೆ
ನ್ಯುಮೋನಿಯಾಕ್ಕೆ ಜೀವನಿರೋಧಕ (ಆ್ಯಂಟಿ ಬಯಾಟಿಕ್‌) ಔಷಧಿಗಳಿಂದ ಚಿಕಿತ್ಸೆ ನೀಡಬೇಕು. ತೀವ್ರವಾಗಿ ಉಲ್ಬಣಗೊಂಡ ನ್ಯುಮೋನಿಯಾ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲುಗೊಳ್ಳುವುದು ಅಗತ್ಯವಾಗುತ್ತದೆ, ಅಲ್ಲಿ ಆಮ್ಲಜನಕ ಪೂರೈಕೆ ಚಿಕಿತ್ಸೆ ಅಥವಾ ವೆಂಟಿಲೇಟರ್‌ ನೆರವು ಆವಶ್ಯಕವಾಗಬಹುದು. 

2017ರ ಜಾಗತಿಕ ನ್ಯುಮೋನಿಯಾ ದಿನದ ಘೋಷವಾಕ್ಯವೇನು?
ಈ ವರ್ಷದ ಘೋಷವಾಕ್ಯ “”ನ್ಯುಮೋನಿಯಾ ತಡೆಯಿರಿ: ಮಕ್ಕಳ ಆರೋಗ್ಯದ ಕಡೆ ಗಮನ ಕೊಡಿ”- ಮಕ್ಕಳ ಆರೋಗ್ಯವನ್ನು ಪ್ರವರ್ಧಿಸಲು ನಾವು ನ್ಯುಮೋನಿಯಾ ತಡೆ, ಚಿಕಿತ್ಸೆ ಮತ್ತು ಹೊಸ ಪರಿವರ್ತನೆಗಳತ್ತ ಗಮನ ಹರಿಸಬೇಕು. 

ಮಕ್ಕಳಲ್ಲಿ ಅಪಾಯಾಂಶಗಳು
– ಎದೆಹಾಲು ಪಡೆಯದ ಮಕ್ಕಳು
– ದುರ್ಬಲ ರೋಗ ನಿರೋಧಕ ವ್ಯವಸ್ಥೆ ಹೊಂದಿರುವ ಅಪೌಷ್ಟಿಕತೆ ಅಥವಾ ಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಮಕ್ಕಳು. 
– ಲಕ್ಷಣ ಸಹಿತ ಎಚ್‌ಐವಿ ಏಡ್ಸ್‌ ಸೋಂಕು ಅಥವಾ ದಡಾರದಂತಹ ಇತರ ಅನಾರೋಗ್ಯ ಹೊಂದಿರುವ ಮಕ್ಕಳು
– ಕಟ್ಟಿಗೆ ಅಥವಾ ಬೆರಣಿಯಂತಹ ಉರುವಲುಗಳಿಂದ ಅಡುಗೆ ಮಾಡುವಾಗ ಉತ್ಪತ್ತಿಯಾದ ಹೊಗೆಯಿಂದ ಉಂಟಾಗುವ ಒಳಾಂಗಣ ವಾಯುಮಾಲಿನ್ಯಕ್ಕೆ ಒಡ್ಡಿಕೊಂಡ ಮಕ್ಕಳು.
– ಜನರಿಂದ ಕಿಕ್ಕಿರಿದ ಮನೆಗಳಲ್ಲಿ ವಾಸಿಸುವ ಮಕ್ಕಳು.
– ಹೆತ್ತವರು ಮಾಡುವ ಧೂಮಪಾನದ ಹೊಗೆಗೆ ಒಡ್ಡಿಕೊಂಡ ಮಕ್ಕಳು.

-ಮುಂದಿನ  ವಾರಕ್ಕೆ  

– ಡಾ| ಸ್ನೇಹಾ ದೀಪಕ್‌ ಮಲ್ಯ
ಅಸೋಸಿಯೇಟ್‌ ಪ್ರೊಫೆಸರ್‌,
ಸಮುದಾಯ ಆರೋಗ್ಯ ವಿಭಾಗ,

ಡಾ| ಕವಿತಾ ಸರವು
ಪ್ರೊಫೆಸರ್‌ ಮತ್ತು ಯೂನಿಟ್‌ ಚೀಫ್
ಮೆಡಿಸಿನ್‌ ವಿಭಾಗ,
ಕೆ.ಎಂ.ಸಿ., ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next