ಗ್ವಾಟೇಮಾಲಾ ಸಿಟಿ : ನವವಿವಾಹಿತ ಬಿಲ್ಗಾರಿಕಾ ಜೋಡಿ ದೀಪಿಕಾ ಕುಮಾರಿ-ಅತನು ದಾಸ್ ಗ್ವಾಟೇಮಾಲಾ ವರ್ಲ್ಡ್ ಕಪ್ ಆರ್ಚರಿ ಸ್ಪರ್ಧೆಯ ರೀಕರ್ವ್ ಫೈನಲ್‌ನಲ್ಲಿ ವೈಯಕ್ತಿಕ ಬಂಗಾರ ಗೆದ್ದು ಸಂಭ್ರಮಿಸಿದ್ದಾರೆ. ಇದರೊಂದಿಗೆ ಕೂಟದ ಮೊದಲ ಹಂತದಲ್ಲಿ ಭಾರತ 3 ಚಿನ್ನ, ಒಂದು ಕಂಚಿನ ಪದಕ ಜಯಿಸಿದಂತಾಯಿತು. ಈ ಸಾಧನೆಯಿಂದ ಇವರಿಬ್ಬರೂ ಆರ್ಚರಿ ವರ್ಲ್ಡ್ ಕಪ್ ಫೈನಲ್‌ಗೆ ಅರ್ಹತೆ ಪಡೆದರು.
ಇದು ಮಾಜಿ ನಂ.1 ದೀಪಿಕಾ ಕುಮಾರಿ ಅವರಿಗೆ ವೃತ್ತಿಬದುಕಿನಲ್ಲಿ ಒಲಿದ 3ನೇ ಸ್ವರ್ಣವಾದರೆ, ಪತಿ ಅತನು ದಾಸ್ ಗೆದ್ದ ಮೊದಲ ಚಿನ್ನದ ಪದಕ. ಪುರುಷರ ರೀಕರ್ವ್ ವಿಭಾಗದಲ್ಲಿ 2009ರ ಬಳಿಕ ಭಾರತ ಸಾಧಿಸಿದ ಅತ್ಯುತ್ತಮ ಸಾಧನೆ ಇದಾಗಿದೆ. ಅಂದು ಜಯಂತ್ ತಾಲೂಕಾರ್ ಸ್ವರ್ಣ ಸಂಭ್ರಮ ಆಚರಿಸಿದ್ದರು.
ಇದನ್ನೂ ಓದಿ :ವಾಟ್ಸ್‌ಆ್ಯಪ್ ಗುಂಪಿನ ಸದಸ್ಯರ ಪೋಸ್ಟ್‌ಗಳಿಗೆ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್
ಜತೆಯಾಗಿ ಅಭ್ಯಾಸ
“ನಾವು ಒಟ್ಟಿಗೇ ಪ್ರಯಾಣಿಸಿ, ಒಟ್ಟಿಗೇ ಅಭ್ಯಾಸ ನಡೆಸಿ, ಒಟ್ಟಿಗೇ ಸ್ಪರ್ಧಿಸಿ, ಒಟ್ಟಿಗೇ ಗೆದ್ದೆವು’ ಎಂಬುದಾಗಿ ಅತನು ದಾಸ್ ಪ್ರತಿಕ್ರಿಯಿಸಿದ್ದಾರೆ.
ಈ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದಿತ್ತ ಹೆಗ್ಗಳಿಕೆ ವನಿತಾ ತಂಡದ್ದಾಗಿದೆ. ಇಲ್ಲಿನ ಗುರಿಗಾರೆಂದರೆ ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಕೋಮಲಿಕಾ ಬಾರಿ. ಆದರೆ ಮಿಶ್ರ ವಿಭಾಗದಲ್ಲಿ ಅತನು ದಾಸ್-ಅಂಕಿತಾ ಭಕತ್ ಕಂಚಿಗೆ ಸಮಾಧಾನಪಟ್ಟರು.