Advertisement

World Mother’s Day 2024: ಯುಗಯುಗದಲ್ಲೂ ತಾಯಿ ದೇವತೆ…

03:27 PM May 11, 2024 | Team Udayavani |

ಅಮೆರಿಕವೂ ಸೇರಿ ಹಲವಾರು ದೇಶಗಳಲ್ಲಿ ಈ ವಿಶ್ವ ಅಮ್ಮಂದಿರ ದಿನವನ್ನು ರವಿವಾರದಂದು ಆಚರಿಸುತ್ತಾರೆ. ಅದರಲ್ಲೂ ಮೇ ತಿಂಗಳ ಎರಡನೆಯ ರವಿವಾರದಂದೇ ಆಚರಿಸುತ್ತಾರೆ. ಈ ವಿಷಯದ ಸುತ್ತಲೂ ಒಂದಷ್ಟು ಮಾತುಗಳನ್ನು ಭಿನ್ನವಾಗಿ ಆಡುವ ಏನಂತೀರಾ ? ದೇಸಿಸ್ವರದ ಇಂದಿನ ಈ ಕಂತಿನ ಸಂಖ್ಯೆ 122. ಸಂಖ್ಯೆಗಳನ್ನು ಕೂಡಿಸಿದರೆ ಐದು. ಮೇ ತಿಂಗಳ ಸಂಖ್ಯೆಯೂ ಐದು. ಬಲು ವಿಶೇಷ ಅಲ್ಲವೇ? ಈ ಬಾರಿಯ ಅಮ್ಮಂದಿರ ದಿನವು ಮೇ ತಿಂಗಳ ಹನ್ನೆರಡನೆಯ ತಾರೀಖು. ಅರ್ಥಾತ್‌ 5 ಮತ್ತು 12. ಈ ಸಂಖ್ಯೆಗಳನ್ನು ಅಂದರೆ 5 ಮತ್ತು 12ನ್ನು ಕೂಡಿಸಿದರೆ 17. ಇವನ್ನೂ ಕೂಡಿಸಿದರೆ 8. ಇದರಂತೆಯೇ ಈ ವರ್ಷ 2024. ಸಂಖ್ಯೆಗಳನ್ನು ಒಗ್ಗೂಡಿಸಿದರೆ 8. ನೆಟ್ಟಗೆ ನಿಂತಿರುವ ಅಡ್ಡ ಮಲಗಿಸಿದರೆ ಅಂದರೆ 90 ಡಿಗ್ರಿ ತಿರುಗಿಸಿದರೆ ಅನಂತ ಅಥವಾ Infinity ಸಂಕೇತ.

Advertisement

ತಾಯಿ ಎಂದರೆ ಅನಂತ. ಅತೀ ವಿಶೇಷವಾಗಿದೆ ಅಲ್ಲವೇ? ಸದಾ ಸರ್ವದಾ ಅಥವಾ ಪ್ರತೀ ವರ್ಷವೂ ಕೇಳುವಂಥಾ ಪ್ರಶ್ನೆ ಎಂದರೆ ಅಮ್ಮನ ಬಗೆಗೂ ಒಂದು ದಿನವೇ? ಇದೆಂಥಾ ವಿಪರ್ಯಾಸ? ಇತ್ಯಾದಿ. ನನ್ನ ಅನಿಸಿಕೆ ಇಷ್ಟೇ, ಅಮ್ಮನನ್ನು ಸಂಭ್ರಮಿಸಲು ಕನಿಷ್ಠ ಒಂದು ದಿನವೂ ಬೇಡವೇ? ದಿನವೂ ಹಬ್ಬ ಆಚರಿಸಿದರೆ ಅದು ಹಬ್ಬ ಎನಿಸುವುದಿಲ್ಲ. ನಿತ್ಯವೂ ಗಣಪನ ಶ್ಲೋಕಾದಿಗಳು ನಡೆದರೂ ಗಣೇಶನ ಹಬ್ಬ ಎಂದೇ ಒಂದು ದಿನವಿದೆ. ಇದರಂತೆಯೇ ಅಮ್ಮನ ದಿನ, ಅಮ್ಮಂದಿರ ದಿನ ಎಂಬುದೂ ಸಹ. ದಿನವೂ ಅಮ್ಮನನ್ನು ನೆನೆಸಿ ಸಂಭ್ರಮಿಸಿ, ಬೇಡಾ ಎಂದವರಾರು? ಇದಕ್ಕೂ ಒಂದು ದಿನವೇ ಎಂಬ ಕೊಂಕು ಬೇಡಾ ಅಷ್ಟೇ.

ಅಮ್ಮ ಎಂದರೆ ಹೆತ್ತಮ್ಮನೇ ಆಗಬೇಕಿಲ್ಲ. ಚಿಕ್ಕಮ್ಮನೂ ಅಮ್ಮನೇ, ದೊಡ್ಡಮ್ಮನೂ ಅಮ್ಮನೇ. ಹಿರಿಯಕ್ಕಳೂ ಅಮ್ಮನೇ, ತಂಗಿಯೂ ಅಮ್ಮನೇ. ನಿಮ್ಮ ಹೆಂಡತಿಯೂ ನಿಮ್ಮದೇ ಮಕ್ಕಳ ಅಮ್ಮ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಅಮ್ಮ ಎಂದರೆ ಪದವಿ. ಇಂದ್ರ ಎಂಬುದು ಒಂದು ಪದವಿ ಎಂಬಂತೆ ಅಮ್ಮ ಎಂಬುದೂ ಒಂದು ಸ್ಥಾನ. ಆ ಸ್ಥಾನ ತುಂಬುವವರು ಅರ್ಹ ವ್ಯಕ್ತಿತ್ವ. ಒಬ್ಬ ಅಪ್ಪನೂ ಅಮ್ಮನಾಗಬಲ್ಲ ಎಂಬುದು ವಿಶೇಷ.

ಒಂದು ಜೀವಿಯನ್ನು ತನ್ನ ಒಡಲಲ್ಲಿ ಇರಿಸಿಕೊಂಡು, ಅದನ್ನು ಬೆಳೆಸಿಕೊಂಡು, ಹೊತ್ತು ತಿರುಗಿಕೊಂಡು, ಸಾಧ್ಯವಾದಷ್ಟೂ ಮಟ್ಟಿಗೆ ತನ್ನ ನಿತ್ಯ ಕೆಲಸಗಳನ್ನು ಮಾಡಿಕೊಂಡೇ ಸಾಗುವ ಒಬ್ಬ ಮಹಾನ್‌ ಜೀವಿ ಎಂದರೆ ತಾಯಿ. ಈ ತಾಯಿ ಯಾವುದೇ ವೃತ್ತಿಯಲ್ಲಿದ್ದರೂ ಸಾಮಾನ್ಯವಾಗಿ ಈ ಒಂಬತ್ತು ತಿಂಗಳ ಯಾನ ಇದ್ದದ್ದೇ. ಬಡ ತಾಯಿ ಎಂದರೆ ಒಂಬತ್ತು ತಿಂಗಳಿಗೂ ಕಡಿಮೆ, ಸಿರಿವಂತ ತಾಯಿ ಎಂದರೆ ಒಂಬತ್ತು, ಅತೀ ಸಿರಿವಂತರು ವರ್ಷದ ತನಕ ಎಳೆಯುವ ಸೌಭಾಗ್ಯ ಅಂತೇನಿಲ್ಲ. ಆದರೂ ಅಡ್ಜಸ್ಟ್‌ ಮಾಡಿಕೊಳ್ಳಿ. ಗಾಂಧಾರ ರಾಜ್ಯದ ಕುವರಿ, ಕುರುವಂಶದ ರಾಣಿ, ಧೃತರಾಷ್ಟ್ರನ ರಾಣಿ ಎಂಬೆಲ್ಲ ಪಟ್ಟ ಹೊತ್ತ ಗಾಂಧಾರಿ ಎರಡು ವರ್ಷಗಳ ಗರ್ಭವತಿ ಆಗಿದ್ದು ಬೇರೆ ವಿಷಯ.

Advertisement

ಇರಲಿ ಬಿಡಿ, ಈ ವಿಷಯವನ್ನೂ ಸ್ಪಷ್ಟಗೊಳಿಸೋಣ. ಒಂದು ಅಥವಾ ಎರಡು ಹೊತ್ತವರು ಹೆಚ್ಚೆಂದರೆ ಒಂಬತ್ತು ಅಥವಾ ಹತ್ತು ತಿಂಗಳು ಹೊರಬಹುದು. ನೂರು ಹೆರುವವರು ಎರಡು ವರ್ಷ ಹೊರಬೇಕಾಗಬಹುದು.

ಭಾರತದಲ್ಲಿ ಕೂಡಾ ಅಮ್ಮಂದಿರ ದಿನ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಇದೊಂದು ಪಾಶ್ಚಾತ್ಯ ದೇಶಗಳ ಅನುಕರಣೆ ಅಥವಾ ಅಂಧಾನುಕರಣೆ ಎಂದೆಲ್ಲ ಹೇಳುವುದು ಸರ್ವೇಸಾಮಾನ್ಯ. ಇರಬಹುದು ಎಂಬುದು ನಿಜ ಆದರೆ ಸುಮ್ಮನೆ ಆಲೋಚನೆ ಮಾಡಿದಾಗ ಈ ಅಮ್ಮಂದಿರ ದಿನ ತ್ರೇತಾಯುಗದಲ್ಲೋ ಅಥವಾ ದ್ವಾಪರಯುಗದಲ್ಲೋ ಶುರುವಾಗಿರಬಹುದು ಎಂಬ ಭಯಂಕರ ಆಲೋಚನೆ ಬಂದಿತು.

ರಾಮ ಬರುವನೆಂದು ಕಾದಿದ್ದವರಲ್ಲಿ ಬಹುಶ: ಮೊದಲಿಗಳು ಅಹಲ್ಯೆ ಅನಂತರದವಳು ಶಬರಿ. ಇಬ್ಬರೂ ರಾಮನನ್ನು ಕಂಡ ಬಗೆ ಏನು? ದೈವವನ್ನಾಗಿ ಕಂಡಿದ್ದರೆ ಅದು ಬೇರೆ ವಿಷಯ. ಮಗನನ್ನಾಗಿ ಕಂಡಿದ್ದರೆ ಅದು ಮಗದೊಂದು ವಿಷಯ. ಮೋಕ್ಷವನ್ನು ನೀಡಲು ಬಂದವ ಶ್ರೀರಾಮ ಎಂದರೂ ಅವನು ಅವರಿಬ್ಬರ ಬಳಿ ಬಂದದ್ದೇ ಒಬ್ಬ ತಾಯಿಯಿಂದ. ಭರತನ ಮಾತೆಯಾದ ಕೈಕೇಯಿಯು ದಶರಥನಲ್ಲಿ ವರ ಬೇಡಿದ್ದರಿಂದ ತಾನೇ ರಾಮನು ಅರಣ್ಯದ ಪಾಲಾಗುತ್ತಾನೆ. ಈ ಕೃತ್ಯದಿಂದ ತೊಂದರೆಯಾಯಿತೇ ಅಥವಾ ರಾವಣನ ವಧೆಗೆ ಕಾರಣವಾಯಿತೆ? ಶಾಪಗ್ರಸ್ತರಾದ ಕುಂಭಕರ್ಣ ಮತ್ತು ರಾವಣರು ವೈಕುಂಠಕ್ಕೆ ಹೋಗಬೇಕು ಎಂದರೆ ಅದಕ್ಕೆ ಕಾರಣಳಾದಳು ಕೈಕೇಯಿ. ಆ ತಾಯಿಯ ಮಾತನ್ನು ಕೇಳಿಯೇ ಅರಣ್ಯಕ್ಕೆ ಹೋಗಿದ್ದು. ನಾಲ್ವರ ಮೋಕ್ಷಕ್ಕೂ ಕಾರಣಳಾದಳು ಒಬ್ಬ ತಾಯಿ ಎಂಬುದೇ ಅಮ್ಮಂದಿರ ದಿನ ಎಂದೇಕೆ ಆಗಬಾರದು? ಲೋಕಕಲ್ಯಾಣಕ್ಕೆ ಕಾರಣಳಾದವಳ ಮಾತನ್ನು ಅಲ್ಲಗೆಳೆಯದ ಮತ್ತಿಬ್ಬರ ಮಾತೆಯರ ಉತ್ತಮ ನಡೆಯನ್ನೇ ಅಮ್ಮಂದಿರ ದಿನ ಎಂದೇಕೆ ಹೇಳಬಾರದು?

ರಾಮನು ತಾಯಿಯ ಅರ್ಥಾತ್‌ ಚಿಕ್ಕಮ್ಮನ ನಡೆಯನ್ನು ಗೌರವಿಸಿ ಅರಣ್ಯಕ್ಕೆ ಹೋದನೇ ? ಅಥವಾ ತಂದೆಯ ಮಾತನ್ನು ಗೌರವಿಸಿ ವನವಾಸಿಯಾದನೇ? ನಾವು ಕೇಳಿದ ಕಥೆಯಂತೆ ತಂದೆಯ ಮಾತನ್ನು ಕೇಳಿ ಅರಣ್ಯಕ್ಕೆ ಹೋಗಿದ್ದು. ತಂದೆಯನ್ನು ಸಂಭ್ರಮಿಸಿದ ಈ ದಿನ Father’s Day y ಆರಂಭ ಎಂದಾಯ್ತು. ಇಲ್ಲ ಬಿಡಿ, ಈ ಮಾತನ್ನು ಸಮರ್ಥಿಸಿದರೆ ಪರಶುರಾಮನೂ ತಂದೆಯ ಮಾತನ್ನೇ ಕೇಳಿದ್ದು. ಅಂದೂ ಸಂಭ್ರಮಿಸಿದ್ದು ತಂದೆಯನ್ನೇ ಎಂದಾದರೆ ಕೃತಯುಗದಲ್ಲೇ Father’s Day ಆರಂಭ ಎಂದಾಯ್ತು. ಇನ್ನೂ ಒಂದೆರಡು ಹೆಜ್ಜೆಗಳು ಹಿಂದೆ ಹೋದರೆ ಮತ್ಸ್ಯಾವತಾರವೂ ಒಂದರ್ಥದಲ್ಲಿ ತಂದೆ-ಮಗನ ಸಂಬಂಧವೇ ಆಗಿತ್ತು. ಮನುವಿನ ಕೈಗೆ ಸಿಕ್ಕಿದ್ದು ಮರಿ ಮೀನು. ಒಂದೊಂದೂ ಪಾತ್ರೆಗೆ ಹಾಕುತ್ತಾ ಹೋದಂತೆ ನಾರಾಯಣ ಬೆಳೆಯುತ್ತಾ ಸಾಗಿದ್ದ. ತನ್ನದೇ ಮಗುವಿನಂತೆ ಆರೈಕೆ ಮಾಡುತ್ತಾ ಸಾಗಿದ್ದ, ಸಾಕಿದ್ದ ಮನು, ಕೊನೆಯಲ್ಲಿ ಮಹಾಸಮುದ್ರಕ್ಕೆ ಸೇರಿಸಿದ್ದು ಮಹಾನ್‌ ಕಥೆಗೆ ಆರಂಭ.

ಅಮ್ಮನನ್ನು ಸಂಭ್ರಮಿಸುವುದೇ ಅಮ್ಮಂದಿರ ದಿನ ಎಂಬುದನ್ನು ದ್ವಾಪರದಲ್ಲೂ ನೋಡಬಹುದು. ಮೊದಲಲ್ಲೇ ಹೇಳಿದಂತೆ ಗಾಂಧಾರಿ ಮಹಾನ್‌ ಮಾತೆ. ಕೌರವರು ತಾಯಿಗಾಗಿ ವಿಜೃಂಭಣೆಯಿಂದ ಗಜಗೌರಿ ವ್ರತ ಮಾಡುತ್ತಾರೆ. ಕೌರವರಾಗಿ ದುರ್ಯೋಧನಾದಿಗಳು ಪಾಂಡವರನ್ನು ಕರೆಯಲಿಲ್ಲ. ತಾವೇ ದೊಡ್ಡವರು, ರಾಜವಂಶದವರು ಎಂಬ ಅಹಂಭಾವ. ಈರ್ಷೆಯಿಂದ ಗಾಂಧಾರಿಯೂ ಕುಂತಿಗೆ ಆಹ್ವಾನ ನೀಡಲಿಲ್ಲ. ತನ್ನ ಮಕ್ಕಳು ಏನೇ ಮಾಡಿದರೂ ಬಡಮಕ್ಕಳಾದ ಪಾಂಡವರಿಗೇ ಎಲ್ಲರೂ ಜೈಕಾರ ಹಾಕುತ್ತಾರೆ ಎಂಬ ಈರ್ಷೆ. ಕುಂತಿ ಕಾದಿದ್ದೇ ಬಂತು, ಆದರೆ “ಬನ್ನಿ, ಪಾಲ್ಗೊಳ್ಳಿ’ ಎಂಬ ನುಡಿಗಳು ಅರಮನೆಯಿಂದ ಹೊರಬರಲಿಲ್ಲ. ಇದೆಲ್ಲದರ ನಡುವೆ ಅಮ್ಮನನ್ನು ಸಂಭ್ರಮಿಸಿದ್ದರು ಕೌರವರು.

ಅಮ್ಮನ ಖೇದ ಪಾಂಡವರಿಗೆ ಅರಿವಾಯ್ತು. ಮೂವರು ಪಾಂಡವರು ತಾವೂ ಕುಂತಿಗಾಗಿ ಗಜಗೌರಿ ವ್ರತ ಮಾಡಬೇಕು ಎಂದುಕೊಂಡರೂ ಭೀಮಾರ್ಜುನರು ಸಮ್ಮತಿಸುವುದರೊಂದಿಗೆ ಅತೀ ದೊಡ್ಡ ಹೆಜ್ಜೆ ಇರಿಸಲು ಮುಂದಾದರೋ. ನಾರದರ ಸಲಹೆಯಂತೆ ಸೀದಾ ದೇವಲೋಕಕ್ಕೆ ಹೋದರು. ಅಲ್ಲಿ ದೇವೇಂದ್ರನೊಂದಿಗೆ ವ್ಯವಹರಿಸಿ ಗಜಶ್ರೇಷ್ಠನನ್ನೇ ಕೇಳಿದರು. ಆ ಶ್ರೇಷ್ಠ ಗಜವೇ ಐರಾವತ. ಅರ್ಜುನನು ಬಾಣಗಳಿಂದ ದೇವಲೋಕದಿಂದ ಭುವಿಗೆ ಮೆಟ್ಟಿಲನ್ನೇ ನಿರ್ಮಿಸಿದನು. ಐರಾವತವು ಮೊದಲ ಹೆಜ್ಜೆ ಇರಿಸಿದ ಕೂಡಲೇ ಇಡೀ ಮೆಟ್ಟಿಲುಗಳ ರಚನೆಯೇ ಮುರಿದುಬಿದ್ದವು.

ಜಗದೋದ್ಧಾರಕ ಶ್ರೀಕೃಷ್ಣನ ದಯೆಯಿಂದ ಐರಾವತವು ಧರೆಗೂ ಬಂತು. ಗಜಗೌರಿ ವ್ರತವೂ ಸಾಂಗೋಪಾಂಗವಾಗಿ ನಡೆಯಿತು. ತಾಯಿಯ ಖುಷಿಗಾಗಿ ಐರಾವತವನ್ನೇ ಧರೆಗೆ ತಂದು ಸಂಭ್ರಮಿಸಿದ ಈ ದಿನವೂ ವಿಶ್ವ ಅಮ್ಮಂದಿರ ದಿನದ ಶುಭಾರಂಭ ಎನ್ನಬಹುದು ಅಲ್ಲವೇ?

ಇಷ್ಟೆಲ್ಲ ಹೇಳಿದ್ದು ಯಾಕೆ ಎಂದಿರಾ ? ಅಮ್ಮ ಎಂದರೆ ಅಮ್ಮ. ಕಲಿಯುಗವೋ, ದ್ವಾಪರವೋ ಅಥವಾ ತ್ರೇತಾಯುಗವೋ ಅದರ ಮೂಲ ಬಲ್ಲವರಾರು? ಯಾವುದೋ ದೇಶದಲ್ಲಿ ಆರಂಭವಾಯ್ತು, ಅದನ್ನು ಮತ್ತೂಬ್ಬರು, ಮಗದೊಬ್ಬರು ಎಂದು ಆಚರಿಸಲಾಯ್ತು. ನೂರಾರು ದೇಶದಲ್ಲಿ ಒಮ್ಮೆಗೆ ಅಂತೂ ಆರಂಭವಾಗಲಿಲ್ಲ. ಒಬ್ಬರಿಂದ ಮತ್ತೂಬ್ಬರು ಕಲಿತರು ಎಂದ ಮೇಲೆ ನಮ್ಮಲ್ಲೂ ಆಚರಿಸಲಾಯ್ತು ಎಂಬುವುದಕ್ಕೆ ಕೊಂಗೇಕೆ? ಸರಿ ಬಿಡಿ, ನಮ್ಮಿಂದಲೇ ಶುರುವಾಗಿದ್ದು ಎಂಬುದರಿಂದ ಸಮಾಧಾನವಾಗುತ್ತದೆ ಎಂದರೆ ಆಗಲಿ ಎಂದೇ ಸೀದಾ ತ್ರೇತಾಯುಗಕ್ಕೂ ಸಾಗಿದ್ದು. ಯಾವುದು ಏನಾದರೇನಾಯ್ತು ಅಮ್ಮನನ್ನು ಸಂಭ್ರಮಿಸುವುದು ಮುಖ್ಯ ಅಷ್ಟೇ. ಏನಂತೀರಿ?

*ಶ್ರೀನಾಥ್‌ ಭಲ್ಲೇ

 

Advertisement

Udayavani is now on Telegram. Click here to join our channel and stay updated with the latest news.

Next