Advertisement

ವಿಶ್ವ ಸೊಳ್ಳೆ ದಿನ- ಆಗಸ್ಟ್‌ 20

09:59 AM Aug 21, 2022 | Team Udayavani |

ಮಾನವ ಕುಲಕ್ಕೆ ಅತೀ ಅಪಾಯಕಾರಿಯಾಗಿರುವ ಜೀವಿ ಸೊಳ್ಳೆ. ಈ ಕೀಟ ಬಲು ಚಿಕ್ಕದಾದರೂ ಅವುಗಳ ಕಾಟ ಬಲು ದೊಡ್ಡದು. ಪ್ರಪಂಚದಲ್ಲಿ ಅಂಟಾರ್ಕ್ಟಿಕಾ ಪ್ರದೇಶವನ್ನು ಹೊರತು ಪಡಿಸಿ ಉಳಿದೆಲ್ಲ ಕಡೆ ಕಂಡುಬರುವ ಜೀವಿ.

Advertisement

ಸುಮಾರು 3,500ಕ್ಕೂ ತೆರನಾದ ಸೊಳ್ಳೆಗಳು ನೂರಕ್ಕೂ ಹೆಚ್ಚು ತೆರನಾದ ಕಾಯಿಲೆಗಳನ್ನು ಪ್ರಪಂಚದಾದ್ಯಂತ ಹರಡುತ್ತಿವೆ. ಈ ಸೊಳ್ಳೆಗಳ ಕಡಿತದಿಂದಾಗಿ ಮುಖ್ಯವಾಗಿ ಮಲೇರಿಯಾ (ಅನಾಫಿಲಿಸ್‌ ಸೊಳ್ಳೆ), ಮೆದುಳು ಜ್ವರ, ಆನೆಕಾಲು ರೋಗ (ಕ್ಯೂಲೆಕ್ಸ್‌ ಸೊಳ್ಳೆ), ಡೆಂಗ್ಯೂ, ಚಿಕನ್‌ ಗುನ್ಯಾ (ಈಡಿಸ್‌ ಸೊಳ್ಳೆ) ರೋಗಗಳು ಹರಡುತ್ತಿವೆ. ಈ ರೋಗಗಳು ಪ್ರತೀ ವರ್ಷ ಲಕ್ಷಾಂತರ ಜೀವಗಳನ್ನು ಬಲಿತೆಗೆದುಕೊಳ್ಳುತ್ತವೆ.

ಕೇವಲ ಮಲೇರಿಯಾ ಕಾಯಿಲೆಯೊಂದೇ 2020ರಲ್ಲಿ ಪ್ರಪಂಚದಾದ್ಯಂತ 6 ಲಕ್ಷಕ್ಕೂ ಹೆಚ್ಚು ಜನರ ಜೀವ ತೆಗೆದಿದೆ. ಈ ಮಹಾಮಾರಿ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಪ್ರತೀ ವರ್ಷ ಆಗಸ್ಟ್‌ 20ರಂದು ವಿಶ್ವ ಸೊಳ್ಳೆ ದಿನವಾಗಿ ಆಚರಿಸಲಾಗುತ್ತದೆ.

1897ರ ಆಗಸ್ಟ್‌ 20 ಸರ್‌ ರೊನಾಲ್ಡ್‌ ರೊಸ್‌ ಅವರು ಮಾರಣಾಂತಿಕ ಮಲೇರಿಯಾ ರೋಗ ಹರಡಲು ಅನಾಫಿಲೀಸ್‌ ಎಂಬ ಹೆಣ್ಣು ಸೊಳ್ಳೆಗಳು ಕಾರಣ ಎಂಬುದನ್ನು ಜಗತ್ತಿಗೆ ವಿವರಿಸಿದ ದಿನ. ಅಲ್ಲಿಯ ವರೆಗೆ ಈ ಸೊಳ್ಳೆಗಳು ಇಷ್ಟೊಂದು ಅಪಾಯಕಾರಿ ಎಂಬುದು ಜನರ ಗಮನಕ್ಕೆ ಬಂದಿರಲಿಲ್ಲ.

Advertisement

ಸೊಳ್ಳೆಯ ಜೀವನ ಚಕ್ರ

ಸೊಳ್ಳೆಗಳು ತಮ್ಮ ಜೀವನದಲ್ಲಿ ನಾಲ್ಕು ಹಂತಗಳನ್ನು ಒಳಗೊಂಡಿವೆ- ಮೊಟ್ಟೆ, ಲಾರ್ವಾ, ಪ್ಯೂಪಾ ಮತ್ತು ಪ್ರೌಢ ಸೊಳ್ಳೆ. ಸೊಳ್ಳೆ ನೀರಿನ ಮೇಲ್ಮೈ ಮೇಲೆ ಮೊಟ್ಟೆ ಇಡುತ್ತದೆ. ಹೆಚ್ಚಿನ ಮೊಟ್ಟೆಗಳು 48 ಗಂಟೆಗಳಲ್ಲಿ ಲಾರ್ವಾಗಳಾಗುತ್ತವೆ. ಇವುಗಳು ನೀರಿನ ತಾಪದ ಆಧಾರದ ಮೇಲೆ 7-14 ದಿನಗಳ ವರೆಗೆ ನೀರಿನ ಮೇಲ್ಮೈ ಮೇಲೆ ತಲೆಕೆಳಗಾಗಿ ನೇತುಬಿದ್ದು ಕಾಲ ಕಳೆಯುತ್ತವೆ. ಲಾರ್ವಾಗಳು ತಮ್ಮ ಆಹಾರವನ್ನು ಬ್ಯಾಕ್ಟೀರಿಯಾಗಳಿಂದ ಮತ್ತು ನೀರಿನ ಮೇಲೆ ತೇಲುವ ಸಾವಯವ ವಸ್ತುಗಳಿಂದ ಪಡೆಯುತ್ತವೆ. ಲಾರ್ವಾಗಳು ರೂಪಾಂತರ ಪೂರ್ಣಗೊಳಿಸಿದ ಅನಂತರ ಪ್ಯೂಪಾಗಳಾಗುತ್ತವೆ. ಪ್ಯೂಪಾ ಹಂತವು ವಿಶ್ರಾಂತ ಹಂತವಾಗಿದ್ದು, ಈ ಹಂತದಲ್ಲಿ ಯಾವುದೇ ಆಹಾರವನ್ನು ಪಡೆಯುವುದಿಲ್ಲ. ಅನಂತರ ಅದರಿಂದ ಪ್ರೌಢ ಸೊಳ್ಳೆ ಹೊರಬರುತ್ತದೆ. ಸೊಳ್ಳೆಯ ಮೊಟ್ಟೆಗಳು ಮರಿಯಾಗಿ ಈ ನಾಲ್ಕು ಹಂತಗಳಲ್ಲಿ ಹೊರಬರಲು 7-14 ದಿನ ತಗಲಬಹುದು. ಪ್ರೌಢ ಸೊಳ್ಳೆಗಳು ಕೆಲವೇ ದಿನಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಹಾಗೂ ಈ ಸೊಳ್ಳೆಗಳು ಸಾಮಾನ್ಯವಾಗಿ 2ರಿಂದ 4 ವಾರಗಳ ಕಾಲ ಬದುಕಬಲ್ಲವು. ಡೆಂಗ್ಯೂ, ಮಲೇರಿಯಾ ಹರಡುವ ಸೊಳ್ಳೆಗಳು ಶುದ್ಧ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.

ನಿರಂತರವಾಗಿ ಮಳೆಯಾಗುತ್ತಿರುವ ಸಮಯದಲ್ಲಿ ಹಳ್ಳಕೊಳ್ಳಗಳಲ್ಲಿ ನೀರು ರಭಸವಾಗಿ ಹರಿದು ಹೋಗುವಾಗ ಸೊಳ್ಳೆಗಳ ಉತ್ಪಾದನೆ ಸಾಧ್ಯವಿಲ್ಲ. ಮಳೆ ಕಡಿಮೆ ಆದ ಅನಂತರ ನೀರಿನ ಹರಿವು ನಿಂತ ಮೇಲೆ ಅಲ್ಲಿ ಸೊಳ್ಳೆಗಳ ಮೊಟ್ಟೆಗಳು ಮರಿಯಾಗಿ 7-14 ದಿನಗಳಲ್ಲಿ ಮಾರ್ಪಡುತ್ತವೆ. ಆದ್ದರಿಂದ ಸಮುದಾಯದಲ್ಲಿ ಮಳೆಯ ನೀರು ಹರಿಯುವುದು ನಿಂತು 30-40 ದಿನಗಳಲ್ಲಿ ಮಲೇರಿಯಾ ಹರಡುವ ಸಾಧ್ಯತೆಗಳಿವೆ. ಮಳೆ ನಿಂತ ಮೇಲೆ, ನೀರು ಹರಿಯುವುದು ನಿಂತ ಮೇಲೆ, ನಿಂತ ನೀರಿನಲ್ಲಿ ಸೊಳ್ಳೆಗಳ ಮೊಟ್ಟೆಗಳು ಬಲಿತು ಪ್ರೌಢ ಸೊಳ್ಳೆಗಳು ಆಗಲು 7-14 ದಿನಗಳು ಬೇಕು. ಈ ಹೊಸ ಸೊಳ್ಳೆಗಳು ಮಲೇರಿಯಾ ಸೋಂಕಿರುವ ಮನುಷ್ಯನ ರಕ್ತ ಹೀರುವಾಗ ಸೋಂಕು ಪಡೆದು ಇನ್ನೊಬ್ಬರಿಗೆ ಸೋಂಕು ಹರಡಿಸಲು ಶಕ್ತವಾಗಲು ಇನ್ನೂ 10-14 ದಿನಗಳು ಬೇಕಾಗಬಹುದು.

ಆದಾಗ್ಯೂ ಮಳೆ ಬರುತ್ತಿರುವಾಗ ಮಳೆಯ ನೀರಿನ ಹೊಡೆತ ನೇರವಾಗಿ ಬೀಳದ ಮನೆಯಲ್ಲಿರುವ ಹೂವಿನ ಕುಂಡಗಳು, ಹವಾ ನಿಯಂತ್ರಕ ಸಾಧನಗಳಲ್ಲಿ, ಯಾವುದೇ ತೆರನಾದ ನೀರಿನ ಅತ್ಯಲ್ಪ ಪ್ರಮಾಣದ ಸಂಗ್ರಹದಲ್ಲಿ ಕೂಡ ಸೊಳ್ಳೆಗಳು ಸದಾ ವರ್ಷಾದ್ಯಂತ ಉತ್ಪತ್ತಿಯಾಗುತ್ತಿರಬಹುದು. ಪ್ರಯೋಗಕ್ಕಾಗಿ ಡೆಂಗ್ಯೂ ಸೊಳ್ಳೆ ಇರುವ ಪ್ರದೇಶದ ಒಂದು ಮನೆಯೊಳಗೆ ಒಂದು ಲೋಟದಲ್ಲಿ ನೀರು ತುಂಬಿಟ್ಟು ಒಂದು ವಾರದ ವರೆಗೆ ಹಾಗೆಯೇ ಲೋಟವನ್ನು ಅಲುಗಾಡಿಸದೆ ಇಟ್ಟರೆ ಅದರಲ್ಲಿ ಸೊಳ್ಳೆ ಮರಿಗಳು (ಲಾರ್ವಾ) ಬೆಳೆಯುವುದನ್ನು ಬರಿಗಣ್ಣಿನಲ್ಲಿ ನೋಡಬಹುದು.

ಡೆಂಗ್ಯೂ ಹರಡುವ ಸೊಳ್ಳೆಗಳ ಮೊಟ್ಟೆಗಳು ಕೂಡ ಡೆಂಗ್ಯೂ ವೈರಸ್‌ ಸೋಂಕಿಗೆ ಒಳಗಾಗುವುದರಿಂದ ಹುಟ್ಟುವ ಹೊಸ ಪ್ರೌಢ ಸೊಳ್ಳೆಗಳು ಕೂಡ ಡೆಂಗ್ಯೂ ವೈರಸ್‌ ಸೋಂಕು ಹೊಂದಿರುತ್ತವೆ. ಆದ್ದರಿಂದ ಅವು ತತ್‌ಕ್ಷಣವೇ ಡೆಂಗ್ಯೂ ರೋಗವನ್ನು ಸಮುದಾಯದಲ್ಲಿ ತಮ್ಮ ಜೀವಿತ ಕಾಲದ ವರೆಗೆ ಹರಡಬಹುದು. ಡೆಂಗ್ಯೂ ಹರಡುವ ಸೊಳ್ಳೆಗಳು ಬಲುದೂರ ಹಾರಲಾರವು. ಆದ್ದರಿಂದ ಮನೆಯ ವಾಸಸ್ಥಳದ ಸಮೀಪ 400-500 ಮೀಟರ್‌ ವ್ಯಾಪ್ತಿಯಲ್ಲಿ ನೀರು 5-6 ದಿನಗಳಿಗಿಂತ ಹೆಚ್ಚು ಸಮಯ ಶೇಖರಣೆಯಾಗದಂತೆ ನೋಡಿಕೊಂಡರೆ ಡೆಂಗಿ ಹರಡುವುದನ್ನು ತಡೆಯಬಹುದು.

ಐದಾರು ದಿನಗಳಿಗಿಂತ ಹೆಚ್ಚು ದಿನ ನಿಂತ ನೀರಿನಲ್ಲಿ ಸೊಳ್ಳೆಯ ಮರಿ ಲಾರ್ವಾಗಳು ಇರುವುದನ್ನು ಜನರು ಸ್ವಯಂ ಪರೀಕ್ಷಿಸಿಕೊಳ್ಳಬಹುದು. ನಿಂತ ನೀರಿಗೆ ವಿವಿಧ ಕೋನಗಳಿಂದ ಟಾರ್ಚ್‌ ಲೈಟ್‌ ಬಿಟ್ಟಾಗ ನೀರಿನಲ್ಲಿ ಬಾಲದಂತಹ ಹುಳುಗಳು ಓಡಾಟ ನೋಡಬಹುದು. ತತ್‌ಕ್ಷಣ ಅಂತಹ ನೀರನ್ನು ಬರಿದು ಮಾಡಿ ಲಾರ್ವಾಗಳನ್ನು ನಾಶಪಡಿಸಬೇಕು.

ಕ್ಯೂಲೆಕ್ಸ್‌ ಸೊಳ್ಳೆ ಕೊಳಚೆ ಪ್ರದೇಶದಲ್ಲಿ ಮೊಟ್ಟೆಗಳನ್ನಿಡುತ್ತವೆ. ಈ ಸೊಳ್ಳೆಗಳು 2 ಕಿಲೋಮೀಟರ್‌ ದೂರದವರೆಗೆ ಹಾರಬಲ್ಲದು. ಮಲೇರಿಯಾ ಹಾಗೂ ಆನೆಕಾಲು ರೋಗ ಹರಡುವ ಸೊಳ್ಳೆಗಳು ಹಲವಾರು ಕಿಲೋಮೀಟರ್‌ ದೂರ ಹಾರಬಲ್ಲವಾದ್ದರಿಂದ ಈ ಸೊಳ್ಳೆಗಳ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಪರಿಸರದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಮಾಡುವುದು ಸಾಧ್ಯವೂ ಇಲ್ಲ, ವೈಜ್ಞಾನಿಕವೂ ಅಲ್ಲ. ಆದ್ದರಿಂದ ಈ ಸೊಳ್ಳೆಗಳ ನಿಯಂತ್ರಣಕ್ಕೆ ಹಲವಾರು ವೈಜ್ಞಾನಿಕ ಕ್ರಮಗಳನ್ನು ಸಂದರ್ಭಕ್ಕೆ ಅನುಸಾರವಾಗಿ ಪರಿಸರಕ್ಕೆ ಹಾನಿಯಾಗದಂತೆ ಮಾಡಬೇಕಾಗುತ್ತದೆ.

ಜನಜಾಗೃತಿ, ಸಹಭಾಗಿತ್ವದ ಅಗತ್ಯ

ಸೊಳೆ ಯಾವುದೇ ಪ್ರಾಣಿಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿ ಜನರನ್ನು ಕೊಲ್ಲುತ್ತದೆ. ಸೊಳ್ಳೆ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸರಕಾರದ ಬೇರೆ ಬೇರೆ ಇಲಾಖೆಗಳು- ಕೃಷಿ, ಪಂಚಾಯತ್‌, ನಗರ ಆಡಳಿತ, ಶಿಕ್ಷಣ, ಕಂದಾಯ ಇಲಾಖೆಗಳ ಸಹಭಾಗಿತ್ವ ಅಗತ್ಯವಿದೆ. ಅದರೊಂದಿಗೆ ಸಾರ್ವಜನಿಕರ ವೈಜ್ಞಾನಿಕ ಜಾಗೃತಿ ಕೂಡ ಅಗತ್ಯ.

ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಎಚ್ಚರಿಕೆ ಕ್ರಮಗಳು

„ ತೆಂಗಿನ ಚಿಪ್ಪು, ಟಯರ್‌ ಟ್ಯೂಬ್‌ , ಪ್ಲಾಸ್ಟಿಕ್‌ ಇತ್ಯಾದಿ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಮಾಡುವುದು.

„ ಮನೆಯ ಸುತ್ತಮುತ್ತ, ತಾರಸಿ, ಕುಂಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ.

„ ನೀರು ಶೇಖರಣೆ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳಗಳನ್ನು ಮುಚ್ಚಿಡಿ.

„ ಪಾತ್ರೆ, ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹ ಬೇಡ.

„ಪರಿಸರದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಮರಿಗಳನ್ನು ತಿಂದು ಬದುಕುವ ಪ್ರಾಣಿಗಳಾದ ಮೀನುಗಳು, ಕಪ್ಪೆ ಮರಿಗಳು, ಕೀಟಗಳು, ಆಮೆಗಳು, ಹಕ್ಕಿಗಳು ಇರುವಂತೆ ನೋಡಿಕೊಂಡು ಪ್ರಾಕೃತಿಕ ಸಮತೋಲನ ಕಾಯ್ದುಕೊಂಡು ಸೊಳ್ಳೆಗಳನ್ನು ನಿಯಂತ್ರಿಸುವುದು ಪರಿಸರಕ್ಕೆ ಕೂಡ ಪೂರಕ.

ವೈಯಕ್ತಿಕ ರಕ್ಷಣ ಕ್ರಮಗಳು

„ ಮೈಯನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಧರಿಸುವುದು.

„ ಮಲಗುವಾಗ ಸೊಳ್ಳೆ ನಿರೋಧಕಗಳನ್ನು, ಸೊಳ್ಳೆ ಪರದೆ ಬಳಸುವುದು.

„ಕಿಟಕಿ ಬಾಗಿಲುಗಳಿಗೆ ಮೆಶ್‌ ಹಾಕಿ ಅಥವಾ ಸೊಳ್ಳೆ ನಾಶಕ ಔಷಧ ಬಳಸಿ.

„ಮನೆ ಸುತ್ತಮುತ್ತ ನೀರು ನಿಂತ ಇರದಂತೆ ಎಚ್ಚರ ವಹಿಸಿ.

-ಡಾ| ಸಂಜಯ್‌ ಕಿಣಿ, ಸಹಾಯಕ ಪ್ರಾಧ್ಯಾಪಕರು, ಕಮ್ಯುನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಣಿಪಾಲ

-ಡಾ| ಅಶ್ವಿ‌ನಿ ಕುಮಾರ ಗೋಪಾಡಿ, ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಕಮ್ಯುನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಮ್ಯುನಿಟಿ ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next