Advertisement

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

11:49 PM Dec 20, 2024 | Team Udayavani |

ಪತಂಜಲಿ ಯೋಗದ ಪ್ರಕಾರವಾಗಿ ಧ್ಯಾನ ಎಂಬುದು ಅಷ್ಟಾಂಗ ಯೋಗದ ಒಂದು ಭಾಗ. ಒಂದರ್ಥದಲ್ಲಿ ಧ್ಯಾನ ಎಂದರೆ ಯಾವುದಾದರೂ ಒಂದು ವಿಚಾರದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಅಥವಾ ಏಕಾಗ್ರತೆ ವಹಿಸುವುದು. ಸಾಮಾನ್ಯವಾಗಿ ಧ್ಯಾನ ಮಾಡುವವರು ಏಕಾಗ್ರತೆಗಾಗಿ ಯಾವುದಾದರೂ ಒಂದು ಬೀಜಮಂತ್ರ ಜಪಿಸು­ವುದು, ಶ್ಲೋಕ ಹೇಳುವುದು, ದೈವಿಕ ಸಂಗೀತ ಕೇಳುವುದನ್ನು ಅನುಸರಿಸುತ್ತಾರೆ. ಇನ್ನೂ ಕೆಲವರು ತಮ್ಮ ದೃಷ್ಟಿಯನ್ನು ಕೇಂದ್ರಿಕರಿಸುವುದರೊಂದಿಗೆ ಧ್ಯಾನಿಸುತ್ತಾರೆ. ಅಷ್ಟೇ ಅಲ್ಲದೇ ತಮ್ಮ ಉಸಿರಾಟವನ್ನು ಕೇಂದ್ರೀಕರಿಸುವುದ ರೊಂದಿಗೇ ಧ್ಯಾನವನ್ನು ಆಚರಿಸಬಹುದಾಗಿದೆ. ಏಕಾಗ್ರ ಚಿತ್ತದಲ್ಲಿರುವುದೇ ಧ್ಯಾನ ಸ್ಥಿತಿ ಎಂದು ಸುಲಭವಾಗಿ ಹೇಳಬಹುದಾದರೂ, ಧ್ಯಾನಕ್ಕೆ ಜಾಗತಿಕ­ವಾಗಿ ಮನ್ನಣೆ ಪಡೆದ ವ್ಯಾಖ್ಯಾನ ಎಂಬುದು ಇಲ್ಲ. ವಿಶ್ವದ ಹಲವು ಭಾಗಗಳಲ್ಲಿ ಹಲವು ರೀತಿಯಲ್ಲಿ ಧ್ಯಾನ ಅಥವಾ ಮೆಡಿಟೇಷನ್‌ ಆಚರಿಲ್ಪಡುತ್ತಿದೆ. ಹಲವಾರು ಕ್ರಮಗಳು ಇದ್ದರೂ ಅಂತಿಮವಾಗಿ ಮಾನಸಿಕ-ದೈಹಿಕ ಸ್ವಾಸ್ಥ್ಯ ಹಾಗೂ ಆಂತರಿಕ ಶಾಂತಿಯೇ ಈ ಧ್ಯಾನದ ಮೂಲ ಉದ್ದೇಶವಾಗಿದೆ.ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮತೋಲನ ಅಷ್ಟೇ ಅಲ್ಲದೇ ದೇಹ ಹಾಗೂ ಮನಸ್ಸನ್ನು ಸಂಪರ್ಕಿಸಲು ಧ್ಯಾನ ಸಹಾಯ ಮಾಡುತ್ತದೆ.

Advertisement

ಧ್ಯಾನದ ಮೂಲ ಯಾವುದು?
ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಋಷಿ-ಮುನಿಗಳು, ವೈದಿಕರು ಧ್ಯಾನಿಸುತ್ತಿದ್ದರು ಎಂಬ ಬಗ್ಗೆ ಇತಿಹಾಸ ಸಾಕಷ್ಟು ಸಾಕ್ಷ್ಯ ನೀಡುತ್ತದೆ. ಇಂತಹದ್ದೇ ಕಾಲದಲ್ಲಿ, ಇಂಥವರಿಂದಲೇ ಧ್ಯಾನದ ಅಭ್ಯಾಸ ಆರಂಭವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸನಾತನವಾಗಿ ಧ್ಯಾನವು ಶಿಕ್ಷಣ ಅಥವಾ ವಿದ್ಯೆಯ ಒಂದು ಭಾಗವಾಗಿತ್ತು.

ಯೋಗದಲ್ಲಿ ಧ್ಯಾನದ ಮಹತ್ವ
ಪತಂಜಲಿ ಯೋಗಸೂತ್ರದ ಪ್ರಕಾರ ಧ್ಯಾನವು ಅಷ್ಟಾಂಗ ಯೋಗದ 7ನೇ ಅಂಗ. ಅಷ್ಟಾಂಗ ಯೋಗದ ಅಭ್ಯಾಸ ಮಾಡು ವಾಗ 7ನೇ ಹಂತದಲ್ಲಿ ಧ್ಯಾನ ಮಾಡಲಾಗುತ್ತದೆ. ಯೋಗದಿಂದ ಒತ್ತಡ ನಿವಾರಣೆಯಾಗುವುದು ಸಾಬೀತಾಗಿದೆ, ಅದರಂತೆ ಧ್ಯಾನವೂ ಈ ನಿಟ್ಟಿನಲ್ಲಿ ಸಹಕಾರಿಯಾಗಿದೆ. ದಶಕದ ಹಿಂದೆ 2014ರಲ್ಲಿ ವಿಶ್ವ ಯೋಗ ದಿನವನ್ನು ವಿಶ್ವಸಂಸ್ಥೆಯು ಪರಿಚಯಿ ಸಿತ್ತು. ಒಂದು ದಶಕದಲ್ಲಿ ಯೋಗವು ಸಾಕಷ್ಟು ಜನಪ್ರಿಯ ಗೊಂಡಿ ತಲ್ಲದೇ ಅದರ ಪ್ರಯೋಜನವನ್ನು ಈಗ ಇಡೀ ಜಗತ್ತು ಕಾಣು ತ್ತಿದೆ. ಅದರಂತೆ ಈಗ ಧ್ಯಾನ ದಿನವನ್ನು ಪರಿಚಯಿಸಿ ವಿಶ್ವಕ್ಕೆ ಧ್ಯಾನದ ಮಹತ್ವ ಸಾರಲು ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ.

ವಿಶ್ವದೆಲ್ಲೆಡೆ ಹಲವು ರೀತಿಯಲ್ಲಿ ಧ್ಯಾನದ ಅಭ್ಯಾಸ ಮಾಡಲಾ ಗುತ್ತದೆ. ವಿಶ್ವದಲ್ಲಿನ ಎಲ್ಲ ಧರ್ಮಗಳೂ ತಮ್ಮದೇ ಆದ ರೀತಿಯಲ್ಲಿ ವಿಶ್ವಕ್ಕೆ ಧ್ಯಾನವನ್ನು ಪರಿಚಯಿಸಿವೆ. ಪ್ರತಿಯೊಂದು ಪ್ರಕಾರವೂ ತನ್ನದೇ ಆದ ವಿಶೇಷತೆ ಹೊಂದಿವೆ. ಭಾರತದಲ್ಲಿ ಸನಾತನ ಅಭ್ಯಾಸಗಳ ಮೂಲಕ ಈ ಆಚರಣೆಗಳು ಆರಂಭಗೊಂಡಿದ್ದು, ಬೌದ್ಧ, ಜೈನ ಧರ್ಮಗಳೂ ಈ ಪದ್ಧತಿಯನ್ನು ಮುಂದುವರಿಸುತ್ತಾ ಬಂದವು. ಇದು ಭಾರತಕ್ಕೇ ಸೀಮಿತವಾಗದೇ ಈ ಧರ್ಮಗಳು ಹರಡಿದ ಕಡೆಯೆಲ್ಲಾ ಈ ಧ್ಯಾನ ಕ್ರಮಗಳು ಪಸರಿಸಿದವು. ಬೌದ್ಧ ಧರ್ಮದಿಂದ ಪರಿಚಿತಗೊಂಡ ಜೆನ್‌ ಹಾಗೂ ವಿಪಾಸನಾ ಧ್ಯಾನ ಪ್ರಕಾರವು ಇತ್ತೀಚೆಗೆ ಸಾಕಷ್ಟು ಜನಪ್ರಿಯಗೊಂಡಿದೆ. ಜೈನ ಧರ್ಮವು ಶುಕ್ಲ ಹಾಗೂ ಧರ್ಮ ಧ್ಯಾನವನ್ನು ಪಾಲಿಸುತ್ತದೆ. ಮಧ್ಯ ಪ್ರಾಚ್ಯ ರಾಷ್ಟಗಳಲ್ಲಿನ ಯಹೂದಿಗಳು, ಇಸ್ಲಾಂ, ಕ್ರೈಸ್ತ ಧರ್ಮವೂ ತಮ್ಮದೇ ಆದ ರೀತಿಯಲ್ಲಿ ಧ್ಯಾನವನ್ನು ಆಚರಿಸುತ್ತವೆ.

ಡಿ.21ರಂದೇ ಏಕೆ ಧ್ಯಾನ ದಿನ?
ಡಿ. 21 ಚಳಿಗಾಲದ (ಉತ್ತರಾಯಣ)ಆಯನ ಸಂಕ್ರಾಂತಿಯನ್ನು ಗುರುತಿಸುತ್ತದೆ, ಇದು ಭಾರತ ಸೇರಿ ಪ್ರಪಂಚದಾದ್ಯಂತ ಸಂಸ್ಕೃತಿಗಳಿಗೆ ಪ್ರಾಮುಖ್ಯ ಹೊಂದಿರುವ ಖಗೋಳ ಘಟನೆಯಾಗಿದೆ. ಈ ದಿನಗಳಲ್ಲಿ ಯೋಗ ಮತ್ತು ಧ್ಯಾನದ ಅಭ್ಯಾಸಗಳು ಮನುಷ್ಯನ ಮೇಲೆ ಉತ್ತಮ ಪರಿಣಾಮ ಬೀರುತ್ತವೆ.

Advertisement

ಶ್ರೀ ರವಿಶಂಕರ ಗುರೂಜಿ ನೇತೃತ್ವದಲ್ಲಿ ಕಾರ್ಯಕ್ರಮ
2024ರ ಡಿ.21ರಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಇದಾದ ಬಳಿಕ ಪ್ರತಿ ವರ್ಷ ಈ ದಿನವನ್ನು ವಿಶ್ವ ಧ್ಯಾನ ದಿನವಾಗಿ ಆಚರಿಸಲು ವಿಶ್ವಸಂಸ್ಥೆ ಘೋಷಣೆ ಮಾಡಲಿದೆ. ಈ ಕಾರ್ಯಕ್ರಮವು ಭಾರತದ ನೇತೃತ್ವದಲ್ಲೇ ನಡೆಯಲಿದೆ. ಈ ದಿನ ವಿಶ್ವಸಂಸ್ಥೆಯಲ್ಲಿ ಶ್ರೀ ರವಿಶಂಕರ ಗುರೂಜಿ ಅವರ ನೇತೃತ್ವದಲ್ಲಿ ಧ್ಯಾನ ಕಾರ್ಯಕ್ರಮ ನಡೆಸಲಾಗುವುದು.
ವಿಶ್ವಸಂಸ್ಥೆ ಕಚೇರಿಯಲ್ಲಿ ಧ್ಯಾನ ಕೋಣೆ: ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಧ್ಯಾನಕ್ಕಾಗಿಯೇ ಒಂದು ಕೋಣೆ ಇದೆ.

ತೇಜಸ್ವಿನಿ .ಸಿ. ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next