Advertisement
ನಿಜವಾಗಿ ಕುಷ್ಠ ರೋಗವು ದೇವರ ಶಾಪ ಅಥವಾ ಒಂದು ವಿಕೃತ ಕಾಯಿಲೆಯಲ್ಲ, ಅದೊಂದು ಸೋಂಕು ರೋಗವಷ್ಟೆ. ವೈದ್ಯವಿಜ್ಞಾನ ಅತ್ಯಾಧುನಿಕವಾಗಿ ಮುಂದುವರಿದಿರುವ ಪ್ರಸ್ತುತ ಕಾಲದಲ್ಲಿ ಕುಷ್ಠ ರೋಗದ ಬಗ್ಗೆ ಯಾರೂ ಭಯ ಪಡಬೇಕಾಗಿಲ್ಲ ಅಥವಾ ದುರದೃಷ್ಟವಶಾತ್ ಕುಷ್ಠ ರೋಗ ಪೀಡಿತರಾಗಿರುವ ವ್ಯಕ್ತಿಗಳನ್ನು ದೂರ ಇರಿಸಬೇಕಾಗಿಲ್ಲ. ಗುಣವಾಗದ ಗಾಯಗಳು, ಕೈಕಾಲು ಮತ್ತು ಮುಖಗಳಲ್ಲಿ ಊನ ಇತ್ಯಾದಿ ಕುಷ್ಠ ರೋಗದ ಭೀಕರ ಮುಖ ಮುಗಿದು ಹೋದ ಕಥೆ. 1980ರಿಂದ ಈಚೆಗೆ ಕುಷ್ಠ ರೋಗಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಲು ವೈದ್ಯ ವಿಜ್ಞಾನ ಪರಿಣಾಮಕಾರಿ ಔಷಧಗಳನ್ನು ಹೊಂದಿದೆ, ಕುಷ್ಠ ರೋಗದಿಂದಾಗಿ ಅಂಗ ಊನವಾಗುವ ಸಾಧ್ಯತೆ ಅತ್ಯಲ್ಪವಾಗಿದೆ.
ಉಂಟಾಗುವುದು ಹೇಗೆ?
ಮೈಕೊಬ್ಯಾಕ್ಟೀರಿಯಂ ಲೆಪ್ರ ಎಂಬ ಬ್ಯಾಕ್ಟೀರಿಯಾ ಸೋಂಕಿನಿಂದ ಕುಷ್ಠ ರೋಗವು ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾವು ಕ್ಷಯ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ಕುಟುಂಬಕ್ಕೆ ಸೇರಿದೆ. ಕುಷ್ಠ ರೋಗವು ರೋಗಪೀಡಿತರ ಸಂಪರ್ಕದಿಂದ ಹರಡುತ್ತದೆ. ಆದರೆ ಹೀಗೆ ಅದು ಹರಡುವುದು ತುಂಬಾ ಅಪರೂಪ. ಏಕೆಂದರೆ, ಈ ಬ್ಯಾಕ್ಟೀರಿಯಾವು ಆರೋಗ್ಯವಂತರ ದೇಹವನ್ನು ಪ್ರವೇಶಿಸುವುದು ಉಸಿರಿನ ಮೂಲಕ. ಲೆಪ್ರಮೇಟಸ್ ಲೆಪ್ರಸಿ ಎಂದು ಕರೆಯಲ್ಪಡುವ, ತೀವ್ರ ಸ್ವರೂಪದ ಕುಷ್ಠರೋಗ ಪೀಡಿತನ ಸೀನಿನ ಮೂಲಕ ಗಾಳಿಯನ್ನು ಸೇರಿದ ಸೂಕ್ಷ್ಮನೀರಿನ ಹನಿಗಳನ್ನು ಉಸಿರಾಡಿದರೆ ಮಾತ್ರ ಅದು ಆರೋಗ್ಯವಂತರ ದೇಹವನ್ನು ಪ್ರವೇಶಿಸುತ್ತದೆ. ಆದರೆ ಹೀಗಾಗುವುದು ತೀರಾ ಅಪರೂಪ. ಜತೆಗೆ, ಬ್ಯಾಕ್ಟೀರಿಯಾ ನಮ್ಮ ದೇಹದೊಳಕ್ಕೆ ಪ್ರವೇಶಿಸಿದರೂ ನಮ್ಮಲ್ಲಿ ಶೇ.90ರಷ್ಟು ಜನರು ಆರೋಗ್ಯವಂತರಾಗಿದ್ದು, ಆ ಬ್ಯಾಕ್ಟೀರಿಯಾವನ್ನು ಕೊಲ್ಲಬಲ್ಲಷ್ಟು ಸದೃಢವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತೇವೆ. ಕೇವಲ ಶೇ.10ರಷ್ಟು ಜನರು ಮಾತ್ರ ರೋಗ ನಿರೋಧಕ ಶಕ್ತಿಯಲ್ಲಿರುವ ನಿರ್ದಿಷ್ಟ ಸಮಸ್ಯೆಯಿಂದಾಗಿ ಬ್ಯಾಕ್ಟೀರಿಯಾವನ್ನು ಕೊಲ್ಲಲು ಶಕ್ತವಾಗುವುದಿಲ್ಲ. ಈ ಶೇ.10 ಮಂದಿಯಲ್ಲೂ ಶೇ.80ರಷ್ಟು ಮಂದಿ ತೀರಾ ಸೌಮ್ಯಸ್ವರೂಪದ ಕುಷ್ಠರೋಗಕ್ಕೆ ತುತ್ತಾಗುತ್ತಾರೆ. ವ್ಯಕ್ತಿಯೊಬ್ಬ ಕುಷ್ಠರೋಗ ನಿರ್ದಿಷ್ಟವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿಲ್ಲದೆ ಕುಷ್ಠ ರೋಗಕ್ಕೆ ತುತ್ತಾದರೂ ಶೀಘ್ರ ರೋಗಪತ್ತೆ ಮತ್ತು ಸಮರ್ಪಕ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು.
Related Articles
Advertisement
– ಮುಂದಿನ ವಾರಕ್ಕೆ
– ಡಾ| ಸ್ಮಿತಾ ಪ್ರಭುಅಸೊಸಿಯೇಟ್ ಪ್ರೊಫೆಸರ್
ಚರ್ಮರೋಗ ವಿಭಾಗ, ಕೆಎಂಸಿ, ಮಣಿಪಾಲ