Advertisement

ಕೋವಿಡ್‌ ಲಸಿಕೆ ಹಾಕಿಸಿಕೊಂಡ ವಿಶ್ವ ನಾಯಕರು

07:09 AM Mar 02, 2021 | Team Udayavani |

ವಿಶ್ವದ 117 ದೇಶಗಳಲ್ಲಿ ವ್ಯಾಕ್ಸಿನೇಶನ್‌ ಡ್ರೈವ್‌ ಪ್ರಾರಂಭವಾಗಿದೆ. ಅನೇಕ ವದಂತಿಗಳ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಲಸಿಕೆ ಪಡೆಯಲು ಇನ್ನೂ ಹೆದರುತ್ತಿದ್ದಾರೆ. ವೈದ್ಯರು ಮತ್ತು ಮುಂಚೂಣಿ ಕಾರ್ಮಿಕರು ಸಹ ಕೆಲವೆಡೆಗಳಲ್ಲಿ ಲಸಿಕೆ ಪಡೆಯಲು ಹೆಚ್ಚು ಆಸಕ್ತಿ ತೋರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಜನರು ವದಂತಿಗಳ ಬಗ್ಗೆ ಗಮನ ಹರಿಸಬಾರದು ಎಂದು ಜಾಗತಿಕ ನಾಯಕರು ಸ್ವತಃ ಲಸಿಕೆ ಪಡೆಯುವ ಮೂಲಕ ನೇರ ಸಂದೇಶ ರವಾನಿಸಿದ್ದಾರೆ. ಕೋವಿಡ್‌ -19 ಲಸಿಕೆಯನ್ನು ಸಾರ್ವಜನಿಕವಾಗಿ ಸ್ವೀಕರಿಸಿದ ಜಾಗತಿಕ ನಾಯಕರ ಸಾಲಿಗೆ ಪ್ರಧಾನಿ ನರೇಂದ್ರ ಮೋದಿ (70) ಸೋಮವಾರ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮಾರಣಾಂತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಲುವಾಗಿ ಲಸಿಕೆ ಹಾಕಲು ಜನರು ಮುಕ್ತವಾಗಿ ಮನಸ್ಸು ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಪ್ರಧಾನ ಮಂತ್ರಿಯವರ ಈ ನಡೆಯು ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭ ಜೋ ಬಿಡನ್‌ ಅವರು ಲಸಿಕೆ ಪಡೆದುಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಈ ಕೋವಾಕ್ಸಿನ್‌ ಅನ್ನು ಭಾರತೀಯ ಕಂಪೆನಿ ಭಾರತ್‌ ಬಯೋಟೆಕ್‌ ಸಿದ್ಧಪಡಿಸಿದೆ. ಈಗ ಪ್ರಧಾನ ಮಂತ್ರಿ ಸಹಿತ ದೇಶದ ಇತರ ಗಣ್ಯರು ಈ ಲಸಿಕೆಯ ಮೊದಲ ಡೋಸ್‌ ಪಡೆಯುವ ಮೂಲಕ ದೊಡ್ಡ ಸಂದೇಶವನ್ನು ನೀಡಲು ಪ್ರಯತ್ನಿಸಿದ್ದಾರೆ. ಪ್ರಪಂಚದ ವಿವಿಧ ದೇಶಗಳ ಉನ್ನತ ನಾಯಕರು ಕೂಡ ಈಗಾಗಲೇ ಕೋವಿಡ್‌ ಲಸಿಕೆ ಪಡೆದಿದ್ದು, ಕೆಲವರ ಮಾಹಿತಿ ಇಂತಿದೆ.

Advertisement

ಜೋ ಬೈಡೆನ್‌
ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್‌ (78)ಅವರು ಡಿಸೆಂಬರ್‌ನಲ್ಲಿ ಮೊದಲ ಲಸಿಕೆ ಪಡೆದಿದ್ದಾರೆ. ಜನವರಿ ತಿಂಗಳ ಎರಡನೇ ವಾರದಲ್ಲಿ ಎರಡನೇ ಲಸಿಕೆ ಪಡೆದಿದ್ದಾರೆ. ವಿಶೇಷ ಎಂದರೆ ತಾವು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಅವರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಈ ಮೂಲಕ ಆ ದೇಶದ ಆರೋಗ್ಯ ಇಲಾಖೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದರು. ಯಾಕೆಂದರೆ ಆಗಿನ್ನೂ ಟ್ರಂಪ್‌ ಅವರು ಅಧ್ಯಕ್ಷರಾಗಿದ್ದರು. ಫೈಜರ್‌-ಬಯೋಟೆಕ್‌ ಲಸಿಕೆಯನ್ನು ಬೈಡೆನ್‌ ಅವರು ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಡೆದಿದ್ದರು. ಹಿರಿಯ ವಯಸ್ಸಿನವರಾಗಿರುವ ಬೈಡೆನ್‌ ಅವರು ಸುಲಭವಾಗಿ ಕೋವಿಡ್‌ ಸೋಂಕಿಗೆ ಒಳಗಾಗುವ ಸಾಧ್ಯತೆ ಇತ್ತು.

ಕಮಲಾ ಹ್ಯಾರಿಸ್‌
ಅಮೆರಿಕದ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರು ಜೋ ಬೈಡೆನ್‌ ಅವರು ಲಸಿಕೆ ಸ್ವೀಕರಿಸಿದ ವಾರದ ಬಳಿಕ ಅಂದರೆ ಡಿಸೆಂಬರ್‌ 31ರಂದು ಲಸಿಕೆಯನ್ನು ಪಡೆದರು. ಮಾಡೆರ್ನಾ ಲಸಿಕೆಯನ್ನು ಕಮಲಾ ಹ್ಯಾರಿಸ್‌ ಅವರು ಮಾಧ್ಯಮಗಳ ಎದುರಿನಲ್ಲೇ ಹಾಕಿಸಿಕೊಂಡು ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು.

Advertisement

ಬೆಂಜಮಿನ್‌ ನೆತನ್ಯಾಹು
ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್‌ ನೆತನ್ಯಾಹು ಅವರು ಡಿಸೆಂಬರ್‌ 20ರಂದು ಫೈಜರ್‌ ಕೋವಿಡ್‌ -19 ಲಸಿಕೆ ಪಡೆದರು. ಆ ಮೂಲಕ ದೇಶವ್ಯಾಪಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದು ಇಸ್ರೇಲ್‌ನ ಟಿವಿ ಕಾರ್ಯಕ್ರಮಗಳಲ್ಲಿ ನೇರ ಪ್ರಸಾರವಾಗಿತ್ತು. ಈ ಮೂಲಕ ಇಸ್ರೇಲಿಗರಿಗೆ ಲಸಿಕೆ ಕುರಿತಾಗಿದ್ದ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದರು.

ಮೊಹಮ್ಮದ್‌ ಬಿನ್‌ ಸಲ್ಮಾನ್‌
ಸೌದಿ ಅರೇಬಿಯಾದ ರಾಜ ಸಲ್ಮಾನ್‌ ಜನವರಿ ತಿಂಗಳ ಆರಂಭದಲ್ಲಿ ಲಸಿಕೆಯನ್ನು ಪಡೆದಿದ್ದಾರೆ. ಮಧ್ಯಪ್ರಾಚ್ಯದ ಸಾಮ್ರಾಜ್ಯವು ಮೂರು-ಹಂತದ ಇನಾಕ್ಯುಲೇಶನ್‌ ಕಾರ್ಯಕ್ರಮವನ್ನು ಪ್ರಾರಂಭಿಸಿದ ಬಳಿಕ ರಾಜ ಸಲ್ಮಾನ್‌ ಲಸಿಕೆ ಪಡೆದಿದ್ದರು. ಸೌದಿ ಅರೇಬಿಯಾ ಫೈಜರ್‌-ಬಯೋಟೆಕ್‌ ಲಸಿಕೆಯನ್ನು ಅನುಮೋದಿಸಿತ್ತು. ದುಬಾೖ ಆಡಳಿತಗಾರ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ…-ಮಕೌ¤ಮ್‌ ನವೆಂಬರ್‌ನಲ್ಲೇ ಲಸಿಕೆ ಹಾಕಿಸಿಕೊಂಡಿದ್ದರು.

ರಾಣಿ ಎಲಿಜಬೆತ್‌
94 ವರ್ಷದ ಬ್ರಿಟನ್‌ನ ರಾಣಿ ಎಲಿಜಬೆತ್‌ ಮತ್ತು ಅವರ ಪತಿ ಪ್ರಿನ್ಸ್‌ ಫಿಲಿಪ್‌ (99) ಅವರು ಜನವರಿ ತಿಂಗಳಿನಲ್ಲಿ ಲಸಿಕೆ ಪಡೆದಿದ್ದಾರೆ. ತುರ್ತು ಬಳಕೆಗಾಗಿ ಫೈಜರ್‌-ಬಯೋಟೆಕ್‌ ಕೊರೊನಾ ವೈರಸ್‌ ಲಸಿಕೆಯನ್ನು ಅನುಮೋದಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಯುಕೆ ಪಾತ್ರವಾಗಿತ್ತು. ಇಂಗ್ಲೆಂಡ್‌ನ‌ಲ್ಲಿ ರಾಷ್ಟ್ರವ್ಯಾಪಿಯಾಗಿ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ.

ಆಂಟೋನಿಯೊ ಗುಟೆರೆಸ್‌
ಯುಎನ್‌ ಸೆಕ್ರೆಟರಿ ಜನರಲ್‌ ಆಂಟೋನಿಯೊ ಗುಟೆರೆಸ್‌ ಜನವರಿಯಲ್ಲಿ ಕೋವಿಡ್‌-19 ಲಸಿಕೆಯನ್ನು ಪಡೆದರು. ಬಳಿಕ ಅವರು ಕೋವಿಡ್‌ ಹೋಗಲಾಡಿಸಲು ಅಂತಾರಾಷ್ಟ್ರೀಯ ಸಮೂಹವನ್ನು ಕೋರಿಕೊಂಡಿದ್ದು, ಲಸಿಕೆಯ ಕುರಿತು ಇರುವ ಭಯದಿಂದ ಹೊರಬರುವಂತೆ ಮನವಿ ಮಾಡಿದ್ದರು.

ಪೋಪ್‌ ಫ್ರಾನ್ಸಿಸ್‌ ಮತ್ತು ಮಾಜಿ ಪೋಪ್‌ ಬೆನೆಡಿಕ್ಟ್
ಲಸಿಕೆ ಪಡೆದ ವಿಶ್ವ ನಾಯಕರ ಪಟ್ಟಿಗೆ ಪೋಪ್‌ ಫ್ರಾನ್ಸಿಸ್‌ ಮತ್ತು ಅವರ ಹಿಂದಿನ ಪೋಪ್‌ ಬೆನೆಡಿಕ್ಟ್ ಇತ್ತೀಚೆಗೆ ಸೇರ್ಪಡೆಯಾಗಿದ್ದರು. ಬಳಿಕ ಜನರಲ್ಲಿ ಮನವಿ ಮಾಡಿರುವ ಅವರು ಲಸಿಕೆ ಪಡೆಯುವುದು ನೈತಿಕ ಕರ್ತವ್ಯ. ತಮ್ಮನ್ನು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನ ವರನ್ನು ಸಹ ರಕ್ಷಿಸುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದಿದ್ದರು.

ಜೋಕೊ ವಿಡೊಡೋ
ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೋ ಅವರು ಚೀನದ ಕೋವಿಡ್‌ -19 ಲಸಿಕೆ ಸಿನೋವಾಕ್‌ನ ಮೊದಲ ಲಸಿಕೆಯನ್ನು ಜನವರಿಯಲ್ಲಿ ಸ್ವೀಕರಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಈ ಲಸಿಕೆ ಕೊನೆಯ ಹಂತದ ಕ್ಲಿನಿಕಲ್‌ ಪ್ರಯೋಗಗಳಲ್ಲಿ ಶೇ. 65.3ರಷ್ಟು ಪರಿಣಾಮಕಾರಿಯಾಗಿದೆ ಎಂದು ವರದಿ ಹೇಳಿತ್ತು. ಹೀಗಿದ್ದರೂ ಜೋಕೊ ಅವರು ಧೈರ್ಯದಿಂದ ಈ ಲಸಿಕೆಯನ್ನು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next