Advertisement

ದ್ರೌಪದಿ ಮುರ್ಮುಗೆ ವಿಶ್ವನಾಯಕರ ಅಭಿನಂದನೆ; ಚೀನ, ರಷ್ಯಾ, ನೇಪಾಳದಿಂದ ಸಂದೇಶ

09:49 PM Jul 25, 2022 | Team Udayavani |

ನವದೆಹಲಿ: ದೇಶದ 15ನೇ ರಾಷ್ಟ್ರಪತಿಯಾಗಿ ಸೋಮವಾರ ಪ್ರಮಾಣ ಸ್ವೀಕರಿಸಿದ ದ್ರೌಪದಿ ಮುರ್ಮು ಅವರಿಗೆ ದೇಶ-ವಿದೇಶಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

Advertisement

ಭಾರತದಲ್ಲಿ ಪಕ್ಷಭೇದ ಮರೆತು ಎಲ್ಲ ರಾಜಕೀಯ ನಾಯಕರೂ ನೂತನ ರಾಷ್ಟ್ರಪತಿಯವರನ್ನು ಅಭಿನಂದಿಸಿದ್ದರೆ, ರಷ್ಯಾ, ಚೀನ, ಶ್ರೀಲಂಕಾ, ನೇಪಾಳ ಸೇರಿದಂತೆ ಹಲವು ದೇಶಗಳ ನಾಯಕರು ಕೂಡ ಮುರ್ಮು ಅವರಿಗೆ ಶುಭಾಶಯ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌, ಕಾಂಗ್ರೆಸ್‌ ಹಿರಿಯ ನಾಯಕರಾದ ಚಿದಂಬರಂ, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಸೇರಿದಂತೆ ಅನೇಕ ನಾಯಕರು ಟ್ವೀಟ್‌ಗಳ ಮೂಲಕ ನೂತನ ರಾಷ್ಟ್ರಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಅಭಿನಂದನಾ ಸಂದೇಶವನ್ನು ಕಳುಹಿಸಿ, ಎರಡೂ ದೇಶಗಳ ನಡುವೆ ಪರಸ್ಪರ ರಾಜಕೀಯ ನಂಬಿಕೆ, ಆಳವಾದ ಸಹಕಾರ ಮತ್ತು ಭಿನ್ನಾಭಿಪ್ರಾಯಗಳ ಶಮನಕ್ಕಾಗಿ ನಿಮ್ಮೊಂದಿಗೆ ಕೈಜೋಡಿಸಲು ಚೀನಾ ಸಿದ್ಧವಿದೆ ಎಂದು ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು, ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಹೆಜ್ಜೆಯಿಡೋಣ ಎಂದಿದ್ದಾರೆ. ಇವರಲ್ಲದೇ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ, ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಸೋಲಿಹ್‌, ನೇಪಾಳ ಅಧ್ಯಕ್ಷ ಬಿದ್ಯಾದೇವಿ ಭಂಡಾರಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಎಷ್ಟನೇ ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕಾರ?- 15
ಅವರ ಅಧಿಕಾರಾವಧಿ ಪೂರ್ಣಗೊಳ್ಳುವುದು- ಜು.24, 2027

ಮೂಲ ಹೆಸರನ್ನು ಬಹಿರಂಗಪಡಿಸಿದ ಮುರ್ಮು
ನೂತನ ರಾಷ್ಟ್ರಪತಿಗಳ ಮೂಲ ಹೆಸರು “ದ್ರೌಪದಿ ಮುರ್ಮು’ ಅಲ್ಲ! ಅವರಿಗೆ “ಮಹಾಭಾರತ’ದಲ್ಲಿ ಬರುವ ಪಾತ್ರದ ಹೆಸರನ್ನು ಇಟ್ಟಿದ್ದು ಬೇರೆಯವರು. ಹೀಗೆಂದು ಸ್ವತಃ ಮುರ್ಮು ಅವರೇ ಹೇಳಿದ್ದಾರೆ. ಇತ್ತೀಚೆಗೆ ಒಡಿಯಾ ವಿಡಿಯೋ ಮ್ಯಾಗಜಿನ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ತೆರೆದಿಟ್ಟ ಅವರು, “ದ್ರೌಪದಿ ನನ್ನ ನೈಜ ಹೆಸರಲ್ಲ. ಅದು ನನ್ನ ಶಿಕ್ಷಕರೊಬ್ಬರು ನನಗಿಟ್ಟ ಹೆಸರು. 60ರ ದಶಕದಲ್ಲಿ ಬುಡಕಟ್ಟು ಬಾಹುಳ್ಯದ ನಮ್ಮ ಊರಾದ ಮಯೂರ್‌ಭಂಜ್‌ಗೆ ಶಿಕ್ಷಣ ನೀಡಲು ಬಾಲಸೋರ್‌ ಅಥವಾ ಕಠಕ್‌ನಿಂದ ಶಿಕ್ಷಕರು ಬರುತ್ತಿದ್ದರು. ಅಂಥ ಶಿಕ್ಷಕರಲ್ಲಿ ಒಬ್ಬರಿಗೆ ನನ್ನ ನೈಜ ಹೆಸರು ಇಷ್ಟವಾಗಿರಲಿಲ್ಲ. ನನಗೆ ಹೆತ್ತವರು ಇಟ್ಟಿದ್ದು ಸಂಥಾಲಿ ಸಮುದಾಯದ “ಪುಟಿ’ ಎಂಬ ಹೆಸರು. ಈ ಹೆಸರು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನನ್ನ ಶಿಕ್ಷಕರು ನನ್ನನ್ನು “ದ್ರೌಪದಿ’ ಎಂದು ಕರೆಯಲಾರಂಭಿಸಿದರು. ಬಳಿಕ ನಾನು ಬ್ಯಾಂಕ್‌ ಆಫೀಸರ್‌ ಶ್ಯಾಮ್‌ ಚರಣ್‌ ಟುಡು ಅವರನ್ನು ವಿವಾಹವಾದ ಮೇಲೆ “ಮುರ್ಮು’ ಎಂಬ ಸರ್‌ನೆàಮ್‌ ಕೂಡ ಸೇರಿಕೊಂಡಿತು’ ಎಂದು ಹೇಳಿದ್ದರು.

ರಾಷ್ಟ್ರಪತಿಗಿರುವ ಅಧಿಕಾರಗಳೇನು?
ಪ್ರಧಾನಮಂತ್ರಿಗಳ ನೇತೃತ್ವದ ಕೇಂದ್ರ ಸಚಿವರ ಸಮಿತಿಯ ಸಲಹೆಯ ಮೇರೆಗೆ ಸುಗ್ರೀವಾಜ್ಞೆ ಹೊರಡಿಸುವ, ಕ್ಷಮಾದಾನ ನೀಡುವ, ರಾಜ್ಯಗಳು ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ, ಸಂಸತ್‌ ಅಧಿವೇಶನ ಕರೆಯುವ ಅಧಿಕಾರ ರಾಷ್ಟ್ರಪತಿಗಳಿಗಿರುತ್ತದೆ. ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್‌ ಕೂಡ ಅವರಾಗಿರುತ್ತಾರೆ. ಕೇಂದ್ರ ಸಂಪುಟದ ನಿರ್ಧಾರವನ್ನು ಆಧರಿಸಿ ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರವೂ ಅವರಿಗಿರುತ್ತದೆ.

ಲಿಮೋಸಿನ್‌ನಲ್ಲಿ ಆಗಮನ
ಪ್ರಮಾಣ ಸ್ವೀಕಾರಕ್ಕೂ ಮುನ್ನ ನಿರ್ಗಮಿತ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹಾಗೂ ಅವರ ಉತ್ತರಾಧಿಕಾರಿ ದ್ರೌಪದಿ ಮುರ್ಮು ಅವರು ಸೋಮವಾರ ಬೆಳಗ್ಗೆ ರಾಷ್ಟ್ರಪತಿ ಭವನದಿಂದ ಸಂಸತ್‌ಭವನಕ್ಕೆ ರಾಷ್ಟ್ರಪತಿಗಳ ಲಿಮೋಸಿನ್‌ ಕಾರಿನಲ್ಲಿ ಆಗಮಿಸಿದರು. ಸಂಸತ್‌ ಭವನದ ಗೇಟ್‌ ಸಂಖ್ಯೆ 5ರಲ್ಲಿ ರಾಷ್ಟ್ರಪತಿಗಳ ಬಾಡಿಗಾರ್ಡ್‌ಗಳು ರಾಷ್ಟ್ರೀಯ ಸೆಲ್ಯೂಟ್‌ ನೀಡಿ ಇಬ್ಬರನ್ನೂ ಬರಮಾಡಿಕೊಂಡರು. ಸಿಜೆಐ ಎನ್‌.ವಿ.ರಮಣ, ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಕೂಡ ಜತೆಗಿದ್ದರು. ಅಲ್ಲಿಂದ ನೇರವಾಗಿ ಇವರೆಲ್ಲರೂ ಮೆರವಣಿಗೆ ಮೂಲಕ ಸೆಂಟ್ರಲ್‌ ಹಾಲ್‌ನತ್ತ ನಡೆದಾಗ, ಡ್ರಮ್‌ ಬಾರಿಸುವ ಮೂಲಕ ಅವರನ್ನು ಸ್ವಾಗತಿಸಲಾಯಿತು.

ಅತ್ಯುನ್ನತ ಹುದ್ದೆಗೆ ಮುರ್ಮು ಅವರ ಆಯ್ಕೆಯೇ ಭಾರತದ ಪ್ರಜಾಪ್ರಭುತ್ವದ ಚೈತನ್ಯ ಮತ್ತು ಸಾಮರ್ಥ್ಯಕ್ಕೆ ಸಾಕ್ಷಿ. ದೇಶದ ಪ್ರಥಮ ಪ್ರಜೆಯಾಗಿ ಅವರ ಅಧಿಕಾರಾವಧಿಯು ಯಶಸ್ವಿ ಹಾಗೂ ಪರಿಪೂರ್ಣವಾಗಿರಲಿ ಎಂದು ಹಾರೈಸುತ್ತೇನೆ.
– ಎಂ.ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next