Advertisement

ನಾಳೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ; ಆನ್‌ಲೈನ್‌ನಲ್ಲೇ ಕುಂದಗನ್ನಡ ಐಸಿರಿ

09:04 PM Aug 06, 2021 | Team Udayavani |

ಕುಂದಾಪುರ: ಮೂರನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಈ ಬಾರಿ ಆಸಾಡಿ ಆಮಾಸಿ ದಿನವಾದ ಆ.8ರಂದು ನಡೆಯಲಿದೆ. ಕೋವಿಡ್‌ ನಿರ್ಬಂಧ ಕಾರಣಗಳಿಂದಾಗಿ ಕಳೆದ ವರ್ಷದಂತೆಯೇ ಈ ವರ್ಷವೂ ಆನ್‌ಲೈನ್‌ ಮೂಲಕವೇ ನಡೆಯಲಿದೆ.

Advertisement

ವಿವಿಧ ಸಂಘಟನೆಯವರು ಆನ್‌ಲೈನ್‌ ಮೂಲಕ ಪ್ರಬಂಧ ರಚನೆ, ಛಾಯಾಚಿತ್ರ ಸ್ಪರ್ಧೆ, ಭಾಷಣ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ. ಮೊದಲ ವರ್ಷ ವಿಶ್ವದ ವಿವಿಧೆಡೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ಕಾರ್ಯಕ್ರಮಗಳು ನಡೆದಿದ್ದವು. ಆದರೆ ಕಳೆದ ವರ್ಷ ಹಾಗೂ ಈ ವರ್ಷ ಕೋವಿಡ್‌ ನಿಯಮಗಳಿಂದಾಗಿ ಕಾರ್ಯಕ್ರಮಗಳು ಆನ್‌ಲೈನ್‌ಗೆ ಸೀಮಿತವಾಗಿದೆ. ಹಾಗಿದ್ದರೂ ತಿಂಗಳ ಮೊದಲೇ ಇದಕ್ಕೆ ಸಿದ್ಧತೆ ನಡೆದಿದೆ. ಸ್ಪರ್ಧೆಗಳಿಗೆ ಆಹ್ವಾನ ನೀಡಲಾಗಿದೆ.

ವಿವಿಧ ಕಾರ್ಯಕ್ರಮ
ಯಕ್ಷದೀಪ ಕಲಾಟ್ರಸ್ಟ್‌ ಮಲ್ಯಾಡಿ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಪ್ರಸ್ತುತಿಯಲ್ಲಿ ಯಕ್ಷಗಾನ ವಾಚಿಕ ಲೋಕದ ಅಚ್ಚರಿಯ ಪ್ರಸ್ತುತಿ, ವೈಚಾರಿಕ ಪೌರಾಣಿಕ ಕುಂದಗನ್ನಡದ ಪ್ರಯೋಗಶೀಲ ಯಕ್ಷಕೃತಿ ಪ್ರಸಾದ್‌ ಮೊಗೆಬೆಟ್ಟು ಅವರ ನಂ ನಮ್ನಿ ಸಂದರ್ಶನ ಸಂಕಥನ ಎಂಬ ಕಾರ್ಯಕ್ರಮ ಏರ್ಪಡಿಸಿದೆ. ಯುವ ವೇದಿಕೆ ನೈಕಂಬಳ್ಳಿ ವತಿಯಿಂದ ಕುಂದಾಪುರ ಮೂಲದ ಮಕ್ಕಳಿಗೊಂದು ಕುಂದಾಪ್ರ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ಪಟ್ಟಾಂಗವನ್ನು ಏರ್ಪಡಿಸಿದೆ. ಹತ್ತು ವರ್ಷದೊಳಗಿನ ಮಕ್ಕಳು ಯಾವುದಾದರೂ ವಿಷಯದ ಕುರಿತು ಮಾತನಾಡಿ ವೀಡಿಯೋ ಕಳುಹಿಸುವ ಸ್ಪರ್ಧೆ ಇದಾಗಿದೆ. ಓ ಮೈ ಸರ್‌ಪ್ರೈಸ್‌ ವತಿಯಿಂದ ಅಬ್ಬಿ ಸಂಕ್ತೆ ಸೆಲ್ಫಿ ಎಂದು ತಾಯಿ ಜತೆ ಸೆಲ್ಫಿ ತೆಗೆಯುವ ಸ್ಪರ್ಧೆ ಆಯೋಜಿಸಲಾಗಿದೆ.

ಆನ್‌ಲೈನ್‌
ಕುಂದಾಪುರ ನೆಲಮೂಲದ ಆಚಾರ ವಿಚಾರ, ಕಸುಬು, ಕೃಷಿ, ಹಬ್ಬ ಹರಿದಿನಗಳು, ತಿನಿಸು, ಅಡುಗೆ, ಆಚರಣೆಗಳು, ಉದ್ಯಮ, ಭಾಷಾ ಸಂಪತ್ತು, ಕಲೆ ಸಾಹಿತ್ಯ ಹಾಡು ಹಸೆ, ಇಲ್ಲಿನ ಕಾರಣಿಕ ದೈವದೇವರು, ಪ್ರಾರ್ಥನಾ ಮಂದಿರಗಳು, ಶ್ರದ್ಧಾ ಕೇಂದ್ರಗಳು, ಐತಿಹ್ಯ, ಸ್ಥಳಪುರಾಣಗಳು, ವ್ಯಕ್ತಿ ವಿಶೇಷ ಹೀಗೆ ಮೊದಲಾದ ವಿಷಯಗಳ ಕುರಿತಾಗಿ ಕುಂದಾಪುರದ ಜನಜೀವನದ ಕುರಿತಾಗಿ ಮಾತನಾಡಿ ವೀಡಿಯೋ ಮಾಡಿ ಕಳು ಹಿಸುವ ಸ್ಪರ್ಧೆ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂಗವಾಗಿ ನಡೆದಿದೆ.

ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ವತಿಯಿಂದ ಕುಂದಾಪುರದ ಸುಂದರಿಯರಿಗೊಂದು ಸ್ಪರ್ಧೆ ಎಂದು ಮಿಡ್ಕಣಿ ದುಗ್ಗಿ ಸ್ಪರ್ಧೆ ನಡೆಸಲಾಗಿದೆ. ಪೋಟೋ ಜತೆಗೆ ಹತ್ತು ಸೌಂದರ್ಯ ಸಾಮಗ್ರಿಗಳ ಹೆಸರನ್ನು ಕುಂದಾಪ್ರ ಕನ್ನಡದಲ್ಲಿ ಬರೆದು ಕಳುಹಿಸುವಂತೆ ಸೂಚಿಸಲಾಗಿತ್ತು. ಅಂಶಂ ವತಿಯಿಂದ ಕುಂದಾಪ್ರ ಕನ್ನಡ ಕವನ ಸ್ಪರ್ಧೆ ನಡೆಸಲಾಗಿದೆ. ಚಂದದ ಮಗುವಿನ ಚಂದದ ತುಂಟಾಟದ ಚಿತ್ರಗಳ ಸ್ಪರ್ಧೆಯೂ ನಡೆದಿದೆ. ಅದಕ್ಕೆ ಕುಂದಾಪ್ರ ಕನ್ನಡದಲ್ಲಿ ಶೀರ್ಷಿಕೆ ಬರೆಯುವಂತೆ ಸೂಚಿಸಲಾಗಿದೆ. ಅಂಶಂ ವತಿಯಿಂದ ಮೂಕ್‌ ಬಾಷಿ ಎಂದು ಸಾಕುಪ್ರಾಣಿಯ ಜತೆಗೊಂದು ಸೆಲ್ಫಿ ಪೋಟೋ ಸ್ಪರ್ಧೆ ಆಯೋಜಿಸಲಾಗಿದೆ. ಕುಂದಾಪ್ರ ಕನ್ನಡದಲ್ಲಿ ಪ್ರಬಂಧ ಬರೆಯುವ ಸ್ಪರ್ಧೆ ನಾನು ನನ್ನ ಕುಂದಾಪ್ರವನ್ನು ಆಯೋಜಿಸಲಾಗಿದೆ.

Advertisement

ಕಾರ್ಯಕ್ರಮ
ಯಕ್ಷನುಡಿಸಿರಿ ಬಳಗ ಸಿದ್ಧಾಪುರ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಆ.8ರಂದು ಬರೆಗುಂಡೆ ಸಣ್ಣಯ್ಯ ಯಡಿಯಾಳ ರೋಟರಿ ಸಭಾಭವನದಲ್ಲಿ ನಡೆಯಲಿದೆ. ರೋಟರಿ ಕ್ಲಬ್‌ ಸಿದ್ದಾಪುರ, ಹೊಸಂಗಡಿ ಇದಕ್ಕೆ ಸಹಕರಿಸಲಿದೆ. ಆ ದಿನ ಸಾರ್ವಜನಿಕರಿಗೆ ಕುಂದಗನ್ನಡದಲ್ಲಿ ಕಥೆ ಹೇಳುವ ಸ್ಪರ್ಧೆ, ಕುಂದಗಾಯನ ಸ್ಪರ್ಧೆ, ಭತ್ತಕುಟ್ಟುವ ಹಾಡಿನ ಸ್ಪರ್ಧೆ, ಕುಂದಗನ್ನಡ ಕವನ ಸ್ಪರ್ಧೆ ನಡೆಯಲಿದೆ. ಅಂಶಂ ಅಂಪಾರು ಶಂಕರನಾರಾಯಣ ಕುಂದಗನ್ನಡ ಕುಟುಂಬ ಪ್ರಸ್ತುತಿಯಲ್ಲಿ ಪುರುಷರು, ಮಹಿಳೆಯರು, ಪುಟಾಣಿಗಳಿಗಾಗಿ ಕೆಸರಾಟ ನಡೆದಿದೆ. ಹಗ್ಗಜಗ್ಗಾಟ, ವಾಲಿಬಾಲ್‌, ತ್ರೋಬಾಲ್‌, ಓಟಗಳು ಮತ್ತು ಕೆಸರುಗದ್ದೆ ಕ್ರಿಕೆಟ್‌ ಪಂದ್ಯಾಟ ಶಾನ್ಕಟ್ಟು ಹೆರಿಗದ್ದೆಯಲ್ಲಿ ನಡೆದಿದ್ದು ಆ.8ರಂದು ಶಂಕರನಾರಾಯಣದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಅಂಶಂ ವತಿಯಿಂದ ಆ.8ರಂದು ಮಾತು ಕಥೆ ಅಂದು ಇಂದು ಕಾರ್ಯಕ್ರಮ ಶಂಕರನಾರಾಯಣದ ಜಿ.ಎಸ್‌. ಆಚಾರ್‌ ರಂಗಮಂದಿರದಲ್ಲಿ ನಡೆಯಲಿದೆ. ಕುಂದಾಪ್ರ ನೆಲಮೂಲದ ಹಾಡುಗಳು ಕಾರ್ಯಕ್ರಮ ನಡೆಯಲಿದ್ದು ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ವತಿಯಿಂದ ಕೆಸರ್‌ಮಯ ಗಮ್ಮತ್ತಿನ ಸಮಯ ಕಾರ್ಯಕ್ರಮ ನೈಕಂಬ್ಳಿ ಬೈಲ್‌ನಲ್ಲಿ ಆ.8ರಂದು ನಡೆಯಲಿದೆ. ಆಟ, ಓಟ, ಊಟ, ರೋಚಕ ಸ್ಪರ್ಧೆ, ವಿವಿಧ ಪಂದ್ಯಾಟ ನಡೆಯಲಿದೆ. ಇದಲ್ಲದೇ ಇನ್ನೂ ಅನೇಕ ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಂಡಿವೆ. ಬೇರೆ ಬೇರೆ ಊರುಗಳಲ್ಲಿ ಕೂಡ ವಿಶ್ವ ಕುಂದಾಪ್ರ ಕನ್ನಡದ ಕಾರ್ಯಕ್ರಮ ನಡೆಯಲಿದೆ.

ಉದಯವಾಣಿಯಿಂದ
ಛಾಯಾಚಿತ್ರ ಸ್ಪರ್ಧೆ
ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ನಮ್ದು ಒಂದ್‌ ಪಾಲ್‌ ಇರ್ಲಿ. ನಮ್‌ ಕುಂದಾಪ್ರದ್‌ ಸೊಗಡ್‌ ಸಾರು ಪರಿ ಪರಿ ಪಟ ಕಳ್ಸಿ . ನಾಕ್‌ ಸಾಲ್‌ ಕುಂದಾಪ್ರ ಕನ್ನಡªಂಗೆ ಸಾಪ್‌ ಮಾಡಿ ಬರಿನಿ. ಅದ್ರೊಟ್ಟಿಗೆ ಲಾಯ್ಕಿದ್ದದ್‌ ಅಡಿಬರಹವೂ ಇರ್ಲಿ ಎಂದು ಉದಯವಾಣಿ ಆನ್‌ಲೈನ್‌ ಮೂಲಕ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ. 8ರಂದು ಉದಯವಾಣಿ ಫೇಸ್‌ಬುಕ್‌ ಪೇಜ್‌ನಲ್ಲಿ ಇದರ ಫ‌ಲಿತಾಂಶ ಪ್ರಕಟವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next