Advertisement

ನವೆಂಬರ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ?

12:54 PM May 16, 2017 | Team Udayavani |

ದಾವಣಗೆರೆ: ನವೆಂಬರ್‌ ತಿಂಗಳಲ್ಲಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ. ಸರ್ಕಾರದಿಂದ ಈವರೆಗೆ ಅಧಿಕೃತ ಘೋಷಣೆ ಆಗದೇ ಇದ್ದರೂ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.  

Advertisement

ಸಮ್ಮೇಳನದ ಪ್ರಥಮ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಈ ಹಿಂದೆ ನಮ್ಮ ನಗರದಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತುಂಬಾ ಅಚ್ಚುಕಟ್ಟಾಗಿ ನಡೆಸಲಾಗಿದೆ. ಅದೇ ರೀತಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಬೇಕು. ಈಗಾಗಲೇ ಸಮ್ಮೇಳನ ಸಂಬಂಧ ಬೆಂಗಳೂರಲ್ಲಿ ರಾಜ್ಯಮಟ್ಟದ ಸಭೆ ನಡೆದಿದೆ.

ಅಧಿಕಾರಿಗಳೊಂದಿಗೆ ಸಮ್ಮೇಳನದ ಚರ್ಚೆ ನಡೆಸಲಾಗಿದೆ. ಸರ್ಕಾರ ಇದಕ್ಕಾಗಿ 25 ಕೋಟಿ ರೂ. ನೀಡಬಹುದೆಂಬ ನಿರೀಕ್ಷೆ ಇದೆ. ಈ ಹಿಂದೆ ಬೆಳಗಾವಿಯಲ್ಲಿ ನಡೆದ 2ನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಒಟ್ಟು 35 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಆದರೆ, ಇದುವರೆಗೆ 10 ಕೋಟಿ ರೂ. ಅನುದಾನ ಬಂದಿಲ್ಲ ಎಂಬ ಮಾಹಿತಿ ಇದೆ. 

ಹಾಗಾಗಿ 25 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಮ್ಮೇಳನ ಆಯೋಜಿಸಲು ಯೋಜನೆ ರೂಪಿಸಿ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಮಾತನಾಡಿ, ಸಮ್ಮೇಳನದ ದಿನಾಂಕ ಇನ್ನೂ ನಿಗದಿಯಾಗಿಲ್ಲ. 

ಆದರೆ, ಈಗಾಗಲೇ ಸರ್ಕಾರದಿಂದ ದಾವಣಗೆರೆಯಲ್ಲಿಯೇ ಸಮ್ಮೇಳನ ಆಯೋಜಿಸುವ ಕುರಿತು ಸೂಚನೆ ಬಂದಿದೆ. ಇದಕ್ಕಾಗಿ ಅಧಿಕಾರಿಯನ್ನೂ ಸಹ ನೇಮಕ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಸುತ್ತಿನ ಸಭೆ ಕರೆಯಲಾಗಿದೆ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕುರ್ಕಿ ಮಾತನಾಡಿ, ನವೆಂಬರ್‌ ನಲ್ಲಿ ಸಮ್ಮೇಳನ ಆಯೋಜಿಸುವುದು ಸೂಕ್ತ. 

Advertisement

ಸರ್ಕಾರದಿಂದ ಜುಲೈನಲ್ಲಿ ಸಮ್ಮೇಳನ ಮಾಡುವ ಇಚ್ಛೆ ಇದ್ದಂತೆ ಕಾಣುತ್ತದೆ. ಆದರೆ, ಆ ತಿಂಗಳಲ್ಲಿ ಮಳೆಗಾಲವಾಗುವುದರಿಂದ ಮಳೆ ಸಮಸ್ಯೆ ಒಂದು  ಕಡೆಯಾದರೆ, ಎಲ್ಲರೂ ಪಾಲ್ಗೊಳ್ಳುವುದು ಕಷ್ಟಸಾಧ್ಯಧಿ ವಾಗಬಹುದು. ಇನ್ನು ಸಮ್ಮೇಳನದ ಕುರಿತು ಸಲಹೆ, ಸೂಚನೆ ನೀಡಲು, ಚರ್ಚೆ ಮಾಡಲು ಜಿಲ್ಲಾಡಳಿತ ಭವನದಲ್ಲಿ ಒಂದು ಪ್ರತ್ಯೇಕ ಕೋಣೆ ಮೀಸಲಿಡಧಿ ಬೇಕು ಓರ್ವ ಕೆ.ಎ.ಎಸ್‌. ಮಟ್ಟದ ಅಧಿಕಾರಿ ನೇಮಿಸಿ, ಅಗತ್ಯ ಸೌಲಭ್ಯ ಒದಗಿಸಬೇಕು ಎಂದರು. 

ನವೆಂಬರ್‌ನಲ್ಲೇ ಸಮ್ಮೇಳನ ಆಯೋಜಿಸುವುದು ಸೂಕ್ತ ಎಂಬುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರು ತಮ್ಮ ಅಭಿಪ್ರಾಯ ಹೇಳಿದರು. ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ  ಎ.ಆರ್‌. ಉಜ್ಜನಪ್ಪ, ಮಾಜಿ ಗೌರವಾಧ್ಯಕ್ಷ ಬಾ.ಮ. ಬಸವರಾಜಯ್ಯ ಇತರರು ಮಾತನಾಡಿ, ಕಳೆದ ಸಮ್ಮೇಳನದ ಉದ್ಘಾಟನೆಗೆ ಐಶ್ವರ್ಯ ರೈ ಅತಿಥಿಗಳಾಗಿದ್ದರು.

ಆದರೆ, ಈ ಬಾರಿ ಹಾಗೆ ಮಾಡಬಾರದು. ಕನ್ನಡ ಬಲ್ಲ, ಇಲ್ಲಿನ ಸಂಸ್ಕೃತಿ, ಪರಂಪರೆ ತಿಳಿದವರು, ವರ್ಚಸ್ಸಿನ ವ್ಯಕ್ತಿತ್ವ ಹೊಂದಿದವರನ್ನು ಸಮ್ಮೇಳನದ ಉದ್ಘಾಟನೆಗೆ ಕರೆಸಬೇಕು ಎಂದು ಸಲಹೆ ನೀಡಿದರು. ಈ ಮಧ್ಯೆ ತಾಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಶಿಲ್ಪಾ ಶೆಟ್ಟಿ ಅವರನ್ನು ಆಹ್ವಾನಿಸಲು ಕೆಲವರು ಸಲಹೆ ನೀಡಿದ್ದರು ಎಂದಾಗ, ಸಚಿವ ಮಲ್ಲಿಕಾರ್ಜುನ್‌, ಶಿಲ್ಪಾ ಶೆಟ್ಟಿ ಅಲ್ಲ, ಅನುಷ್ಕಾ ಶೆಟ್ಟಿ ಎಂದು ತಮಾಷೆ ಮಾಡಿದರು. 

ಮತ್ತೆ ಮಾತು ಮುಂದುವರಿಸಿದ ವಾಮದೇವಪ್ಪ ಸಮ್ಮೇಳನದ ನೆನಪಿಗೊಂದು ಭವನ ನಿರ್ಮಿಸಿ ಎಂದರು. ಆಗ ಮಲ್ಲಿಕಾರ್ಜುನ್‌, ಡೂಡಾ ಅಧ್ಯಕ್ಷರೊಂದಿಗೆ ಮಾತನಾಡಿ ಒಂದು ನಿವೇಶನ ಗುರುತಿಸಿ, ಅಲ್ಲಿ ಏನು ಕಟ್ಟಬೇಕು ಎಂಬುದನ್ನು ನಿರ್ಧರಿಸಿ ಎಂದು ಸೂಚಿಸಿದರು. ಕಲಾವಿದ ಸಂಪಣ್ಣ ಮುತಾಲಿಕ್‌ ಮಾತನಾಡಿ, ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಸಮ್ಮೇಳನ ಪೂರ್ವದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಿ. ಇಲ್ಲಿ ವಿವಿ ಇರುವುದರಿಂದ ಎಲ್ಲಾ ಮಕ್ಕಳನ್ನು ಒಟ್ಟಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಎಂದರು. 

ಹರಿಹರ ತಾಲ್ಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ರೇವಣಸಿದ್ಧಪ್ಪ ಅಂಗಡಿ ಮಾತನಾಡಿ, ಸಮ್ಮೇಳನಕ್ಕೆ ಒಟ್ಟು 15 ವೇದಿಕೆ ನಿರ್ಮಿಸಬೇಕಿದ್ದು, ಹರಿಹರದಲ್ಲೂ ವೇದಿಕೆ ನಿರ್ಮಾಣಕ್ಕೆ ಚಿಂತಿಸಿ ಎಂದು ತಿಳಿಸಿದರು. ಜಾನಪದ ತಜ್ಞ ಡಾ| ಎಂ.ಜಿ. ಈಶ್ವರಪ್ಪ ಮಾತನಾಡಿ, ಸಮ್ಮೇಳನಕ್ಕೆ 50-60 ಸಾವಿರ ಜನ ಬರುವ ನಿರೀಕ್ಷೆ ಇರುತ್ತದೆ. ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಸರಿಯಾಗಿ ಮಾಡಿದರೆ ಮಾತ್ರ ಸಮ್ಮೇಳನ ಯಶಸ್ವಿ ಕಾಣಲು ಸಾಧ್ಯ.

ಈ ಹಿನ್ನೆಲೆಯಲ್ಲಿ ಹರಿಹರ, ದಾವಣಗೆರೆ ನಗರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. 15 ಕಡೆ ಊಟಕ್ಕೆ ವ್ಯವಸ್ಥೆ ಮಾಡಬೇಕು. ಭೋಜನ, ಪ್ರಚಾರ ಸಮಿತಿಗಳನ್ನು ಕರಾರುವಕ್ಕಾಗಿ ರಚಿಸಿ, ಜವಾಬ್ದಾರಿ ವಹಿಸಿದರೆ ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. 

ಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿ ಇರಬೇಕಾದರೆ ಆಳ್ವಾಸ್‌ ಸಂಸ್ಥೆಯವರ ಸಹಯೋಗ ಪಡೆದುಕೊಳ್ಳುವುದು ಉತ್ತಮ ಎಂದರು. ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ, ತಹಶೀಲ್ದಾರ್‌ ಸಂತೋಷ್‌ಕುಮಾರ್‌ ಇತರೆ ಅಧಿಕಾರಿಗಳು, ಸಂಘ, ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next