ಮೂಡುಬಿದಿರೆ: ವಿಶ್ವ ಜಾಂಬೂರಿಯಲ್ಲಿ ಸ್ಕೌಟ್ಸ್, ಗೈಡ್ಸ್, ರೇಂಜರ್ಸ್, ರೋವರ್ಸ್‌ನ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರಿಂದ ಅವರ ಆರೋಗ್ಯಕ್ಕೆ ಆದ್ಯತೆ ನೀಡುವುದು ಬಹುಮುಖ್ಯ. ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ದಿನದ 24 ಗಂಟೆಯೂ ದೇಶ ವಿದೇಶದಿಂದ ಆಗಮಿಸಿದ ವಿದ್ಯಾರ್ಥಿಗಳ ಮೇಲೆ ತಜ್ಞ ವೈದ್ಯರ ತಂಡ ನಿಗಾ ಇರಿಸಿ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಐದು ತುರ್ತು ಚಿಕಿತ್ಸಾ ಘಟಕಗಳು, ಮೂರು ಆರೋಗ್ಯ ಕೇಂದ್ರಗಳು, ಎಂಟು ಆ್ಯಂಬುಲೆನ್ಸ್‌ಗಳ ಜತೆಗೆ ಮಕ್ಕಳ ವಿಶೇಷ ವೈದ್ಯಕೀಯ ತಜ್ಞರು ಸಹಿತ 40 ಮಂದಿ ತಜ್ಞರಿದ್ದರು. ಸಮುದಾಯ ಅಧಿಕಾರಿಗಳು, ಆಶಾಕಾರ್ಯಕರ್ತರನ್ನು ಒಳಗೊಂಡ ಸಮಗ್ರ ತಂಡ ಪಾಳಿಯಲ್ಲಿ ಜಾಂಬೂರಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ| ಎಂ. ವಿನಯ್ ಆಳ್ವ, ವೈದ್ಯ ಡಾ| ವಿಷ್ಣು ನೇತೃತ್ವ ಹಾಗೂ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ|ಕಿಶೋರ್ ಕುಮಾರ್ ಸಹಭಾಗಿತ್ವದ ತಂಡ ಜಾಂಬೂರಿಯಲ್ಲಿ ಆರೋಗ್ಯ ರಕ್ಷಣೆಯ ಹೊಣೆಗಾರಿಕೆಯನ್ನು ನಿರ್ವಹಿಸಿದೆ.
ಜಾಂಬೂರಿಯ ಪ್ರಥಮ ದಿನವಾದ ಡಿ. 21ರಂದು 818 ಮಂದಿ, 22ರಂದು 921 ಮಂದಿ, 23ರಂದು 1660 ಮಂದಿ, 24ರಂದು 1995 ಮಂದಿ, ಡಿ. 25ರಂದು 2,695 ಮಂದಿಗೆ ಆಳ್ವಾಸ್ ಕ್ಯಾಂಪಸ್‌ನ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ.
ಐದು ದಿನಗಳಲ್ಲಿ 7,000 ಮಂದಿಗೆ ಚಿಕಿತ್ಸೆ
ಸ್ಕೌಟ್ಸ್, ಗೈಡ್ಸ್, ರೇಂಜರ್ಸ್, ರೋವರ್ಸ್ ನ ವಿದ್ಯಾರ್ಥಿಗಳು ಕಸರತ್ತು ನಡೆಸುವ ವೇಳೆ ಬಹುತೇಕವಾಗಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದಿರುವುದೇ ಹೆಚ್ಚು. ಉಳಿದಂತೆ ವಾಂತಿ, ಕೆಮ್ಮು, ಜ್ವರ, ಮೈಕೈ ನೋವು ಮೊದಲಾದ ಆರೋಗ್ಯ ಸಮಸ್ಯೆಗಳಿಗೆ ಮಕ್ಕಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಐದು ದಿನಗಳಲ್ಲಿ ಸುಮಾರು 7,000 ಮಂದಿ ಕ್ಯಾಂಪಸ್ ಆವರಣದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
-ಡಾ| ಕಿಶೋರ್ ಕುಮಾರ್,
ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ