Advertisement
ಈ ರುಚಿಯನ್ನು ಸವಿದವನೇ ಬಲ್ಲ! ಅಂದ ಹಾಗೆ ನಾವು ಪ್ರಸ್ತುತ ಪಡಿಸುವ ತಿಂಡಿಯಂದರೆ ಅದುವೇ ಇಡ್ಲಿ . ಇಡ್ಲಿಯ ಹಿಂದೆ ಹಲವಾರು ಕುತೂಹಲಕರ ಕಥೆಯೇ ಇದೆ ಎಂದರೆ ನಂಬುತ್ತೀರಾ! ಹಾಗಿದ್ದರೆ ಇಡ್ಲಿಯ ಇತಿಹಾಸ/ಉತ್ತಮ ಆರೋಗ್ಯ ಮತ್ತು ವಿವಿಧ ಬಗೆಯ ತಿನಿಸುವಿನ ಜೊತೆಗೆ “ರಾಗಿ ಇಡ್ಲಿ ”ಮಾಡುವ ರೆಸಿಪಿಯನ್ನು ಪ್ರಸ್ತುತ ಪಡಿಸುತ್ತೇವೆ.
ಇಡ್ಲಿ ಇಂದು ನಿನ್ನೆಯ ತಿಂಡಿಯಲ್ಲ,ಇದರ ಇತಿಹಾಸ ಇನ್ನೂ ಬಲು ಅದ್ಭುತವಾಗಿದೆ. 7 ನೇ ಶತಮಾನದಲ್ಲಿ ಇಡ್ಲಿಯನ್ನು ಕಂಡು ಹಿಡಿಯಲಾಯಿತು. ಎನ್ನದಾದರೂ ಕ್ರಿ.ಶ 920ರಲ್ಲಿ ಶಿವಕೋಟ್ಯಾಚಾರ್ಯರ “ವಡ್ಡಾರಾಧನೆ” ಎಂಬ ಕನ್ನಡದ ಮೊದಲ ಗದ್ಯ ಕೃತಿಯಲ್ಲಿ ಇಡ್ಲಿಯ ಬಗ್ಗೆ ಉಲ್ಲೇಖವಿದೆ. ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದಾರೆಂಬುದು ಕಂಡು ಬರುತ್ತದೆ. ಕ್ರಿ.ಶ 1025ರ ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ ರುಬ್ಬಿ ಮೆಣಸು, ಕೊತ್ತಂಬರಿ ಮೊದಲಾದವನ್ನು ಸೇರಿಸಿ ಹಿಟ್ಟನ್ನು ತಯಾರಿಸುತ್ತಿದ್ದರು. ಕೆಲ ಆಹಾರ ತಜ್ಞರು ಹೇಳುವ ಪ್ರಕಾರ ಇಡ್ಲಿ ಭಾರತಕ್ಕೆ ಬಂದದ್ದು ಇಂಡೋನೇಷ್ಯಾದಿಂದ. ಸುಮಾರು 800ರಿಂದ 1200ರ ಶತಮಾನದಲ್ಲಿ ಭಾರತಕ್ಕೆ ಬಂದಿದೆ ಎನ್ನುತ್ತಾರೆ. ಇಂಡೋನೇಷ್ಯಾದಲ್ಲಿ ಇದನ್ನು “ಕೆಡ್ಲಿ ”ಎಂದೂ ಕರೆಯಲಾಗುತ್ತದೆ. ಕನ್ನಡದ ಶಿವಕೋಟ್ಯಾಚಾರ್ಯರ “ವಡ್ಡಾರಾಧನೆ” ಕೃತಿಯಲ್ಲಿ ಇಡ್ಡಲಿಗೆ ಎಂಬ ತಿಂಡಿಯ ಉಲ್ಲೇಖ ಮಾಡಿದ್ದಾರೆ.
Advertisement
ಇಡ್ಲಿಗೂ ಒಂದು ದಿನ:ಇಡ್ಲಿಗೂ ಒಂದು ದಿನ ಇದೆ. ಪ್ರತಿ ವರ್ಷ ಮಾರ್ಚ್30ರಂದು “ವಿಶ್ವ ಇಡ್ಲಿ ದಿನ ”ಆಚರಣೆ ಮಾಡಲಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯ ಆಹಾರ:
ದಕ್ಷಿಣ ಭಾರತದ ಪ್ರಸಿದ್ಧ ತಿಂಡಿಯಾದ ಇಡ್ಲಿ ಆರೋಗ್ಯಕ್ಕೂ ಹಿತಕರ. ಇದರಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇವೆ. ಕಾರ್ಬೋ ಹೈಡ್ರೇಟ್ ಗಳು ಪ್ರೋಟೀನ್ ಗಳು ವಿವಿಧ ಕೊಬ್ಬಗಳು, ಅಮೈನೋ ಆಮ್ಲ ಮತ್ತು ಫೈಬರ್ ಇರುತ್ತದೆ. ಇದರಿಂದಾಗಿ ಇಡ್ಲಿಯು ಆರೋಗ್ಯಕ್ಕೆ ಒಳ್ಳೆಯ ತಿಂಡಿ ತಿನಿಸಾಗಿದೆ. ವಿವಿಧ ಬಗೆಯ ಇಡ್ಲಿ ತಿನಿಸು:
ಇಡ್ಲಿ ಎಂದರೆ ಕಡಿಮೆಯೇ? ಅದರಲ್ಲಿ ವಿವಿಧ ಬಗೆಯ ಇಡ್ಲಿಗಳಿವೆ ಉದಾಃ ರವೆ ಇಡ್ಲಿ , ಉದ್ದಿನ ಇಡ್ಲಿ, ರಾಗಿ ಇಡ್ಲಿ, ಅಕ್ಕಿ ಇಡ್ಲಿ…. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕರ್ನಾಟಕದಲ್ಲಂತೂ ಹಲವು ಹೊಟೇಲ್ ಗಳು ಇಡ್ಲಿಯಿಂದಲೇ ಪ್ರಸಿದ್ಧಿ ಪಡೆದಿದೆ. ರಾಗಿ ಆರೋಗ್ಯಕ್ಕೆ ಬಲು ಉಪಕಾರಿ
ರಾಗಿ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಯಾಕೆಂದರೆ ಇದರಲ್ಲಿ ಕ್ಯಾಲ್ಸಿಯಂ,ಫೈಬರ್ ಖನಿಜಾಂಶ ಮತ್ತು ಪ್ರೋಟೀನ್‌ಗಳು ಹೇರಳವಾಗಿರುತ್ತದೆ. ಮಧುಮೇಹ , ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ರಾಗಿ ಒಳ್ಳೆಯದು. ರಾಗಿಯಿಂದ ಬಗೆಬಗೆಯ ತಿಂಡಿ-ತಿನಿಸುಗಳನ್ನು ಮಾಡಬಹುದಾಗಿದೆ ಆದರೆ ನಾವು ಇಂದು ನಿಮಗಾಗಿ “ರಾಗಿ ಇಡ್ಲಿ ”ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ…. ರಾಗಿ ಇಡ್ಲಿ
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು 4 ಕಪ್, ಉದ್ದಿನ ಬೇಳೆ 1ಕಪ್,ಮೆಂತ್ಯೆ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ
ಒಂದು ಪಾತ್ರೆಗೆ ಉದ್ದಿನ ಬೇಳೆ ಮತ್ತು ಮೆಂತ್ಯೆಯನ್ನು ಹಾಕಿ 2ರಿಂದ 3 ಗಂಟೆಗಳ ಕಾಲ ನೆನೆಸಿರಿ. ನೆನೆದಿಟ್ಟ ಬೇಳೆಯನ್ನು ಮಿಕ್ಸಿಗೆ ಹಾಕಿ ಗಟ್ಟಿಯಾಗಿ ರುಬ್ಬಿಟ್ಟುಕೊಳ್ಳಿ. ರುಬ್ಬಿಟ್ಟ ಹಿಟ್ಟಿಗೆ ರಾಗಿಹಿಟ್ಟನ್ನು ಹಾಕಿ ನೀರು ಸೇರಿಸಿ ಚೆನ್ನಾಗಿ ಕಲಸಿರಿ.ನಂತರ ಸುಮಾರು 4 ರಿಂದ 5 ಗಂಟೆಗಳ ಕಾಲ ಹಾಗೆ ಬಿಡಿ ಚೆನ್ನಾಗಿ ಉದುರು ಬಂದಿರುತ್ತದೆ. ಆ ಮೇಲೆ ನೀರು ಸೇರಿಸಿ ಉಪ್ಪು ಹಾಕಿ ಹದ ಮಾಡಿಕೊಳ್ಳಿ ತದನಂತರ ಇಡ್ಲಿ ತಟ್ಟೆಗೆ ಎಣ್ಣೆ ಸವರಿ, ಹಿಟ್ಟನ್ನು ಹಾಕಿ 20 ನಿಮಿಷಗಳ ಹಬೆಯಲ್ಲಿ ಬೇಯಿಸಿರಿ.ಬಿಸಿ-ಬಿಸಿಯಾದ ಸ್ವಾದಿಷ್ಟಕರವಾದ ರಾಗಿ ಇಡ್ಲಿ ಚಟ್ನಿ ಜೊತೆ ಸವಿಯಲು ಸಿದ್ಧವಾಗಿದೆ.