ಮಂಡ್ಯ: ಕಲುಷಿತ ಆಹಾರ ಸೇವಿಸಿ ಪ್ರತಿ ವರ್ಷ 240ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಪ್ರತಿನಿತ್ಯ 16 ಲಕ್ಷ ಮಂದಿ ಕಲುಷಿತ ಆಹಾರ ಸೇವಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಜಿ.ಪ್ರವೀಣ್ ಆತಂಕ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಕಾನೂನು ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಪಿಇಎಸ್ ಕಾನೂನು ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ ವತಿಯಿಂದ ನಡೆದ ವಿಶ್ವ ಆಹಾರ ಸುರಕ್ಷತಾ ದಿನ, ವಿಶ್ವ ಬಾಲಕಾರ್ಮಿಕ ವಿರೋಧಿ ದಿನ, ವಿಶ್ವ ರಕ್ತದಾನಿಗಳ ದಿನ ಹಾಗೂ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲುಷಿತ ಆಹಾರ ಸೇವಿಸಿ ನಮ್ಮ ದೇಹವನ್ನು ಹಾಳು ಮಾಡಿಕೊಳ್ಳುವುದಲ್ಲದೆ, ಭೂಮಿ, ಪರಿಸರವನ್ನೂ ಹಾಳು ಗೆಡುತ್ತಿದ್ದೇವೆ. ವಯಸ್ಸಾದವರು, ಐದು ವರ್ಷದೊಳಗಿನ ಮಕ್ಕಳು ಮತ್ತು ಬಡ ಜನಸಂಖ್ಯೆಯಂಥ ದುರ್ಬಲ ಗುಂಪುಗಳು ಆಹಾರದಿಂದ ಹರಡುವ ಕಾಯಿಲೆಗೆ ಹೆಚ್ಚು ಒಡ್ಡಿಕೊಳ್ಳುತ್ತವೆ. ಹೆಚ್ಚಿನ ಅಪಾಯದಲ್ಲಿರುತ್ತವೆ. ಅಸುರಕ್ಷಿತ ಆಹಾರವು ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಅಸುರಕ್ಷಿತ ಆಹಾರ ಕಡಿಮೆ ಮಾಡಿ: ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಋಣಾತ್ಮಕ ಆರ್ಥಿಕ ಪರಿಣಾಮಗಳನ್ನು ಬೀರುತ್ತದೆ. ಅಸುರಕ್ಷಿತ ಆಹಾರವು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ ಉತ್ಪಾದಕತೆ ಮತ್ತು ವೈದ್ಯಕೀಯ ವೆಚ್ಚಗಳಲ್ಲಿ ಪ್ರತಿ ವರ್ಷ 110 ಶತ ಕೋಟಿ ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದರು.
ವಾದದ ಕಲೆಗಾರಿಕೆ ಅರಿತುಕೊಳ್ಳಿ: ಕಾನೂನು ವಿದ್ಯಾರ್ಥಿಗಳು ತಿಳಿದುಕೊಳ್ಳುವುದರ ಜೊತೆಗೆ ಕೆಳ ಮತ್ತು ಮೇಲು ಹಂತದ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವುದು. ಉತ್ಛ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ಈ ಬಗ್ಗೆ ವಾದ ಮಂಡಿಸುವಂಥ ಕಲೆಗಾರಿಕೆಯನ್ನು ಅರಿತುಕೊಳ್ಳಬೇಕು. ನಾನು ಎಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಸಾಮಾನ್ಯ ಜನರಿಗೆ ಕಾನೂನು ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಕಾನೂನು ಪದವೀಧರನಾಗಿದ್ದ ವಕೀಲಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವಿದ್ಯಾರ್ಥಿ ಯಾಗಿದ್ದಾಗಲೇ ಕೆಳ ಹಂತದ ನ್ಯಾಯಾಲಯಗಳಲ್ಲಿನ ಕಲಾಪಗಳನ್ನು ವೀಕ್ಷಿಸಬೇಕು. ಅರ್ಜಿ ಸಲ್ಲಿಸುವುದು, ವಾದ- ಪ್ರತಿವಾದಗಳನ್ನು ಆಲಿಸುವುದು, ನಂತರ ತಾವೂ ಅದರಲ್ಲಿ ಭಾಗಿಯಾಗುವುದು ಹೇಗೆಂಬ ಬಗ್ಗೆ ತಿಳಿಯುವುದು ಅಗತ್ಯ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜೆ.ಯೋಗೀಶ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಎಂ.ಪಿ.ಪ್ರಮೋದ್ ಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.