Advertisement
ಅದು ಭಾರತೀಯ ಸನಾತನ ಸಂಸ್ಕೃತಿಯ ಮನೆ. ಅದನ್ನು ಮನೆಯೆನ್ನಿ, ಕುಟುಂಬವೆನ್ನಿ, ಪರಿವಾರವೆಂದೇ ಎನ್ನಿ; ಶಬ್ದ ವ್ಯತ್ಯಾಸವಾದರೂ ಧ್ವನಿವ್ಯತ್ಯಾಸವಾಗದು. ಅದಕ್ಕೊಂದು ಕಟ್ಟಡವಿರಲೇಬೇಕಲ್ಲವೇ? ಇದೆ. ಆ ಕಟ್ಟಡಕ್ಕೂ ಅದಿರುವ ಭೌಗೋಳಿಕ ಸನ್ನಿವೇಶಕ್ಕೂ ತೀರಾ ಹತ್ತಿರದ ಸಂಬಂಧವಿರುತ್ತದೆ. ಅದರ ವಿನ್ಯಾಸಕ್ಕೂ ಮನೆಯ ಬದುಕಿನ ಶೈಲಿಗೂ ಅಲ್ಲಿಯ ತಣ್ತೀ-ಆಚರಣೆಗಳಿಗೂ ಒಂದು ಸಂಬಂಧವಿರುತ್ತದೆ. ಅಂದರೆ ಮನೆಯ ಶ್ರದ್ಧೆ, ಮನೆಯ ಕಟ್ಟಡ ಮತ್ತು ಪರಿಸರ ಇವು ಮೂರೂ ಪರಸ್ಪರ.
ಮನೆಯಲ್ಲೊಂದು ಅಂಗಾಂಗೀಭಾವವಿದೆ. ಶರೀರದ ಒಂದು ಅಂಗ ಹಾನಿಗೊಳ ಗಾದಾಗ ಮತ್ತೂಂದು ಅದರ ಸಹಾಯಕ್ಕೆ ಬರುತ್ತದೆ. ಮಾತ್ರವಲ್ಲ, ಅದು ನಿರ್ವಹಿಸಬೇಕಾದ ಕಾರ್ಯವನ್ನೂ ತಾನೇ ಮಾಡುತ್ತದೆ. ಇದಕ್ಕಿಂತಲೂ ವಿಪರೀತವಾದ ಒಂದು ಸಂಗತಿ ಏನೆಂದರೆ; ಒಂದು ಅಂಗ ಮತ್ತೂಂದನ್ನು ಅಪ್ಪಿ ತಪ್ಪಿಯೋ ಉದ್ದಿಶ್ಯಪೂರ್ವಕ ವಾಗಿಯೋ ಹಾನಿಗೊಳಿಸಿದರೆ ಯಾವುದೇ ಸೇಡಿನ ಉಪಕ್ರಮವಿಲ್ಲ. ಒಟ್ಟಾರೆಯಾಗಿ ಎಲ್ಲ ಅಂಗಗಳೂ ಶರೀರಕೇಂದ್ರಿತವಾಗಿ ಪಾರಸ್ಪರಿಕವಾಗಿವೆ. ಹಾಗೆಯೇ ಒಂದು ಮನೆಯಲ್ಲಿ ಎಲ್ಲರೂ ಕುಟುಂಬ ಕೇಂದ್ರಿತವಾಗಿ ಪರಸ್ಪರ ಅನುಕೂಲರಾಗಿರುತ್ತಾರೆ. ಮನೆಯಲ್ಲಿ ಆರ್ಥಿಕ ಚಟುವಟಿಕೆ ಇದೆ. ಮನೆಯೆಂಬ ತಾತ್ವಿಕ ನೆಲೆಗಟ್ಟನ್ನು ವ್ಯಾವಹಾರಿಕವಾಗಿ ಮುಂದುವರಿಸಿಕೊಂಡುಹೋಗಬೇಕಷ್ಟೆ. ಅದಕ್ಕಾಗಿ ಅಥೋಪಾರ್ಜನೆಯೂ ಅನಿವಾರ್ಯವಾಗಿ ಎಂಬಂತೆ ಆಗುತ್ತದೆ. ಆದರದು ಮನೆ ವಾರ್ತೆಯನ್ನು ನಿರ್ವಹಿಸುವುದಕ್ಕಾಗಿ ಅಷ್ಟೆ; ಲಾಭೈಕದೃಷ್ಟಿಯ ಉದ್ದಿಮೆಯಂತಲ್ಲ. ಮನೆ ತನ್ನ ಲಕ್ಷ್ಯಸಾಧನೆಗೆ ಅರ್ಥ ಮೂಲವನ್ನು ಹೊಂದಿರಲೇಬೇಕು ಎಂಬ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆ ಅಲ್ಲಿ ನಡೆಯುತ್ತದೆ. ಮನೆಯೆಂಬುದು ಆರ್ಥಿಕ ಸಂಸ್ಥೆಯಲ್ಲ, ಸಂಸ್ಕಾರ ಮಂದಿರ.
Related Articles
ಮನೆಯಲ್ಲಿ ನಡೆಯುವ ವ್ಯಕ್ತಿ ನಿರ್ಮಾಣದ ಪ್ರಯಾಸಗಳು ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುವತ್ತ ಇವೆ. ಪೀಳಿಗೆಯಿಂದ ಪೀಳಿಗೆಗೆ ಆಯಾ ಕುಟುಂಬ ಪರಂಪರೆ ಮಂದುವರಿದು ಕೊಂಡು ಹೋಗಬೇಕು. ಅದಕ್ಕಾಗಿ ಆಯಾ ಪೀಳಿಗೆಯನ್ನು ತಯಾರು ಮಾಡಬೇಕು. ಅಕ್ಕಪಕ್ಕದ ಮನೆಗಳ ಬಗೆಗೆ, ಸುತ್ತಲ ಪರಿಸರ-ಗ್ರಾಮದ ಬಗೆಗೆ, ಸಮಾಜದ ಬಗೆಗೆ ಪ್ರತಿಯೊಂದು ಮನೆಗೂ ಕಾಳಜಿ ಹೊಣೆಗಾರಿಕೆಗಳಿರುತ್ತವೆ. ಇದನ್ನು ನಿರ್ವಹಿಸುವಂತೆ ಶಕ್ತಿಕ್ಷಮತೆಯನ್ನು, ದಾಯಿತ್ವ ಬೋಧೆಯನ್ನು, ಶ್ರದ್ಧಾಜಾಗರಣವನ್ನೂ ಮುಂಪೀಳಿಗೆಯಲ್ಲಿ ಬಾಲ್ಯದಿಂದಲೇ ಭಿನ್ನಭಿನ್ನ ಸ್ತರಗಳಲ್ಲಿ ಮಾಡಬೇಕಾಗುತ್ತದೆ. ವ್ಯಕ್ತಿನಿರ್ಮಾಣವು ಈ ಎಲ್ಲ ಆಯಾಮಗಳಲ್ಲಿ ನಡೆಯಬೇಕಾದ ಅತ್ಯಂತ ಅನಿವಾರ್ಯವಾದ ಒಂದು ಚಟುವಟಿಕೆ.
Advertisement
ಸಮಾಜವೇ ಮನೆಪ್ರೀತಿ, ವಾತ್ಸಲ್ಯ, ಕಾಳಜಿ, ಶ್ರದ್ಧೆ, ಗೌರವ, ಪ್ರಾಮಾಣಿಕತೆ, ಪರಿಶುದ್ಧತೆ, ಶೀಲ, ಚಾರಿತ್ರ್ಯ ಇತ್ಯಾದಿ ಗುಣಗಳಿಗೆ ಮನೆಯೇ ತಾಣ ಮತ್ತು ಇವು ಅನುಕ್ರಮವಾಗಿ ಮನೆ, ಗ್ರಾಮ, ಸಮಾಜ ಹೀಗೆ ಉತ್ತರೋತ್ತರ ವಿಕಾಸಶೀಲ ಚಲನೆಯುಳ್ಳವು. ಅಂದರೆ; ಮನೆಮಂದಿಯನ್ನು ಪ್ರೀತಿಸಬಲ್ಲವ ಮುಂದೆ ತನ್ನ ಗ್ರಾಮಸ್ಥರನ್ನು, ಸಮಾಜವನ್ನು, ರಾಷ್ಟ್ರವನ್ನೂ ಪ್ರೀತಿಸಬಲ್ಲ. ಕಾಳಜಿ ತೋರಬಲ್ಲ, ಹಾಗೇ ಮನೆಯಲ್ಲಿಯ ಪ್ರಾಮಾಣಿಕತೆ ಯನ್ನು ಹೊರಗೂ ತೋರಬಲ್ಲ. ಇದೇ ವ್ಯವಹಾರ ಗ್ರಾಮ ದಲ್ಲೂ ಸಮಾಜದಲ್ಲೂ ತೋರಿದಾಗ ಸಾಮಾಜಿಕ ನೆಮ್ಮದಿ ನಮ್ಮ ಮುಷ್ಟಿಯ ವಸ್ತುವಾಗುತ್ತದೆ. ಸಂಸ್ಕಾರ ಅಭ್ಯಾಸವಾಗುವ ಬಗೆ
ಮನೆಯೊಂದು ಸಂಸ್ಕಾರದ ಕೇಂದ್ರ. ಅಲ್ಲಿ ಮಗುವಿಗೆ ತಾನು ಬೇರೆಯವರಿಗಿಂತ ಬೇರೆಯಲ್ಲ ಎಂಬ ಪ್ರಾಥಮಿಕ ಪಾಠ ಲಭ್ಯವಾಗುತ್ತದೆ. ಯಾವುದೇ ಮಗು ತನಗೆ ಕೊಡಲ್ಪಟ್ಟ ಯಾವುದೇ ವಸ್ತುವನ್ನು ಮೊದಲು ಬಾಯಿಗೆ ಹಾಕಿಕೊಳ್ಳುತ್ತದೆ. ಇದು ತಿನ್ನುವ ಚಾಪಲ್ಯವಲ್ಲ. ಅದಕ್ಕಿಂತ ಮುಖ್ಯವಾಗಿ ಅದು ಯಾವುದೇ ವಸ್ತುವನ್ನು ಗ್ರಹಿಸುವ ರೀತಿ -ಬಾಯಿಗೆ ಹಾಕಿಕೊಳ್ಳುವುದು. ಈ ಗ್ರಹಿಸುವಿಕೆಯಲ್ಲೇ ತನ್ನದನ್ನಾಗಿಸುವ ಕ್ರಿಯೆಯೂ ಜತೆಗೇ ಇದೆ. ತನಗೆ ಕೊಡಲ್ಪಟ್ಟದ್ದು ಇತರರಿಗೂ ಸೇರಿದೆ ಎನ್ನುವುದು ತಣ್ತೀಜ್ಞಾನ. ಅದಕ್ಕೊಂದು ಭಾವರೂಪ ನೀಡಿದಾಗ ಅದು ಅನುಷ್ಠೆàಯವಾಗುತ್ತದೆ. ತಾಯಿ ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಹಂಚಿತಿನ್ನಲು ಕಲಿಸುತ್ತಾಳೆ. ಕ್ರಮೇಣ ಮಗು ತನಗೆ ಕೊಡಲ್ಪಟ್ಟದ್ದಷ್ಟೆ ಅಲ್ಲ, ಸಿಕ್ಕಿದ್ದನ್ನೂ ತನ್ನದು ಮಾತ್ರವಲ್ಲ ಎಂಬ ಭಾವದಿಂದೆಂಬಂತೆ ತನ್ನ ಹತ್ತಿರದ ಬಂಧು ಗಳಿಗೆ ಕೊಟ್ಟು ಸ್ವೀಕರಿಸುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ತಣ್ತೀಜ್ಞಾನವೊಂದು ತನ್ನ ಅಭ್ಯಾಸಕ್ಕೇ ವಿರುದ್ಧವಾದ ಒಂದು ಅಭ್ಯಾಸವಾಗಿ ಮಗುವಿನಲ್ಲಿ ಹೀಗೆ ರೂಪುಗೊಳ್ಳುವುದು ನಿಜಕ್ಕೂ ಒಂದು ಅಚ್ಚರಿ. ಮನೆಯಲ್ಲದು ಅತ್ಯಂತ ಸಹಜವಾದ ಒಂದು ಅನೌಪಚಾರಿಕ ಸಂಸ್ಕಾರ ಚಟುವಟಿಕೆಯ ಮೂಲಕ ಕೈಗೂಡಿಬಿಡುತ್ತದೆ. ಮನೆಗೊಬ್ಬ ಯಜಮಾನನಿರುತ್ತಾನೆ. ಆತ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುವ ಹೊಣೆಹೊತ್ತ ಹಿರಿಯ. ಇನ್ನು ಗೃಹಿಣಿ ಯಿಲ್ಲದೆ ಮನೆಯಿಲ್ಲ. ಮಹಿಳೆ ಪತ್ನಿ, ಸೊಸೆ, ತಾಯಿ, ಅಜ್ಜಿ ಯಾಗಿ ಹೀಗೆ ಸರ್ವಬಗೆಗಳಲ್ಲಿ ನಿರ್ವಹಿಸುವ ಹೊಣೆಗಾರಿಕೆ ಹಲವು. ಹಾಗಾಗಿಯೇ ಆಕೆ ಪಡೆಯುವ ಶಿಕ್ಷಣ, ಸಂಸ್ಕಾರಗಳು ಒಂದು ಮನೆಗಷ್ಟೆ ಅಲ್ಲ; ಸಮಾಜಕ್ಕೇ ಹಿತ ಆಗಬಲ್ಲುದು. ಆಗ ಆಕೆ ನಿಜ ತಾಯಿಯಾಗುತ್ತಾಳೆ. ಇಂಥ ತಾಯಂದಿರು ಬೆಳಗುವ ತಾಣ ಮನೆ. ಅವರು ಮನೆಯನ್ನೂ ಬೆಳಗಿಸಬಲ್ಲರು, ಸಮಾಜವನ್ನೂ ವಿಶ್ವವನ್ನೂ ಬೆಳಗಿಸಬಲ್ಲರು. ಮನೆಯೆಂದರೆ ಅದು ವಿಶ್ವವನ್ನು ಬೆಳಗಿಸುವ ತಾಣ. - ನಾರಾಯಣ ಶೇವಿರೆ