ಮಹಾನಗರ: ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಇವರು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯ ಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ಪ್ರಾಮುಖ್ಯವನ್ನು ಯುವಸಮುದಾಯಕ್ಕೆ ತಿಳಿಸುವುದರ ಜತೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡ ನೆಡಲು ಸ್ಥಳ ಗುರುತಿಸಿ ಆಸಕ್ತರ ತಂಡ ರಚಿಸಿ ಕಾರ್ಯೋನ್ಮುಖವಾಗಲು ಸಲಹೆಯನ್ನು ನೀಡಿದರು. ಇದಕ್ಕಾಗಿ ವಕೀಲರ ತಂಡ ಸದಾ ಮುಂಚೂಣಿಯಲ್ಲಿದ್ದು ನೆರವಿನ ಭರವಸೆಯನ್ನು ಅವರು ನೀಡಿದರು.
ಕಾನೂನು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದು ಅವರು ಈ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ವೆಂಕಟಾಚಲಪತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕ್ರಂ ಅಮಟೆ, ಡಿಡಿಪಿಐ ಶಿವರಾಮಯ್ಯ, ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿಗಳು, ಪರಿಸರ ಇಲಾಖೆಯ ಅಧಿಕಾರಿಗಳು, ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.