Advertisement

ಕುಂಟುತ್ತಿರುವ ವಿಶ್ವ ಆರ್ಥಿಕತೆ ಪುನಶ್ಚೇತನದ ಅನ್ವೇಷಣೆ

03:00 AM Aug 04, 2020 | Hari Prasad |

ಕೋವಿಡ್ 19 ವೈರಸ್‌ ವಿರುದ್ಧ ವಿಶ್ವವ್ಯಾಪಿ ಸಮರವೇನೋ ನಡೆದಿದೆಯಾದರೂ, ಇದರಿಂದಾಗಿ ರಾಷ್ಟ್ರಗಳ ಆರ್ಥಿಕತೆಗೆ ಬೃಹತ್‌ ಪೆಟ್ಟೂ ಬೀಳುತ್ತಿದೆ.

Advertisement

ಕಳೆದ ವಾರ ಜಾರಿಯಾದ ಜಿಡಿಪಿ ಅಂಕಿಸಂಖ್ಯೆಗಳು ವಿಶ್ವದ ಕೆಲವು ಪ್ರಮುಖ ರಾಷ್ಟ್ರಗಳ ವಿತ್ತ ಸ್ಥಿತಿಗೆ ದೊಡ್ಡ ಸಂಕಟ ಎದುರಾಗಿರುವುದನ್ನು ಅರಹುತ್ತಿವೆ.

ಕಳೆದ ವರ್ಷದ ಎಪ್ರಿಲ್ – ಜೂನ್‌ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಇದೇ ಅವಧಿಯಲ್ಲಿ ಫ್ರಾನ್ಸ್ ನ ಜಿಡಿಪಿಯಲ್ಲಿ 13.8 ಪ್ರತಿಶತ ಕುಸಿತ ಕಂಡುಬಂದರೆ, ಜರ್ಮನಿಯಲ್ಲಿ 10.1 ಪ್ರತಿಶತ, ಸ್ಪೇನ್‌ನಲ್ಲಿ 18.5 ಪ್ರತಿಶತ ಕುಸಿತ ಮತ್ತು ಇಟಲಿಯಲ್ಲಿ 12.4 ಪ್ರತಿಶತ ಕುಸಿತ ದಾಖಲಾಗಿದೆ. ಪ್ರಪಂಚದ ಅತಿದೊಡ್ಡ ಅರ್ಥವ್ಯವಸ್ಥೆಯಾದ ಅಮೆರಿಕದಲ್ಲಿ ಈ ಮೂರು ತಿಂಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 9.5 ರಷ್ಟು ಕುಸಿತ ಕಾಣಿಸಿಕೊಂಡಿದೆ.

ಈ ರಾಷ್ಟ್ರಗಳಷ್ಟೇ ಅಲ್ಲದೇ, ಇಡೀ ಜಗತ್ತಿನ ಅರ್ಥವ್ಯವಸ್ಥೆಯೇ ಗಂಭೀರ ಸಂಕಟದಲ್ಲಿದೆ ಎನ್ನುವ ವಾಸ್ತವವನ್ನು ಈ ಅಂಕಿ ಅಂಶಗಳು ಪರೋಕ್ಷವಾಗಿ ಸಾರುತ್ತಿವೆ. ಲಾಕ್ಡೌನ್‌ ಈ ರೀತಿಯ ಸಂಕಷ್ಟದ ಆರಂಭಕ್ಕೆ ಕಾರಣವಾಗಿರಬಹುದು.

ಆದರೆ, ಈ ಸಂಕಷ್ಟದ ಅಂತ್ಯವಂತೂ ಸನಿಹವಾಗುತ್ತಿರುವಂತೆ ಕಾಣುತ್ತಿಲ್ಲ. ವಿವಿಧ ದೇಶಗಳಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ನಂತರವೂ ಜನ ಜೀವನದಲ್ಲಿ, ವಿತ್ತಾವಸ್ಥೆಯಲ್ಲಿ ಎಂದಿನ ಹೊಳಪು-ಹುರುಪು ಕಾಣಿಸುತ್ತಲೇ ಇಲ್ಲ.

Advertisement

ಈಗ ಅಜಮಾಸು ನಿಂತಂತಾಗಿರುವ ಜಾಗತಿಕ ಅರ್ಥಚಕ್ರಕ್ಕೆ ಸನಿಹದ ಭವಿಷ್ಯದಲ್ಲಿ ಎಂದಿನ ವೇಗ ಸಿಗುವ ಲಕ್ಷಣ ಕಾಣುತ್ತಿಲ್ಲವಾದರೂ, ಪ್ರಯತ್ನವಂತೂ ಜೋರಾಗಿಯೇ ನಡೆದಿದೆ. ಐರೋಪ್ಯ ಒಕ್ಕೂಟವು ಇತ್ತೀಚೆಗಷ್ಟೇ 750 ಶತಕೋಟಿ ಯೂರೋದ ರಿಕವರಿ ಫ‌ಂಡ್‌ ಸ್ಥಾಪಿಸಲು ನಿರ್ಧರಿಸಿದೆ. ಇದರಿಂದ ಹೇಗೆ ಉಪಯೋಗವಾಗುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ನೋಡಬೇಕಿದೆ.

ಅತ್ತ ಅಮೆರಿಕದಲ್ಲೂ ಈ ರೀತಿಯ ಪ್ರಯತ್ನ ನಡೆದಿದೆಯಾದರೂ ಸದ್ಯಕ್ಕಂತೂ ಹೇಳಿಕೊಳ್ಳುವಂಥ ಲಾಭ ಅಥವಾ ಪರಿಣಾಮಗಳು ಕಾಣಿಸುತ್ತಿಲ್ಲ. ಅಲ್ಲಿ 3 ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕ ಪ್ಯಾಕೇಜ್‌ ಘೋಷಿಸಲಾಗಿದೆ, ಇದರಲ್ಲಿ ಒಂದು ಬಹುದೊಡ್ಡ ಪಾಲು ಕಂಪೆನಿಯ ಉದ್ಯೋಗಿಗಳಿಗೆ ಅನುಕೂಲವಾಗಲೆಂದು ಮೀಸಲಿಡಲಾಗಿದೆ.

ಈಗ ಈ ಪ್ರಕ್ರಿಯೆ ಸಮಾಪ್ತಿಯ ಹಂತಕ್ಕೆ ಬರುತ್ತಿರುವಂತೆಯೇ, ಅಲ್ಲೀಗ ಎರಡನೇ ಪ್ಯಾಕೇಜ್‌ಗೆ ಬೇಡಿಕೆ ಹೆಚ್ಚಾಗಿದೆ. ಇನ್ನೊಂದೆಡೆ ಜಿಡಿಪಿಯ ಅಂಕಿಸಂಖ್ಯೆಗಳು ತಮ್ಮದೇ ಕಥೆಯನ್ನು ಹೇಳುತ್ತಿವೆ. ಇತ್ತ ಭಾರತದ ವಿಚಾರಕ್ಕೆ ಬರುವುದಾದರೆ ಪ್ರಧಾನಮಂತ್ರಿ ಮೋದಿಯವರು ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂಪಾಯಿಗಳ ವಿಶಾಲ ಪ್ಯಾಕೇಜ್‌, ಉದ್ಯಮ ಜಗತ್ತಿಗೆ ಹಾಗೂ ಆರ್ಥಿಕತೆಯ ಪುನಃಶ್ಚೇತನಕ್ಕೆ ಎಷ್ಟು ಸಹಕಾರಿಯಾಗಿ ಪರಿಣಮಿಸಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇತ್ತ ನಮ್ಮಲ್ಲೂ ಸಹ, ಕಳೆದ ವಾರದ ಸಿಐಐನ ಸಭೆಯಲ್ಲಿ ಉದ್ಯೋಗ ಜಗತ್ತು, ಲೋನ್‌ ರೀಸ್ಟ್ರಕ್ಚರ್‌ನ ಬೇಡಿಕೆಯನ್ನಿಡಲಾಗಿದೆ.

ಇದೆಲ್ಲದರ ನಡುವೆಯೇ ವಿಶ್ವಾದ್ಯಂತ ಕೋವಿಡ್ 19 ವೈರಾಣುವಿನ ವಿರುದ್ಧದ ಹೋರಾಟವೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮುಖ್ಯವಾಗಿ, ಈ ವೈರಸ್‌ ಅನ್ನು ಮಣಿಸಲು ಸಫ‌ಲವಾಗುವುದೂ ಕೂಡ, ಆರ್ಥಿಕತೆಯ ಪುನಃಶ್ಚೇತನಕ್ಕೆ ಬಹಳ ಸಹಕರಿಸಬಲ್ಲದು.

Advertisement

Udayavani is now on Telegram. Click here to join our channel and stay updated with the latest news.

Next