Advertisement
ವಿಜ್ಞಾನಿಗಳು ಹೇಳುವಂತೆ ಬ್ರಹ್ಮಾಂಡ ಸೃಷ್ಟಿಯಾಗಿದ್ದು ಸುಮಾರು 1400 ಕೋಟಿ ವರ್ಷಗಳ ಹಿಂದೆ. ಈ ಬ್ರಹ್ಮಾಂಡವು ಸಮಯ, ಸ್ಥಳ, ವಸ್ತುಗಳು ಮತ್ತು ಶಕ್ತಿಯನ್ನು ಒಳಗೊಂಡಿರುವಂಥದ್ದು. ಪರಮಾಣುಗಳಿಂದ ನಕ್ಷತ್ರಗಳವರೆಗೆ ಎಲ್ಲವೂ ಬ್ರಹ್ಮಾಂಡದಲ್ಲಿದೆ. ಸೂರ್ಯಮಂಡಲದ ವಯಸ್ಸು ಸುಮಾರು 457 ಕೋಟಿ ವರ್ಷಗಳಾದರೆ ಭೂಮಿಯ ವಯಸ್ಸು ಸುಮಾರು 454 ಕೋಟಿ ವರ್ಷಗಳು. ಬ್ರಹ್ಮಾಂಡದಲ್ಲಿ ಭೂಮಿಯ ವಾತಾವರಣ ಇರುವ ಗ್ರಹಗಳು ಹಲವಾರು ಇರಬಹುದು! ಕಳೆದ 3000 ವರ್ಷಗಳಿಂದ ಅನ್ಯಗ್ರಹಗಳಲ್ಲಿ ಜನರು ಇರಬಹುದು ಎಂದುಕೊಂಡು ವಿಜ್ಞಾನಿಗಳು ಹುಡುಕಾಡುತ್ತಲೇ ಇದ್ದಾರೆ. ಆದರೆ ಇದುವರೆಗೂ ಯಾವ ಗ್ರಹದಲ್ಲೂ ಅನ್ಯಲೋಕದ ಜನರು ಕಂಡುಬಂದಿಲ್ಲ.
Related Articles
Advertisement
ಅಭಿವೃದ್ಧಿಯ ಹೆಸರಲ್ಲಿ ವಿನಾಶ!
ನೈಸರ್ಗಿಕವಾಗಿ ವಿಕಾಸಗೊಂಡ ಪ್ರಾಣಿಸಂಕುಲವನ್ನು ಮನುಷ್ಯ ನಾಶ ಮಾಡುತ್ತಿದ್ದಾನೆ. ಭೂಮಿಯ ಮೇಲಿರುವ ಪ್ರಾಣಿ-ಸಸ್ಯಸಂಕುಲ ನಾಶವಾದರೆ, ಮನುಷ್ಯ ತಾನಾಗಿಯೇ ನಾಶವಾಗಿ ಹೋಗುತ್ತಾನೆ. ವೈರಸ್ ಬ್ಯಾಕ್ಟೀರಿಯಾದಿಂದ ಆನೆಯವರೆಗೂ ಎಲ್ಲಾ ಪ್ರಾಣಿಗಳು ಉಳಿದುಕೊಂಡರೆ ಮಾತ್ರ ನಿಸರ್ಗದಲ್ಲಿ ಸಮತೋಲನ ಉಳಿಯುತ್ತದೆ. ಒಂದು ಕಡೆ
ಪರಿಸರ ಉಳಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಅದೇ ಪರಿಸರದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊಳ್ಳೆಯಾಗುತ್ತಿದ್ದು, ಭೂಮಿಯ ಉಷ್ಣಾಂಶ ಏರುತ್ತಲೇ ಇದೆ. ಅರಣ್ಯಗಳು ಕಾರ್ಬನ್ ಡೈ ಆಕ್ಸೆ„ಡನ್ನು ಹೀರಿಕೊಂಡು ಆಮ್ಲಜನಕವನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತ, ಮನುಷ್ಯ-ಪ್ರಾಣಿ ಸಂಕುಲಕ್ಕೆ ಆಹಾರ ಮತ್ತು ವಸತಿ ಒದಗಿಸಲು ಹೆಣಗಾಡುತ್ತಿವೆ. ಜನಸಂಖ್ಯೆಯ ತೀವ್ರ ಏರಿಕೆಯಿಂದ ವಸತಿ, ರಸ್ತೆ, ಮೇವು,ಕಾಗದ, ಪೀಠೊಪಕರಣ ಮತ್ತು ಕಾರ್ಖಾನೆಗಳಿಗಾಗಿ ಅರಣ್ಯಗಳನ್ನು ಕಡಿಯಲಾಗುತ್ತಿದೆ. ಪರಿಣಾಮ, ಕಾಡುಗಳು ನಾಶವಾಗಿ, ಶಾಖೋತ್ಪನ್ನ ಅನಿಲಗಳು ವಾತಾವರಣ ಸೇರಿ ಭೂಮಿಯ ಬಿಸಿ ಏರುತ್ತಿದೆ. ವನ್ಯಪ್ರಾಣಿಗಳು ಕಾಡಿನಲ್ಲಿ ಆಶ್ರಯ ಕಳೆದುಕೊಂಡು ಹಳ್ಳಿ- ಪಟ್ಟಣಗಳ ಕಡೆಗೆ ಬಂದು ಜನರ ಕೈಯಲ್ಲಿ ಸಿಕ್ಕಿ ಸಾಯುತ್ತಿವೆ.
ಪ್ರಯತ್ನಗಳು ನಡೆಯುತ್ತಿವೆ…
ಮನುಷ್ಯನ ದುರಾಕ್ರಮಣದಿಂದಾಗಿ ಈಗಾಗಲೇ ಸಾವಿರಾರು ಜಾತಿಯ ಪ್ರಾಣಿಸಂಕುಲ ನಾಶವಾಗಿದೆ. ನೂರಾರು ಜಾತಿಯ ಪ್ರಾಣಿಸಂಕುಲ ಅಳಿವಿನ ಅಂಚು ತಲುಪಿವೆ. ಬೇಟೆ, ಕಲುಷಿತ ಪರಿಸರ, ಪ್ರಾಣಿಗಳ ಆವಾಸಸ್ಥಾನದ ನಾಶದಿಂದ ಪ್ರಾಣಿಸಂಕುಲ ಕಣ್ಮರೆಯಾಗುತ್ತಿದೆ. ಕಾಡುಪ್ರಾಣಿಗಳು ಆವಾಸ ಸ್ಥಾನದ ಕೊರತೆ ಮತ್ತು ವಿವಿಧ ರೋಗಗಳಿಂದ ಸಾಯುತ್ತಿವೆ. ಪರಿಸರಕ್ಕಾಗಿರುವ ಹಾನಿಯನ್ನು ಸರಿಪಡಿಸಲು ಕೆಲವು ಸೂಕ್ಷ¾ಜೀವಿಗಳು ರೂಪಾಂತರಗೊಂಡು ಮನುಷ್ಯನ ಸಹಾಯಕ್ಕೆ ನಿಂತಿವೆ. ಅವು ಪರಿಸರದ ಸಮತೋಲನ ಕಾಪಾಡಿಕೊಳ್ಳಲು ಸುತ್ತಲಿನ ತ್ಯಾಜ್ಯವನ್ನು ತಿಂದು ಪರಿಸರವನ್ನು ಸ್ವತ್ಛಮಾಡುವ ಕೆಲಸದಲ್ಲಿ ತೊಡಗಿಕೊಂಡಿವೆ. ಇದರ ಜೊತೆಗೆ ವಿಜ್ಞಾನಿಗಳು ಸೂಕ್ಷ್ಮಜೀವಿಗಳನ್ನು ಸೃಷ್ಟಿಸಿ ತೈಲ, ವಿಕಿರಣ ತ್ಯಾಜ್ಯ, ಗ್ಯಾಸೋಲಿನ್, ಪಾದರಸ ಇತ್ಯಾದಿ ಮಾಲಿನ್ಯಕಾರಕ ಪ್ರದೇಶಗಳನ್ನು ಸ್ವತ್ಛಗೊಳಿಸುವ ಯೋಜನೆಗಳನ್ನು ರೂಪಿಸುತ್ತಿ¤ದ್ದಾರೆ.
ಬೆಂಕಿಯುಗುಳೀತು, ಎಚ್ಚರ!
ಜಾನುವಾರುಗಳಿಂದ ಸಮುದ್ರ ಹಕ್ಕಿಗಳವರೆಗೆ ಎಲ್ಲವೂ ಪ್ಲಾಸ್ಟಿಕ್‌ಅನ್ನು ತಿಂದು ಸಾವನ್ನಪ್ಪುತ್ತಿವೆ. ಇದೆಲ್ಲವೂ ನಮ್ಮ ಕಣ್ಮುಂದೆಯೇ ನಡೆಯುತ್ತಿದ್ದರೂ ನಾವು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ತೋರದೆ, ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಸುತ್ತ, ಕಸ ಸುರಿಯುತ್ತ, ಪರಿಸರವನ್ನು ಇನ್ನಷ್ಟು ಕೊಳಕು ಮಾಡುತ್ತ, ನಮ್ಮ ಕಾಲಿಗೆ ನಾವೇ ಕೊಡಲಿ ಹಾಕಿಕೊಳ್ಳುತ್ತಿದ್ದೇವೆ. ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಿ, ವಿಷಾಹಾರ ಸೇವನೆಯ ಮೂಲಕ ಬದುಕನ್ನು ಇನ್ನಷ್ಟು ಅಸಹನೀಯ ಮಾಡಿಕೊಳ್ಳುತ್ತಿದ್ದೇವೆ. ಇಷ್ಟಾದರೂ ಭೂಮಿ ಇನ್ನೂ ಸಹನೆಯಿಂದಲೇ ನಮ್ಮನ್ನ ಪೊರೆಯುತ್ತಿದೆ. ಮನುಷ್ಯನ ಅಟ್ಟಹಾಸ ಮಿತಿಮೀರಿದ ಸಂದರ್ಭಗಳಲ್ಲಿ, ಬಿರುಗಾಳಿ, ಭೀಕರ ಮಳೆ, ಭೂಕಂಪ-ಸುನಾಮಿ, ಚಂಡಮಾರುತಗಳನ್ನು ಸೃಷ್ಟಿಸುತ್ತಾ ನಿಸರ್ಗ ಎಚ್ಚರಿಕೆ ನೀಡುತ್ತಲೇ ಬಂದಿದೆ. ಈಗಾಗಲೇ ಪರಿಸ್ಥಿತಿ ಕೈಮೀರುತ್ತಾ ಬಂದಿದೆ. ಭೂಮಿಯನ್ನು ಉಳಿಸಿಕೊಳ್ಳಲು ನಾವು ತಕ್ಷಣವೇ ಕಾರ್ಯಪ್ರವೃತ್ತರಾಗದಿದ್ದರೆ, ಭೂಮಿ, ಬೆಂಕಿಯ ಗೋಳವಾಗಿ ಎಲ್ಲವೂ ಉರಿದು ಬೂದಿಯಾಗುತ್ತದೆ ಎಂಬುದಾಗಿ ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಕಳೆದ 28 ವರ್ಷಗಳಿಂದಲೂ ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯಲ್ಲಿ ನಡೆವ ಶೃಂಗಸಭೆಗಳಲ್ಲಿ ಜಗತ್ತಿನ ಎಲ್ಲಾ ದೇಶಗಳು ಪಾಲ್ಗೊಳ್ಳುತ್ತಿವೆ. ಅಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರಸ್ತಾಪಗಳು ಮಂಡನೆಯಾಗುತ್ತವೆ. ಪರಿಸರ ಮಾಲಿನ್ಯ ಕುರಿತು ಎಲ್ಲಾ ರಾಷ್ಟ್ರಗಳ ನಾಯಕರೂ ಕಳವಳ ವ್ಯಕ್ತಪಡಿಸುತ್ತಾರೆ. ಆದರೆ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಶಾಖೋತ್ಪನ್ನ ಅನಿಲಗಳನ್ನು ಉರಿಸುವುದನ್ನು ಯಾವ ದೇಶವೂ ಕಡಿಮೆ ಮಾಡುವುದಿಲ್ಲ.
ಎಲ್ಲರ ಕರ್ತವ್ಯವಾಗಬೇಕು…
ವರ್ಷಕ್ಕೊಮ್ಮೆ ಬರುವ ವಿಶ್ವ ಭೂ ದಿನದಂದು ಮಾತ್ರವಲ್ಲ, ಭೂಮಿಯನ್ನು ಉಳಿಸಿಕೊಳ್ಳಲು ವರ್ಷದ ಎಲ್ಲಾ ದಿನವೂ ಎಲ್ಲರೂ ಪ್ರಯತ್ನ ಮಾಡಲೇಬೇಕಿದೆ. ಪರಿಸರ ಸಂರಕ್ಷಣೆಯ ಕೆಲಸ ಮನೆಯಿಂದಲೇ ಪ್ರಾರಂಭವಾಗಬೇಕಿದೆ. ಪ್ಲಾಸ್ಟಿಕ್ ಬಳಕೆಗೆ ಗುಡ್ ಬೈ ಹೇಳಬೇಕಿದೆ. ಅರಣ್ಯ ನಾಶವನ್ನು, ಪ್ರಾಣಿ ಸಂಕುಲದ ಮೇಲಿನ ದುರಾಕ್ರಮಣವನ್ನು ತಡೆಯಬೇಕಿದೆ. ಆ ಮೂಲಕ ಪರಿಸರ ಸಮತೋಲನಕ್ಕೆ ಶ್ರಮಿಸಬೇಕಿದೆ. ಮಳೆನೀರು ಕೊಯ್ಲು ಮಾಡಿಕೊಂಡು, ಮಳೆ ನೀರನ್ನು ಭೂಮಿಗೆ ಇಂಗಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ. ಕೆರೆ, ಕುಂಟೆ, ಬಾವಿ, ನದಿಗಳನ್ನು ಸಂರಕ್ಷಿಸಿಕೊಳ್ಳಬೇಕಿದೆ. ಇವೆಲ್ಲ ಕೆಲಸಗಳನ್ನು ತುಂಬಾ ಮುತುವರ್ಜಿಯಿಂದ ಮಾಡಿ, ಪರಿಸರ ಮಾಲಿನ್ಯವನ್ನು ತಡೆಗಟ್ಟಿದರೆ ಮಾತ್ರ ಭೂಮಿಯ ಆಯಸ್ಸನ್ನು ಇನ್ನಷ್ಟು ಹೆಚ್ಚಿಸಬಹುದು. ನಮ್ಮ ಬದುಕೂ ಹೆಚ್ಚು ಸಹನೀಯವಾಗುವಂತೆ ನೋಡಿಕೊಳ್ಳಬಹುದು.
ಪ್ರಕೃತಿ ಎಚ್ಚರಿಸುತ್ತಲೇ ಇದೆ…
ಪ್ರಸ್ತುತ ಹೆಚ್ಚೆಚ್ಚು ಪ್ರಮಾಣದ ಪ್ಲಾಸ್ಟಿಕ್, ನದಿಗಳು ಮತ್ತು ಸಮುದ್ರವನ್ನು ಸೇರಿಕೊಂಡು ಸಾಗರಗಳು ಮಾಲಿನ್ಯಗೊಳ್ಳುತ್ತಿವೆ. ಪ್ರತಿ ವರ್ಷ ಕೋಟ್ಯಂತರ ಟನ್ನುಗಳ ಇಂಧನ ಮತ್ತು ನೈಸರ್ಗಿಕ ಅನಿಲವನ್ನು ಉರಿಸಲಾಗುತ್ತಿದೆ. ಜಗತ್ತಿನಾದ್ಯಂತ ಗಣಿಗಳನ್ನು ಮಾಡಿ, ಎಲ್ಲಾ ರೀತಿಯ ಖನಿಜ ಮತ್ತು ಲೋಹಗಳನ್ನು ತೆಗೆದು ಭೂಮಿಯನ್ನು ಬಗೆದು ಬಂಜರು ಮಾಡಲಾಗುತ್ತಿದೆ. ಪರಿಣಾಮ; ಭೂಮಿಯ ತಾಪಮಾನ ಏರಿ ಅದು ಸಾಗರಗಳವರೆಗೂ ಹರಡಿಕೊಂಡಿದೆ. ಸಾಗರಗಳಲ್ಲಿ ಉಂಟಾಗುವ ತಾಪಮಾನದ ಏರುಪೇರಿನಿಂದ ಭೀಕರ ಮಳೆ ಸುರಿಯುತ್ತದೆ. ಇಲ್ಲವೇ ಬರ ಕಾಣಿಸಿಕೊಳ್ಳುತ್ತದೆ. ದುಬೈನಲ್ಲಿ ಮೊನ್ನೆ ನಡೆದಿದ್ದು ಇದೇ ವಿದ್ಯಮಾನ.
ವಿಶ್ವ ಭೂ ದಿನದ ಇತಿಹಾಸ:ಅಮೆರಿಕದ ಸೆನೆಟರ್ ಗೈಲಾರ್ಡ್ ನೆಲ್ಸನ್ 1962ರಲ್ಲಿ ಭೂಮಿಯ ದಿನವನ್ನು ಅಧ್ಯಕ್ಷ ಜಾನ್ ಎಫ್ ಕೆನಡಿಯ ಮೂಲಕ ಕಾರ್ಯರೂಪಕ್ಕೆ ತಂದರು. 1971ರಲ್ಲಿ ಸಂಯುಕ್ತ ರಾಷ್ಟ್ರಗಳ ಒಕ್ಕೂಟವು, ಪ್ರತಿ ವರ್ಷ ಏಪ್ರಿಲ್ 22ರಂದು ವಿಶ್ವ ಭೂ ದಿನವನ್ನು ಆಚರಿಸಲು ಪ್ರಾರಂಭಿಸಿತು. ಪರಿಸರ ಮಾಲಿನ್ಯದಿಂದ ಆಗುವ ಅಪಾಯಗಳ ಅರಿವು ಮೂಡಿಸಲು ಎಲ್ಲ ದೇಶಗಳ ಸಮಾನ ಮನಸ್ಕರು, ಸಂಘ-ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ -ಡಾ.ಎಂ. ವೆಂಕಟಸ್ವಾಮಿ