Advertisement

ವಿಶ್ವ ಅಂಗವಿಕಲರ ದಿನಾಚರಣೆ-2017

10:30 AM Dec 03, 2017 | |

ಮಹಾನಗರ: ಅಂಗವಿಕಲ ಮಕ್ಕಳಿಗೆ ಅನುಕಂಪದ ಜತೆಗೆ ಪ್ರೀತಿ ತೋರಿಸಿದಾಗ ಅವರಿಗೂ ಬದುಕಿನಲ್ಲಿ ಭರವಸೆ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಅವರ ಪ್ರತಿಭೆಗಳನ್ನು ಗಮನಿಸಿ ಅದನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು ಎಂದು ಶಾಸಕ ಜೆ.ಆರ್‌.ಲೋಬೋ ಹೇಳಿದರು.

Advertisement

ಅವರು ಶನಿವಾರ ನಗರದ ಪುರಭವನದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ- 2017ಯನ್ನು ಉದ್ಘಾಟಿಸಿ ಮಾತನಾಡಿದರು. ಅವಿಭಜಿತ ದ.ಕ.ಜಿಲ್ಲೆಯನ್ನು ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಅಂಗವಿಕಲ ಮಕ್ಕಳ ಸೌಲಭ್ಯಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಪ್ರಸ್ತುತ ಮಕ್ಕಳ ಬಿಸಿಯೂಟವನ್ನು ನಿಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಬಿಸಿಯೂಟ ಸಿಗುವಂತೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. 

ಪಥ ಸಂಚಲನ
ಆರಂಭದಲ್ಲಿ ವಿವಿ ಕಾಲೇಜು ಆವರಣದಿಂದ ನಡೆದ ಪಥ ಸಂಚಲನವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಮಲ್ಲನಗೌಡ ಅವರು ಉದ್ಘಾಟಿಸಿದರು.

ಮೇಯರ್‌ ಕವಿತಾ ಸನಿಲ್‌, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಉದ್ಯಮಿ ಎಂ.ಗಣೇಶ್‌ ಶೆಟ್ಟಿ, ಗಾಂಧಿನಗರ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಅಶೋಕ್‌ ಮೊಲಿ, ಅಂಗವಿಕಲರ ಸಂಘದ ಡಾ| ಮುರಳೀಧರ ನಾಯಕ್‌, ದಿನೇಶ್‌ ಶೆಟ್ಟಿ, ಮಹಿಳಾ ಕಲ್ಯಾಣಾಧಿಕಾರಿ ಉಸ್ಮಾನ್‌ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಆಗಮಿಸಿದ್ದ ವಿಧಾನ ಪರಿಷತ್‌ ಮುಖ್ಯಸಚೇತಕ ಐವನ್‌ ಡಿ’ಸೋಜಾ ಮಾತನಾಡಿ, ಅಂಗವಿಕಲ ಮಕ್ಕಳ ಸೇವೆ ಮಾಡುವುದೆಂದರೆ ಅದು ದೇವರ ಕೆಲಸ ಮಾಡಿದಂತೆ. ಇಂದು ನೂರಾರು ಶಿಕ್ಷಕರು ಅಂತಹ ಮಕ್ಕಳ ಸೇವೆ ಮಾಡಿ ಪುಣ್ಯಗಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಅಂಗವಿಕಲರಿಗೆ ಇನ್ನಷ್ಟು ಸೌಲಭ್ಯಗಳು ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.

Advertisement

ಅಂಗವಿಕಲರಿಗಾಗಿ ಶ್ರಮಿಸುತ್ತಿರುವ ನಾರಾಯಣ ಶೇರಿಗಾರ, ಹಂಸ ಕುಮಾರಿ, ಮೇರಿ ಯೂಸಿ, ಧನಂಜಯ ವರ್ಮ, ಸಂತೋಷ್‌ ಕುಮಾರ್‌, ಸಂಜಯ ಪ್ರಸಾದ್‌, ಶೈಲಾ ಪಿ.ಜೆ., ಹರಿಣಾಕ್ಷಿ, ಅನಿತಾ ಅಂಜಲಿನ್‌, ಅಂಗವಿಕಲ ಸಾಧಕರಾದ ಸುಮತಿ, ಬಿ.ಮುತ್ತಪ್ಪ, ಪ್ರಜ್ವಲ್‌, ಪ್ರಜ್ಞಾ ಸಿ, ಆಸ್ಲಿ ಎ.ಜೆ.ಡಿ’ಸೋಜಾ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ದೀಪು ಎಚ್‌.ಎನ್‌. ಅವರು ಸಮ್ಮಾನಿತರ ವಿವರ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ವಸಂತ ಕುಮಾರ್‌ ನಿರ್ವಹಿಸಿದರು.

ಸರಕಾರ ಅನವನ್ನೇ  ಕಸಿದಿದೆ!
ಅಂಗವಿಕಲ ಮಕ್ಕಳ ಶಿಕ್ಷಕ ನಾರಾಯಣ ಶೇರಿಗಾರ ಅವರು ಮಾತನಾಡಿ, ಸರಕಾರವು ವಿವಿಧ ಭಾಗ್ಯಗಳನ್ನು ತಂದು ಬಡವರ ಸೇವೆ ಮಾಡುತ್ತಿದೆ ಎಂದು ಹೇಳುತ್ತಿದೆ. ಆದರೆ ಏನೂ ಅರಿಯದ ಅಂಗವಿಕಲ ಮಕ್ಕಳ ಅನ್ನವನ್ನೇ ಕಸಿದಿದೆ. ಈ ಕುರಿತು ತಟ್ಟೆ ಚಳವಳಿ ಮಾಡಲಾಗುವುದು. ಇಂತಹ ಮಕ್ಕಳೊಂದಿಗೆ ಕಳೆಯಲು ಜನಪ್ರತಿನಿಧಿಗಳಿಗೆ ಸಮಯವೇ ಇಲ್ಲ. ಹೀಗಾಗಿ ಅವರ ಕಾರ್ಯಕ್ರಮಕ್ಕೆ ಬಹುತೇಕ ಮಂದಿ ಗೈರುಹಾಜರಾಗಿದ್ದಾರೆ ಎಂದು ಹತಾಶೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next