ಅಹಮದಾಬಾದ್: ಈ ಬಾರಿಯ ಏಕದಿನ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಬಹುದು ಎಂದು ಅಭಿಮಾನಿಗಳು ಅಂದಾಜಿಸಿದ್ದರು. ಬಿಸಿಸಿಐ ಕೂಡಾ ಆರಂಭಿಕ ಸಿದ್ದತೆ ನಡೆಸಿದ ಬಗ್ಗೆ ವರದಿಯಾಗಿತ್ತು. ಆದರೆ ಬಳಿಕ ಯಾವುದೇ ಉದ್ಘಾಟನಾ ಸಮಾರಂಭವಿಲ್ಲದೆ ಏಕದಿನ ವಿಶ್ವಕಪ್ ಆರಂಭವಾಗಿತ್ತು. ಇದೀಗ ಮುಂಬರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ವರ್ಣರಂಜಿತ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯದ ವೇಳೆ ವರ್ಣರಂಜಿತ ಕಾರ್ಯಕ್ರಮವನ್ನು ಬಿಸಿಸಿಐ ಆಯೋಜಿಸಿದೆ ಎಂದು ದೈನಿಕ್ ಜಾಗರಣ್ ವರದಿ ಮಾಡಿದೆ.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಪಂದ್ಯ ವೀಕ್ಷಿಸಲು ಸ್ಟೇಡಿಯಂನಲ್ಲಿ ಹಾಜರಾಗಲಿದ್ದಾರೆ.
ಇದನ್ನೂ ಓದಿ:Aamir Khan: ʼತಾರೆ ಜಮೀನ್ ಪರ್ʼ ಟೈಟಲ್ ಹೋಲುವ ಹೊಸ ಸಿನಿಮಾವನ್ನು ಘೋಷಿಸಿದ ಆಮಿರ್ ಖಾನ್
ಕಳೆದ ಐಪಿಎಲ್ ಉದ್ಘಾಟನೆ ವೇಳೆ ಪ್ರದರ್ಶನ ನೀಡಿದ ಗಾಯಕ ಅರ್ಜಿತ್ ಸಿಂಗ್ ಅವರು ಮತ್ತೊಮ್ಮೆ ವೇದಿಕೆಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಇತರ ಕಲಾವಿದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.
ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಸಾಕಷ್ಟು ವಿಐಪಿಗಳು ಆಗಮಿಸುವ ನಿರೀಕ್ಷೆಯಿದೆ. ಬಾಲಿವುಡ್ ತಾರೆಯರ ಕಾರ್ಯಕ್ರಮ ಶನಿವಾರ ಮಧ್ಯಾಹ್ನ 12:40 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 1:10 ಕ್ಕೆ ಕೊನೆಗೊಳ್ಳುತ್ತದೆ. ಮಕ್ಕಳು ಆಟದ ವೈರಿಯಾಗಿ ಮ್ಯಾಸ್ಕಾಟ್‌ಗಳಾಗಿ ಭಾಗವಹಿಸುತ್ತಾರೆ.