ಭೋಪಾಲ್: ಇಲ್ಲಿ ಸಾಗುತ್ತಿರುವ ಐಎಸ್ಎಸ್ಎಫ್ ಪಿಸ್ತೂಲ್/ರೈಫಲ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯ ಮಿಶ್ರ ತಂಡ ವಿಭಾಗ ಸ್ಪರ್ಧೆಯಲ್ಲಿ ಭಾರತ ತಲಾ ಒಂದು ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದೆ. ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ವರುಣ್ ತೋಮಾರ್ ಮತ್ತು ರಿಥಮ್ ಸಾಂಗ್ವಾನ್ ಅವರು ಬೆಳ್ಳಿ ಗೆದ್ದರೆ; ಏರ್ ರೈಫಲ್ ವಿಭಾಗದಲ್ಲಿ ರುದ್ರಾಂಕ್ ಪಾಟೀಲ್ ಮತ್ತು ಆರ್. ನರ್ಮದಾ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಬುಧವಾರ ನಡೆದ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದ ವರುಣ್ ಅವರು ಸಾಂಗ್ವಾನ್ ಜತೆಗೂಡಿ ಚೀನಾದ ಕ್ವಿಯಾನ್ ವೈ ಮತ್ತುಲಿಯು ಜಿನ್ಯಾವೊ ಅವರಿಗೆ ತೀವ್ರ ಸ್ಪರ್ಧೆ ನೀಡಿ ಅಂತಿಮವಾಗಿ 11-17 ಅಂಕಗಳಿಂದ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟರು. ಗುರುವಾರ ಬೆಳಗ್ಗೆ ನಡೆದ ಸ್ಪರ್ಧೆಯಲ್ಲಿ ಚೀನಾ ಎರಡು ಚಿನ್ನ ಜಯಿಸಿದೆ. ಭಾರತ ಬೆಳ್ಳಿ ಮತ್ತು ಕಂಚು ಗೆಲ್ಲುವ ಮೂಲಕ ತನ್ನ ಸಾಧನೆಯನ್ನು ಒಂದು ಚಿನ್ನ ಸಹಿತ ನಾಲ್ಕು ಪದಕಕ್ಕೇರಿಸಿದೆ.
ಸರಬ್ಜೋತ್ ಸಿಂಗ್ಗೆ ಚಿನ್ನ: ಬುಧವಾರ ನಡೆದ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಸರಬ್ಜೋತ್ ಸಿಂಗ್ ಅವರು ಚಿನ್ನ ಗೆಲ್ಲುವ ಮೂಲಕ ಭಾರತದ ಪದಕ ಖಾತೆ ತೆರೆದಿದ್ದರು. 2021ರ ಕಿರಿಯರ ವಿಶ್ವ ಚಾಂಪಿಯನ್ ಆಗಿದ್ದ ಸರಬ್ಜೋತ್ ಅಜರ್ಬೈಜಾನ್ನ ರುಸ್ಲಾನ್ ಲುನೆವ್ ಅವರನ್ನು 16-0 ಅಂತರದಿಂದ ಸುಲಭವಾಗಿ ಮಣಿಸಿದ್ದರು. ಇದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕವೂ ಆಗಿದೆ.