ನವದೆಹಲಿ: ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಭೀತಿಯಿಂದಾಗಿ ನವದೆಹಲಿ ಆತಿಥ್ಯದಲ್ಲಿ ಮುಂದಿನ ತಿಂಗಳು ನಡೆಯಬೇಕಿರುವ ವಿಶ್ವಕಪ್ ಶೂಟಿಂಗ್ ಕೂಟದಿಂದ ಚೀನಾ ಸೇರಿದಂತೆ ಒಟ್ಟು 6 ರಾಷ್ಟ್ರಗಳು ಹೊರಬಿದ್ದಿವೆ.
ಈ ಬಗ್ಗೆ ಭಾರತೀಯ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,” ಚೀನಾ ಶೂಟಿಂಗ್ ಕೂಟಕ್ಕೆ ಆಗಮಿಸುವುದರಿಂದ ತಾನಾಗಿಯೇ ಹಿಂದಕ್ಕೆ ಸರಿಯಿತು. ಈಗ ತೈವಾನ್, ಹಾಂಕಾಂಗ್, ಮಕಾವ್, ಉತ್ತರ ಕೊರಿಯಾ ಹಾಗೂ ತುರ್ಕ್ ಮೆನಿಸ್ತಾನ ರಾಷ್ಟ್ರಗಳು ಕೂಡ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ಸರ್ಕಾರಗಳು ಕೊರೊನಾ ವೈರಸ್ ಭೀತಿಯಿಂದಾಗಿ ವಿದೇಶಿ ಪ್ರಯಾಣಕ್ಕೆ ಕಡಿವಾಣ ಹಾಕಿದೆ. ರಾಷ್ಟ್ರೀಯ ನಿಯಮದಡಿ ನಿರ್ಧಾರ ತೆಗೆದುಕೊಳ್ಳ ಲಾಗಿದೆ ಎಂದು ತಿಳಿಸಿದರು.
ಪಾಕ್ ಕೂಡ ಪಾಲ್ಗೊಳ್ಳಲ್ಲ: ಕೊರೊನಾ ವೈರಸ್‌ನಿಂದಾಗಿ 6 ರಾಷ್ಟ್ರಗಳು ಕೂಟದಿಂದ ಹಿಂದೆ ಸರಿದಿದ್ದರೆ ಪಾಕಿಸ್ತಾನ ಮಾತ್ರ ತಾನಾಗಿಯೇ ಕೂಟದಿಂದ ಹಿಂದಕ್ಕೆ ಸರಿದಿದೆ. ಮುಂಬರುವ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಅಭ್ಯಾಸ ನಡೆಸುವುದಕ್ಕಾಗಿ ಅದು ಜರ್ಮನಿಗೆ ತೆರಳಿದೆ. ಹೀಗಾಗಿ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಶೂಟಿಂಗ್ ಸಂಸ್ಥೆ ಹೇಳಿಕೊಂಡಿತ್ತು.
ಕಳೆದ ವರ್ಷದ ಶೂಟಿಂಗ್ ವೇಳೆ ಪಾಕ್‌ಗೆ ಭಾರತದ ವೀಸಾ ನಿರಾಕರಿಸಲಾಗಿತ್ತು. ಹೀಗಾಗಿ ಮತ್ತೂಮ್ಮೆ ಭಾರತ ವೀಸಾ ನಿರಾಕರಿಸಿತೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಣಿಂದರ್ ಸಿಂಗ್, “ಕಳೆದ ವರ್ಷಕ್ಕೂ ಈ ಸಲಕ್ಕೂ ಹೋಲಿಕೆ ಬೇಡ. ಪಾಕಿಸ್ತಾನದ ಇಬ್ಬರು ಶೂಟರ್‌ಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಹೀಗಾಗಿ ಈ ಕೂಟಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್ ಮಾ.15ರಿಂದ 25ರ ತನಕ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯಲಿದೆ.