Advertisement

World Cup ಅರ್ಹತಾ ಪಂದ್ಯಾವಳಿ: ಭರ್ಜರಿ ಗೆಲುವು ದಾಖಲಿಸಿದ ಲಂಕಾ, ಒಮಾನ್‌

11:04 PM Jun 19, 2023 | Team Udayavani |

ಬುಲವಾಯೊ: ಐಸಿಸಿ ಏಕದಿನ ವಿಶ್ವಕಪ್‌ ಅರ್ಹತಾ ಕ್ರಿಕೆಟ್‌ ಪಂದ್ಯಾವಳಿಯ ದ್ವಿತೀಯ ದಿನದ ಆಟದಲ್ಲಿ ಶ್ರೀಲಂಕಾ ಮತ್ತು ಒಮಾನ್‌ ತಂಡಗಳು ಭರ್ಜರಿ ಜಯ ಸಾಧಿಸಿವೆ. ಲಂಕಾ ಪಡೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ವಿರುದ್ಧ 175 ರನ್‌ ಅಂತರದ ಜಯಭೇರಿ ಮೊಳಗಿಸಿದರೆ, ಒಮಾನ್‌ 5 ವಿಕೆಟ್‌ಗಳಿಂದ ಐರ್ಲೆಂಡ್‌ಗೆ ಆಘಾತವಿಕ್ಕಿತು.
ಬುಲವಾಯೊದಲ್ಲಿ ನಡೆದ “ಬಿ’ ವಿಭಾಗದ ಮೇಲಾಟದಲ್ಲಿ ಶ್ರೀಲಂಕಾ 6 ವಿಕೆಟಿಗೆ 355 ರನ್‌ ರಾಶಿ ಹಾಕಿತು. ಅಗ್ರ ಕ್ರಮಾಂಕದ ನಾಲ್ವರೂ ಅಮೋಘ ಬ್ಯಾಟಿಂಗ್‌ ಪ್ರದರ್ಶನವಿತ್ತರು.

Advertisement

ಎಲ್ಲರೂ ಅರ್ಧ ಶತಕ ದಾಖಲಿಸಿದರು. ಪಥುಮ್‌ ನಿಸ್ಸಂಕ 57, ದಿಮುತ್‌ ಕರುಣಾರತ್ನೆ 52, ಕುಸಲ್‌ ಮೆಂಡಿಸ್‌ ಸರ್ವಾಧಿಕ 78 ಮತ್ತು ಸಮರವಿಕ್ರಮ 73 ರನ್‌ ಹೊಡೆದರು. ಚರಿತ ಅಸಲಂಕ ಔಟಾಗದೆ 48 ರನ್‌ ಮಾಡಿದರು. ಮೊದಲ ವಿಕೆಟಿಗೆ 95 ರನ್‌, 3ನೇ ವಿಕೆಟಿಗೆ 105 ರನ್‌ ಒಟ್ಟುಗೂಡಿತು.

ಲಂಕಾದ ದೊಡ್ಡ ಮೊತ್ತಕ್ಕೆ ಜವಾಬು ನೀಡಲು ಯುಎಇಯಿಂದ ಸಾಧ್ಯವಾಗಲಿಲ್ಲ. ಅದು ವನಿಂದು ಹಸರಂಗ ಅವರ ಸ್ಪಿನ್‌ ಆಕ್ರಮಣಕ್ಕೆ ತತ್ತರಿಸಿತು. ಹಸರಂಗ 24 ರನ್‌ ನೀಡಿ 6 ವಿಕೆಟ್‌ ಹಾರಿಸಿದರು. ಇದು ಏಕದಿನದಲ್ಲಿ ಅವರ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

1996ರ ಚಾಂಪಿಯನ್‌ ತಂಡವಾದ ಶ್ರೀಲಂಕಾ ಈಗ ವಿಶ್ವಕಪ್‌ ಅರ್ಹತಾ ಕೂಟದಲ್ಲಿ ಆಡಬೇಕಾದ ಸಂಕಟಕ್ಕೆ ಸಿಲುಕಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-6 ವಿಕೆಟಿಗೆ 355 (ಮೆಂಡಿಸ್‌ 78, ಸಮರವಿಕ್ರಮ 73, ನಿಸ್ಸಂಕ 57, ಕರುಣಾರತ್ನೆ 52, ಅಸಲಂಕ ಔಟಾಗದೆ 48, ಅಲಿ ನಾಸೀರ್‌ 44ಕ್ಕೆ 2). ಯುಎಇ-39 ಓವರ್‌ಗಳಲ್ಲಿ 180 (ಮೊಹಮ್ಮದ್‌ ವಾಸೀಮ್‌ 39, ವೃತ್ಯ ಅರವಿಂದ್‌ 39, ಅಲಿ ನಾಸೀರ್‌ 34, ರಮೀಜ್‌ ಶಹಜಾದ್‌ 26, ಹಸರಂಗ 24ಕ್ಕೆ 6). ಪಂದ್ಯಶ್ರೇಷ್ಠ: ವನಿಂದು ಹಸರಂಗ.

Advertisement

ಒಮಾನ್‌ ವಿಜಯೋತ್ಸವ
ದಿನದ ಇನ್ನೊಂದು ಪಂದ್ಯದಲ್ಲಿ ಒಮಾನ್‌ ಭಾರೀ ಏರುಪೇರಿನ ಫ‌ಲಿತಾಂಶ ದಾಖಲಿಸಿತು. ಬಲಿಷ್ಠ ಐರ್ಲೆಂಡ್‌ ಪೇರಿಸಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ಅದು 5 ವಿಕೆಟ್‌ಗಳಿಂದ ಗೆದ್ದು ಬಂದಿತು. ಇದು ಕೂಡ “ಬಿ’ ವಿಭಾಗದ ಪಂದ್ಯವಾಗಿತ್ತು.

ಐರ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 281 ರನ್‌ ಗಳಿಸಿದರೆ, ಒಮಾನ್‌ 48.1 ಓವರ್‌ಗಳಲ್ಲಿ 5 ವಿಕೆಟಿಗೆ 285 ರನ್‌ ಬಾರಿಸಿತು. ಆರಂಭಕಾರ ಜತೀಂದರ್‌ ಸಿಂಗ್‌ (1) ಅವರನ್ನು ಬೇಗನೇ ಕಳೆದುಕೊಂಡ ಬಳಿಕ ಒಮಾನ್‌ ಬ್ಯಾಟರ್ ಕ್ರೀಸ್‌ ಆಕ್ರಮಿಸಿಕೊಂಡು ಆಡಿದರು. ಕಶ್ಯಪ್‌ ಪ್ರಜಾಪತಿ 72, ಆಕಿಬ್‌ ಇಲ್ಯಾಸ್‌ 52, ನಾಯಕ ಜೀಶನ್‌ ಮಕ್ಸೂದ್‌ 59, ಮೊಹಮ್ಮದ್‌ ನದೀಂ ಔಟಾಗದೆ 46 ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು.

ಐರ್ಲೆಂಡ್‌ ಪರ ಜಾರ್ಜ್‌ ಡಾಕ್ರೆಲ್‌ ಔಟಾಗದೆ 91 ರನ್‌ ಬಾರಿಸಿದರು. ಹ್ಯಾರಿ ಟೆಕ್ಟರ್‌ ಅವರಿಂದ ಅರ್ಧ ಶತಕ ದಾಖಲಾಯಿತು (52).

ಸಂಕ್ಷಿಪ್ತ ಸ್ಕೋರ್‌
ಐರ್ಲೆಂಡ್‌-7 ವಿಕೆಟಿಗೆ 281 (ಡಾಕ್ರೆಲ್‌ ಔಟಾಗದೆ 91, ಹ್ಯಾರಿ ಟೆಕ್ಟರ್‌ 52, ಟ್ಯುಕರ್‌ 26, ಬಿಲಾಲ್‌ ಖಾನ್‌ 64ಕ್ಕೆ 2, ಫ‌ಯಾಜ್‌ ಬಟ್‌ 65ಕ್ಕೆ 2). ಒಮಾನ್‌-48.1 ಓವರ್‌ಗಳಲ್ಲಿ 5 ವಿಕೆಟಿಗೆ 285 (ಪ್ರಜಾಪತಿ 72, ಮಕ್ಸೂದ್‌ 59, ಇಲ್ಯಾಸ್‌ 52, ನದೀಂ ಔಟಾಗದೆ 46, ಜೋಶುವ ಲಿಟ್ಲ 47ಕ್ಕೆ 2, ಮಾರ್ಕ್‌ ಅಡೈರ್‌ 47ಕ್ಕೆ 2). ಪಂದ್ಯಶ್ರೇಷ್ಠ: ಜೀಶನ್‌ ಮಕ್ಸೂದ್‌.

ವಿಲಿಯಮ್ಸನ್‌ ಶತಕದ ದಾಖಲೆ
ರವಿವಾರದ ಆರಂಭಿಕ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ 8 ವಿಕೆಟ್‌ಗಳಿಂದ ನೇಪಾಲವನ್ನು ಮಣಿಸಿತು. ಸೀನ್‌ ವಿಲಿಯಮ್ಸನ್‌ ಅವರ ವೇಗದ ಶತಕ ಜಿಂಬಾಬ್ವೆ ಸರದಿಯ ಆಕರ್ಷಣೆ ಆಗಿತ್ತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನೇಪಾಲ 8 ವಿಕೆಟಿಗೆ 290 ರನ್ನುಗಳ ಸವಾಲಿನ ಮೊತ್ತವನ್ನೇ ಪೇರಿಸಿತು. ಜಿಂಬಾಬ್ವೆ 44.1 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 291 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ನಾಯಕ ಕ್ರೆಗ್‌ ಇರ್ವಿನ್‌ ಮತ್ತು ಸೀನ್‌ ವಿಲಿಯಮ್ಸ್‌ ಅಜೇಯ ಶತಕ ಹೊಡೆದು ತವರಿನ ವೀಕ್ಷಕರನ್ನು ರಂಜಿಸಿದರು. ಇವರಿಂದ ಮುರಿಯದ 3ನೇ ವಿಕೆಟಿಗೆ 164 ರನ್‌ ಒಟ್ಟುಗೂಡಿತು.

ಕ್ರೆಗ್‌ ಇರ್ವಿನ್‌ ಅವರದು ಅಜೇಯ 121 ರನ್‌ ಕೊಡುಗೆ. 128 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ, 1 ಸಿಕ್ಸರ್‌ ಸೇರಿತ್ತು.

ಸೀನ್‌ ವಿಲಿಯಮ್ಸನ್‌ ಗಳಿಕೆ ಅಜೇಯ 102 ರನ್‌. ಇವರ ಸೆಂಚುರಿ ಕೇವಲ 70 ಎಸೆತಗಳಲ್ಲಿ ದಾಖಲಾಯಿತು. ಇದು ಜಿಂಬಾಬ್ವೆ ಪರ ದಾಖಲಾದ ಅತೀ ವೇಗದ ಶತಕ. ಇದಕ್ಕೂ ಮೊದಲು ಬ್ರೆಂಡನ್‌ ಟೇಲರ್‌ 79 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು ದಾಖಲೆಯಾಗಿತ್ತು.

ನೇಪಾಲದ ಆರಂಭ ಅಮೋಘವಾಗಿತ್ತು. ಕುಶಲ್‌ ಭುರ್ಟೆಲ್‌ (99) ಮತ್ತು ಆಸಿಫ್ ಶೇಖ್‌ (66) ಮೊದಲ ವಿಕೆಟಿಗೆ 31.5 ಓವರ್‌ಗಳಿಂದ 171 ರನ್‌ ಬಾರಿಸಿದರು. ಕುಶಲ್‌ ಕೇವಲ ಒಂದು ರನ್ನಿನಿಂದ ಶತಕ ತಪ್ಪಿಸಿಕೊಳ್ಳಬೇಕಾಯಿತು.

ಯುಎಸ್‌ಎಗೆ ವೀರೋಚಿತ ಸೋಲು
ದಿನದ ಇನ್ನೊಂದು ಪಂದ್ಯದಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಉತ್ತಮ ಪ್ರದರ್ಶನ ನೀಡಿಯೂ ವೆಸ್ಟ್‌ ಇಂಡೀಸ್‌ಗೆ 39 ರನ್ನುಗಳಿಂದ ಶರಣಾಯಿತು. ಕೆರಿಬಿಯನ್‌ ಪಡೆಯನ್ನು 49.3 ಓವರ್‌ಗಳಲ್ಲಿ 297ಕ್ಕೆ ಆಲೌಟ್‌ ಮಾಡಿದ್ದು ಯುಎಸ್‌ಎ ತಂಡದ ಬೌಲಿಂಗ್‌ ಸಾಹಸಕ್ಕೆ ಸಾಕ್ಷಿಯಾಯಿತು. ಸೌರಭ್‌ ನೇತ್ರಾವಲ್ಕರ್‌, ಕೈಲ್‌ ಫಿಲಿಪ್ಸ್‌ ಮತ್ತು ಸ್ಟೀವನ್‌ ಟೇಲರ್‌ ತಲಾ 3 ವಿಕೆಟ್‌ ಉರುಳಿಸಿದರು.

ಚೇಸಿಂಗ್‌ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟರ್‌ ಗಜಾನಂದ ಸಿಂಗ್‌ ಅಜೇಯ 101 ರನ್‌ ಬಾರಿಸಿ ಹೋರಾಟ ಸಂಘಟಿಸಿದರೂ ಪ್ರಯೋಜನವಾಗಲಿಲ್ಲ (109 ಎಸೆತ, 8 ಬೌಂಡರಿ, 2 ಸಿಕ್ಸರ್‌). ಅಮೆರಿಕನ್‌ ಪಡೆ 7ಕ್ಕೆ 258 ರನ್‌ ಮಾಡಲಷ್ಟೇ ಶಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next