Advertisement

World Cup; ನ್ಯೂಜಿಲ್ಯಾಂಡ್‌ ಹ್ಯಾಟ್ರಿಕ್‌ ಜಯ: ಅಂಕಪಟ್ಟಿಯಲ್ಲಿ ಅಗ್ರಸ್ಥಾನ

11:36 PM Oct 13, 2023 | Team Udayavani |

ಚೆನ್ನೈ: ನ್ಯೂಜಿಲ್ಯಾಂಡ್‌ 13ನೇ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ಶುಕ್ರವಾರದ ಚೆನ್ನೈ ಪಂದ್ಯದಲ್ಲಿ ಕಿವೀಸ್‌ ಪಡೆ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಮಣಿಸಿ ಸತತ 3ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 9 ವಿಕೆಟಿಗೆ 245 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿದರೆ, ನ್ಯೂಜಿಲ್ಯಾಂಡ್‌ 42.5 ಓವರ್‌ಗಳಲ್ಲಿ 2 ವಿಕೆಟಿಗೆ 248 ರನ್‌ ಬಾರಿಸಿತು.

ಈ ಪಂದ್ಯದ ಮೂಲಕ ನಾಯಕ ಕೇನ್‌ ವಿಲಿಯಮ್ಸನ್‌ ಆಡುವ ಬಳಗದಲ್ಲಿ ಕಾಣಿಸಿಕೊಂಡರು. ಆದರೆ 78 ರನ್‌ ಗಳಿಸಿದ ವೇಳೆ ಗಾಯಾಳಾಗಿ ಅಂಗಳ ತೊರೆದರು. 107 ಎಸೆತ ನಿಭಾಯಿಸಿದ ಕೇನ್‌ 8 ಬೌಂಡರಿ, ಒಂದು ಸಿಕ್ಸರ್‌ ಹೊಡೆದು ಕಪ್ತಾನನ ಆಟವಾಡಿದರು. ಇವರಿಗಾಗಿ ಜಾಗ ಬಿಟ್ಟವರು ವಿಲ್‌ ಯಂಗ್‌. ಹೀಗಾಗಿ ರಚಿನ್‌ ರವೀಂದ್ರ ಆರಂಭಿಕನಾಗಿ ಇಳಿದರು. ಆದರೆ ಕೇವಲ 9 ರನ್‌ ಮಾಡಿ ಔಟಾದರು. ಕಾನ್ವೇ ಗಳಿಕೆ 45 ರನ್‌.

ನ್ಯೂಜಿಲ್ಯಾಂಡ್‌ ವಿಜಯೋತ್ಸವದ ವೇಳೆ ಡ್ಯಾರಿಲ್‌ ಮಿಚೆಲ್‌ 89 ರನ್‌ ಮಾಡಿ ಅಜೇಯರಾಗಿದ್ದರು. 67 ಎಸೆತಗಳ ಈ ಆಕರ್ಷಕ ಆಟದ ವೇಳೆ ಅವರು 6 ಬೌಂಡರಿ, 4 ಸಿಕ್ಸರ್‌ ಸಿಡಿಸಿದರು.

ಬಾಂಗ್ಲಾಕ್ಕೆ ರಹೀಂ ನೆರವು
ಟ್ರೆಂಟ್‌ ಬೌಲ್ಟ್ ಎಸೆದ ಪಂದ್ಯದ ಮೊದಲ ಎಸೆತದಲ್ಲೇ ಲಿಟನ್‌ ದಾಸ್‌ ಔಟಾಗುವುದರೊಂದಿಗೆ ಬಾಂಗ್ಲಾದೇಶ ಅತ್ಯಂತ ಆಘಾತಕಾರಿಯಾಗಿ ಆಟ ಆರಂಭಿಸಿತು. ಇವರ ಜತೆಗಾರ ತಾಂಜಿದ್‌ ಹಸನ್‌ (16) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ತಾಂಜಿದ್‌ಗೆ ಖಾತೆ ಆರಂಭಿಸುವ ಮೊದಲೇ ಲ್ಯಾಥಂ ಲೈಫ್ ನೀಡಿದ್ದರು. ಆದರೆ ಇದರ ಲಾಭ ಎತ್ತಲಾಗಲಿಲ್ಲ.

Advertisement

ಮೆಹಿದಿ ಹಸನ್‌ ಮಿರಾಜ್‌ (30) ಮತ್ತು ನಜ್ಮುಲ್‌ ಹುಸೇನ್‌ (7) ಕೂಡ ತಂಡದ ಕೈ ಹಿಡಿಯಲಿಲ್ಲ. ಲಾಕಿ ಫ‌ರ್ಗ್ಯುಸನ್‌ ಬಾಂಗ್ಲಾ ಸರದಿಯ ಮೇಲೆ ಘಾತಕವಾಗಿ ಎರಗಿದರು. ಈ ಹಂತದಲ್ಲಿ ತಂಡದ ನೆರವಿಗೆ ನಿಂತವರು ನಾಯಕ ಶಕಿಬ್‌ ಅಲ್‌ ಹಸನ್‌ ಮತ್ತು ಕೀಪರ್‌ ಮುಶ್ಫಿಕರ್‌ ರಹೀಂ. ಇವರು 5ನೇ ವಿಕೆಟಿಗೆ 96 ರನ್‌ ಒಟ್ಟುಗೂಡಿಸಿ ಕುಸಿತಕ್ಕೆ ತಡೆಯಾದರು.

ರಹೀಂ ತಮ್ಮ ಅನುಭವಕ್ಕೆ ತಕ್ಕ ಪ್ರದರ್ಶನ ನೀಡಿದರು. ಕಿವೀಸ್‌ ಬೌಲರ್‌ಗಳ ಮೇಲೆ ಆಕ್ರಮಣಕಾರಿಯಾಗಿ ಎಡವಿ 75 ಎಸೆತಗಳಿಂದ 66 ರನ್‌ ಹೊಡೆದರು. ಸಿಡಿಸಿದ್ದು 6 ಬೌಂಡರಿ ಮತ್ತು 2 ಸಿಕ್ಸರ್‌. ಶಕಿಬ್‌ 51 ಎಸೆತ ನಿಭಾಯಿಸಿ 40 ರನ್‌ ಮಾಡಿದರು (3 ಬೌಂಡರಿ, 2 ಸಿಕ್ಸರ್‌).

ಚೆನ್ನೈ ಪಿಚ್‌ ಪೇಸ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿದಂತೆ ಕಂಡುಬಂತು. ಲಾಕಿ ಫ‌ರ್ಗ್ಯುಸನ್‌ ತಮ್ಮ “ಶಾರ್ಟ್‌ ಆ್ಯಂಡ್‌ ಕ್ವಿಕ್‌’ ಕಾರ್ಯತಂತ್ರವನ್ನು ಯಶಸ್ವಿಗೊಳಿಸಿದರು. ಶಕಿಬ್‌ ಮತ್ತು ರಹೀಂ 5 ಓವರ್‌ ಹಾಗೂ 23 ರನ್‌ ಅಂತರದಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಬಾಂಗ್ಲಾ ಮತ್ತೆ ಸಂಕಟಕ್ಕೆ ಸಿಲುಕಿತು. 36ನೇ ಓವರ್‌ನಲ್ಲಿ ರಹೀಂ ಅವರನ್ನು ಬೌಲ್ಡ್‌ ಮಾಡಿದ ಹೆನ್ರಿ ನ್ಯೂಜಿಲ್ಯಾಂಡ್‌ಗೆ ರಿಲೀಫ್ ಕೊಟ್ಟರು. ಆಗ ಬಾಂಗ್ಲಾ ನೆರವಿಗೆ ಬಂದವರು ಮಹಮದುಲ್ಲ. 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಅವರು 49 ಎಸೆತ ಎದುರಿಸಿ ಅಜೇಯ 41 ರನ್‌ ಮಾಡಿದರು. ಸಿಡಿಸಿದ್ದು 2 ಬೌಂಡರಿ ಹಾಗೂ 2 ಸಿಕ್ಸರ್‌. ಟಸ್ಕಿನ್‌ ಅಹ್ಮದ್‌ 2 ಸಿಕ್ಸರ್‌ ನೆರವಿನಿಂದ 17 ರನ್‌ ಹೊಡೆದರು. ಆದರೂ ತಂಡದ ಮೊತ್ತ 250ರ ಗಡಿಯಿಂದ ಹಿಂದೆಯೇ ಉಳಿಯಿತು. ನ್ಯೂಜಿಲ್ಯಾಂಡ್‌ನ‌ ತ್ರಿವಳಿ ವೇಗಿಗಳಾದ ಫ‌ರ್ಗ್ಯುಸನ್‌, ಹೆನ್ರಿ ಮತ್ತು ಬೌಲ್ಟ್ ಸೇರಿಕೊಂಡು 6 ವಿಕೆಟ್‌ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next