ಬದಿಯಡ್ಕ: ಪುಟ್ಟ ಪುಟ್ಟ ಕಲಾಕೃತಿಗಳನ್ನು ತಯಾರಿಸುವುದರಲ್ಲೇ ಹೆಚ್ಚು ಆಸಕ್ತಿ ಹಾಗೂ ಉತ್ಸಾಹ ತೋರುವ ಮುಳ್ಳೇರಿಯಾ ತಲೆಬೈಲಿನ ವೆಂಕಟೇಶ್ ಆಚಾರ್ಯ ಅಥವಾ ಪುಟ್ಟ ಇನ್ನೊಂದು ಪುಟ್ಟ ಕಲಾಕೃತಿಯನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
ಮೇ.30ರಂದು ಪ್ರಾರಂಭವಾದ ವಿಶ್ವದೆಲ್ಲೆಡೆ ಅಭಿಮಾನಿಗಳ ಉತ್ಸಾಹಕ್ಕೆ ಗರಿಮೂಡಿಸಿದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕೇಂದ್ರಬಿಂದುವಾದ ವಿಶ್ವಕಪ್‌ನ್ನು ಒಂದು ಅಕ್ಕಿಕಾಳು ಗಾತ್ರದಲ್ಲಿ ಕೇವಲ 60 ಮಿಲ್ಲಿಗ್ರಾಂ ತೂಕದ ಚಿನ್ನವನ್ನು ಬಳಸಿ ತಯಾರಿಸಿ ತನ್ನ ಕೈಚಳಕ ಮೆರೆದಿದ್ದಾರೆ. ಸೂಕ್ಷ್ಮ ಕಲಾಕೃತಿಗಳ ಸರದಾರನಾಗಿರುವ ವೆಂಕಟೇಶ್ ಈಗಾಗಲೇ ಹತ್ತು ಹಲವು ವೈವಿಧ್ಯಮಯ ಪುಟ್ಟ ಕಲಾಕೃತಿಗಳನ್ನು ರಚಿಸಿದ್ದಾರೆ.
ಜೀವನವೆಂದರೆ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳ ಸಂತೆ. ಆ ಸೂಕ್ಷ್ಮವನ್ನು ಕಲೆಯ ಕಣ್ಣಿಂದ ನೋಡಿ, ಕಲಾಕೃತಿಯ ಸಷ್ಟಿಗೆ ಪ್ರಯತ್ನಿಸಿ ಅದನ್ನೇ ಒಂದು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಪುಟ್ಟ ಅವರ ಕೈಯಲ್ಲರಳಿದ ಪುಟ್ಟ ಕಲಾಕೃತಿಗಳಿಗೆ ಲೆಕ್ಕವಿಲ್ಲ. ಕೇವಲ 28 ರೂಪಾಯಿಯ 0.010 ಮಿಲ್ಲಿ ಗ್ರಾಂ ಚಿನ್ನದಲ್ಲಿ ಸ್ವತ್ಛ ಭಾರತ್ ಲಾಂಛನವನ್ನು ತಯಾರಿಸಿರುವ ಈ ಕಲಾವಿದನ ಕೈಚಳಕದಲ್ಲಿ ಈ ಹಿಂದೆ 90ಮಿ.ಗ್ರಾಂ. ಚಿನ್ನದಲ್ಲಿ ಕ್ರಿಕೆಟ್ ವಿಶ್ವಕಪ್ ಮೂಡಿಬಂದಿತ್ತು. ಅಕ್ಕಿ ಕಾಳಿನಲ್ಲಿ ಸ್ವತ್ಛ ಭಾರತ್ ಎಂಬುದಾಗಿ ರಾಷ್ಟ್ರ ಭಾಷೆಯಲ್ಲಿ ನಮೂದಿಸಿರುವ ಪುಟ್ಟ ಅವರ ಕಲಾಸಾಧನೆ ವರ್ಣನಾತೀತ.
ಪುಟ್ಟ ಅವರ ಹೆಚ್ಚಿನ ಕಲಾಕೃತಿಗಳೂ ಪೆನ್ಸಿಲ್ ಲೆಡ್‌ನಲ್ಲಿದೆ. ಪೆನ್ಸಿಲ್‌ನ ತುದಿಯಲ್ಲಿ ಯೋಗಾಸನದ ಭಂಗಿ, ಭಾರತದ ಭೂಪಟ, ದೀಪಾವಳಿ ಲ್ಯಾಂಪ್, ವಿಶ್ವಕಪ್ ಮೊದಲಾದ ನೂರಾರು ಕಲಾಕೃತಿಗಳನ್ನು ರಚಿಸಿದ್ದು ಇದೀಗ ಬೆಂಕಿ ಕಡ್ಡಿಯ ತುದಿಯಲ್ಲಿ ನಮ್ಮ ಪಾರ್ಲಿಮೆಂಟನ್ನೇ ನಿಲ್ಲಿಸಿದ್ದಾರೆ ಎಂದರೆ ಈ ಸೂಕ್ಷ್ಮ ಕಲಾವಿದನ ಕಲಾನೈಪುಣ್ಯತೆಗೆ ಶರಣು ಎನ್ನಲೇ ಬೇಕು. ಓಟ್ ಫಾರ್ ಇಂಡಿಯ ಎನ್ನುವ ಸಂದೇಶವನ್ನು ಹೊತ್ತಿರುವ ಬೆಂಕಿ ಕಡ್ಡಿಯ ತುದಿಯಲ್ಲಿ ಭಾರತದ ಸಂಸತ್ತಿನ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಅದೇ ರೀತಿ ಸೇವ್ ಶಬರಿಮಲ ಎಂಬ ಸಂದೇಶದೊಂದಿಗೆ ಶಬರಿಮಲೆಯ ಸೂಕ್ಷ್ಮ ಕಲಾಕೃತಿಯನ್ನೂ ಇದೇ ರೀತಿ ನಿರ್ಮಿಸಿದ್ದರು.
ಚೋಕ್, ಸಾಬೂನು ಮೊದಲಾದ ವಸ್ತುಗಳನ್ನು ಬಳಸಿಯೂ ಇವರು ಪುಟ್ಟ ಪುಟ್ಟ ಅತ್ಯಾಕರ್ಷಕ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಕಲ್ಪನೆಗೆ ಸೂಕ್ಷ್ಮ ಕಲಾಕೃತಿಯ ರೂಪ ನೀಡಿ ಅಚ್ಚರಿ ಮೂಡಿಸುವ ಪುಟ್ಟ ಅಂಚೆ ಕಾರ್ಡ್‌ನಲ್ಲಿ ಓಂ ನಮಃ ಶಿವಾಯ ಎಂದು 6524 ಬಾರಿ ಶಿವ ಪಂಚಾಕ್ಷರಿ ಬರೆದಿದ್ದು, ಈ ಅಕ್ಷರಗಳಿಂದ ಮಾತ್ರ ಶಿವನ ಚಿತ್ರ ಸಹಿತ ಅನೇಕ ಸೂಕ್ಷ್ಮ ಚಿತ್ರಗಳನ್ನೂ ರಚಿಸಿದ್ದಾರೆ.
ಅಂಚೆ ಕಾರ್ಡಿನಲ್ಲಿ 150 ಬಾರಿ ವಿವೇಕಾನಂದ ಎಂದು ಬರೆದು ಸ್ವಾಮಿ ವಿವೇಕಾನಂದರ ಚಿತ್ರರಚನೆ, ಭಾರತದ 29ರಾಜ್ಯಗಳ ಹೆಸರನ್ನು ಬಳಸಿ ಪ್ರಧಾನಿ ಮೋದಿಯವರ ಚಿತ್ರರಚನೆ ಹಾಗೂ ಕೇವಲ ಅರ್ಧ ಇಂಚಿನ ಕಾಗದದಲ್ಲಿ 2014 ಕ್ಯಾಲೆಂಡರ್ ಸೃಷ್ಠಿಸಿದ್ದಾರೆ. ಮಾತ್ರವಲ್ಲದೆ ಹಳೆಯ ನಾಣ್ಯಗಳ, ನೋಟುಗಳ ಸಂಗ್ರಹವನ್ನೂ ಹವ್ಯಾಸವಾಗಿಟ್ಟುಕೊಂಡಿರುವ ಇವರ ಕಲಾಭಿಮಾನ ಮಾದರಿಯಾಗಿದೆ. ವೃತ್ತಿಯಲ್ಲಿ ಚಿನ್ನದ ಅಕ್ಕಸಾಲಿಗರಾಗಿದ್ದು ಸೂಕ್ಷ್ಮಾತಿ ಸೂಕ್ಷ್ಮ ಕಲಾಕೃತಿಗಳ ಕೆತ್ತನೆಗೆ ಸಮಯ ಕಂಡುಕೊಳ್ಳುವ ಉತ್ತಮ ಕಲಾವಿದನ ಅನನ್ಯ ಸಾಧನೆಗೆ ಸಂದ ಅದೆಷ್ಟೋ ಗೌರನ ಸಮ್ಮಾನ, ಪ್ರಶಸ್ತಿಗಳು ಅರಸಿ ಬಂದಿವೆ..
ವಿಶ್ವಕಪ್ ಕ್ರೀಡೆಯಲ್ಲಿ ಭಾರತ ತಂಡದ ಗೆಲುವಿಗಾಗಿ ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರೋತ್ಸಾಹ ಮತ್ತು ಆಶೀರ್ವಾದ ತಂಡಕ್ಕಿರಲಿ ಎಂಬ ಸದಾಶಯದೊಂದಿಗೆ ಈ ಕಲಾಕೃತಿಯನ್ನು ರಚಿಸಿದ್ದೇನೆ. ಈ ಬಾರಿ ನಮ್ಮ ದೇಶ ವಿಶ್ವಕಪ್ ಗೆಲ್ಲುವ ಪೂರ್ಣ ಭರವಸೆ ನನಗಿದೆ.
ವೆಂಕಟೇಶ್ ಆಚಾರ್ಯ (ಪುಟ್ಟ ಇಚ್ಲಂಗೋಡು)
ಅಖೀಲೇಶ್ ನಗುಮುಗಂ