ಅಹ್ಮದಾಬಾದ್: ಅಪಾರ ಕ್ರೀಡಾಭಿಮಾನಿಗಳ ನೆಚ್ಚಿನ ಕ್ರಿಕೆಟ್ ಹಣಾಹಣಿ ಭಾರತ – ಪಾಕಿಸ್ತಾನ ವಿಶ್ವಕಪ್ ಮುಖಾಮುಖಿಯಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿದೆ.
ಭಾರತ – ಪಾಕಿಸ್ತಾನ ನಡುವಿನ ವಿಶ್ವಕಪ್ ಜಿದ್ದಾಜಿದ್ದಿಯಲ್ಲಿ ಭಾರತ ಇದುವರೆಗೆ ಪಾಕ್ ವಿರುದ್ಧ ಸೋತೇ ಇಲ್ಲ. ಇಲ್ಲಿ ಭಾರತ ಗೆಲ್ಲುವ ಹಾಟ್ ಫೇವರೇಟ್ ತಂಡ. ಹಾಗಂತ ಪಾಕ್ ಬೌಲಿಂಗ್ ಸಾಮರ್ಥ್ಯವನ್ನಿಲ್ಲಿ ನಿರ್ಲಕ್ಷ್ಯ ಮಾಡುವಾಗಿಲ್ಲ.
ಬೌಲಿಂಗ್, ಬ್ಯಾಟಿಂಗ್ ನಲ್ಲಿ ಮಿಂಚಿದ ಭಾರತ: ಈ ಬಾರಿಯ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ. ಆಡಿದ 2 ಪಂದ್ಯಗಳಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಲಯ ಕಂಡುಕೊಂಡಿದೆ. ಆಸೀಸ್ ವಿರುದ್ಧ ಆರಂಭಿಕರು ಎಡವಿದ್ದರೂ ಮಧ್ಯಂಮ ಕ್ರಮಾಂಕದ ಆಟಗಾರರು ಪರಿಸ್ಥಿತಿ ಅರಿತುಕೊಂತು ಬ್ಯಾಟ್ ಬೀಸಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ತನ್ನ ಹಳೆಯ ಶೈಲಿಯ ದಾಂಡಿಗತನದ ಹಿಡಿತವನ್ನು ಕಂಡುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಎರಡು ಬ್ಯಾಕ್ ಟು ಬ್ಯಾಕ್ ಅರ್ಧ ಶತಕವನ್ನು ಬಾರಿಸಿದ್ದಾರೆ. ಇತ್ತ ಕೆ.ಎಲ್. ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಫಾರ್ಮ್ ನಲ್ಲಿರುವುದು ಭಾರತಕ್ಕೆ ಆಶದಾಯಕ ಅಂಶವಾಗಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಕುಲದೀಪ್ ಹಾಗೂ ಜಡೇಜಾ ವಿಕೆಟ್ ಪಡೆದು, ರನ್ ರಹಿತ ಓವರ್ ಗಳನ್ನು ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೊಹಮ್ಮದ್ ಸಿರಾಜ್ ಕಳೆದ ಪಂದ್ಯದಲ್ಲಿ ಸ್ವಲ್ಪ ದುಬಾರಿಯಾದರೂ ವಿಕೆಟ್ ಪಡೆದಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ.
ಎರಡೂ ತಂಡಕ್ಕೂ ಹ್ಯಾಟ್ರಿಕ್ ಗೆಲುವಿನ್ ತವಕ: ಭಾರತ ಹಾಗೂ ಪಾಕಿಸ್ತಾನ ಇದುವರೆಗೆ ಎರಡೂ ಪಂದ್ಯಗಳನ್ನಾಡಿದೆ. ಎರಡೂ ಪಂದ್ಯದಲ್ಲಿ ಸೋತಿಲ್ಲ. ಭಾರತ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಿ ಆಸ್ಟ್ರೇಲಿಯವನ್ನು ಮಗುಚಿತ್ತು. ಬಳಿಕ ಅಫ್ಘಾನಿಸ್ಥಾನ ವಿರುದ್ಧ ಅಬ್ಬರದ ಗೆಲುವನ್ನು ಸಾಧಿಸಿತು. ಇನ್ನೊಂದೆಡೆ ಪಾಕಿಸ್ಥಾನ ಕ್ರಮವಾಗಿ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾವನ್ನು ಮಣಿಸಿದೆ. ಇದರಲ್ಲಿ ಲಂಕಾ ಎದುರಿನ ಗೆಲುವು ಅಮೋಘವಾಗಿತ್ತು.
ಪಾಕ್ಗೆ ಫಾರ್ಮ್ ನದೇ ಚಿಂತೆ:
ಪಾಕಿಸ್ಥಾನ ಕೂಡ ಬಲಿಷ್ಠ ಬ್ಯಾಟಿಂಗ್ ಸರದಿಯನ್ನೇ ಹೊಂದಿದೆ. ಆದರೆ ಫಾರ್ಮ್ ನದೇ ದೊಡ್ಡ ಸಮಸ್ಯೆ. ಆರಂಭಿಕರಾದ ಇಮಾಮ್ ಉಲ್ ಹಕ್-ಫಖಾರ್ ಜಮಾನ್ ಲಯದಲ್ಲಿಲ್ಲ. ಆದರೆ ಫಖಾರ್ ಬದಲು ಬಂದ ಅಬ್ದುಲ್ಲ ಶಫೀಕ್ ಶ್ರೀಲಂಕಾ ವಿರುದ್ಧದ ಬಿಗ್ ಚೇಸಿಂಗ್ ವೇಳೆ ಸೆಂಚುರಿ ಬಾರಿಸಿ ಮಿಂಚಿದ್ದಾರೆ. ಭಾರತ ಈ ಆಟಗಾರನ ಮೇಲೆ ಒಂದು ಕಣ್ಣಿಡಬೇಕಿದೆ. ನಾಯಕ ಬಾಬರ್ ಆಜಂ ಅವರ ಫಾರ್ಮ್ ಕೂಡ ಕೈಕೊಟ್ಟಿದೆ. ಆದರೆ ಕೀಪರ್ ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕಾರ್ ಅಹ್ಮದ್ ಕ್ರೀಸ್ ಆಕ್ರಮಿಸಿಕೊಳ್ಳಬಲ್ಲರು. ಆದರೆ ಭಾರತವನ್ನು ಭಾರತದ ನೆಲದಲ್ಲೇ ಆಡುವ ಒತ್ತಡದಿಂದ ಪಾಕ್ ಬ್ಯಾಟಿಂಗ್ ಸರದಿ ಅದುರುವ ಎಲ್ಲ ಸಾಧ್ಯತೆ ಇದೆ.
ತಂಡಗಳು:
ಭಾರತ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಪಾಕಿಸ್ತಾನ:
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್