ಅಹಮದಾಬಾದ್: ಈ ಬಾರಿಯ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯವು ಭಾನುವಾರ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ.
ಕೂಟದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್ ತಲುಪಿರುವ ಭಾರತ ತಂಡ ಮತ್ತು ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಸೆಣಸಾಟಕ್ಕೆ ಸಿದ್ದತೆ ನಡೆಸಿವೆ.
2019ರ ವಿಶ್ವಕಪ್ ಫೈನಲ್ ಪಂದ್ಯವು ಹಲವು ಹೈಡ್ರಾಮಾಗಳಿಗೆ ಕಾರಣವಾಗಿತ್ತು. ಪಂದ್ಯವು ಸೂಪರ್ ಓವರ್ ಹಂತಕ್ಕೆ ತೆರಳಿ ಅಲ್ಲೂ ಪಂದ್ಯ ಟೈ ಆದ ಕಾರಣ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಿಸಲಾಗಿತ್ತು. ಆದರೆ ಬೌಂಡರಿ ಕೌಂಟ್ ಆಧಾರದಲ್ಲಿ ವಿಶ್ವಕಪ್ ವಿಜೇತರನ್ನು ತೀರ್ಮಾನಿಸುವ ನಿರ್ಧಾರಕ್ಕೆ ಭಾರಿ ವಿರೋಧ ಕೇಳಿಬಂದಿತ್ತು.
ಸೂಪರ್ ಓವರ್ ಟೈ ಆದರೆ ಹೇಗೆ?
ಕಳೆದ ವಿಶ್ವಕಪ್ ಬಳಿಕ ಐಸಿಸಿ ನಿಯಮ ಬದಲಾವಣೆ ಮಾಡಿತ್ತು. ಹೀಗಾಗಿ ರವಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ಸಮಾನ ಸ್ಕೋರ್ ನಲ್ಲಿ ಪಂದ್ಯ ಮುಗಿಸಿದರೆ ಅಂದರೆ ಟೈ ಆದರೆ ಸೂಪರ್ ಓವರ್ ಆಡಿಸಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ಕೂಡಾ ಟೈ ಆದರೆ ಮತ್ತೆ ಸೂಪರ್ ಓವರ್ ಆಡಿಸಲಾಗುತ್ತದೆ. ಅಂದರೆ ಫಲಿತಾಂಶ ಲಭ್ಯವಾಗುವವರೆಗೆ ಸೂಪರ್ ಓವರ್ ಆಡಬೇಕಿದೆ.
ಸೂಪರ್ ಓವರ್ ವಾಶೌಟ್ ಆದರೆ?
ನಿಯಮ 16.10.4 ರ ಪ್ರಕಾರ, ಟೈ ನಂತರ, ಹವಾಮಾನ ಪರಿಸ್ಥಿತಿಗಳ ಕಾರಣದಿಂದ ಸೂಪರ್ ಓವರ್ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಅಥವಾ ಪಂದ್ಯ ಸಂಪೂರ್ಣ ರದ್ದಾದರೆ ಉಭಯ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.