Advertisement
ಟಾಪ್-4 ಸ್ಪರ್ಧೆಯಲ್ಲಿ ಈವರೆಗೆ ಭಾರತ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯ ತಂಡಗಳು ತಮ್ಮ ಸ್ಥಾನಕ್ಕೆ ಸಿಮೆಂಟ್ ಹಾಕಿದಂತಿತ್ತು. ಆದರೀಗ ಸತತ 3 ಸೋಲನುಭವಿಸಿದ ಕಿವೀಸ್ ಸ್ಥಾನ ಸ್ವಲ್ಪ ಮಟ್ಟಿಗೆ ಅಲುಗಾಡಲಾರಂಭಿಸಿದೆ. ಹಾಗೆಯೇ ಅಫ್ಘಾನ್ 3 ಜಯದೊಂದಿಗೆ ಮೇಲೇರುವ ಕನಸು ಕಾಣಲಾರಂಭಿಸಿದೆ. ಶುಕ್ರವಾರ ನೆದರ್ಲೆಂಡ್ಸ್ ವಿರುದ್ಧ ಜಯಿಸಿದ್ದೇ ಆದರೆ ಅದು ಕೂಡ ಅಂಕಗಳ ಲೆಕ್ಕಾಚಾರದಲ್ಲಿ ನ್ಯೂಜಿಲ್ಯಾಂಡ್‌ಗೆ ಸಮನಾಗಲಿದೆ. ಆಗ ಶಾಹಿದಿ ಪಡೆ ಪಾಕಿಸ್ಥಾನವನ್ನು ಹಿಂದಿಕ್ಕಲಿದೆ ಎಂಬುದನ್ನು ಗಮನಿಸಬೇಕು. ಹಾಗೆಯೇ ನ್ಯೂಜಿಲ್ಯಾಂಡ್-ಪಾಕಿಸ್ಥಾನ ನಡುವಿನ ಮರುದಿನದ ಪಂದ್ಯ “ಸೆಮಿಫೈನಲ್’ ಮಹತ್ವ ಪಡೆಯಲಿದೆ. ಒಂದು ವೇಳೆ ನೆದರ್ಲೆಂಡ್ಸ್ ಗೆದ್ದರೆ ಅಂಕಪಟ್ಟಿಯಲ್ಲಿ ಅಂತಹ ವ್ಯತ್ಯಾಸವೇನೂ ಸಂಭವಿಸದು.
ಇನ್ನು ಅಫ್ಘಾನಿಸ್ಥಾನ-ನೆದರ್ಲೆಂಡ್ಸ್ ಪಂದ್ಯದ ಕುರಿತು… ಇದು ವಿಶ್ವಕಪ್‌ನಲ್ಲಿ ಇತ್ತಂಡಗಳ ನಡುವಿನ ಮೊದಲ ಮುಖಾಮುಖೀ. ಈವರೆಗೆ ಎರಡೂ ತಂಡಗಳು ಪರಸ್ಪರ 9 ಸಲ ಎದುರಾಗಿವೆ. ಏಳರಲ್ಲಿ ಅಫ್ಘಾನ್ ಗೆದ್ದಿದೆ. ಎರಡನ್ನು ನೆದರ್ಲೆಂಡ್ಸ್ ಜಯಿಸಿದೆ. ಈ ಕೂಟದ ಈವರೆಗಿನ ಬಲಾಬಲದ ಲೆಕ್ಕಾಚಾರದಲ್ಲಿ ಅಫ್ಘಾನಿಸ್ಥಾನ ನೆಚ್ಚಿನ ತಂಡ. ಅದು ಆರರಲ್ಲಿ 3 ಪಂದ್ಯ ಜಯಿಸಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಬುಡಮೇಲು ಮಾಡುವ ಮೂಲಕ ಅಫ್ಘಾನ್ ದೊಡ್ಡ ಏರುಪೇರಿಗೆ ಕಾರಣವಾಯಿತು. ಬಳಿಕ ಪಾಕಿಸ್ಥಾನ ಮತ್ತು ಶ್ರೀಲಂಕಾಕ್ಕೂ ನೀರು ಕುಡಿಸಿತು. ಇದೇ ಜೋಶ್‌ನಲ್ಲಿ ಸಾಗಿದರೆ ನೆದರ್ಲೆಂಡ್ಸ್ ವಿರುದ್ಧವೂ ಶಾಹಿದಿ ಪಡೆ ಗೆಲುವಿನ ಬಾವುಟ ಹಾರಿಸುವುದರಲ್ಲಿ ಅನುಮಾನವಿಲ್ಲ. ಇನ್ನು ನೆದರ್ಲೆಂಡ್ಸ್. ಅರ್ಹತಾ ಸುತ್ತಿನ ಮೂಲಕ ಬಂದ ತಂಡ ಕೂಡ “ಆಪ್‌ಸೆಟ್ ರಿಸಲ್ಟ್’ ದಾಖಲಿಸಿದೆ. ಮಳೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ್ದು ಡಚ್ಚರ ಪರಾಕ್ರಮಕ್ಕೆ ಸಾಕ್ಷಿ. ಹರಿಣಗಳ ಬಳಗ 7 ಪಂದ್ಯಗಳಲ್ಲಿ ಅನುಭವಿಸಿದ ಸೋಲೆಂದರೆ ಇದೊಂದೇ! ಬಳಿಕ ಬಾಂಗ್ಲಾದೇಶವನ್ನು 87 ರನ್ನುಗಳಿಂದ ಮಣಿಸಿತು. ಹೀಗಾಗಿ “ಆರೇಂಜ್ ಆರ್ಮಿ’ ಎನಿಸಿದ ಸ್ಕಾಟ್ ಎಡ್ವರ್ಡ್ಸ್ ತಂಡವನ್ನು ಲಘುವಾಗಿ ತೆಗೆದುಕೊಳ್ಳುವುದು ಅಪಾಯಕ್ಕೊಡ್ಡಬಹುದು.
Related Articles
ಅದೃಷ್ಟವಿದ್ದರೆ 2003ರ ವಿಶ್ವಕಪ್‌ನಲ್ಲಿ ಕೀನ್ಯಾ ಸೆಮಿಫೈನಲ್ ಪ್ರವೇಶಿಸಿದಂತೆ ಅಫ್ಘಾನಿಸ್ಥಾನ ಕೂಡ ನಾಕೌಟ್ ತಲುಪಿದರೆ ಅಚ್ಚರಿಯೇನಿಲ್ಲ. ಹೀಗಾಗಿ ನೆದರ್ಲೆಂಡ್ಸ್ ಎದುರು ಗೆಲುವು ಸಾಧಿಸುವುದು ಮುಖ್ಯ. ಹಾಗೆಯೇ ರನ್‌ರೇಟ್‌ನಲ್ಲೂ ಪ್ರಗತಿ ಕಾಣಬೇಕಿದೆ. ಮುಂದಿನೆರಡು ಕಠಿನ ಸವಾಲು. ಇಲ್ಲಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಸವಾಲನ್ನು ಅಫ್ಘಾನ್ ಎದುರಿಸಬೇಕಿದೆ.
Advertisement
ಆ್ಯಶಸ್ ವಿಜೇತ ಇಂಗ್ಲೆಂಡ್ ತಂಡದ ಬ್ಯಾಟರ್ ಜೊನಾಥನ್ ಟ್ರಾಟ್ ಅವರಿಂದ ತರಬೇತಿ ಪಡೆಯುತ್ತಿರುವ ಅಫ್ಘಾನ್‌ನ ಅಗ್ರ ಕ್ರಮಾಂಕದ ಬ್ಯಾಟಿಂಗ್ ಅತ್ಯಂತ ಶಕ್ತಿಶಾಲಿಯಾಗಿದೆ. ಪಾಕಿಸ್ಥಾನ ಮತ್ತು ಶ್ರೀಲಂಕಾ ವಿರುದ್ಧ ಅದು ಸವಾಲಿನ ಮೊತ್ತವನ್ನು ಚೇಸ್ ಮಾಡಿ ಗೆದ್ದುದನ್ನು ಮರೆಯುಂತಿಲ್ಲ. ಗುರ್ಬಜ್ (224 ರನ್), ಜದ್ರಾನ್ (212 ರನ್), ರೆಹಮತ್ ಶಾ (212 ರನ್), ನಾಯಕ ಶಾಹಿದಿ (226 ರನ್), ಅಜ್ಮತುಲ್ಲ ಒಮರ್‌ಜಾಯ್ (203 ರನ್) ಅವರೆಲ್ಲ ಅಫ್ಘಾನ್ ಅಗ್ರ ಕ್ರಮಾಂಕದ ಆಧಾರಸ್ತಂಭಗಳು. ಜವಾಬ್ದಾರಿಯುತ ಹಾಗೂ ಶಿಸ್ತಿನ ಆಟದ ಮೂಲಕ ಏಷ್ಯಾದ ಎರಡು ದೊಡ್ಡ ತಂಡಗಳನ್ನು ಉರುಳಿಸಿದ ಹೆಗ್ಗಳಿಕೆ ಇವರಿಗಿದೆ. ಇಲ್ಲಿ ಕ್ರಮವಾಗಿ 283 ರನ್ ಹಾಗೂ 242 ರನ್ ಬೆನ್ನಟ್ಟಿದ ಹಿರಿಮೆ ಅಫ್ಘಾನ್ ಪಡೆಯದ್ದು.
ಬೌಲಿಂಗ್ ವಿಷಯಕ್ಕೆ ಬಂದಾಗ ಅಫ್ಘಾನ್ ಸ್ಪಿನ್ ಅತ್ಯಂತ ಘಾತಕ. ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಮೊಹಮ್ಮದ್ ನಬಿ ಅವರ ತ್ರಿವಳಿ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಕಷ್ಟ. ಇಲ್ಲಿ ಯಶಸ್ವಿಯಾದರಷ್ಟೇ ನೆದರ್ಲೆಂಡ್ಡ್ ಮೇಲುಗೈ ನಿರೀಕ್ಷಿಸಬಹುದು.
ಡಚ್ಚರ ಬ್ಯಾಟಿಂಗ್ ದುರ್ಬಲನೆದರ್ಲೆಂಡ್ಸ್ ಬಳಿಯೂ ಅಚ್ಚ ರಿಯ ಅಸ್ತ್ರಗಳಿವೆ. ಬಾಂಗ್ಲಾದೇಶವನ್ನು 142ಕ್ಕೆ ಹಿಡಿದು ನಿಲ್ಲಿಸಿದ್ದು ಇದಕ್ಕೆ ಸಾಕ್ಷಿ. ಆದರೆ ತಂಡದ ಅಗ್ರ ಕ್ರಮಾಂಕ ಅತ್ಯಂತ ದುರ್ಬಲವಾಗಿ ಗೋಚರಿಸು ತ್ತಿದೆ. ಕೂಟದುದ್ದಕ್ಕೂ ಆರಂಭಿಕ ಆಟಗಾರರಾದ ವಿಕ್ರಮ್‌ಜೀತ್ ಸಿಂಗ್, ಮ್ಯಾಕ್ಸ್ ಓ’ಡೌಡ್ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕದ ಮೇಲೆ ಭಾರೀ ಒತ್ತಡ ಬೀಳುತ್ತಿದೆ. ಆದರೂ ಬರೇಸಿ, ಆ್ಯಕರ್‌ಮನ್, ಎಡ್ವರ್ಡ್ಸ್ ಆಗಾಗ ಇದನ್ನು ನಿಭಾಯಿಸುತ್ತ ಬಂದಿದ್ದಾರೆ. ಸಿಬ್ರಾಂಡ್, ಆ್ಯಕರ್‌ಮನ್, ವಾನ್ ಬೀಕ್ ಬಿರುಸಿನ ಆಟದ ಮೂಲಕ ಗಮನ ಸೆಳೆದಿದ್ದಾರೆ. ಬೌಲಿಂಗ್‌ನಲ್ಲಿ ಮೀಕರೆನ್, ಡಿ ಲೀಡ್, ವಾನ್ ಬೀಕ್, ಆರ್ಯನ್ ದತ್, ಆ್ಯಕರ್‌ಮನ್ ಅವರೆಲ್ಲ ಅಫ್ಘಾನ್ ಬ್ಯಾಟರ್‌ಗಳನ್ನು ಹಿಡಿದು ನಿಲ್ಲಿಸುವಲ್ಲಿ ಯಶಸ್ವಿಯಾದರೆ ಪಂದ್ಯ ಖಂಡಿತ ರೋಚಕವಾಗಿ ಸಾಗಲಿದೆ. ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ ·ಉಳಿದಂತೆ 9 ಏಕದಿನ ಪಂದ್ಯಗಳಲ್ಲಿ ಅಫ್ಘಾನಿಸ್ಥಾನ 7, ನೆದರ್ಲೆಂಡ್ಸ್ 2 ಜಯ ಸಾಧಿಸಿವೆ